Advertisement

ಮೆರವಣಿಗೆ ವೇಳೆ ದುರುಗುಟ್ಟಿ ನೋಡಿದ್ದಕ್ಕೆ ಯುವಕನ ಕೊಲೆ

11:50 AM Aug 29, 2017 | |

ಬೆಂಗಳೂರು: ದುರುಗುಟ್ಟಿ ನೋಡಿ ಗದರಿದ ಎಂಬ ಕಾರಣಕ್ಕೆ ಯುವಕನೊಬ್ಬನನ್ನು ಹತ್ಯೆಗೈದಿರುವ ಘಟನೆ ಹನುಮಂತನಗರದ ಕಾಳಿದಾಸ ಲೇಔಟ್‌ನಲ್ಲಿ ನಡೆದಿದೆ. ಕಾಳಿದಾಸ್‌ ಲೇಔಟ್‌ ನಿವಾಸಿ ಗಣೇಶ್‌ (21) ಮೃತ ಯುವಕ. ಈ ಸಂಬಂಧ ಪೃಥ್ವಿ ಮತ್ತು ಶ್ರೀನಿವಾಸ್‌ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಪಿಯುಸಿ ವ್ಯಾಸಂಗ ಮಾಡಿರುವ ಗಣೇಶ್‌ ಅರ್ಧಕ್ಕೆ ವಿದ್ಯಾಭ್ಯಾಸ ಮೊಟಕುಗೊಳಿಸಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ.

Advertisement

ಗಣಪತಿ ಹಬ್ಬದ ಹಿನ್ನೆಲೆಯಲ್ಲಿ ಕಾಳಪ್ಪ ಲೇಔಟ್‌ನಲ್ಲಿ ಯುವಕರೆಲ್ಲ ಗಣಪತಿ ಮೆರವಣಿಗೆ ನಡೆಸುತ್ತಿದ್ದರು. ಈ ವೇಳೆ ಸ್ನೇಹಿತರನ್ನು ಭೇಟಿಯಾಗಿ ಬರುವುದಾಗಿ ಹೇಳಿ ಮನೆಯಿಂದ ಬಂದಿದ್ದ ಗಣೇಶ್‌ ಇದೇ ಸ್ಥಳದಲ್ಲಿ ನಿಂತಿದ್ದ. ಆಗ ಎದುರಾದ ಪೃಥ್ವಿ ಮತ್ತು ಶ್ರೀನಿವಾಸ್‌ನನ್ನು ಗಣೇಶ್‌ ದುರುಗುಟ್ಟಿ ನೋಡಿದ್ದಾನೆ. ಇದರಿಂದ ಆಕ್ರೋಶಗೊಂಡ ಪೃಥ್ವಿ ಜಗಳ ತೆಗೆದಿದ್ದಾನೆ. ಬಳಿಕ ಸ್ಥಳೀಯರು ಇಬ್ಬರನ್ನೂ ಸಮಾಧಾನಪಡಿಸಿ ಕಳುಹಿಸಿದ್ದಾರೆ. ಕೆಲ ಹೊತ್ತಿನ ಬಳಿಕ ಪೃಥ್ವಿ, ಶ್ರೀನಿವಾಸ್‌ ಮತ್ತು ತಂಡ ಗಣೇಶ್‌ನನ್ನು ಸಂಧಾನ ಮಾಡಲು ಕರೆಸಿಕೊಂಡಿದ್ದಾರೆ.

ಈ ವೇಳೆ ಗಣೇಶ್‌ ಮತ್ತು ಯುವಕರ ಗುಂಪಿನ ನಡುವೆ ಮತ್ತೆ ಜಗಳವಾಗಿದ್ದು, ಯುವಕರ ಗುಂಪು ಗಣೇಶ್‌ ಮೇಲೆ ಹಲ್ಲೆ ನಡೆಸಿದೆ. ಈ ವೇಳೆ ಯುವಕನೊಬ್ಬ ಚಾಕುವಿನಿಂದ ಗಣೇಶ್‌ ಹೊಟ್ಟೆ ಹಾಗೂ ಎದೆ ಭಾಗಕ್ಕೆ ಇರಿದಿದ್ದಾನೆ. ಗಣೇಶ್‌ ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ಹೋಗುವಾಗ ಕುಸಿದು ಬಿದ್ದಿದ್ದು, ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫ‌ಲಿಸದೇ ಮೃತಪಟ್ಟಿದ್ದಾನೆ.

ಇತ್ತ ತಡರಾತ್ರಿಯಾದರೂ ಗಣೇಶ್‌ ಮನೆಗೆ ಬಾರದಿದ್ದರಿಂದ ಆತಂಕಗೊಂಡು ಪೋಷಕರು ಹುಡುಕಾಟ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಗಣೇಶ್‌ ಕಾರು ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ತನ್ನ ಏರಿಯಾದಲ್ಲಿ “ಹವಾ’ ಇಡಲು ಆರಂಭಿಸಿದ್ದ. ಹಾಗಾಗಿ ಎದುರಾಳಿ ಗುಂಪಿನ ಯುವಕರನ್ನು ಹೆದರಿಸುತ್ತಿದ್ದ. ಇದೇ ವಿಚಾರವಾಗಿ ಪೃಥ್ವಿ ಮತ್ತು ಸ್ನೇಹಿತರೊಂದಿಗೆ ಜಗಳ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next