Advertisement

ಹಳೇ ವೈಷಮ್ಯಕ್ಕೆ ಯುವಕನ ಬರ್ಬರ ಕೊಲೆ

11:44 AM Aug 28, 2017 | |

ಬೆಂಗಳೂರು: ರಾಜಧಾನಿಯಲ್ಲಿ ರೌಡಿಗಳ ಕಾಳಗ ಮುಂದುವರಿದಿದ್ದು, ಹಳೇ ವೈಷಮ್ಯಕ್ಕೆ ಮತ್ತೂಬ್ಬ ರೌಡಿಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಮೂರು ದಿನಗಳಲ್ಲಿ ಸಂಭವಿಸಿದ ಮೂರನೇ ಕೃತ್ಯ ಇದಾಗಿದೆ. ಕುಮಾರಸ್ವಾಮಿ ಲೇಔಟ್‌ನ ವ್ಯಾಪ್ತಿಯಲ್ಲಿ ಸಣ್ಣಪುಟ್ಟ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ ಭರತ್‌ (25) ಎಂಬಾತನನ್ನು ಕಾಶಿನಗರದ ಅಲ್ಫಾ ಫ್ಯಾಕ್ಟರಿ ಶೆಡ್‌ನ‌ಲ್ಲಿ ಶನಿವಾರ ರಾತ್ರಿ ಬರ್ಬರವಾಗಿ ಕೊಲೆ ಮಾಡಲಾಗಿದೆ. 

Advertisement

ಈ ಕೃತ್ಯದಲ್ಲಿ ರೌಡಿಶೀಟರ್‌ ವಿನೋದ್‌ ಅಲಿಯಾಸ್‌ ಕೋತಿ ತಂಡದ ಕೈವಾಡವಿರುವ ಶಂಕೆ ವ್ಯಕ್ತಪಡಿಸಿರುವ ಪೊಲೀಸರು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಶನಿವಾರ ರಾತ್ರಿ ಭರತ್‌ನನ್ನು ಪಾಳುಬಿದ್ದಿರುವ ಆಲ್ಫಾ  ಫ್ಯಾಕ್ಟರಿಗೆ ಕರೆತಂದಿರುವ ದುಷ್ಕರ್ಮಿಗಳು, ಆತನಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಬಳಿಕ ಆತನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದಾರೆ.

ಭಾನುವಾರ ಬೆಳಿಗ್ಗೆ ಫ್ಯಾಕ್ಟರಿ ಹಾಲ್‌ನಲ್ಲಿ ಶವ ಇರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು. ರಾಜಸ್ಥಾನ ನಗರದದ ಭರತ್‌ವಿರುದ್ಧ ಈ ಹಿಂದೆ ಡಕಾಯಿತಿಗೆ ಹೊಂಚು ಹಾಕಿದ ಪ್ರಕರಣ ದಾಖಲಾಗಿತ್ತು.

ಇದಾದ ನಂತರ ಕೆಲ ಹುಡುಗರ ತಂಡ ಕಟ್ಟಿಕೊಂಡು ಕಾಶಿನಗರ ಸುತ್ತಮುತ್ತಲ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ. ಇದರಿಂದ ಕುಖ್ಯಾತ ರೌಡಿಶೀಟರ್‌ ವಿನೋದ್‌ಗೆ  ಇರುಸು ಮುರುಸು  ಉಂಟಾಗಿತ್ತು. ಇದೇ ವಿಚಾರಕ್ಕೆ ಹಲವು ಬಾರಿ ಜಗಳ ಆಡಿಕೊಂಡಿದ್ದಾರೆ. ಹೀಗಾಗಿ, ವಿನೋದ್‌ ತಂಡವೇ ಭರತ್‌ನನ್ನು ಕೊಲೆಗೈದಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಮೂವರು ರೌಡಿಗಳ ಮರ್ಡರ್‌
ಶನಿವಾರ ರಾತ್ರಿ ನಡೆದಿರುವ ಭರತ್‌ ಕೊಲೆ ಪ್ರಕರಣ ಸೇರಿದಂತೆ ಮೂರು ದಿನಗಳಲ್ಲಿ ರೌಡಿಗಳ ಕಾಳಗದಲ್ಲಿ ಮೂವರು ಮೃತರಾಗಿದ್ದಾರೆ.  ಆಗಸ್ಟ್‌ 24ರಂದು ಸಂಜೆ ನಾಯಂಡಹಳ್ಳಿಯ ಸಾಯಿ ಕಾಂಪ್ಲೆಕ್ಸ್‌ ಎದುರು ಚಂದ್ರಲೇಔಟ್‌ ಠಾಣೆಯ  ರೌಡಿಶೀಟರ್‌  ಅರ್ಜುನ್‌ ಅಲಿಯಾಸ್‌ ತಟ್ಟೆ (32) ಎಂಬಾತನನ್ನು  ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿದ್ದರು. ಆಗಸ್ಟ್‌ 26ರಂದು ಸಂಜೆ ಬಾಹುಬಲಿ ನಗರದಲ್ಲಿ ಗಂಗಮ್ಮನಗುಡಿ ಪೊಲೀಸ್‌ ಠಾಣೆಯ ರೌಡಿ ಶೀಟರ್‌ ಮೋನಿ ಅಲಿಯಾಸ್‌ ಮೋಹನ್‌ಕುಮಾರ್‌ ಎಂಬಾತನನ್ನು ಕೊಲೆ ಮಾಡಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next