Advertisement

ನಾಪತ್ತೆಯಾದ ವಿದ್ಯಾರ್ಥಿನಿಯ ಶವ ಪತ್ತೆ! ಸಹೋದರನಿಂದಲೇ ತಂಗಿಯ ಕೊಲೆ

09:48 AM Oct 27, 2019 | sudhir |

ಉಳ್ಳಾಲ : ಪಜೀರು ಗ್ರಾಮದ ಕಂಬಳಪದವಿನ ಮನೆಯಿಂದ 18 ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಫಿಯೋನಾ ಸ್ವೀಡಲ್‌ ಕುಟಿನ್ಹಾ (16) ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಮನೆಯ ಹಿಂಭಾಗದ ಕಾಡಿನಲ್ಲಿ ಪತ್ತೆಯಾಗಿದೆ. ಆಕೆಯನ್ನು ಸಹೋದರನೇ ಕೊಂದು ಕಾಡಿಗೆ ಎಸೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಪಜೀರು ಗ್ರಾಮದ ಫ್ರಾನ್ಸಿಸ್‌ ಕುಟಿನ್ಹೊ ಅವರ ಪುತ್ರಿಯಾಗಿದ್ದ ಫಿಯೋನಾ ಸಂತ ಆಗ್ನೆಸ್‌ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾಗಿದ್ದಳು. ಈಕೆಯನ್ನು ಅಣ್ಣ ಸ್ಯಾಮ್ಸನ್‌ (18) ಕೊಲೆ ಮಾಡಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ.

ಘಟನೆಯ ವಿವರ
ಅ.8ರಂದು ಫಿಯೋನಾ ಮಂಗಳೂರಿಗೆಂದು ಹೋದವಳು ನಾಪತ್ತೆಯಾಗಿದ್ದಾಳೆಂದು ಮನೆಯವರು ಕೊಣಾಜೆ ಠಾಣೆಯಲ್ಲಿ ಅ.9 ರಂದು ದೂರು ದಾಖಲಿಸಿದ್ದರು. 15 ದಿನಗಳು ಕಳೆದರೂ ಆಕೆ ಪತ್ತೆಯಾಗದ ಹಿನ್ನೆಲೆಯಲ್ಲಿ ಮುಡಿಪು ನಾಗರಿಕರು ಆಕೆಯನ್ನು ಶೀಘ್ರ ಪತ್ತೆ ಹಚ್ಚುವಂತೆ ಆಗ್ರಹಿಸಿ ಪೊಲೀಸ್‌ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು. ಪೊಲೀಸ್‌ ಆಯುಕ್ತರು ಪ್ರಕರಣದ ತನಿಖೆ ನಡೆಸುವಂತೆ ಸಹಾಯಕ ಆಯುಕ್ತರಿಗೆ ನಿರ್ದೇಶಿಸಿದ್ದರು.

ಸಾಕಷ್ಟು ತನಿಖೆ ನಡೆಸಿದಾಗ ವಿದ್ಯಾರ್ಥಿನಿಯ ಮೊಬೈಲ್‌ನ ಕೊನೆಯ ನೆಟ್‌ವರ್ಕ್‌ ಮುಡಿಪು ಭಾಗದಲ್ಲೇ ತೋರಿಸುತ್ತಿತ್ತು. ಅದರ ಆಧಾರದಡಿ ಪೊಲೀಸರು ಮನೆಮಂದಿಯನ್ನೇ ಹೆಚ್ಚಿನ ವಿಚಾರಣೆ ನಡೆಸಿದ್ದರು. ಶನಿವಾರ ಸಹೋದರ ಸ್ಯಾಮ್ಸನ್‌ ಅನ್ನು ವಿಚಾರಣೆ ನಡೆಸಿದಾಗ ಫಿಯೋನಾಳನ್ನು ಕೊಂದು ಮೃತದೇಹವನ್ನು ಮನೆಯ ಹಿಂದಿನ ಕಾಡಿನಲ್ಲಿ ಎಸೆದಿರುವುದಾಗಿ ತಿಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತದೇಹದ ಕುರುಹುಗಳು ಪತ್ತೆ: ಸಾಮ್ಸನ್‌ ನೀಡಿದ ಸುಳಿವಿನಂತೆ ಪೊಲೀಸರು ಮನೆಯ ಹಿಂಬಾಗದಲ್ಲಿರುವ ಕಾಡಿನಲ್ಲಿ ಶನಿವಾರ ರಾತ್ರಿ ಪರಿಶೀಲನೆ ನಡೆಸಿದಾಗ ಮೃತದೇಹದ ಕೂದಲು, ಹಲ್ಲು, ಮೊಬೈಲ್‌ ಮತ್ತು ಅಸ್ತಿಪಂಜರದ ಕೆಲವು ಭಾಗಗಳು ಪತ್ತೆಯಾಗಿದ್ದು ತಡರಾತ್ರಿಯಾಗಿರುವುದರಿಂದ ರವಿವಾರಕ್ಕೆ ತನಿಖೆಯನ್ನು ಮುಂದುವರೆಸಿದ್ದಾರೆ. ಸ್ಥಳದಲ್ಲಿ ಸ್ಥಳೀಯರು ಸೇರಿದ್ದು ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದೆ.

Advertisement

ಕೊಲೆಗೆ ಬಳಸಿದ್ದ ಸುತ್ತಿಗೆ ವಶ
ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಸಹೋದರ-ಸಹೋದರಿ ನಡುವೆ ಗಲಾಟೆ ನಡೆದು ಸುತ್ತಿಗೆಯಿಂದ ತಲೆಗೆ ಬಡಿದು ಹತ್ಯೆ ನಡೆಸಿರುವುದಾಗಿ ಆರೋಪಿ ಪೊಲೀಸರು ತಪ್ಪೊಪ್ಪಿಕೊಂಡಿದ್ದು, ಸುತ್ತಿಗೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಎಂಜಿನಿಯರಿಂಗ್‌ ವಿದ್ಯಾರ್ಥಿ

ಸ್ಯಾಮ್ಸನ್‌  ಎಂಜಿನಿಯರಿಂಗ್‌ ವಿದ್ಯಾರ್ಥಿಯಾಗಿದ್ದು, ಪರೀಕ್ಷೆ ಪಾಸಾಗದೆ ಮನೆಯಲ್ಲೇ ಉಳಿದುಕೊಂಡಿದ್ದ. ಮೊಬೈಲ್‌ ಗೀಳು ಹೆಚ್ಚಿಸಿಕೊಂಡಿದ್ದ ಈತ ತನಗೆ ಮನೆಯಲ್ಲಿ ಪ್ರೀತಿ ನೀಡುತ್ತಿಲ್ಲ. ತಂದೆ ಮತ್ತು ತಾಯಿ ಸಹೋದರಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಾರೆ ಎಂದು ಭಾವಿಸಿ ಕೊಲೆ ನಡೆಸಿರುವ ಸಾಧ್ಯತೆ ಇದೆ ಎಂದು ಪೊಲೀಸ್‌ ಮೂಲಗಳು ತಿಳಿಸಿದ್ದು, ತನಿಖೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next