ಪಾಲಕ್ಕಾಡ್: ಸುಮಾರು 5 ವರ್ಷಗಳ ಹಿಂದೆ ಕೇರಳದಲ್ಲಿ ನಡೆದಿದ್ದ 27 ವರ್ಷದ ಬುಡಕಟ್ಟು ಯುವಕನೊಬ್ಬನ ಕೊಲೆಗೆ ಸಂಬಂಧಿಸಿದಂತೆ 14 ಮಂದಿ ಆರೋಪಿಗಳನ್ನು ದೋಷಿಗಳೆಂದು ಪರಿಗಣಿಸಿ ಕೇರಳದ ಪಾಲಕ್ಕಾಡ್‌ನ ಮನ್ನಾರ್‌ಕಾಡ್ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ವಿಶೇಷ ನ್ಯಾಯಾಲಯ ಮಂಗಳವಾರ ಆದೇಶ ಹೊರಡಿಸಿದೆ.
ಫೆ. 22, 2018 ರಂದು ಮಧು ಎಂಬ ಬುಡಕಟ್ಟು ಯುವಕನನ್ನು ಕೊಲೆಗೈದ ಕಾರಣಕ್ಕೆ ಒಟ್ಟು 16 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಮಂಗಳವಾರ ಇಬ್ಬರನ್ನು ಖುಲಾಸೆಗೊಳಿಸಿರುವ ನ್ಯಾಯಾಲಯ 14 ಮಂದಿಯನ್ನು ದೋಷಿಗಳೆಂದು ಹೇಳಿದೆ.
ಪ್ರಕರಣವೇನು?
ಫೆ. 22, 2018ರಂದು ಪಾಲಕ್ಕಾಡ್ ಜಿಲ್ಲೆಯ ಅಟ್ಟಪ್ಪಾಡಿಯ ಚಿಂದುಕೂರಿನಲ್ಲಿ ಸ್ಥಳೀಯ ಪ್ರಾವಿಷನ್ ಸ್ಟೋರ್‌ವೊಂದರಿಂದ ದಿನಸಿ ಸಾಮಗ್ರಿಗಳು ನಾಪತ್ತೆಯಾಗಿದ್ದರ ಬಗ್ಗೆ ಮಾಹಿತಿ ಹೊರಬಿದ್ದಿತ್ತು. ಈ ಪ್ರಕರಣದಲ್ಲಿ ಮಧು ಎಂಬ ಬುಡಕಟ್ಟು ಯುವಕನನ್ನು ಥಳಿಸಿ ಕೊಲೆಗೈಯ್ಯಲಾಗಿತ್ತು.
Related Articles
ಏಳನೇ ತರಗತಿಯ ಬಳಿಕ ಶಾಲೆಯನ್ನು ತೊರೆದಿದ್ದ ಮಧು ಆ ಬಳಿಕ ಬಡಗಿ ಕೆಲಸಕ್ಕೆ ಇಳಿದಿದ್ದ. ಅಲೆಮಾರಿಯಂತೆಯೇ ಜೀವನ ಸಾಗಿಸುತ್ತಿದ್ದ ಮಧು, ಗುಡ್ಡಗಾಡುಗಳಲ್ಲೇ ಜೀವನ ನಡೆಸುತ್ತಿದ್ದ. ತೀರಾ ಅಪರೂಪ ಎನ್ನುವಂತೆ ಮನೆಗೆ ಬರುತ್ತಿದ್ದ.
ಘಟನಾ ಸಮಯದಲ್ಲಿ ಮಧು ಕಾಡಂಚಿನಲ್ಲಿರುವ ಗುಹೆಯೊಂದರಲ್ಲಿ ಆಶ್ರಯ ಪಡೆಯುತ್ತಿದ್ದ. ವ್ಯಕ್ತಿಯೊಬ್ಬರು ಕಟ್ಟಿಗೆ ತರಲೆಂದು ಕಾಡಿಗೆ ಹೋಗಿದ್ದಾಗ ಮಧುವನ್ನು ಕಂಡಿದ್ದು ಆತನ ಜೊತೆಗೆ ದಿನಸಿಗಳು ಇವೆಯೆಂದು ಊರಿನಲ್ಲಿರುವ ಅಂಗಡಿಯಲ್ಲಿ ತಿಳಿಸಿದ್ದರು.
ಇದನ್ನು ತಿಳಿದು ಊರಿನ ಜನ ಅಂಗಡಿ ಮಾಲಿಕರ ಜೊತೆ ಕಾಡಿಗೆ ಬಂದಿದ್ದು ಸುಮಾರು 200 ರೂ. ಮೌಲ್ಯದ ದಿನಸಿ ಸಾಮಗ್ರಿಗಳನ್ನು ಮಧು ಇದ್ದ ಸ್ಥಳದಿಂದ ಸುಮಾರು 4 ಕಿ.ಮೀ ದೂರ ಅವನ ತಲೆಯಲ್ಲೇ ಹೊರಿಸಿಕೊಂಡು ಬರುತ್ತಾರೆ. ದಾರಿ ಮಧ್ಯದಲ್ಲೇ ಆತನ್ನು ಅವಾಚ್ಯ ಪದಗಳಿಂದ ನಿಂದಿಸುತ್ತಾ, ಅಮಾನವೀಯವಾಗಿ ಥಳಿಸುತ್ತಾ ಕರೆತರುತ್ತಾರೆ.
ಇದರ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೋಲಿಸರು ದಾರಿಯಲ್ಲೇ ಅವರನ್ನು ತಡೆಯುತ್ತಾರೆ. ಅದಾಗಲೇ ವಿಪರೀತವಾಗಿ ಗಾಯಗೊಂಡಿದ್ದ ಮಧು ಪೋಲಿಸರ ಮುಂದೆಯೇ ಬಿದ್ದು ಸಾವನ್ನಪ್ಪುತ್ತಾನೆ.
ಇದನ್ನೂ ಓದಿ: Success Story:ಅಂದು ಟ್ಯಾಕ್ಸಿ ಡ್ರೈವರ್…ಇಂದು 42,000 ಕೋಟಿ ರೂ. ಒಡೆಯ; ಯಾರೀವರು ಜಗತಿಯಾನಿ
ಈ ಪ್ರಕರಣ ಕೇರಳ ರಾಜ್ಯದ ರಾಜಕೀಯದಲ್ಲೇ ಬಿರುಗಾಳಿ ಎಬ್ಬಿಸಿತ್ತು. ಈ ಪ್ರಕರಣವನ್ನು ಆದಷ್ಟು ಬೇಗ ಇತ್ಯರ್ಥಗೊಳಿಸುವಂತೆ ಸ್ವತಃ ಕೇರಳ ಹೈಕೋರ್ಟ್ ಕೂಡಾ ಸೂಚನೆ ನೀಡಿತ್ತು.
ಈ ಪ್ರಕರಣದಲ್ಲಿ ಉನ್ನತ ಮಟ್ಟದ ರಾಜಕೀಯವೂ ಸೇರಿಕೊಂಡಿದ್ದರಿಂದ ಹಲವಾರು ಮಂದಿ ಸಾಕ್ಷಿಗಳು ಈ ಕೇಸಿನಿಂದ ಹಿಂದೆ ಸರಿದಿದ್ದರು. ಆದರೂ ಛಲ ಬಿಡದ ಮಧುವಿನ ತಾಯಿ ಮತ್ತು ಸಹೋದರಿ ಆರೋಪಿಗಳಿಗೆ ಶಿಕ್ಷೆ ನೀಡುವಂತೆ ಪಟ್ಟು ಹಿಡಿದಿದ್ದರು.
ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಮಂದಿ ಆರೋಪಿಗಳನ್ನು ದೋಷಿಗಳೆಂದು ಪ್ರಕಟಿಸಲಾಗಿದ್ದು, ʻಆದೇಶ ಹೊರಬರಲು ಸುಮಾರು 5 ವರ್ಷ ಕಾದಿದ್ದೇವೆ. ಆರೋಪಿಗಳಿಗೆ ನ್ಯಾಯಾಲಯ ಯಾವ ಶಿಕ್ಷೆ ನೀಡುತ್ತದೆ ಎಂದು ಕಾಯುತ್ತಿದ್ದೇವೆʼ ಎಂದು ಮಧುವಿನ ಸಹೋದರಿ ತಿಳಿಸಿದ್ದಾರೆ.