Advertisement

ಆನ್‌ಲೈನ್‌ ಆ್ಯಪ್‌ ಮೂಲಕ ತುರ್ತು ಪರಿಸ್ಥಿತಿ ಎದುರಿಸಲು ನಗರಸಭೆ ಸಿದ್ಧ

11:08 PM Jun 22, 2019 | Team Udayavani |

ಉಡುಪಿ: ಪ್ರಸ್ತುತ ಸಾಲಿನ ಮಳೆಗಾಲದ ತುರ್ತು ಪರಿಸ್ಥಿತಿಯನ್ನು ಎದುರಿಸಲು ನಗರಸಭೆ ಸನ್ನದ್ಧಗೊಂಡಿದೆ. ಇದೇ ಮೊದಲ ಬಾರಿಗೆ ಆನ್‌ಲೈನ್‌ ಆ್ಯಪ್‌ ಮೂಲಕ ಬರುವ ದೂರುಗಳನ್ನು ಶೀಘ್ರವಾಗಿ ಪರಿಹರಿಸಲು ಕಾರ್ಯಪಡೆ ಸಿದ್ಧವಾಗಿದೆ.

Advertisement

ಉಡುಪಿ ಹೆಲ್ಪ್ ಆ್ಯಪ್‌

ನಗರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ತುರ್ತು ಸ್ಪಂದನೆ ಗಾಗಿ ಉಡುಪಿ ಹೆಲ್ಪ್ ಆ್ಯಪ್‌ ರಚಿಸಲಾಗಿದೆ. 35 ವಾರ್ಡ್‌ಗಳ ಸಾರ್ವಜನಿಕರು ಆ್ಯಪ್‌ನ ಮೂಲಕ ಮಲೇರಿಯಾ, ಮರ ಬಿದ್ದು ರಸ್ತೆ ಹಾನಿ, ವಿದ್ಯುತ್‌ ಕಂಬ ಬಿದ್ದು ಮನೆ ಹಾಗೂ ರಸ್ತೆ ಹಾನಿ, ನೆರೆ ಪೀಡಿತ ಪ್ರದೇಶ, ಸಿಡಿಲು ಬಡಿದು ಮನೆ ಹಾಗೂ ಪ್ರಾಣ ಹಾನಿ, ಚರಂಡಿ ನೀರು ಹರಿಯುವುದು, ಭೂ ಕುಸಿತ, ಕಟ್ಟಡ ಕುಸಿತ ಸೇರಿದಂತೆ ಇತರೆ ದೂರಗಳನ್ನು ಈ ಆ್ಯಪ್‌ನಲ್ಲಿ ದಾಖಲಿಸಬಹುದು.

ವಾರ್ಡ್‌ವಾರು ಟಾಸ್ಕ್ಫೋರ್ಸ್‌

ಮಳೆ ತಂದೊಡ್ಡಬಹುದಾದ ಎಲ್ಲ ಸಮಸ್ಯೆ ಎದುರಿಸಲು ಪ್ರತಿ ವಾರ್ಡ್‌ನಲ್ಲಿಯೂ ತುರ್ತು ಕಾರ್ಯಪಡೆ ರಚಿಸಲಾಗಿದೆ. ನಗರಸಭೆಯನ್ನು 3 ವಿಭಾಗಗಳನ್ನಾಗಿ ವಿಂಗಡಿಸಿ ಕಮೀಷನರ್‌, ಎಂಜಿನಿಯರ್‌ಗಳಿಗೆ ಜವಾಬ್ದಾರಿ ನೀಡಲಾಗಿದೆ.

Advertisement

ರಾ.ಹೆ. 169ಎ ಕಾಮಗಾರಿ ಸಮಸ್ಯೆ

ರಾ.ಹೆ. 169ಎ ಮಲ್ಪೆ -ಕಡಿಯಾಳಿಯಲ್ಲಿ ಕಾಮಗಾರಿ ಅಪೂರ್ಣಗೊಂಡಿದೆ. ಕೆಲವೊಂದು ಪ್ರದೇಶದಲ್ಲಿ ಒಳಚರಂಡಿ ನಿರ್ಮಾಣವಾಗದ ಹಿನ್ನೆಲೆಯಲ್ಲಿ ರಾ.ಹೆ. ಸಮೀಪದ ಪ್ರದೇಶದಲ್ಲಿ ಕೃತಕ ನೆರೆ ಉಂಟಾಗುವ ಸಾಧ್ಯತೆಯಿದೆ.

ಮುಂಗಾರು ಮಳೆಯ ಅವಧಿಯಲ್ಲಿ ನೆರೆ, ಮನೆಗಳಿಗೆ ಹಾನಿ ಮೊದಲಾದ ಪ್ರಾಕೃತಿಕ ವಿಕೋಪಗಳು ಸಂಭವಿಸಿದಂತಹ ಸನ್ನಿವೇಶದಲ್ಲಿ ಜನರು ಕಂಟ್ರೋಲ್ ರೂಮ್‌ ಅನ್ನು ಸಂಪರ್ಕಿಸಬೇಕು. ವಿಪತ್ತು ನಿರ್ವಹಣಾ ತಂಡವನ್ನೂ ರಚಿಸಲಾಗಿದೆ. ಉಡುಪಿ ನಗರದವರು ನಗರಸಭೆ ದೂರು ವಿಭಾಗಕ್ಕೆ (0820-2520306) ಸಂಪರ್ಕಿಸಬಹುದು ಅಥವಾ ಆ್ಯಪ್‌ನಲ್ಲಿ ದೂರು ನೀಡ ಬಹುದು.

ನೆರೆ ಪೀಡಿತ ಪ್ರದೇಶ

2018-19ನೇ ಸಾಲಿನಲ್ಲಿ ಉಡುಪಿ ನಗರದ ಬೈಲಕೆರೆ, ಬನ್ನಂಜೆ, ಮಠದ ಬೆಟ್ಟು, ಅಂಬಲಪಾಡಿ, ಕಲ್ಸಂಕ ಸೇರಿದಂತೆ ವಿವಿಧ ಕಡೆ ನೆರೆ ಸಮಸ್ಯೆ ಉಂಟಾಗಿತ್ತು.

ಮೆಸ್ಕಾಂಗೆ ಭಾರೀ ಪ್ರಮಾಣದಲ್ಲಿ ಹಾನಿ

ಕಳೆದ ಮಳೆಗಾಲದಲ್ಲಿ ಮಣಿಪಾಲದ ಈಶ್ವರನಗರ, ಮಂಚಿ, ಅಂಬಾಗಿಲು ಪೆರಂಪಳ್ಳಿ, ದೊಡ್ಡಣಗುಡ್ಡೆ ಮೊದಲಾದೆಡೆಗಳಲ್ಲಿ ರಸ್ತೆ ಬದಿ ಇದ್ದ ಬೃಹತ್‌ ಮರಗಳು ವಿದ್ಯುತ್‌ ತಂತಿ, ಕಂಬಗಳ ಮೇಲೆಯೇ ಮರ ಉರುಳಿದ್ದು ಭಾರೀ ಪ್ರಮಾಣದಲ್ಲಿ ಮೆಸ್ಕಾಂಗೆ ಹಾನಿಯಾಗಿತ್ತು.

ಉತ್ತಮ ಪ್ರತಿಕ್ರಿಯೆ

ಉಡುಪಿ ಹೆಲ್ಪ್ ಆ್ಯಪ್‌ ಬಿಡುಗಡೆಯಾದ ಒಂದೇ ವಾರದಲ್ಲಿ ನಗರ ವ್ಯಾಪ್ತಿಯಲ್ಲಿ ಸುಮಾರು 73 ದೂರುಗಳು ಬಂದಿವೆ. ಅಧಿಕಾರಿಗಳು ಎಲ್ಲ ದೂರುಗಳಿಗೆ ಸ್ಪಂದಿಸಿದ್ದು, 40 ನಿಮಿಷದಲ್ಲಿ ಸಮಸ್ಯೆ ಬಗೆಹರಿಸಿದ್ದಾರೆ. ಇದುವರೆಗೆ ಸುಮಾರು 469 ಮಂದಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next