Advertisement
ವಿಶ್ವದ ಏಕೈಕ ಚಲಿಸುವ ಸೇತುವೆ ಎಲ್ಲಿದೆ ಗೊತ್ತಾ? ಇಂಗ್ಲೆಂಡಿನಲ್ಲಿ. ಇದನ್ನು ಗೇಟ್ಸ್‌ಹೆಡ್ ಮಿಲೇನಿಯಮ್ ಬ್ರಿಡ್ಜ್ ಅಂತ ಕರೆಯುತ್ತಾರೆ. ದಕ್ಷಿಣದ ಕ್ವೇನ್‌ಆರ್ಟ್ಸ್ ಮತ್ತು ಉತ್ತರದ ನ್ಯೂಕಾಸಲ್‌ನ ಕ್ವೇಸ್ಕೆಡ್ ದ್ವೀಪಗಳ ನಡುವೆ ಇರುವ ನದಿಗೆ ಈ ಸೇತುವೆ ಸಂಪರ್ಕ ಕಲ್ಪಿಸುತ್ತದೆ. ಸುಮಾರು 126 ಮೀಟರ್ ಉದ್ದವಿರುವ ಈ ಸೇತುವೆಯಲ್ಲಿ ಸೈಕಲ್ ಸವಾರರು ಮತ್ತು ಪಾದಚಾರಿಗಳು ಮಾತ್ರ ಸಂಚರಿಸಬಹುದು. ಪಾದಚಾರಿಗಳಿಗೆ ಐದು ಮೀಟರ್ ಹಾಗೂ ಸೈಕಲ್ ಯಾನಿಗಳಿಗಾಗಿಯೇ 25 ಮೀಟರ್ ಅಗಲವಿರುವ ಪಥವನ್ನು ಕಲ್ಪಿಸಲಾಗಿದೆ. ಆದರೆ, ಯಾವುದೇ ಕಾರಣಕ್ಕೂ ದೊಡ್ಡ ವಾಹನಗಳು ಇಲ್ಲಿ ಸಂಚರಿಸುವ ಹಾಗಿಲ್ಲ.
ಈ ಸೇತುವೆಯಲ್ಲಿ ಹದಿನೆಂಟು ಇಂಚು ವ್ಯಾಸವಿರುವ ಹೈಡ್ರೋಲಿಕ್ ರಾಮ್‌ಗಳಿವೆ. ಒಂದನ್ನೊಂದು ಬೆಂಬಲಿಸುವ ವಕ್ರಾಕೃತಿಯ ಎರಡು ಕಮಾನುಗಳಿವೆ. ಕೆಳಭಾಗದಲ್ಲಿ ದೋಣಿ ಅಥವಾ ಹಡಗು ಬಂದಾಗ ಸ್ವಯಂಚಾಲಿತವಾಗಿ ಸೇತುವೆಯ ಕಮಾನು ನಲವತ್ತು ಡಿಗ್ರಿಯಷ್ಟು ತಿರುಗಿ ಸೇತುವೆ ಮೇಲೇರುವುದನ್ನು ನೋಡುವುದೇ ಚಂದ. 25 ಮೀಟರ್ ಎತ್ತರದ ಹಡಗು ಸಲೀಸಾಗಿ ಕೆಳಗಿನಿಂದ ಪಾರಾಗಲು ಅನುವು ಮಾಡಿಕೊಡುತ್ತದೆ. ಗಾಳಿಯ ವೇಗವನ್ನು ಅನುಸರಿಸಿ ಸೇತುವೆ ಮೇಲೇರಲು ಗರಿಷ್ಠ ನಾಲ್ಕೂವರೆ ನಿಮಿಷ ಹಿಡಿಯುತ್ತದೆ. ಚಲಿಸುವ ಕಾರಣದಿಂದಾಗಿ ಕೆಳಗೆ ನಿಂತು ನೋಡಿದರೆ ಸೇತುವೆ ಮಿಟುಕಿಸುವ ಕಣ್ಣಿನ ಹಾಗೆ ಕಾಣಿಸುವ ಕಾರಣ ಅದನ್ನು ವಿಂಕಿಂಗ್ ಐ ಬ್ರಿಡ್ಜ್ ಎಂದೂ ಕರೆಯುತ್ತಾರೆ.
Related Articles
ಸೇತುವೆಯ ಎರಡೂ ಬದಿಗಳಲ್ಲಿ 55 ಕಿಲೋವ್ಯಾಟ್ ವಿದ್ಯುತ್ಛಕ್ತಿಯಿಂದ ಚಲಿಸುವ ಮೋಟಾರುಗಳಿವೆ. ಅದನ್ನು ಮೇಲೇರಿಸಿ, ಕೆಳಗಿಳಿಸಲು ಹೈಡ್ರೋಲಿಕ್ ವ್ಯವಸ್ಥೆಗೆ ಇವು ನೆರವಾಗುತ್ತವೆ.
Advertisement
ಬ್ರಿಟಿಷ್ ನಾಣ್ಯ ಪೌಂಡ್ ಮತ್ತು ಅಂಚೆಚೀಟಿಯಲ್ಲಿ ಸೇತುವೆಯ ಚಿತ್ರಗಳನ್ನು ಮುದ್ರಿಸಲಾಗಿದೆ. ವಾಸ್ತುಶಿಲ್ಪಿ ಎಲ್ಕಿನ್ಸಸ್ ಐರ್ ರೂಪಿಸಿರುವ ಸೇತುವೆಗೆ 2002ರ ರಾಯಲ್ ಇನ್‌ಸ್ಟಿಟ್ಯೂಟ್ ಆಫ್ ಬ್ರಿಟಿಷ್ ಆರ್ಕಿಟೆಕ್ಟ್ ಪ್ರಶಸ್ತಿ ಬಂದಿದೆ. ಗಿಫೋರ್ಡ್ ಸುಪ್ರೀಮ್ ಪ್ರಶಸ್ತಿ, ಇಂಟರ್‌ನ್ಯಾಷನಲ್ ಅಸೋಸಿಯೇಷನ್ ಫಾರ್ ಬ್ರಿಡ್ಜ್ ಮತ್ತು ಸ್ಟ್ರಕ್ಚರಲ್ ಎಂಜಿನಿಯರಿಂಗ್ ಅತ್ಯುತ್ತಮ ಪ್ರಶಸ್ತಿಗಳನ್ನು ಕೂಡ ಬಾಚಿಕೊಂಡಿದೆ. ರಾತ್ರಿ ಝಗಮಗಿಸುವ ದೀಪಗಳಲ್ಲಿ ಪ್ರತ್ಯೇಕ ಸೌಂದರ್ಯದಿಂದ ಮಿಂಚುವ ಸೇತುವೆಯ ವೈಭವ ಒಂದೆಡೆಯಾದರೆ ಮುಸ್ಸಂಜೆಯಲ್ಲಿ ಮುಳುಗುವ ಸೂರ್ಯನ ಕಿರಣಗಳಿಗೆ ಬರುವ ಹೊಸ ವರ್ಣದ ಕಳೆಯನ್ನು ಕಂಡು ಪ್ರವಾಸಿಗರು ಖುಷಿಪಡಲೆಂದೇ ಅಲ್ಲಿಗೆ ಬರುತ್ತಾರೆ.
– ಪ. ರಾಮಕೃಷ್ಣ ಶಾಸ್ತ್ರಿ