ಚಂದನವನದಲ್ಲಿ ಕಳೆದ ಕೆಲ ದಿನಗಳಿಂದ ತನ್ನ ಹಾಡುಗಳು ಮತ್ತು ಟ್ರೇಲರ್ ಮೂಲಕ ಸಾಕಷ್ಟು ಸದ್ದು ಮಾಡುತ್ತಿರುವ ಹೊಸ ಪ್ರತಿಭೆಗಳ “ರತ್ನಮಂಜರಿ’ ಚಿತ್ರ ತೆರೆಗೆ ಬರೋದಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಬಿಡುಗಡೆಗೂ ಮುನ್ನ ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ “ರತ್ನಮಂಜರಿ’ಯ ವಿಶೇಷತೆಗಳ ಬಗ್ಗೆ ಮಾತನಾಡಿದೆ.
“ರತ್ನಮಂಜರಿ’ಯ ಮೊದಲ ವಿಶೇಷವೆಂದರೆ, ಇದು ಕನ್ನಡ ಚಿತ್ರರಂಗದ ಮೇಲೆ ಪ್ರೀತಿಯಿರುವ ಅನಿವಾಸಿ ಕನ್ನಡಿಗರ ಕೈಯಲ್ಲಿ ಮೂಡಿಬಂದಿರುವ ಚಿತ್ರ. ಚಿತ್ರದ ನಿರ್ದೇಶಕ ಪ್ರಸಿದ್ಧ್, ನಿರ್ಮಾಪಕರಾದ ಸಂದೀಪ್, ನಟರಾಜ್ ಹಳೆಬೀಡು, ಡಾ. ನವೀನ್ ಕೃಷ್ಣ ಹೀಗೆ ಬಹುತೇಕರು ಅನಿವಾಸಿ ಕನ್ನಡಿಗರು. ಇನ್ನು ಚಿತ್ರದಲ್ಲಿ ಕೂಡ ಚಿತ್ರದ ನಾಯಕ, ನಾಯಕಿ ಇಬ್ಬರೂ ಅನಿವಾಸಿ ಕನ್ನಡಿಗರಂತೆ. ಅಲ್ಲದೆ “ರತ್ನಮಂಜರಿ’ ಚಿತ್ರದ ಅರ್ಧದಷ್ಟು ಭಾಗವನ್ನು ಅಮೆರಿಕಾದಲ್ಲಿ, ಉಳಿದ ಅರ್ಧದಷ್ಟು ಭಾಗವನ್ನು ಕನ್ನಡ ನೆಲದಲ್ಲಿ ಚಿತ್ರೀಕರಿಸಲಾಗಿದೆ. ಇನ್ನು ಚಿತ್ರದಲ್ಲಿ ಕನ್ನಡದವರು ಮಾತ್ರವಲ್ಲದೆ, ಅಮೆರಿಕದವರೂ ಹಲವರು ನಟಿಸಿ¨ªಾರೆ ಎನ್ನುತ್ತದೆ ಚಿತ್ರತಂಡ.
ಚಿತ್ರತಂಡ ಹೇಳುವ ಪ್ರಕಾರ, ಚಿತ್ರದಲ್ಲಿ ನೈಜ ಘಟನೆಯನ್ನು ತೆರೆಮೇಲೆ ತರಲಾಗುತ್ತಿದೆ. ಈ ಕಥೆಯ ಅರ್ಧದಷ್ಟು ಭಾಗ ವಿದೇಶದಲ್ಲಿ ನಡೆದರೆ, ಇನ್ನರ್ಧ ಭಾಗ ಇಲ್ಲಿ ನಡೆಯುತ್ತದೆಯಂತೆ. ಅಮೆರಿಕಾದಲ್ಲಿ ನಡೆಯುವ ಜೋಡಿ ಕೊಲೆ ಆನಂತರ ನಡೆದ ಬೆಳವಣಿಗೆಗಳನ್ನು ಆಧಾರವಾಗಿಟ್ಟುಕೊಂಡು ಈ ಚಿತ್ರ ಮಾಡಲಾಗಿದೆ. ಅಮೆರಿಕಾದಿಂದ ಕೊಡಗಿನವರೆಗೂ ಆ ಕೊಲೆಯ ನಂಟಿರುತ್ತದೆ. ಹಾಗಾದರೆ, “ಅಮೆರಿಕಾದಲ್ಲಿ ನಡೆದ ಆ ಕ್ರೈಂ ಸ್ಟೋರಿಗೆ ಕನ್ನಡದ ನಂಟು ಹೇಗೆ, ಆ ಘಟನೆ ಯಾವುದು’ ಎಂಬ ಪ್ರಶ್ನೆಗೆ ಸಿನಿಮಾ ನೋಡಿದಾಗ ಉತ್ತರ ಸಿಗುತ್ತದೆ ಎನ್ನುತ್ತದೆ “ರತ್ನಮಂಜರಿ’ ಚಿತ್ರತಂಡ.
ರತ್ನಮಂಜರಿ’ ತೆರೆ ಮುಂದೆ, ತೆರೆ ಹಿಂದೆ ಬಹುತೇಕ ಹೊಸ ಪ್ರತಿಭೆಗಳಿಂದಲೆ ಮೂಡಿಬಂದಿದೆ. ಚಿತ್ರದಲ್ಲಿ ರಾಜ್ ಚರಣ್ ನಾಯಕನಾಗಿ, ಅಖೀಲಾ ಪ್ರಕಾಶ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಪಲ್ಲವಿ ರಾಜು, ಕನ್ನಿಕಾ ಹಾಗೂ ಶ್ರದ್ಧಾ ಸಾಲಿಯನ್ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಹಾಡುಗಳಿಗೆ ಹರ್ಷವರ್ಧನ್ ರಾಜ್ ಸಂಗೀತ ಸಂಯೋಜನೆಯಿದ್ದು, ಕೆ. ಕಲ್ಯಾಣ್ ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ. ಪುನೀತ್ ರಾಜಕುಮಾರ್, ವಸಿಷ್ಠ ಸಿಂಹ ಮೊದಲಾದವರು ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಚಿತ್ರದ ದೃಶ್ಯಗಳಿಗೆ ಪ್ರೀತಮ್ ತೆಗ್ಗಿನಮನೆ ಮತ್ತು ಕಿಟ್ಟಿ ಕ್ಯಾಮೆರಾ ಹಿಡಿದರೆ, ಪವನ್ ರಾಮ್ ಶೆಟ್ಟಿ ಸಂಕಲನ ಕಾರ್ಯ ನಿರ್ವ ಹಿಸಿದ್ದಾರೆ. ವಿಕ್ರಂ ಮೋರ್ ಸಾಹಸ, ಮೋಹನ್ ನೃತ್ಯ ಸಂಯೋಜಿಸಿದ್ದಾರೆ. “ಶರಾವತಿ ಫಿಲಂಸ್’ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದೆ.