Advertisement

ರಂಗಭೂಮಿ ನಿರ್ಲಕ್ಷದ ವಿರುದ್ಧ ಆಂದೋಲನವಾಗಲಿ

01:00 AM Feb 13, 2019 | Harsha Rao |

ಉಡುಪಿ: ರಂಗಚಟುವಟಿಕೆಗಳನ್ನು ನಿರ್ಲಕ್ಷಿಸುವ ಸರಕಾರಗಳ ವಿರುದ್ಧ ಆಂದೋಲನ ನಡೆಯಬೇಕು ಎಂದು ರಂಗಭೂಮಿ ಮತ್ತು ಚಲನಚಿತ್ರ ನಿರ್ದೇಶಕ ಎಂ.ಎಸ್‌. ಸತ್ಯು ಹೇಳಿದ್ದಾರೆ.

Advertisement

ಮಂಗಳವಾರ ಉಡುಪಿ ಪುರಭವನದಲ್ಲಿ ಕರ್ನಾಟಕ ನಾಟಕ ಅಕಾಡೆಮಿ 2018-19ನೇ ಸಾಲಿನ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಅವರು ಮಾತನಾಡಿದರು.

ಬೆಂಗಳೂರಿನ ರಂಗಶಂಕರ ಥಿಯೇಟರ್‌ನ್ನು ಹವ್ಯಾಸಿ ನಾಟಕ ಕಲಾವಿದರು 14 ವರ್ಷಗಳಿಂದ ಉತ್ತಮ ರೀತಿಯಲ್ಲಿ ನಡೆಸುತ್ತಿದ್ದಾರೆ. ಹವಾನಿಯಂತ್ರಿತವಾಗಿರುವ ಈ ಥಿಯೇಟರ್‌ ಎಲ್ಲ ವ್ಯವಸ್ಥೆಗಳನ್ನು ಒಳಗೊಂಡಿದೆ. 2,500 ರೂ. ಬಾಡಿಗೆ ಮಾತ್ರ ಇದೆ. ಇದೇ ಮಾದರಿಯಲ್ಲಿ ರಾಜ್ಯದ ಇತರೆಡೆಗಳಲ್ಲಿಯೂ ಸರಕಾರವೇ ರಂಗಮಂದಿರಗಳನ್ನು ನಿರ್ಮಿಸಿ ಕಡಿಮೆ ಬಾಡಿಗೆಗೆ ದೊರೆಯುವಂತೆ ಮಾಡಬೇಕು. ಆದರೆ ಸರಕಾರ ಕಟ್ಟಡಗಳನ್ನು ನಿರ್ಮಿಸಿ ಬೇರೆಯವರಿಗೆ ನಡೆಸಲು ವಹಿಸಿಕೊಡುತ್ತದೆ. ಅವರು ಇಷ್ಟ ಬಂದಷ್ಟು ಬಾಡಿಗೆ ವಸೂಲಿ ಮಾಡುತ್ತಾರೆ.

ಇನ್ನೊಂದೆಡೆ ಕೇಂದ್ರ ಸರಕಾರ ಸಂಗೀತ, ನೃತ್ಯದಂತಹ ಚಟುವಟಿಕೆಗಳ ಮೇಲೆ ಕೂಡ ಜಿಎಸ್‌ಟಿ ಹಾಕಿದೆ. ಇದು ನ್ಯಾಯವಲ್ಲ. ಹಾಗಾಗಿ ಸರಕಾರಗಳಿಗೆ ಬುದ್ಧಿ ಬರಲು ರಂಗಕರ್ಮಿಗಳು ಆಂದೋಲನ ನಡೆಸಬೇಕಾಗಿದೆ ಎಂದು ಸತ್ಯು ಹೇಳಿದರು. 

ಪಠ್ಯಕ್ರಮ ಬೇಕು
ಉದ್ಘಾಟನೆ ನೆರವೇರಿಸಿದ ವಿಮರ್ಶಕ ಮುರಳೀಧರ ಉಪಾಧ್ಯ ಹಿರಿಯಡಕ ಮಾತನಾಡಿ, ರಂಗಶಿಕ್ಷಣಕ್ಕೆ ಏಕರೂಪವಾದ ಪಠ್ಯಕ್ರಮವನ್ನು ತಜ್ಞರಿಂದ ರೂಪಿಸಬೇಕು. ರಾಷ್ಟ್ರೀಯ ನಾಟಕ ಶಾಲೆಗಳಲ್ಲಿ ದ. ಭಾರತದ ರಾಜ್ಯಗಳ ವಿದ್ಯಾರ್ಥಿಗಳಿಗೂ ಹೆಚ್ಚಿನ ಅವಕಾಶಗಳು ದೊರೆಯಬೇಕು. ಪಾರಿಭಾಷಿಕ ಪದಗಳ ಗ್ರಂಥ ಪ್ರಕಟಿಸಬೇಕು. ಉಡುಪಿಯಲ್ಲಿಯೂ ರಂಗಶಂಕರದಂತಹ ಥಿಯೇಟರ್‌ ನಿರ್ಮಾಣವಾಗಬೇಕು ಎಂದರು.

Advertisement

ಅಕಾಡೆಮಿ ನಿರ್ಣಯಗಳು
ನಾಟಕ ಅಕಾಡೆಮಿಯ ಅಧ್ಯಕ್ಷ ಜೆ. ಲೋಕೇಶ ಮಾತನಾಡಿ, ಪ್ರೌಢಶಾಲೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ವಸತಿ ಶಾಲೆಗಳಲ್ಲಿ ರಂಗ ಶಿಕ್ಷಕರನ್ನು ಗುತ್ತಿಗೆ ಆಧಾರದಲ್ಲಾದರೂ ನೇಮಕ ಮಾಡಬೇಕು. ಬೆಂಗಳೂರಿನ ಕಲಾ ಗ್ರಾಮದಲ್ಲಿ ಅಕಾಡೆಮಿಯ ಸಂಗ್ರಹಾಲಯ ಕಟ್ಟಡಕ್ಕೆ ನಿವೇಶನ, ಅನುದಾನ ನೀಡಬೇಕು. ಅಕಾಡೆಮಿಗೆ ಸಂಪೂರ್ಣ ಆರ್ಥಿಕ ಮತ್ತು ಬೌದ್ಧಿಕ ಸ್ವಾಯತ್ತೆ ಒದಗಿಸಬೇಕು. ಪ್ರತಿ ತಾಲೂಕಿನಲ್ಲಿಯೂ ರಂಗಮಂದಿರ ನಿರ್ಮಿಸಿಕೊಡಬೇಕು. ರಂಗ ಮಂದಿರ ಪ್ರಾಧಿಕಾರ ರಚಿಸಬೇಕು ಎಂಬ ನಿರ್ಣಯಗಳನ್ನು ಅಕಾಡೆಮಿ ಅಂಗೀಕರಿಸಿದೆ ಎಂದು ತಿಳಿಸಿದರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿಕಟಪೂರ್ವ ನಿರ್ದೇಶಕ ಎನ್‌.ಆರ್‌. ವಿಶುಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿಯ ರಿಜಿಸ್ಟ್ರಾರ್‌ ಡಾ| ಎ.ಸಿ. ಶೈಲಜಾ ಸ್ವಾಗತಿಸಿದರು. ಅಕಾಡೆಮಿ ಸದಸ್ಯರಾದ ಬಿ. ರಘುನಂದನ್‌ ಮತ್ತು ಬಾಸುಮ ಕೊಡಗು ಕಾರ್ಯಕ್ರಮ ನಿರ್ವಹಿಸಿದರು.

ಪದ್ಮಾ ಕೊಡಗು ಅವರ “ಉಡುಪಿ ಜಿಲ್ಲಾ ರಂಗ ಮಾಹಿತಿ’, ಬಸವರಾಜ ಬೆಂಗೇರಿ ಅವರ “ಅವಿಭಜಿತ ಧಾರವಾಡ ಜಿಲ್ಲಾ ರಂಗ ಮಾಹಿತಿ’ ಮತ್ತು ಗಣೇಶ ಅಮೀನಗಡ ಅವರ “ರಹಿಮಾನವ್ವ ಕಲ್ಮನಿ’ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. 

ಪ್ರಶಸ್ತಿ ಪುರಸ್ಕೃತರು 
ಅಕಾಡೆಮಿಯ “ಗೌರವ ಪ್ರಶಸ್ತಿ’ಯನ್ನು ಪಿ. ಗಂಗಾಧರ ಸ್ವಾಮಿ ಅವರಿಗೆ, “ವಾರ್ಷಿಕ ಪ್ರಶಸ್ತಿ’ಯನ್ನು ರಂಗಕರ್ಮಿಗಳಾದ ರಾಜಪ್ಪ ಕಿರಗಸೂರು, ಬಸಪ್ಪ ಶರಣಪ್ಪ ಮದರಿ, ಹುಲಿವಾನ ಗಂಗಾಧರಯ್ಯ, ಹನುಮಂತಪ್ಪ ವೆ. ಬಾಗಲಕೋಟ, ಅಂಜಿನಪ್ಪ, ಸಾವಿತ್ರಿ ನಾರಾಯಣಪ್ಪ ಗೌಡ, ಜಕಾವುಲ್ಲಾ ಗಂಡಸಿ, ಖಾಜೇಸಾಬ ನಬೀಸಾಬ ಜಂಗಿ, ಮೈಮ್‌ ರಮೇಶ್‌, ಕೆಂಚೇಗೌಡ ಟಿ., ಪಿ. ಪ್ರಭಾಕರ ಕಲ್ಯಾಣಿ, ಚಿಂದೋಡಿ ಎಲ್‌. ಚಂದ್ರಧರ, ಡಿ.ಎಂ. ರಾಜಕುಮಾರ್‌, ಡಿ.ಎಲ್‌. ನಂಜುಂಡ ಸ್ವಾಮಿ, ಈಶ್ವರ ದಲ, ಮೋಹನ್‌ ಮಾರ್ನಾಡು, 
ಉಷಾ ಭಂಡಾರಿ, ಪ್ರಭಾಕರ ಜೋಷಿ, ಎಸ್‌. ಅಂಜೀನಮ್ಮ, ಡಾ| ಕೆ.ವೈ. ನಾರಾಯಣ ಸ್ವಾಮಿ, ಜಗದೀಶ್‌ ಕೆಂಗನಾಳ್‌, ಉಗಮ ಶ್ರೀನಿವಾಸ, ವಿಜಯಾನಂದ ಕರಡಿಗುಡ್ಡ, ಮಕಬೂಲ ಹುಣಸಿಕಟ್ಟಿ, ಎಂ. ರವಿ ಅವರಿಗೆ ಪ್ರದಾನ ಮಾಡಲಾಯಿತು.

ಮೃತ್ಯುಂಜಯ ಸ್ವಾಮಿ ಅವರಿಗೆ “ಹಿರೇಮಠ ನಟರತ್ನ ಚಿಂದೋಡಿ ವೀರಪ್ಪ ದತ್ತಿ ಪುರಸ್ಕಾರ’, ನಿಕೋಲಸ್‌ ಅವರಿಗೆ “ಕಲ್ಚರ್‌ ಕಮೆಡಿಯನ್‌ ಕೆ. ಹಿರಿಯಣ್ಣ ದತ್ತಿ ಪುರಸ್ಕಾರ’, ಎಂ.ಎಸ್‌. ಮಾಳವಾಡ ಅವರಿಗೆ “ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪುರಸ್ಕಾರ’ ಹಾಗೂ ನ.ಲಿ. ನಾಗರಾಜ್‌ ಅವರಿಗೆ “ಕೆ. ರಾಮಚಂದ್ರಯ್ಯ ದತ್ತಿ ಪುರಸ್ಕಾರ’ ಪ್ರದಾನ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next