ಎಬಿವಿಪಿಯ ಅಚ್ಚುಕಟ್ಟಾದ ಕಾರ್ಯ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದ ತಾಯಿ ಹೃದಯದ ಸುಷ್ಮಾ ಸ್ವರಾಜ್ ಅವರು ನಮ್ಮೊಂದಿಗಿಲ್ಲ ಎಂಬುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ.
ಅದು 1999ರ ಲೋಕಸಭಾ ಚುನಾವಣೆ ಸಂದರ್ಭ. ಬಳ್ಳಾರಿ ಕ್ಷೇತ್ರದಿಂದ ಸುಷ್ಮಾ ಸ್ವರಾಜ್ ಅವರು ಸ್ಪರ್ಧಿಸಿದ್ದಾಗ ನಾನು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಉಸ್ತುವಾರಿಯಾಗಿದ್ದೆ. ಆಗ ಕೆಲವು ದಿನ ಅವರೊಂದಿಗೆ ಕಾರ್ಯ ನಿರ್ವಹಿಸುವ ಅವಕಾಶ ಸಿಕ್ಕಿತ್ತು. ಅದ್ಭುತ ವಾಗ್ಮಿ, ಭಾಷಣಕಾರರಾಗಿದ್ದ ಅವರು ಕನ್ನಡದಲ್ಲಿ ಭಾಷಣ ಮಾಡುವಷ್ಟರ ಮಟ್ಟಿಗೆ ಕನ್ನಡ ಪ್ರೇಮ ತೋರಿದ್ದರು.
ನಾವು ನಿಗದಿಪಡಿಸುವ ಕಾರ್ಯಕ್ರಮಕ್ಕೆ ಸಕಾಲಕ್ಕೆ ಬರುತ್ತಿದ್ದರು. ರಾತ್ರಿ ಹೊತ್ತು ಪ್ರಚಾರ ಎಷ್ಟೇ ತಡವಾದರೂ ಮರುದಿನ ಸಕಾಲಕ್ಕೆ ಪ್ರಚಾರ ಸಭೆಗೆ ಆಗಮಿಸುತ್ತಿದ್ದ ಅವರ ಸಮಯ ಪಾಲನೆ, ಬದ್ಧತೆ ನಮಗೆ ಸ್ಫೂರ್ತಿಯಾಗಿತ್ತು.
ಎಬಿವಿಪಿಯ ಅಚ್ಚುಕಟ್ಟಾದ ವ್ಯವಸ್ಥೆ, ಯೋಜಿತ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವಾಗ ಬಹಳ ಸಂಭ್ರಮಪಟ್ಟಿದ್ದೆವು. ನಮ್ಮ ಭುಜ ತಟ್ಟಿ ಪ್ರೋತ್ಸಾಹಿಸಿದ ಪರಿ ಸದಾ ಸ್ಮರಣೀಯ. ಒಮ್ಮೆ ಮಾಜಿ ಸಚಿವ ಎಂ.ಪಿ.ಪ್ರಕಾಶ್ ಅವರ ಮನೆಗೆ ಸುಷ್ಮಾ ಸ್ವರಾಜ್ ಅವರು ಭೇಟಿ ನೀಡಿದ್ದರು. ಆಗ ಅವರೊಂದಿಗೆ ಒಟ್ಟಿಗೆ ಊಟ ಮಾಡಿದ್ದ ನೆನಪು ಸದಾ ಸ್ಮರಣೀಯ.
ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡರೂ ಬಳ್ಳಾರಿಯೊಂದಿಗಿನ ಒಡನಾಟವನ್ನು ಅವರು ಬಿಟ್ಟಿರಲಿಲ್ಲ. ನಿರಂತರವಾಗಿ ಬಳ್ಳಾರಿ ಸಂಪರ್ಕವಿಟ್ಟುಕೊಳ್ಳುವ ಮೂಲಕ ನಂಟು ಉಳಿಸಿಕೊಂಡಿದ್ದರು. ವಿದೇಶಾಂಗ ಸಚಿವರಾಗಿದ್ದಾಗ ವಿದೇಶಗಳಲ್ಲಿ ಭಾರತೀಯರು ಯಾವುದೇ ರೀತಿ ತೊಂದರೆ, ಸಂಕಷ್ಟ, ಅನಾಹುತಗಳಲ್ಲಿ ಸಿಲುಕಿದರೆ ತ್ವರಿತವಾಗಿ ಸ್ಪಂದಿಸುತ್ತಿದ್ದರು. ಬಿಜೆಪಿ ರಾಷ್ಟ್ರೀಯ ಹಿರಿಯ ನಾಯಕರಲ್ಲಿ ಪ್ರಮುಖರಾಗಿದ್ದ ಸುಷ್ಮಾ ಸ್ವರಾಜ್ ಅವರು ವಿಧಿವಶರಾಗಿರುವುದು ತೀವ್ರ ನೋವು ತಂದಿದೆ.
● ಎನ್. ರವಿಕುಮಾರ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ