Advertisement

ಹೆಣ್ಣು ಮಗುವಿನ ಆಸೆಗೆ ಬಾಲಕಿ ಅಪಹರಿಸಿದ್ದ ತಾಯಿ, ಮಗನ ಬಂಧನ

12:24 PM May 24, 2017 | Team Udayavani |

ಬೆಂಗಳೂರು: ಹೆಣ್ಣು ಮಗು ಮೇಲಿನ ಆಸೆಗಾಗಿ ಮನೆ ಮುಂದೆ ಆಟವಾಡುತ್ತಿದ್ದ ಮೂರು ವರ್ಷದ ಬಾಲಕಿ ಕತೀಜಾಳನ್ನು ಅಪಹರಣ ಮಾಡಿದ್ದ ತಾಯಿ, ಮಗನನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಎಲೆಕ್ಟ್ರಾನಿಕ್‌ ಸಿಟಿಯ ಶಿಕಾರಿಪಾಳ್ಯದ ನಿವಾಸಿ, ವಿಪ್ರೋ ಕಂಪನಿಯಲ್ಲಿ ಸ್ವತ್ಛತಾ ಕೆಲಸ ಮಾಡುವ ಫಾತೀಮಾ (30) ಮತ್ತು ಆಕೆಯ ಅಪ್ರಾಪ್ತ ಮಗನನ್ನು ಬಂಧಿಸಲಾಗಿದೆ.

Advertisement

ಏ.30ರಂದು ಗುಟ್ಟೆಪಾಳ್ಯದಲ್ಲಿ ಕತೀಜಾಳನ್ನು ಫಾತೀಮಾ ತನ್ನ ಅಪ್ರಾಪ್ತ ಮಗನ ಮೂಲಕ ಅಪಹರಿಸಿದ್ದರು. ಘಟನೆ ಬಳಿಕ ಬಾಲಕಿ ಫೋಟೋ ಮತ್ತು ಸಿಸಿಟಿವಿಯ ದೃಶ್ಯಾವಳಿಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿದ್ದನ್ನು ಕಂಡು ಗಾಬರಿಗೊಂಡು, ಮಸೀದಿಯೊಂದರ ಬಳಿ ಮಗುವನ್ನು ಬಿಟ್ಟು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಸ್‌ ಚಾಲಕ ಕೊಟ್ಟ ಸುಳಿವು: ಪ್ರಕರಣದ ತೀವ್ರತೆ ಅರಿತ ಆರೋಪಿ ಮಹಿಳೆ ಅಪಹರಿಸಿದ ಎರಡು ದಿನಗಳ ಬಳಿಕ ಕತೀಜಾಳ ಮನೆ ಬಳಿಯ ಸೋಮೇಶ್ವರ ದರ್ಗಾದ ಬಳಿ ಬಾಲಕಿಯನ್ನು ಬಿಟ್ಟು ಪರಾರಿಯಾಗಿದ್ದರು. ವಾಪಸ್‌ ಹೋಗುವಾಗ ಕಲಾಸಿಪಾಳ್ಯದಿಂದ ಮಡಿವಾಳಕ್ಕೆ ಹೋಗುವ ಮಿನಿ ಬಸ್‌ನಲ್ಲಿ ಪ್ರಯಾಣಿಸಿದ್ದರು.

ಈ ವೇಳೆ ಬಸ್‌ನ ಚಾಲಕನಿಗೆ ಚೀಟಿಯೊಂದನ್ನು ಕೊಟ್ಟು, ಇದರಲ್ಲಿರುವ ನಂಬರ್‌ಗೆ ಕರೆ ಮಾಡಿ ಬಾಲಕಿ ದರ್ಗಾ ಬಳಿ ಇದ್ದಾಳೆ ಎಂದು ತಿಳಿಸುವಂತೆ ಹೇಳಿ ಮಡಿವಾಳದಲ್ಲಿ ಇಳಿದು ನಾಪತ್ತೆಯಾಗಿದ್ದರು. ಕೃತ್ಯದ ಹಿಂದಿನ ರಹಸ್ಯ ತಿಳಿಯದ ಚಾಲಕ, ಕತೀಜಾಳ ತಂದೆ ಸೈಯದ್‌ ಹಿಮಾಮುದ್ದೀನ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಮಗು ಸಿಕ್ಕ ಬಳಿಕ ಹಿಮಾಮುದ್ದೀನ್‌ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.  

ಈ ಮಧ್ಯೆ ಫಾತೀಮಾ ಬಸ್‌ ಚಾಲಕನ ನಂಬರ್‌ ಪಡೆದು ರಾತ್ರಿ 8 ಗಂಟೆ ಸುಮಾರಿಗೆ ಕರೆ ಮಾಡಿ ಮಗು ಇರುವ ಬಗ್ಗೆ ಪೋಷಕರಿಗೆ ಹೇಳಿರುವುದನ್ನು ಖಚಿತ ಪಡಿಸಿಕೊಂಡಿದ್ದಾರೆ. ಇದರಿಂದ ಅನುಮಾನಗೊಂಡು ಮೊಬೈಲ್‌ ಕರೆಗಳ ದಾಖಲೆಗಳನ್ನು ಸಂಗ್ರಹಿಸಿ ವಿಚಾರಣೆ ನಡೆಸಿದಾಗ ಫಾತೀಮಾಳ ಕೃತ್ಯ ಬಯಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ರಾಣಿಯಂತೆ ನೋಡಿಕೊಂಡ ಫಾತಿಮಾ: ಫಾತೀಮಾ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದರು. ಆದರೆ, ಅವರಿಗೆ ಹೆಣ್ಣು ಮಕ್ಕಳ ಮೇಲೆ ಅತೀಯಾದ ಆಸೆಯಿತ್ತು. ಅದಕ್ಕಾಗಿ ಒಂದು ಹೆಣ್ಣು ಮಗುವನ್ನು ದತ್ತು ಪಡೆಯಬೇಕೆಂದಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಈ ನಡುವೆ ಆಗಾಗ್ಗೆ ಗುಟ್ಟೆಪಾಳ್ಯದ ತನ್ನ ಸಹೋದರಿಯ ಸೊಸೆ ಮನೆಗೆ ಹೋಗುತ್ತಿದ್ದರು. ಆಗ ಕತೀಜಾಳನ್ನು ಕಂಡು ಇಂತಹ ಮಗುವನ್ನೇ  ಸಾಕಬೇಕು ಎಂದುಕೊಂಡು ಅಪಹರಣ ಕೂಡ ಮಾಡಿಸಿದ್ದರು.

ಎರಡು ದಿನಗಳ ಕಾಲ ತನ್ನ ವಶದಲ್ಲಿ ಇಟ್ಟುಕೊಂಡಿದ್ದ ಫಾತೀಮಾ ಕತೀಜಾಳನ್ನು ಬಹಳ ಚೆನ್ನಾಗಿ ನೋಡಿಕೊಂಡಿದ್ದಾರೆ. ಸರಿಯಾದ ಸಮಯಕ್ಕೆ ಊಟ, ತಿಂಡಿ ಹಾಗೇ ಮಗು ಕೇಳಿದ ತಿಂಡಿಗಳನ್ನು ತಂದು ಕೊಟ್ಟು ರಾಣಿಯಂತೆ ಪಾಲನೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೃತ್ಯ ಎಸಗಿದ ಮರು ದಿನ ತನ್ನ ಸೊಸೆಯ ಮನೆಗೆ ಬಂದ ಫಾತೀಮಾ ಮಗು ಅಪಹರಣದ ಬಗ್ಗೆ ಸೊಸೆಗೆ ತಿಳಿಸಿದ್ದಾರೆ. ಇದರಿಂದ ಗಾಬರಿಗೊಂಡ ಸೊಸೆ, ಪೊಲೀಸರು ಇಲ್ಲಿನ ಸಿಸಿಟಿವಿ ದೃಶ್ಯಾವಳಿಗಳ ಫೋಟೋ, ಮಗುವಿನ ಫೋಟೋವನ್ನು ಮನೆ ಮನೆಗೆ ಹಂಚುತ್ತಿದ್ದಾರೆ. ಮಗುವನ್ನು ಬಿಟ್ಟುಬಿಡಿ ಎಂದು ಕೇಳಿಕೊಂಡಿದ್ದರು. ಭಯಗೊಂಡ ಫಾತೀಮಾ, ಎರಡು ದಿನದ ನಂತರ ಮಗುವನ್ನು ದರ್ಗಾ ಬಳಿ ಬಿಟ್ಟು ಹೋಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next