Advertisement

ಸಮಾಜದಲ್ಲಿ ನೈತಿಕತೆ ಕಣ್ಮರೆ

10:06 AM Jan 30, 2019 | |

ಚಿತ್ರದುರ್ಗ: ನೈತಿಕ ನೆಲೆಗಟ್ಟು ಸಂಪೂರ್ಣ ಕುಸಿದಿದ್ದು ಅದನ್ನು ಭದ್ರಪಡಿಸಿಕೊಂಡು ತಲೆಯೆತ್ತಿ ಬಾಳುವಂತೆ ಜೀವನ ನಡೆಸಬೇಕು ಎಂದು ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ನಗರದ ರಂಗಯ್ಯನ ಬಾಗಿಲು ಸಮೀಪದ ಎಸ್‌.ಜಿ ಪ್ಯಾರಾ ಮೆಡಿಕಲ್‌ ಕಾಲೇಜು ಕ್ಯಾಂಪಸ್‌ನಲ್ಲಿ ಚಿತ್ರದುರ್ಗ ನರ್ಸಿಂಗ್‌ ಮತ್ತು ಪ್ಯಾರಾ ಮೆಡಿಕಲ್‌ ಫೆಡರೇಷನ್‌ ವತಿಯಿಂದ ಆಯೋಜಿಸಿದ್ದ ನರ್ಸಿಂಗ್‌ ಮತ್ತು ಪ್ಯಾರಾ ಮೆಡಿಕಲ್‌ ಎಕ್ಸ್‌ಪೋ-2019 ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಮೆಡಿಕಲ್‌, ಇಂಜಿನಿಯರಿಂಗ್‌ ಸೇರಿದಂತೆ ಮತ್ತಿತರ ಕೋರ್ಸ್‌ಗಳನ್ನು ಓದುವ ವಿದ್ಯಾರ್ಥಿಗಳು ದುಶ್ಚಟಗಳ ದಾಸರಾಗಿ ಪ್ರಾಣ ಕಳೆದುಕೊಳ್ಳುವುದನ್ನು ಗಮನಿಸಿದ್ದೇವೆ. ಅದರಲ್ಲೂ

ಶ್ರೀಮಂತ ಮನೆತನದ ಹೆಣ್ಣು, ಗಂಡು ಇಂತಹ ದಾಸ್ಯಕ್ಕೆ ಬಲಿಯಾಗುತ್ತಿರುವುದು ಆತಂಕದ ವಿಚಾರ. ದುಶ್ಚಟಗಳಿಗೆ ಹೆಣ್ಣು-ಗಂಡು ಎನ್ನುವ ಭೇದ ಇಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಇಬ್ಬರು ಕೂಡ ಮಾದಕ ವಸ್ತುಗಳಿಗೆ ಬಲಿಯಾಗಿ ಬದುಕು ನರಕ ಮಾಡಿಕೊಳ್ಳುತ್ತಿರುವುದು ಬೇಸರದ ಸಂಗತಿ. ತಂದೆ ತಾಯಿಗಳು ಹತ್ತಾರು ಕನಸು ಕಟ್ಟಿಕೊಂಡು ಮಕ್ಕಳನ್ನು ಶಾಲಾ, ಕಾಲೇಜುಗಳಿಗೆ ಕಳುಹಿಸಿರುತ್ತಾರೆ. ಮಕ್ಕಳು ನಾಳೆಯ ಭವಿಷ್ಯಕ್ಕೆ ದಿಕ್ಕಾಗುತ್ತಾರೆ ಎಂದು

ಭಾವಿಸಿಕೊಳ್ಳುತ್ತಾರೆ. ಆದರೆ ವಿದ್ಯಾರ್ಥಿಗಳು ಪೋಷಕರಿಗೆ ದಿಕ್ಕಾಗುವ ಬದಲಾಗಿ ಅವರನ್ನು ದಿಕ್ಕುಗೇಡಿಗಳನ್ನಾಗಿ ಮಾಡುತ್ತಾರೆ ಎಂದು ವಿಷಾದಿಸಿದರು.

Advertisement

ಶಿಕ್ಷಣದಲ್ಲಿ ನಾವು ಎತ್ತರದ ಸ್ಥಾನಕ್ಕೆ ಹೋಗುತ್ತಿದ್ದೇವೆ. ಆದರೆ ನೈತಿಕವಾಗಿ ಅದಕ್ಕಿಂತ ಪ್ರಪಾತಕ್ಕೆ ಇಳಿಯುತ್ತಿರುವುದು ಆಘಾತಕಾರಿ ವಿಚಾರ. ಇಂದಿನ ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರವನ್ನು ಗಮನಿಸಿದರೆ ಪರಿಸ್ಥಿತಿ ಹೇಗಿದೆ ಎನ್ನುವುದು ತಿಳಿಯಲಿದೆ. ರೆಸಾರ್ಟ್‌ಗೆ ತೆರಳಿದ್ದ ರಾಜಕಾರಣಿಗಳು ಕುಡಿತದಿಂದ ಏನೆಲ್ಲಾ ಅವಾಂತರ ಮಾಡಿಕೊಂಡರು, ಸಮಾಜಕ್ಕೆ ಇದು ಬೇಕಾ ಎಂದು ಪ್ರಶ್ನಿಸಿದರು. ಕಾಲೇಜುಗಳಲ್ಲಿ ಅಧ್ಯಾಪಕ ಪಾಠ ಮಾಡಲು ಸಾಕಷ್ಟು ಅಭ್ಯಾಸ ಮಾಡುತ್ತಾನೆ. ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕಾದ ಅಗತ್ಯವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ದೃಶ್ಯ ಮಾಧ್ಯಮಗಳ ಹಾವಳಿಯಿಂದಾಗಿ ಬದುಕು ಕಳೆದುಕೊಳ್ಳುವ ಮಂದಿ ಬಹಳ ಇದ್ದಾರೆ. ನಾವು ಎಲ್ಲಿ ಕುಳಿತಿದ್ದೇವೆ ಎಂಬ ಅರಿವಿಲ್ಲದೇ ಮೊಬೈಲ್‌ನಲ್ಲೇ ನಿಮ್ಮನ್ನು ನೀವು ಮುಳುಗಿಸಿ ಕೊಂಡಿರುತ್ತೀರಿ, ಹಾಗಾಗಿ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಬಂದ ತಕ್ಷಣ ಮೊಬೈಲ್‌ ಜಾಮ್‌ ಮಾಡುವಂತ ವ್ಯವಸ್ಥೆ ಆಗಬೇಕು. ಮೊಬೈಲ್‌ ಆನ್‌ ಆಗದಿದ್ದರೆ ಏನೆಲ್ಲಾ ಸಾಧ್ಯತೆಗಳನ್ನು ಕಂಡುಕೊಳ್ಳಲು ಅವಕಾಶ ಇದೆ ಎಂಬುದನ್ನು ಅರಿತುಕೊಳ್ಳಬೇಕು ಎಂದರು. ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ನರ್ಸಿಂಗ್‌ ಮತ್ತು ಪ್ಯಾರಾ ಮೆಡಿಕಲ್‌ ಕಾಲೇಜು ವಿದ್ಯಾರ್ಥಿಗಳು ತಯಾರಿಸಿದ್ದ ವಿಜ್ಞಾನ ವಸ್ತು ಪ್ರದರ್ಶನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಎನ್‌. ಜಯಪ್ರಕಾಶ್‌, ಬೆಂಗಳೂರು ಕೆಎನ್‌ಸಿ ರಿಜಿಸ್ಟ್ರಾರ್‌ ಬಿ. ಜ್ಯೋತಿ ಇದ್ದರು.

ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ
ವಿದ್ಯಾರ್ಥಿ ಜೀವನ ಬಂಗಾರದ ಜೀವನ. ಅದನ್ನು ಕಬ್ಬಿಣದ ಜೀವನವನ್ನಾಗಿ ಮಾಡಿಕೊಳ್ಳಬೇಡಿ. ನೈತಿಕವಾಗಿ ಬಾಳಬೇಕಾದರೆ ಬಹಳ ಎಚ್ಚರಿಕೆಯ ಹೆಜ್ಜೆ ಇಡಬೇಕು. ಅಧ್ಯಯನಾಸಕ್ತಿ ಬೆಳೆಸಿಕೊಳ್ಳಬೇಕು. ಹೊಸ ಹೊಸ ಶೋಧನೆ ಮಾಡಬೇಕು ಎಂದು ಪಂಡಿತಾರಾಧ್ಯ ಶ್ರೀಗಳು ತಿಳಿಸಿದರು. ವಿಜ್ಞಾನ ತುಂಬಾ ಬೆಳೆದಿದೆ. ವಿಜ್ಞಾನ ಬೆಳೆಯುವುದರ ಜತೆ ನಾವೂ ಬೆಳೆಯದಿದ್ದರೆ ಹೇಗೆ, ವಿಜ್ಞಾನ ಬೆಳೆಯುವುದೇ ನಮ್ಮ ಬೆಳವಣಿಗೆ ಮೂಲಕ. ಹಾಗಾಗಿ ವಿದ್ಯಾರ್ಥಿಗಳು ಯಾವಾಗಲೂ ಚಿಂತನೆ ಮಾಡುತ್ತಿರಬೇಕು. ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ನಾವು ಸಮಾಜಕ್ಕೆ ಏನು ಕೊಡಬಲ್ಲೆ ಎಂಬ ಪ್ರಶ್ನೆ ಹಾಕಿಕೊಂಡು ಹೊಸ ಶೋಧಗಳ ಹುಟ್ಟಿಗೆ ಕಾರಣರಾಗಬೇಕು. ಶ್ರದ್ಧೆ, ಸದ್ಬಾವನೆಯನ್ನು ಮೈಗೂಡಿಸಿಕೊಂಡರೆ ಸಾಧನೆ ಸುಲಭವಾಗಲಿದೆ. ಕ್ರಿಯಾಶೀಲ, ಸಕಾರಾತ್ಮಕ ಚಟುವಟಿಕೆಗಳಿಂದ ಬಾಳು ಹಸನಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next