Advertisement

ಮುಂಗಾರು ಸಮೀಪಿಸಿದರೂ ಹೂಳು ತೆಗೆಯದ ರಾಜಕಾಲುವೆಗಳು!

10:39 PM May 28, 2019 | Team Udayavani |

ಮಹಾನಗರ: ನಗರದ ಹೆಚ್ಚಿನ ರಾಜಕಾಲುವೆಗಳಲ್ಲಿ ಹೂಳೆತ್ತದ ಕಾರಣ ಕಳೆದ ಬಾರಿಯ ಮಹಾಮಳೆಗೆ ತಗ್ಗು ಪ್ರದೇಶಗಳಲ್ಲಿ ಕೃತಕ ನೆರೆ ಉಂಟಾಗಿತ್ತು. ಆದರೆ ಈ ಬಾರಿ ಹೂಳೆತ್ತುವ ಕಾರ್ಯ ನಡೆಯುತ್ತಿದ್ದರೂ ಅದು ಕೇವಲ ತೋರಿಕೆಗಷ್ಟೇ. ಜೇಸಿಬಿ ಮುಖೇನ ರಾಜಕಾಲುವೆಯ ಮೇಲಿನ ಪದರದಿಂದ ಹೂಳೆತ್ತಲಾಗಿದ್ದು, ಹಾಗಾಗಿ ಈ ಬಾರಿ ಮಹಾಮಳೆ ಬಂದರೆ ಕೃತಕ ನೆರೆ ಉಂಟಾಗಬಹುದು ಎಂಬ ಆತಂಕ ಸಾರ್ವಜನಿಕರನ್ನು ಕಾಡುತ್ತಿದೆ.

Advertisement

ಕಳೆದ ವರ್ಷ ಜಪ್ಪಿನಮೊಗರು ಸುತ್ತಮುತ್ತಲಿನ ಅನೇಕ ಪ್ರದೇಶಗಳಿಗೆ ನೀರು ನುಗ್ಗಿ ಸಾಕಷ್ಟು ನಷ್ಟ-ಹಾನಿ ಉಂಟಾಗಿತ್ತು. ಈ ಭಾಗದ ಪ್ರದೇಶಗಳು ಜಲಾವೃತಗೊಳ್ಳಲು ಪ್ರಮುಖ ಕಾರಣ ಇಲ್ಲಿನ ರಾಜಕಾಲುವೆಯ ದುರವಸ್ಥೆ. ಮಂಗಳೂರು ದಕ್ಷಿಣ ಭಾಗದ ಪ್ರದೇಶಗಳಿಂದ ಹರಿಯುವ ಬಹುತೇಕ ಚರಂಡಿ ನೀರು ಜಪ್ಪಿನಮೊಗರು ಕಾಲುವೆಗೆ ಸೇರಿ ನೇತ್ರಾವತಿ ನದಿಯನ್ನು ಸೇರುತ್ತದೆ. “ಸುದಿನ’ ತಂಡವು ಮಂಗಳವಾರ ಈ ಕಾಲುವೆ ಸುತ್ತಮುತ್ತಲಿನ ಪ್ರದೇಶಕ್ಕೆ ತೆರಳಿ ವಸ್ತುಸ್ಥಿತಿಯನ್ನು ತಿಳಿಯುವ ಪ್ರಯತ್ನ ಮಾಡಿದೆ.

ನಗರದ ನಾನಾ ಭಾಗಗಳಿಂದ ಬರುವ ಮಳೆ ನೀರು ಪಂಪ್‌ವೆಲ್‌ ಪರಿಸರದಲ್ಲಿ ಇರುವ ಈ ಕಾಲುವೆಗೆ ಸೇರುತ್ತದೆ. ಇಲ್ಲಿಂದ ಪ್ರಾರಂಭಗೊಂಡ ರಾಜಕಾಲುವೆಯು ಎಕ್ಕೂರು, ಜಪ್ಪಿನಮೊಗರು, ಹೊಗೆ ರಾಶಿ ಮೂಲಕ ಸಾಗಿ ನೇತ್ರಾವತಿ ನದಿ ಸೇರುತ್ತದೆ. ಈ ಬಾರಿ ಮಳೆಗಾಲಕ್ಕೂ ಮುನ್ನ ಈ ರಾಜಕಾಲುವೆಯಲ್ಲಿ ಹೂಳು ತೆಗೆಯಲಾಗಿದೆ. ಆದರೆ ಬಟ್ಟೆ, ಪ್ಲಾಸ್ಟಿಕ್‌, ಮರದ ಎಲೆ, ಕಾಗದ ಸಹಿತ ಕಸ ಕಡ್ಡಿಗಳು ರಾಜಕಾಲುವೆಯಲ್ಲಿ ತುಂಬಿಕೊಂಡಿವೆ. ಜೋರಾಗಿ ಮಳೆ ಬಂದರೆ ಇವುಗಳು ನೀರು ಹರಿಯಲು ಅಡ್ಡಿಪಡಿಸುವ ಸಾಧ್ಯತೆಯಿದೆ.

ಶಿವಬಾಗ್‌, ಮರೋಳಿ, ಕುದೊರಿ ಗುಡ್ಡ ಪ್ರದೇಶ ಮಳೆ ನೀರು ತೋಡಿನ ಮೂಲಕ ಪಂಪ್‌ವೆಲ್‌ ಸರ್ಕಲ್‌ ಬಳಿ ಕಾಲುವೆಗೆ ಸೇರಿ ಎಕ್ಕೂರು, ಜಪ್ಪಿನಮೊಗರು, ಹೊಗೆ ರಾಶಿ ಮೂಲಕ ನದಿ ಸೇರುತ್ತದೆ. ಪಂಪ್‌ವೆಲ್‌ನಿಂದ 3 ಕಿ.ಮೀ. ಉದ್ದವಿದ್ದು, ಈ ಪರಿಸರದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚಿನ ಮನೆಗಳಿವೆ. ಈ ರಾಜಕಾಲುವೆಗೆ ಒಂದೇ ಬದಿಯಲ್ಲಿ ತಡೆಗೋಡೆ ನಿರ್ಮಿಸಲಾಗಿದ್ದು, ಕೆಲವು ಕಡೆಗಳಲ್ಲಿ ಕುಸಿದು ಹೋಗಿದೆ. ರಾಜಕಾಲುವೆಯ ಮತ್ತೂಂದು ಕಡೆ ತಡೆಗೋಡೆ ಇಲ್ಲದ ಪರಿಣಾಮ ಭಾರೀ ಮಳೆ ಬಂದರೆ ಸುತ್ತಮುತ್ತಲಿನ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆಯಿದೆ.

ಈಜು ಕಲಿಸುತ್ತಿದ್ದ ತೋಡು ಇದೀಗ ಕಸದ ಕೊಂಪೆ
ಕಳೆದ ವರ್ಷ ಅಳಕೆ, ಕುದ್ರೋಳಿ ಭಾಗದಲ್ಲೂ ಇಲ್ಲಿನ ರಾಜಕಾಲುವೆಯ ನೀರು ಮನೆಗಳಿಗೆ ನುಗ್ಗಿ ಅಪಾರ ಹಾನಿಯನ್ನುಂಟು ಮಾಡಿತ್ತು. ಈ ತೋಡು ಅನೇಕ ವರ್ಷಗಳ ಹಿಂದೆ ಮಕ್ಕಳಿಗೆ ಈಜು ಕಲಿಸುವ ಕೇಂದ್ರವಾಗಿತ್ತಂತೆ. ಇದೀಗ ತೋಡಿನ ನೀರು ಮಲಿನಗೊಂಡಿದ್ದು, ಅಕ್ಕಪಕ್ಕದ ಮನೆ, ಅಂಗಡಿಯ ಕಸ, ತ್ಯಾಜ್ಯ, ಪ್ಲಾಸ್ಟಿಕ್‌ಗಳೆಲ್ಲ ನೀರಿನಲ್ಲಿ ಸೇರಿ ಸಾಂಕ್ರಾಮಿಕ ರೋಗದ ಭೀತಿ ಉಂಟಾಗಿದೆ.

Advertisement

ಕೊಂಚಾಡಿ, ಉರ್ವಸ್ಟೋರ್‌ನಿಂದ ಬರುವ ಮಳೆ ನೀರು ಕೊಟ್ಟಾರಚೌಕಿಯ ಬಲಭಾಗದ ರಾಜಕಾಲುವೆಯ ಮೂಲಕ ಮಂಗಳೂರು ಉಡುಪಿ ರಾ.ಹೆ.ಯ ಕೆಳಗಡೆಯಿಂದ ಫಲ್ಗುಣಿ ನದಿ ಸೇರುತ್ತದೆ. ನಾಲ್ಕನೇ ಮೈಲ್‌ನಲ್ಲಿ ಕಾವೂರು, ಆಕಾಶಭವನ, ಮಾಲಾಡಿ ವ್ಯಾಪ್ತಿಯ ಮಳೆ ನೀರು ಇದೇ ರಾಜಕಾಲುವೆ ಮೂಲಕ ಫಲ್ಗುಣಿ ಸೇರುತ್ತದೆ. ಕೋಡಿಕಲ್‌ ಕೊಟ್ಟಾರದಿಂದ ಬರುವ ಮಳೆ ನೀರು ಕೊಟ್ಟಾರಚೌಕಿಯ ಎಡಭಾಗದಿಂದ ರಾ.ಹೆ.ಯ ಪಕ್ಕದಲ್ಲಿಯೇ ಹರಿದು ಫಲ್ಗುಣಿ ಸೇರುತ್ತದೆ. ಕೆಳವೆಡೆ ರಾಜಕಾಲುವೆಯಲ್ಲಿದ್ದ ಕೆಲವು ಪೈಪ್‌ಗ್ಳನ್ನು ತೆಗೆಯಲಾಗಿದೆ. ಅಡ್ಡಾದಿಡ್ಡಿ ಸ್ಲಾéಬ್‌ಗಳನ್ನು ಕೂಡ ತೆರವು ಮಾಡಲಾಗಿದೆ.

ಕಾಲುವೆ ಬದಿಯಲ್ಲಿ ಹೂಳಿನ ರಾಶಿ
ಕೆಲವು ಕಡೆ ತೆಗೆದ ಹೂಳನ್ನು ಕಾಲುವೆಯ ಬದಿಯಲ್ಲಿಯೇ ರಾಶಿಹಾಕಿರುವುದರಿಂದ ಅದು ಮತ್ತೆ ಕಾಲುವೆ ಪಾಲಾಗುವ ಸಾಧ್ಯತೆ ಇದೆ. ಬೈಕಂಪಾಡಿಯ ಕೈಗಾರಿಕಾ ವಲಯ ವ್ಯಾಪ್ತಿಯ ಕಥೆ ಕೂಡ ಇದೇ ರೀತಿ ಇದೆ. ಕಳೆದ ವರ್ಷ ಇಲ್ಲಿ ಮಳೆ ನೀರು ಕೈಗಾರಿಕೆಗಳ ಕಚೇರಿ ಒಳಗೆ ನುಗ್ಗಿ ಸಮಸ್ಯೆ ಉಂಟಾಗಿತ್ತು. ಸದ್ಯ ತೋಡನ್ನು ಅಲ್ಲಿಂದಲ್ಲಿಗೆ ಕ್ಲೀನ್‌ ಮಾಡಿರುವುದರಿಂದ ಈ ಬಾರಿ ಪರಿಸ್ಥಿತಿ ಏನು ಎಂಬುದನ್ನು ಇನ್ನಷ್ಟೇ ನೋಡಬೇಕು. ಜಪ್ಪಿನಮೊಗರುವಿನಲ್ಲಿರುವ ರಾಜಕಾಲುವೆ ಹೂಳು ತೆಗೆದಿದೆಯಾದರೂ, ಸೇತುವೆ ಕೆಳಭಾಗದಲ್ಲಿ ಹಿಟಾಚಿ ಹೋಗಲು ಆಗದೆ, ಕೆಲವೆಡೆಯ ಹೂಳು ಹಾಗೆಯೇ ಇದೆ.

ಕುಸಿದ ತಡೆಗೋಡೆ ಹಾಗೇ ಇದೆ
ಕುದ್ರೋಳಿ, ಅಳಕೆ ಪ್ರದೇಶದಲ್ಲಿ ಹರಿಯುತ್ತಿರುವ ತೋಡಿನ ಬದಿಯಲ್ಲಿ ಮಣ್ಣಿನ ಸವೆತ ಉಂಟಾಗಬಾರದು, ನೀರು ಮನೆಗೆ ನುಗ್ಗಬಾರದು ಎಂಬ ಕಾರಣಕ್ಕೆ ಎರಡೂ ಬದಿಗಳಲ್ಲಿ ಕಲ್ಲಿನ ತಡೆಗೋಡೆಗಳನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಕಳೆದ ಬಾರಿ ಸುರಿದ ಭಾರೀ ಮಳೆಗೆ ಕೆಲವು ಕಡೆಗಳಲ್ಲಿ ತಡೆಗೋಡೆ ಕುಸಿದಿತ್ತು. ಒಂದು ವರ್ಷವಾದರೂ, ಈ ತಡೆಗೋಡೆಯನ್ನು ಸರಿಪಡಿಸುವ ಕಾರ್ಯ ನಡೆದಿಲ್ಲ.

-  ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next