Advertisement

ನಲಿದಾಡುವ ನವಿಲುಗಳ ನರಳಾಟ

09:40 AM Jul 29, 2019 | Suhan S |

ಬೆಂಗಳೂರು: ಒಂದೆಡೆ ಸ್ವಾಭಾವಿಕ ಕಾಡು ಕರಗುತ್ತಿದ್ದರೆ, ಮತ್ತೂಂದೆಡೆ ಕಾಂಕ್ರೀಟ್ ಕಾಡು ವಿಸ್ತರಿಸುತ್ತಿದೆ. ಅಸಮತೋಲನದಿಂದ ವನ್ಯಜೀವಿಗಳು ನಗರದತ್ತ ಮುಖಮಾಡುತ್ತಿದ್ದು, ವರ್ಷದ ಹಿಂದೆ ಶಾಲೆಯೊಂದಕ್ಕೆ ಚಿರತೆ ನುಗ್ಗಿತ್ತು. ಇತ್ತೀಚೆಗೆ ನವಿಲುಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಅವು ನಿಗೂಢ ರೀತಿಯಲ್ಲಿ ಸಾವನ್ನಪ್ಪುತ್ತಿರುವುದು ಬೆಳಕಿಗೆ ಬಂದಿದೆ.

Advertisement

ಕೇವಲ ಒಂದು ತಿಂಗಳ ಅಂತರದಲ್ಲಿ ನಗರದ ವಿವಿಧೆಡೆ ಆರು ನವಿಲುಗಳು ಸಾವನ್ನಪ್ಪಿರುವುದು ವರದಿಯಾಗಿದೆ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಅರಣ್ಯ ಇಲಾಖೆ ನಿರ್ಲಕ್ಷ್ಯ ಧೋರಣೆಯೂ ಇದಕ್ಕೆ ಕಾರಣ ಎಂಬ ಆರೋಪ ವನ್ಯಜೀವಿ ರಕ್ಷಕರಿಂದ ಕೇಳಿಬರುತ್ತಿದೆ.

ಎಲ್ಲೆಲ್ಲಿ ಸಾವು?: ಜೂನ್‌ನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಎರಡು ನವಿಲುಗಳು ಅನುಮಾಸ್ಪಾದವಾಗಿ ಸಾವನ್ನಪ್ಪಿದ್ದವು. ಈ ಘಟನೆ ಬೆನ್ನಲ್ಲೇ ಕೆಂಗೇರಿಯ ವೃಷಭಾವತಿ ನದಿ ದಡದಲ್ಲಿ ಮೂರು ನವಿಲುಗಳು ಸಾವನ್ನಪ್ಪಿದ್ದವು. ಇದೇ ತಿಂಗಳಲ್ಲಿ ಯಶವಂತಪುರದ ಮೆಟ್ರೋ ಹಳಿಯ ಮೇಲೆ ನವಿಲೊಂದು ಸತ್ತು ಬಿದ್ದಿತ್ತು. ಇದಾಗಿ ಒಂದು ವಾರದಲ್ಲಿ ಹತ್ತಿರದಲ್ಲೇ ಇರುವ ಎಪಿಎಂಸಿ ಮಾರುಕಟ್ಟೆ ಕಚೇರಿ ಗಾಜಿಗೆ ಸಿಲುಕಿ ನವಿಲು ಸಾವನ್ನಪ್ಪಿತ್ತು. ಇದಲ್ಲದೆ, ಪೀಣ್ಯ ಕೈಗಾರಿಕಾ ಪ್ರದೇಶ, ತುಮಕೂರಿನ ಹೆದ್ದಾರಿ ಬಳಿ ರಸ್ತೆ ಅಪಘಾತದಲ್ಲಿ ಎರಡು ನವಿಲುಗಳು ಬಲಿಯಾಗಿರುವ ಬಗ್ಗೆ ವರದಿಯಾಗಿದೆ.

ಈ ಮಧ್ಯೆ ಜುಲೈ 14ರಂದು ಬೆಳಗ್ಗೆ ಬೆಂಗಳೂರು ವಿವಿ ಆವರಣದಲ್ಲಿನ ಕುಲಪತಿಗಳ ನಿವಾಸದ ಬಳಿ ನಾಯಿ ದಾಳಿಯಿಂದ ನವಿಲೊಂದು ಪ್ರಾಣಬಿಟ್ಟಿದೆ. ಇದಲ್ಲದೆ, ಫೆ.25ರಂದು ಇದೇ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ನರ್ತಿಸುತಿದ್ದ ನವಿಲು, ನಾಯಿ ದಾಳಿಗೆ ತುತ್ತಾಗಿತ್ತು. ಹೀಗೆ ಅಲ್ಪಾವಧಿಯಲ್ಲಿ ರಾಷ್ಟ್ರೀಯ ಪಕ್ಷಿ ಸಂತತಿಯ ಸರಣಿ ಸಾವುಗಳು ಆತಂಕ ಮೂಡಿಸಿವೆ.

ಬಯೋಪಾರ್ಕ್‌ನಲ್ಲಿ ನೂರಕ್ಕೂ ಹೆಚ್ಚಿವೆ: ಅಂದಹಾಗೆ, ಜ್ಞಾನಭಾರತಿ ಆವರಣವನ್ನು ನವಿಲುಗಳ ಬಯೋಪಾರ್ಕ್‌ ಎಂದು ಘೋಷಿಸಲಾಗಿದ್ದು, ಇಲ್ಲಿ ನೂರಕ್ಕೂ ಅಧಿಕ ನವಿಲುಗಳು ವಾಸಿಸ್ತುತಿವೆ. ಆದರೆ, ಆಹಾರಕ್ಕಾಗಿ ನಗರದ ಹೊರವಲಯಗಳ ಹೊಲ ಗದ್ದೆಗಳ ಕಡೆ ಇವು ಬರುವುದು ಮಾಮೂಲು. ಆದರೆ, ಈಗ ಸ್ವತಃ ನವಿಲುಗಳೇ ಆಹಾರವಾಗುತ್ತಿರುವುದು ದುರಂತ. ತೋಟಗಳಲ್ಲಿ ಕೀಟನಾಶ ಮತ್ತು ಔಷಧಗಳನ್ನು ಸಿಂಪಡಣೆ ಮಾಡಲಾಗಿರುತ್ತದೆ. ಅಂತಹ ಹಣ್ಣುಗಳನ್ನು ಸೇವಿಸಿ, ನಾಯಿ-ಬೆಕ್ಕುಗಳ ದಾಳಿ, ಜನಸಂದಣಿಯ ಭಯ, ಹೀಗೆ ನಾನಾ ಕಾರಣಗಳಿಂದ ನವಿಲುಗಳು ಸಾವನ್ನಪ್ಪುತ್ತಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ.

Advertisement

ನವಿಲುಗಳ ಸಾವು ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಅರಣ್ಯ ಇಲಾಖೆ ನಿರ್ಲಕ್ಷ್ಯ ಧೋರಣೆಯೂ ಕಾರಣ. ಇದೇ ರೀತಿ ಮುಂದುವರಿದರೆ ಮುಂದಿನ 5-10 ವರ್ಷಗಳಲ್ಲಿ ನವಿಲುಗಳು ಕೂಡ ಹುಲಿಗಳಂತೆ ಅಳಿವಿನಂಚಿಗೆ ಹೋಗಲಿವೆ ಎಂದು ವನ್ಯಜೀವಿ ರಕ್ಷಕ ರಾಜೇಶ್‌ ಆತಂಕ ವ್ಯಕ್ತಪಡಿಸುತ್ತಾರೆ.

ಅರಣ್ಯ ಪ್ರದೇಶಗಳು:

ನಾಗರಬಾವಿ ಮತ್ತು ಮೈಸೂರು ರಸ್ತೆಯ ಜ್ಞಾನಭಾರತಿ ವಿಶ್ವವಿದ್ಯಾಲಯ ಅರಣ್ಯ ಪ್ರದೇಶ
ಕೆಂಗೇರಿ ಮತ್ತು ಉತ್ತರಹಳ್ಳಿ ನಡುವಿನ ತುರಹಳ್ಳಿ ಅರಣ್ಯ ಪ್ರದೇಶ •ಕನಕಪುರ ರಸ್ತೆಯ ಕೋಣನಕುಂಟೆ, ಯಲಚೇನಹಳ್ಳಿ ಅರಣ್ಯ ಪ್ರದೇಶ
ಕಾಡಗೋಡಿ ಸಮೀಪದ ಸಾದರಮಂಗಲ ಅರಣ್ಯ ಪ್ರದೇಶ
ಯಲಹಂಕ ಬಳಿಯ ಜಾಲಹಳ್ಳಿ, ವಿದ್ಯಾರಣ್ಯಪುರ ಅರಣ್ಯ ಪ್ರದೇಶ
ಹೆಸರಘಟ್ಟ ಅರಣ್ಯ ಪ್ರದೇಶ
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ

‘ಶೆಡ್ಯೂಲ್ ಒನ್‌’ ಹೇಳುವುದೇನು?
ಪ್ರಾಣಿಗಳ ವಾಸಸ್ಥಳದ ಸುತ್ತ ಬಫ‌ರ್‌ ಝೋನ್‌ ನಿರ್ಮಿಸಬೇಕು
ಇವುಗಳ ವಾಸಸ್ಥಳದ ಸುತ್ತ ಯಾವುದೇ ಕಟ್ಟಡ ನಿರ್ಮಿಸದಂತೆ ಎಚ್ಚರವಹಿಸಬೇಕು
– ವನ್ಯಜೀವಿಗಳ ಆವಾಸ ಸ್ಥಳಗಳನ್ನು ಕಾಪಾಡಬೇಕು
ಪ್ರಾಣಿಗಳು ಸಾವಿಗೀಡಾದ ಕೂಡಲೆ ಸಹಾಯಕ ಅರಣ್ಯ ಅಧಿಕಾರಿ ದರ್ಜೆಯ ಅಧಿಕಾರಿ ಸ್ಥಳ ಮಹಜರು ಮಾಡಬೇಕು
ಸ್ಥಳ ಮಹಜರು ಬಳಿಕ ಪ್ರಾಥಮಿಕ ವರದಿ ನೀಡಿ ಸಾವಿಗೆ ಕಾರಣ ಗುರುತಿಸಬೇಕು
– ಉದ್ದೇಶಪೂರ್ವಕವಾಗಿ ಪ್ರಾಣಿಗಳನ್ನು ಬಲಿ ಪಡೆದಿರುವುದು ಕಂಡುಬಂದಲ್ಲಿ ತಪ್ಪಿತಸ್ಥರ ವಿರುದ್ಧ ಜಾಮೀನು ರಹಿತ ದೂರು ದಾಖಲಿಸಬೇಕು
ಈ ರೀತಿಯ ಘಟನೆಗಳು ಮರುಕಳಿಸದಂತೆ ಕ್ರಮ ಜರುಗಿಸಬೇಕು

2009ರಲ್ಲಿ ನವಿಲು ಗಣತಿ:
ಸರ್ಕಾರದಿಂದ 2009ರಲ್ಲಿ ಮೊದಲ ಬಾರಿಗೆ ನವಿಲು ಸಮೀಕ್ಷೆ ನಡೆಸಲಾಗಿತ್ತು. ಬೆಂಗಳೂರಿನ ನವಿಲು ತಜ್ಞ ಹರೀಶ್‌ ಭಟ್ ನೇತೃತ್ವದಲ್ಲಿ ಮೊದಲ ಹಂತದ ಸಮೀಕ್ಷೆ ನಡೆಯಿತು. ಆದರೆ, ಎರಡನೇ ಹಂತದ ಸಮೀಕ್ಷೆ ನಡೆಸಲು ಸರ್ಕಾರ ಅನುಮತಿ ನೀಡದ ಹಿನ್ನೆಲೆಯಲ್ಲಿ ಸಮೀಕ್ಷೆ ಮೂಲೆಗುಂಪಾಗಿದೆ. ಇನ್ನು ವನ್ಯ ಜೀವಿ ಸಂರಕ್ಷಣೆ ಕಾಯ್ದೆ-1972ರ ಪ್ರಕಾರ ನವಿಲು, ಹುಲಿ, ಆನೆ, ಚಿರತೆ, ಸಿಂಹ ಸೇರಿದಂತೆ ಕೆಲ ವನ್ಯಜೀವಿಗಳನ್ನು ‘ಶೆಡ್ಯೂಲ್ ಒನ್‌’ ಪ್ರಾಣಿಗಳು ಎಂದು ಘೋಷಿಸಲಾಗಿದೆ. ಇವುಗಳ ರಕ್ಷಣೆಗಾಗಿ ಸರ್ಕಾರ ವಿಶೇಷ ಕಾಳಜಿ ವಹಿಸುತ್ತದೆ.

ರಕ್ಷಣೆಯಲ್ಲಿ ಅರಣ್ಯ ಇಲಾಖೆ ಸಾಧನೆ ಶೂನ್ಯ:
ಈ ಅರಣ್ಯ ಪ್ರದೇಶಗಳಲ್ಲಿ ಹಲವಾರು ಬಗೆಯ ಒಂದನೇ ಮತ್ತು ಎರಡನೇ ಕ್ರಮಾಂಕದ ವನ್ಯಜೀವಿಗಳು ವಾಸಿಸುತ್ತಿವೆ. ಶೆಡ್ಯೂಲ್ ಒನ್‌ ವರ್ಗದ ಪೈಕಿ ನವಿಲುಗಳು ಹೆಚ್ಚಾಗಿ ಕಂಡು ಬಂದರೆ, ಶೆಡ್ಯೂಲ್ 2ನಲ್ಲಿ ವಿರಳವಾಗಿ ಕಂಡು ಬರುವ ಅಸಾಮಾನ್ಯ ಹಾವು, ಚೇಳು ಮತ್ತು ಕೆಲ ಕೀಟಗಳು ಇಲ್ಲಿ ನೆಲೆಸಿವೆ. ಇವುಗಳನ್ನು ಸಂರಕ್ಷಿಸುವ ಮಹತ್ವದ ಜವಾಬ್ದಾರಿಯನ್ನು ಅರಣ್ಯ ಇಲಾಖೆ ಹೊತ್ತಿದೆ. ಆದರೆ, ಈ ಜೀವ ಸಂಪತ್ತನ್ನು ರಕ್ಷಣೆ ಮಾಡುವುದರಲ್ಲಿ ಇಲಾಖೆಯ ಸಾಧನೆ ಶೂನ್ಯ.

ಪಾಲಿಕೆ ಪತ್ರಕ್ಕೆ ಪ್ರತಿಕ್ರಿಯೆಯಿಲ್ಲ:
ಅರಣ್ಯ ಇಲಾಖೆ ಮಾಡಬೇಕಿದ್ದ ವನ್ಯ ಜೀವಿಗಳ ರಕ್ಷಣೆಯ ಕಾರ್ಯವನ್ನು ನಾವು ಮಾಡುತ್ತೇವೆ ನಮಗೆ ಅವಕಾಶ ಕೊಡಿ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌ ಅವರು ಇದೇ ಫೆಬ್ರವರಿ ತಿಂಗಳಲ್ಲಿ ರಣ್ಯ ಇಲಾಖೆಗೆ ಪತ್ರ ಬರೆದಿದ್ದರು. ಬಿಬಿಎಂಪಿ ಬಳಿ ಈಗಾಗಲೇ ಕೆಲ ವನ್ಯಜೀವಿ ರಕ್ಷಕರು ಮತ್ತು 4 ಆ್ಯಂಬುಲನ್ಸ್‌ಗಳಿವೆ. ಇವುಗಳನ್ನು ಬಳಸಿಕೊಂಡು ನಾವು ವನ್ಯಜೀವಿಗಳ ರಕ್ಷಣೆ ಮಾಡುತ್ತೇವೆ ಎಂದು ಬಿಬಿಎಂಪಿ ಮನವಿ ಮಾಡಿದೆ. ಪತ್ರ ಬರೆದು 4 ತಿಂಗಳು ಕಳೆದರೂ ಅರಣ್ಯ ಇಲಾಖೆಯಿಂದ ಈವರೆಗೆ ಪ್ರತಿಕ್ರಿಯೆ ಬಂದಿಲ್ಲ.
– ಲೋಕೇಶ್‌ ರಾಮ್‌
Advertisement

Udayavani is now on Telegram. Click here to join our channel and stay updated with the latest news.

Next