Advertisement
ಅವತ್ತು ರಾತ್ರಿ ಹನ್ನೊಂದುವರಿ ಸುಮಾರಿಗೆ ಯಜಮಾನಿ ಮೊಬೈಲಿಗೆ ಒಂದು ಮೆಸೆಜ್ ಬಂತು. ಇಷ್ಟೊತ್ತಿನ್ಯಾಗ ಯಾರದು ಅಂತ ಕೇಳಿದೆ. ಅಕಿ ಗೆಳತಿ ಮಾರನೇ ದಿನ ವ್ಯಾಲೆಂಟೇನ್ಸ್ ಡೇ ಇರು ಸಲುವಾಗಿ ಅಕಿ ಗಂಡಾ ಏನೋ ಗಿಫ್ಟ್ ಕೊಡಸ್ತೇನಿ ಅಂತ ಹೇಳಿದ್ದನ್ನ, ಇಕಿಗಿ ಹೇಳಿ, ನಿಮ್ಮ ಯಜಮಾನ್ರು ಏನ್ ಕೊಡಸ್ತಾರಂತ, ಕೇಳಿ ಮೆಸೆಜ್ ಮಾಡ್ಯಾಳು ಅಂದು. ಇದ್ಯಾಕೋ ನಮಗ ತಿರಗತೈತಿ ಅಂದೊಡು ಮುಂದಿನ ಪ್ರಶ್ನೆ ಕೇಳದನ ಸುಮ್ಮನ ಟಿವಿ ಕಡೆ ಮುಖಾ ಮಾಡಿ ಕುಂತೆ.
Related Articles
Advertisement
ಯಡಿಯೂರಪ್ಪನೋರು ಮುಖ್ಯಮಂತ್ರಿಯಾಗಿದ್ದಾಗಿ ತಮ್ಮ ಹೈ ಕಮಾಂಡ್‌ಗೆ ಅದ ರೀತಿ ಪಾರ್ಸಲ್ ಕಳಸ್ತಿದ್ದರು ಅಂತ ಅವರು ಅಧಿಕಾರ ಮಾಡುತ್ತಿದ್ದಾಗ ಸಾಕಷ್ಟು ಬಾರಿ ಆರೋಪ ಕೇಳಿ ಬಂದಿತ್ತು. ಯಡಿಯೂರಪ್ಪನೋರು ರಾಯಣ್ಣ ಬ್ರಿಗೇಡ್‌ನ ಫೋರ್ಸ್ ನೋಡಿ, ಜನರ ಮೈಂಡ್ ಡೈವರ್ಟ್ ಮಾಡಾಕ್ ಹಿಂಗ್ ಮಾಡಿದ್ರೋ ಯಾರಿಗ್ಗೊತ್ತು? ಗೋವಿಂದರಾಜ್ ಅವರು ಡೈರೀಲಿ ಏನೇನ್ ಬರ್ದಾರು ಅಂತ ದೇವ ಮಾನವರಂಗ ಯಡಿಯೂರಪ್ಪನೋರು ಹೇಳಾಕತ್ತಾರಂದ್ರ, ಅವರಿಗೆ ದಾಳಿ ಆದಾಗೊಮ್ಮೆ ದಿಲ್ಲಿಂದನ ದೈವವಾಣಿ ಆಗ್ತಿರಬೇಕು ಅನಸೆôತಿ. ಯಾಕಂದ್ರ ಐಟಿ ಮತ್ತು ಇಡಿ ಡಿಪಾರ್ಟ್‌ಮೆಂಟ್ ಕೇಂದ್ರ ಸರ್ಕಾರದ ಕೆಳಗ ಕೆಲಸಾ ಮಾಡುದರಿಂದ. ಅಲ್ಲಿ ಕೇಂದ್ರದ ನಾಯಕರಿಗೆ ಮಾಹಿತಿ ಹೋಗಿ, ಅಲ್ಲಿಂದ ಯಡಿಯೂರಪ್ಪನೋರಿಗೆ ಪಾರ್ಸಲ್ ಅಕ್ಕೇತಿ ಅನಸೈತಿ. ಹೈ ಕಮಾಂಡ್‌ಗೆ ದುಡ್ಡು ಯಾವ್ಯಾವ ರೀತಿ ಹೊಕ್ಕೇತಿ ಅಂತ ಹೇಳಾಕ್ ಬರುದಿಲ್ಲಾ. ಕಾಲೇಜಿನ್ಯಾಗ ನೋಡಿದ ಹುಡುಗ್ಯಾರೆಲ್ಲಾರ್ನೂ ಲವ್ ಮಾಡಾಕ್ ಆಗುದಿಲ್ಲ. ಬೆನ್ನ ಹತ್ತಿದ ಹುಡುಗ್ಯಾರೆಲ್ಲಾರೂ ಪ್ರಪೋಜ್ ಮಾಡ್ತಾರಂತಾನು ಇಲ್ಲಾ. ಕೆಲವು ಮಂದಿ ಸಕ್ರೀಯ ಕಾರ್ಯಕರ್ತರಾಗಿ ಸೇರಿಕೊಂಡು ನೇರ ರಾಜಕೀಯ ಮಾಡಿದ್ರ, ಇನ್ನು ಕೆಲವು ಮಂದಿ ಪಕ್ಷದ ಹಿತೈಸಿಗಳಾಗಿ ನೇರ ರಾಜಕಾರಣದಿಂದ ದೂರ ಉಳದ್ ಪಕ್ಷಕ್ಕ ಅಗತ್ಯ ಬಿದ್ದಾಗ ಹಣಕಾಸಿನ ಸಹಾಯ ಮಾಡ್ತಾರು. ಹರಿಖೋಡೆ, ನಾರಾಯಣಸ್ವಾಮಿ, ಅದಾನಿ, ಅಂಬಾನಿ ಅವರೆಲ್ಲಾ ರಾಜಕೀಯ ಪಕ್ಷಗಳ ಹಿತೈಸಿಗಳು. ಒಂದ್ ರೀತಿ ಪ್ರೇಯಸಿಯ ಮನಸಿನ ಗೆಳತಿ ಇದ್ದಂಗ ಅವರು. ಡೈರಕ್ಟ್ ಪ್ರಪೋಜ್ ಮಾಡುದಿಲ್ಲಾ, ಹಂಗಂತ ಮನಸಿನ್ಯಾಗ ಪ್ರೀತಿ ಇಲ್ಲಾಂತ ಹೇಳಂಗಿಲ್ಲಾ. ಮನಸಿನ್ಯಾಗ ಪ್ರೀತಿ ತುಂಬಿದ ಆತ್ಮೀಯತೆ ಇದ್ದರೂ, ಅದಕ್ಕಿಂತ ಆತ್ಮೀಯವಾದ, ಆಪ್ತವಾದ ಸ್ನೇಹ ಇಟ್ಕೊಂಡಿರೋದು ಚೊಲೊ ಅಂತ ನಂಬಿ, ಆತ್ಮೀಯ ಸ್ನೇಹ ಸಂಬಂಧ ಇಟ್ಕೊಂಡಿರೊವಂತಾ ಹುಡುಗ್ಯಾರ್ ಇದ್ದಂಗ ಅವರು. ನೇರ ರಾಜಕಾರಣ ಮಾಡಾಕ್ ಮನಸ್ಸಿರುದಿಲ್ಲಾ. ರಾಜಕಾರಣದ ಸಂಪರ್ಕದಿಂದ ದೂರಾನೂ ಇರಾಕ್ ಬಯಸುದಿಲ್ಲಾ.
ಇನ್ನೊಂದು ಥರದ ಜನಾ ಅದಾರು. ಅವರಿಗೆ ರಾಜಕೀಯ ಪಕ್ಷಗೋಳ್ ಅಂದ್ರ ಒಂದ್ ರೀತಿ ಬೇಕಾದಾಗ ಕರದ್ರ ಬರೋ ಮಂದಿ ಇದ್ದಂಗ. ತಮಗ ಬೇಕನಿಸಿದ್ರ, ರಾಜ್ಯಸಭಾ ಮೇಂಬರ್ ಆಗಾಕ್ ಪಾರ್ಟಿಗೆ ಎಷ್ಟು ಬೇಕೋ ಅಷ್ಟು ಕೈಗೆ ಕೊಟ್ಟು ಸಮಾಧಾನ ಮಾಡ್ತಾರು. ಆರು ವರ್ಷದ ಒಂದ ಕಂತಿನ್ಯಾಗ ಎಲ್ಲ ವ್ಯವಹಾರ ಮುಗಿಸಿ ಬಿಡ್ತಾರು. ಅವರಿಗೆ ರಾಜಕೀಯ ಅಂದ್ರ ಒಂದ್ ರೀತಿ ಶೋಕಿ ಇದ್ದಂಗ. ಇದ್ದಷ್ಟು ದಿನಾ ದುಡ್ಡು ಕೊಟ್ಟು ಮಜಾ ಮಾಡಿ. ಬ್ಯಾಡ್ ಅನಿಸಿದಾಗ ಬಿಟ್ಟು ಲಂಡನ್ ಕಡೆ ಹಾರಿ ಹೊಕ್ಕಾರು. ಇತ್ತೀಚಿನ ದಿನದಾಗ ಎಲ್ಲಾ ರಾಜಕೀ ಪಕ್ಷದಾರೂ, ರಾಜ್ಯಸಭಾ ಮತ್ತ ವಿಧಾನಸಭಾ ಮೇಂಬರ್ ಮಾಡಾಕ್ ಒಂದು ಸೀಟು ಪೇಮೆಂಟ್ ಕೋಟಾಕ್ ಮೀಸಲಿಟ್ಟಿರತಾರು. ಅವರು ಕೊಡೊ ಎಲ್ಲಾ ದುಡ್ಡನೂ ಒಯ್ದು, ಏನು ತಿಮ್ಮಪ್ಪನ ಹುಂಡಿಗಿ ಹಾಕ್ತಾರಾ ? ಅದೆಲ್ಲಾ ಹೋಗಿ ಹೈ ಕಮಾಂಡ್‌ಗ ಸೇರಬೇಕಲ್ಲಾ. ಪಾರ್ಟಿಗೆ ಏನೂ ಕೊಡದನ ವಿಧಾನ ಪರಿಷತ್ತಿಗೆ, ರಾಜ್ಯಸಭೆಗೆ ಆಯ್ಕೆ ಆಗೋದ ಆಗಿದ್ದರ, ಎಂ.ಸಿ. ನಾಣಯ್ಯನಂಥಾ ಸಂಸದೀಯ ಪಟುಗಳು ಯಾಕ್ ಹೋಗಿ ಮನ್ಯಾಗ್ ಕುಂದರ್ತಿದ್ರು?
ಯಡಿಯೂಪ್ಪನೋರು ಅಧಿಕಾರದಾಗ ಇದ್ದಾಗ, ಧರ್ಮೇಂದ್ರ ಪ್ರಧಾನ ಅವರು ಬೆಂಗಳೂರಿಗೆ ಬಂದಾಗೊಮ್ಮೆ ಸೂಟ್‌ಕೇಸ್ ಒಯ್ನಾಕ್ ಬಂದಾರಂತ ಬಿಜೆಪಿ ಆಫೀಸಿನ್ಯಾಗ ಮಾತಾಡ್ತಿದ್ರು. ಆದ್ರ ಯಡಿಯೂರಪ್ಪನೋರು ಈ ವಿಷಯದಾಗ ಭಾಳ ಜಾಣತನಾ ಮಾಡ್ಯಾರು ಅನಸೆôತಿ. ಯಾವುದನ್ನೂ ಡೈರ್ಯಾಗ ಬರದ ಇಟ್ಟಿಲ್ಲಾ. ಯಾಕಂದ್ರ ಜಿಂದಾಲ್ ಕಂಪನ್ಯಾರಿಗೆ ಡಿ ನೊಟಿಫಿಕೇಶನ್ ಮಾಡಿಕೊಟ್ಟಿದ್ದಕ್ಕ ಪ್ರೇರಣಾ ಟ್ರಸ್ಟ್‌ಗೆ ಚೆಕ್‌ನ್ಯಾಗ ಕಿಕ್ ಬ್ಯಾಕ್ ಇಸ್ಕೊಂಡು ಅಧಿಕಾರ ಕಳಕೊಂಡಾವರ್ ಅವರು. ಹಳೆ ಪ್ರೇಯಸಿ ನಂಬರ್ನ ಗಂಡ್ಮಕ್ಕಳು ಯಾವಾಗ್ಲೂ ಮನಸಿನ್ಯಾಗ ಇಟ್ಕೊಂಡಿರ್ತಾರು. ಇಲ್ಲಾಂದ್ರ ಮೊಬೈಲ್‌ನ್ಯಾಗ್ ಸೇವ್ ಮಾಡಿದ್ರೂ ಅದಕ್ಕೊಂದು ಕೋಡ್ ನಂಬರ್ ಕೊಟ್ಟಿರ್ತಾರು. ಈ ಹೈ ಕಮಾಂಡ್‌ಗೆ ದುಡ್ಡು ಕೊಟ್ಟಿರೋ ಲೆಕ್ಕಾನೂ ಹಂಗ. ಯಾರಿಗೆ ದುಡ್ಡು ಕೊಟ್ಟೇನಿ ಅಂತ ಯಾರಾದ್ರೂ ನೇರವಾಗಿ ಅವರ ಹೆಸರು ಎಷ್ಟು ದುಡ್ಡು ಅಂತ ಬರದಿಟ್ಟರ, ಅವರಂತಾ ದಡ್ಡರು ಯಾರೂ ಇಲ್ಲಾ. ಅದ್ಕ ಭಾಳ ಸಾಲಿ ಕಲತಾರಿಗೆ ಬುದ್ದಿ ಕಡಿಮಿ ಅಂತಾರು. ಯಾಕಂದ್ರ ಅವರು ಎಲ್ಲಾನೂ ಮನಸಿನ್ಯಾಗ್ ಸೇವ್ ಮಾಡಿಕೊಳ್ಳೋದು ಬಿಟ್ಟು ಎಲ್ಲಾನೂ ಡೈರ್ಯಾಗ, ಕಂಪ್ಯೂಟರಿನ್ಯಾಗ್, ಇತ್ತೀಚೆಗೆ ಮೊಬೈಲ್‌ನ್ಯಾಗ ಸೇವ್ ಮಾಡ್ಕೊಳ್ತಾರು. ಹಿಂಗಾಗೇ ಅವರ ಸ್ವಂತ ಮೊಬೈಲ್ ನಂಬರ್ರ ಕೇಳಿದ್ರೂ, ಹೇಳಾಕ ತಡಬಡಸ್ತಾರು. ನಮ್ಮವ್ವಾ ಒಂದಿನಾನೂ ಸಾಲಿಗಿ ಹೋಗಿಲ್ಲಾ ಆದ್ರೂ, ಇಡೀ ವಾರ ಯಾವದ್ಯಾವುದಕ್ಕ ಎಷ್ಟೆಷ್ಟ ದುಡ್ಡು ಖರ್ಚ್ ಮಾಡೇನಿ ಅಂತ ಮಂಗಳವಾರಕ್ಕೊಮ್ಮೆ ಎಲ್ಲಾ ಲೆಕ್ಕಾ ಹೇಳತಾಳು. ಒಂದ್ ರಾಜಕೀಯ ಪಕ್ಷದಾಗ ಒಬ್ಬ ವ್ಯಕ್ತಿ ಹೈ ಕಮಾಂಡ್‌ಗೆ ಬೇಕಾಗಿ ಕ್ರಿಯಾಶೀಲನಾಗಿ ಇರಬೇಕಂದ್ರ, ಬರೀ ಓಡ್ಯಾಡಿ ಪಕ್ಷಾ ಕಟ್ಟಿ ಆರಿಸಿ ಬಂದ್ರ ಸಾಲುದಿಲ್ಲಾ. ಕ್ಷೇತ್ರದಾಗಷ್ಟ ಪಕ್ಷಾ ಕಟ್ಟುದಲ್ಲಾ, ರಾಜ್ಯದಾಗೂ ಕಟ್ಟಬೇಕು. ರಾಷ್ಟ್ರ ಮಟ್ಟದಾಗ ಪಕ್ಷಾ ಕಟ್ಟಾರ ಹೊಟ್ಟಿನೂ ತುಂಬಸ್‌ಬೇಕು. ಇಲ್ಲಾಂದ್ರ ಸಿಎಂ ಕುರ್ಚಿ, ಮಿನಿಸ್ಟ್ರಿ, ಕೇಳಿದ್ದ ಪೋರ್ಟ್ ಪೊಲಿಯೋ ಸಿಗುದು ಕಷ್ಟ್ ಐತಿ. ಹಂಗಾಗೇ ಅಲ್ಲನ, ಎಚ್.ಕೆ. ಪಾಟೀಲರಿಗೆ, ಜಯಚಂದ್ರಗ ಜಲ ಸಂಪನ್ಮೂಲ ಖಾತೆ ಮ್ಯಾಲ್ ಪ್ರೀತಿ ಇದ್ದರೂ, ಪ್ರಪೋಜ್ ಮಾಡಾಕ್ ಧೈರ್ಯ ಇಲ್ಲದಿರೋದ್ಕ ಹೈ ಕಮಾಂಡ್ ಪ್ರೀತಿ ಗಳಸಾಕ್ ಆಗದ, ಮನ್ಯಾಗ ಹಿರ್ಯಾರ ನೋಡಿ ಕಟ್ಟಿರೋ ಹುಡುಗಿ ಜೋಡಿ ಸಂಸಾರ ನಡಿಸಿದಂಗ ಆಗೇತಿ. ಜಾರ್ಜ್ ಸಾಹೇಬ್ರು, ಕೊಲೆಗೆ ಪ್ರಚೋದನೆ ಮಾಡಿದ ಆರೋಪದ ಮ್ಯಾಲ್ ಮಂತ್ರಿ ಸ್ಥಾನ ಹೋಗಿದ್ದರೂ, ಮೂರ ತಿಂಗಳದಾಗ ವಾಪಸ್ ತೊಗೊಳ್ಳಾಕ ಕಾಂಗ್ರೆಸ್ ಹೈ ಕಮಾಂಡ್ ಏನ್ ಸರ್ವ ಧರ್ಮಿಯ ದತ್ತಿ ಕೇಂದ್ರ ನಡಸಾಕತ್ತೇತನ ? ವ್ಯಾಲೆಂಟೇನ್ಸ್ ಡೇ ಅಂದ್ರ ಯಾವತ್ತೋ ಒಂದು ದಿನಾ ಆಚರಣೆ ಮಾಡಿ ಬಿಟ್ರ, ಉಳದ ದಿನಾ ಪ್ರೀತಿ ಇಲ್ಲದ ಇರಾಕ್ ಅಕ್ಕೇತಿ ? ಹಂಗಂತ ವರ್ಷ ಪೂರ್ತಿ ಲವ್ ಮಾಡಕೋಂತನ ಇರಾಕ್ ಅಕ್ಕೇತೋ? ಅದನ್ನ ಆಚರಣೆ ಮಾಡೂದು ಅಂದ್ರ, ಒಂದ್ ರೀತಿ ಶೋಕಿಗೆ ಎಲೆಕ್ಷನ್ ನಿಂತಂಗ ಅದು. ಗೆದ್ದರ ರಾಜಕೀ ಮಾಡೂದು. ಇಲ್ಲಾಂದ್ರ ಬಿಟ್ಟು ಬಿಜಿನೆಸ್ ಮಾಡುದು ಅಂದಂಗ. ಇಷ್ಟಾ ಪಟ್ಟಿರೋ ಹುಡುಗಿ ಒಪ್ಪಿದ್ರ, ಯಾಡ್ ವರ್ಷ ಬೈಕ್ ಹತ್ತಿಸಿ ತಿರಗ್ಯಾಡುದು. ಇಲ್ಲಾಂದ್ರ ಅಪ್ಪಾ ಅವ್ವಾ ನೋಡಿದ ಹುಡುಗಿ ಕಟಗೊಂಡು ಸುಮ್ಮನಿರೋದು. ನಮಗ ಶೋಕಿಗೆ ಎಲೆಕ್ಷನ್ ಮಾಡಾಕ ಮನಸ್ಸಿಲ್ಲಂತ ಮನ್ಯಾಗ ನೋಡಿದ ಹುಡುಗಿ ಮದುವಿ ಆಗೇವಿ. ಮತ್ತ ಯಾರು, ಎಷ್ಟು ದುಡ್ಡು ಕೊಟ್ಟರು ಅಂತ ಹೈ ಕಮಾಂಡ್‌ಗೆ ಎಲ್ಲಾ ಗೊತ್ತಿರತೈತಿ. ಹಂಗ ನಮ್ಮ ಹೈ ಕಮಾಂಡ್‌ಗೂ ನಾವ್ ಕಾಲೇಜಿನ್ಯಾಗ ಇದ್ದಾಗ, ಯಾರ್ ಬೆನ್ನ ಹತ್ತಿದ್ವಿ, ನಮ್ಮ ಹಿಂದ ಯಾರ್ ಬೆನ್ನ ಹತ್ತಿದ್ರು ಅಂತ ಎಲ್ಲಾ ಗೊತ್ತೈತಿ. ನಂಗ ಕಾಲೇಜಿನ್ಯಾಗ ಗರ್ಲ್ ಫ್ರೆಂಡ್ ಇದ್ದಲು ಅಂತಡಂಗರಾ ಹೊಡಿಸಿ, ಊರಿಗೆಲ್ಲಾ ಕರದ್ ಊಟಾ ಹಾಕಾಕ್ ನಾನೇನ್ ಯಡಿಯೂರಪ್ಪನ ?
ಯಾರ್ ಹೆಂಡ್ತಿನ ಪ್ರೀತಿಸ್ತಾರೋ, ವ್ಯಾಲೆಂಟೇನ್ಸ್ ಡೇನ ಅವರ್ಯಾಕ ಆಚರಣೆ ಮಾಡ್ತಾರ? ಶಂಕರ ಪಾಗೋಜಿ