Advertisement

ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದೇ ಸಂಘದ ಧ್ಯೇಯ: ಸುಕುಮಾರ್‌ ಶೆಟ್ಟಿ

05:25 PM Dec 14, 2019 | Suhan S |

ಮುಂಬಯಿ, ಡಿ. 13: ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ರೀತಿಯ ಪ್ರತಿಭೆ ಇದ್ದೇ ಇರುತ್ತದೆ. ಅಂತವರ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಪುರಸ್ಕರಿಸುವುದು ನಮ್ಮ ಡೊಂಬಿವಲಿ ಕರ್ನಾಟಕ ಸಂಘದ ಮುಖ್ಯ ಧ್ಯೇಯೋದ್ದೇಶವಾಗಿದೆ. ಎಳೆ ವಯಸ್ಸಿನಲ್ಲಿ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರ ಅಭಿರುಚಿಗೆ ತಕ್ಕಂತೆ ನಾವು ಅವರನ್ನು ಬೆಳೆಸಬೇಕು. ಡೊಂಬಿವಲಿ ಕರ್ನಾಟಕ ಸಂಘವು ಸ್ಥಳೀಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿದ್ದು, ಅದರ ಸದುಪಯೋಗವನ್ನು ಎಲ್ಲರು ಪಡೆದುಕೊಳ್ಳಬೇಕು ಎಂದು ಕರ್ನಾಟಕ ಸಂಘ ಡೊಂಬಿವಲಿ ಕಾರ್ಯಾಧ್ಯಕ್ಷ ಸುಕುಮಾರ್‌ ಎನ್‌. ಶೆಟ್ಟಿ ಅವರು ನುಡಿದರು.

Advertisement

ಡಿ. 8ರಂದು ಡೊಂಬಿವಲಿ ಪೂರ್ವದ ಡೊಂಬಿವಲಿ ಕರ್ನಾಟಕ ಸಂಘದ ಸಂಚಾಲಕತ್ವದ ಮಂಜುನಾಥ ವಿದ್ಯಾಲಯದ ಸಭಾಗೃಹದಲ್ಲಿ ಸಂಘದ ವಾಚನಾಲಯ ವಿಭಾಗದ ವತಿಯಿಂದ ಕನ್ನಡಿಗರಿಗಾಗಿ ಆಯೋಜಿಸಲಾಗಿದ್ದ ಕೇರಂ ಮತ್ತು ಚೆಸ್‌ ಪಂದ್ಯಾಟಗಳನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿದ ಅವರು, ಸಾಮಾಜಿಕ, ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿತನ್ನದೇ ಆದ ಛಾಪು ಮೂಡಿಸಿದ ಡೊಂಬಿವಲಿ ಕರ್ನಾಟಕ ಸಂಘ ಕನ್ನಡದ ಕೈಂಕರ್ಯದಲ್ಲೂ ಸೈ ಎನಿಸಿಕೊಂಡಿದೆ. ಇದಕ್ಕೆ ಸಮಸ್ತ ಕನ್ನಡ ಮನಸ್ಸುಗಳ ಸಹಾಯ, ಸಹಕಾರವೇ ಕಾರಣವಾಗಿದೆ. ತಮ್ಮೆಲ್ಲರ ಸಹಾಯದ ಅಭಯ ಹಸ್ತ ಸದಾ ಸಂಘದ ಮೇಲಿರಲಿ. ಸ್ಪರ್ಧೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಅವೆರಡನ್ನೂ ಸಮಾನವಾಗಿ ಸ್ವೀಕರಿಸೋಣ ಎಂದು ನುಡಿದು ಶುಭಹಾರೈಸಿದರು.

ಸಂಘದ ವಾಚನಾಲಯ ವಿಭಾಗದ ಕಾರ್ಯಾಧ್ಯಕ್ಷೆ ವಿಮಲಾ ವಿ. ಶೆಟ್ಟಿ ಅವರು ಸ್ವಾಗತಿಸಿ ಮಾತನಾಡಿ, ಯಾವುದೇ ಸ್ಪರ್ಧೆ ಇರಲಿ, ಅಲ್ಲಿ ಸೋಲು-ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸೋಲು-ಗೆಲುವು ಸ್ಪರ್ಧಿಗಳಿಗೆ ಮುಖ್ಯವಲ್ಲ. ಭಾಗವಹಿಸುವುದು ಬಹಳ ಮುಖ್ಯ. ಕ್ರೀಡಾ ಮನೋಭಾವನೆಯನ್ನು ಸ್ಪರ್ಧಿಗಳು ಬೆಳೆಸಿಕೊಳ್ಳಬೇಕು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಡಿ. 22ರಂದು ನಡೆಯಲಿರುವ ಸಂಘದ ನಾಡಹಬ್ಬ ಸಂಭ್ರಮದಲ್ಲಿ ಬಹುಮಾನ ವಿತರಿಸಲಾಗುವುದು ಎಂದರು.

ಎರಡು ದಿನಗಳ ಕಾಲ ನಡೆದ ಈ ಪಂದ್ಯಾವಳಿಯಲ್ಲಿ ಇನ್ನೂರಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದರು. 20 ವರ್ಷ ಮೇಲ್ಪಟ್ಟ ಪುರುಷರ ವಿಭಾಗದ ಕೇರಂ ಸಿಂಗಲ್‌ ನಲ್ಲಿ ವಿರಾಜ್‌ ಶೆಟ್ಟಿ ಪ್ರಥಮ, ಮಹೇಶ್‌ ಶೆಟ್ಟಿಗಾರ್‌ ದ್ವಿತೀಯ, 13 ವರ್ಷದಿಂದ 20 ವರ್ಷದೊಳಗಿನವರ ವಿಭಾಗದಲ್ಲಿ ಕಾರ್ತಿಕ್‌ ಪೂಜಾರಿ ಪ್ರಥಮ, ಶ್ರವಣ್‌ ಶೆಟ್ಟಿ ದ್ವಿತೀಯ ಬಹುಮಾನ ಪಡೆದರು. 20 ವರ್ಷ ಮೇಲ್ಪಟ್ಟ ಪುರುಷರ ಡಬಲ್ಸ್‌ ವಿಭಾಗದಲ್ಲಿ ವಿರಾಜ್‌ ಶೆಟ್ಟಿ ಮತ್ತು ಮಹೇಶ್‌ ಶೆಟ್ಟಿಗಾರ್‌ ಅವರು ಪ್ರಥಮ, ವಿನಯ್‌ ಶೆಟ್ಟಿ ಮತ್ತು ಚಿರಾಗ್‌ ಶೆಟ್ಟಿ ದ್ವಿತೀಯ ಬಹುಮಾನ ಪಡೆದರು.

13ರಿಂದ 20 ವರ್ಷದೊಳಗಿನ ಪುರುಷರ ಕೇರಂ ಡಬಲ್ಸ್‌ ವಿಭಾಗದಲ್ಲಿ ಕರಲೇಶ್‌ ಪೂಜಾರಿ ಮತ್ತು ಆಶೀಶ್‌ ನಾಯರ್‌ ಪ್ರಥಮ, ಮಹೇಶ್‌ ಶೆಟ್ಟಿ ಮತ್ತು ರೋಹನ್‌ ಮೊಗವೀರ ದ್ವಿತೀಯ ಬಹುಮಾನ ಗಳಿಸಿದರು. 13ರಿಂದ 20 ವರ್ಷದೊಳಗಿನ ಮಹಿಳೆಯರ ಕೇರಂ ಸಿಂಗಲ್ಸ್‌ ವಿಭಾಗದಲ್ಲಿ ಪ್ರಜ್ಞಾ ಹೆಗ್ಡೆ ಪ್ರಥಮ, ತನುಷಾ ಶೆಟ್ಟಿ ದ್ವಿತೀಯ, 20 ವರ್ಷದಿಂದ ಮೇಲ್ಪಟ್ಟವರ ವಿಭಾಗದಲ್ಲಿ ವನಿತಾ ಶೆಟ್ಟಿ ಪ್ರಥಮ, ಅಂಜಲಿ ಗಿಂಡಿ ದ್ವಿತೀಯ ಬಹುಮಾನ ಪಡೆದರು.

Advertisement

13ರಿಂದ 20 ವರ್ಷದೊಳಗಿನ ಮಹಿಳೆಯರ ಕೇರಂ ಡಬಲ್ಸ್‌ ವಿಭಾಗದಲ್ಲಿ ಖುಷಿ ಪೂಜಾರಿ ಮತ್ತು ಸಂಜನಾ ಮಂಡಳ ಪ್ರಥಮ, ಪ್ರಜ್ಞಾ ಹೆಗ್ಡೆ ಮತ್ತು ತನುಷ್ಕಾ ಶೆಟ್ಟಿ ದ್ವಿತೀಯ, 20 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಜಯಶ್ರೀ ನಾಯಕ್‌ ಮತ್ತು ತನುಜಾ ಕಾಂಚನ್‌ ಪ್ರಥಮ, ವಿನಿತಾ ಶೆಟ್ಟಿ ಮತ್ತು ಅಂಜಲಿ ಗಿಂಡಿ ದ್ವಿತೀಯ ಬಹುಮಾನ ಪಡೆದರು. 13ರಿಂದ 20 ವರ್ಷದೊಳಗಿನವರ ಪುರುಷರ ವಿಭಾಗದ ಚೆಸ್‌ ಪಂದ್ಯದಲ್ಲಿ ಕರಣ್‌ ನಾಯಕ್‌ ಪ್ರಥಮ, ವಿಕ್ರಾಂತ್‌ ಮಂಡಲ ದ್ವಿತೀಯ ಹಾಗೂ 20 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ನಿತಿನ್‌ ಚಂದನ್‌ ಪ್ರಥಮ, ಚಂದ್ರಾ ಕಾಂತ್‌ ನಾಯಕ್‌ ದ್ವಿತೀಯ, ನಿಶಾನ್‌ ಚಂದನ್‌ ಅವರು ತೃತೀಯ ಬಹುಮಾನ ಪಡೆದರು.

ಡೊಂಬಿವಲಿ ಕರ್ನಾಟಕ ಸಂಘದ ಕಾರ್ಯಾಧ್ಯಕ್ಷ ಸುಕುಮಾರ್‌ ಎನ್‌. ಶೆಟ್ಟಿ, ಇತರ ಪದಾಧಿಕಾರಿಗಳಾದ ಎಸ್‌. ಎನ್‌. ಸೋಮಾ, ಗೌರವ ಕೋಶಾಧಿಕಾರಿ ಲೋಕನಾಥ ಎ. ಶೆಟ್ಟಿ, ವಿಮಲಾ ಶೆಟ್ಟಿ, ಇಂ. ಸತೀಶ್‌ ಆಲಗೂರ, ಚಂದ್ರಕಾಂತ್‌ ನಾಯಕ್‌, ವಿಮಲಾ ಶೆಟ್ಟಿ, ಗೀತಾ ಶೆಟ್ಟಿ, ಯೋಗಿನಿ ಶೆಟ್ಟಿ ಅವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಪಂದ್ಯಾವಳಿಯ ನಿರ್ಣಾಯಕರಾಗಿ ಮೋಹಿತ್‌ ಲಾಡ್‌, ರವಿ ಮೊಡಕ್‌ ಅವರು ಕಾರ್ಯಕ್ರಮ ನಿರ್ವಹಿಸಿದರು. ಗೀತಾ ಕೋಟ್ಯಾನ್‌, ಚಂಚಲಾ ಸಾಲ್ಯಾನ್‌, ಕುಸುಮಾ ಕೋಟ್ಯಾನ್‌, ಜಯಂತಿ ಶೆಟ್ಟಿ, ದೇವಿಕಾ ಸಾಲ್ಯಾನ್‌ ಅವರು ಉಪಸ್ಥಿತರಿದ್ದರು. ಕರ್ನಾಟಕ ಸಂಘ ಡೊಂಬಿವಲಿ ಮತ್ತು ವಾಚನಾಲಯ ವಿಭಾಗ ಹಾಗೂ ಇತರ ಉಪಸಮಿತಿಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಸ್ಪರ್ಧೆಗಳ ಯಶಸ್ಸಿಗೆ ಸಹಕರಿಸಿದರು.

 

ಚಿತ್ರ-ವರದಿ: ಗುರುರಾಜ್‌ ಪೋತನೀಸ್‌

Advertisement

Udayavani is now on Telegram. Click here to join our channel and stay updated with the latest news.

Next