Advertisement

ಕಾಣೆಯಾಗಿದ್ದ ಬಾಲಕಿ ಶವ ಪತ್ತೆ ವಾಮಾಚಾರಕ್ಕೆ ಬಲಿ ನೀಡಿದ ಶಂಕೆ

11:54 AM Mar 04, 2017 | |

ಮಾಗಡಿ: ಮಾಗಡಿ ಪಟ್ಟಣದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ನಿಗೂಢವಾಗಿ ಕಾಣೆಯಾಗಿದ್ದ 10 ವರ್ಷ ಪ್ರಾಯದ ಬಾಲಕಿ ಮೃತ ದೇಹ ಶುಕ್ರವಾರ ಹೊಸಹಳ್ಳಿ ರಸ್ತೆಯಲ್ಲಿ ಪತ್ತೆಯಾಗಿದೆ. ಮೃತದೇಹದ ಬಳಿ ಹೂ, ನಿಂಬೆಹಣ್ಣು, ಅರಿಶಿಣ  ಪತ್ತೆಯಾಗಿದ್ದು, ಬಾಲಕಿಯನ್ನು ವಾಮಾಚಾರಕ್ಕೆ ಬಲಿನೀಡ ಲಾಗಿದೆ ಎಂದು ಶಂಕಿಸಲಾಗಿದೆ.  

Advertisement

ಮಾಗಡಿ ಪಟ್ಟಣದ ಸುಣಕಲ್‌ ಬೀದಿಯ ನೂರ್‌ ವುಲ್ಲಾ (ಅಂಗಡಿ ಗುಲಾಬ್‌) ಜಮೀಲಾ ಬಾನು ದಂಪತಿಯ ಪುತ್ರಿ ಆಯೆಶಾ (10) ಮೃತ ಬಾಲಕಿ. ಆಯೆಶಾ ಪಟ್ಟಣದ ವಿನ್ನರ್ ಶಾಲೆಯಲ್ಲಿ 4 ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. 

ನೂರ್‌ ವುಲ್ಲಾ ಮತ್ತು ಜಮೀಲಾ ಬಾನು ದಂಪತಿ ಪಟ್ಟಣದ ಸುಣಕಲ್‌ ಬೀದಿಯಲ್ಲಿ ಅಂಗಡಿ ನಡೆಸುತ್ತಿದ್ದಾರೆ. ಮಾರ್ಚ್‌ 1ರಂದು ರಾತ್ರಿ 8.30ರಲ್ಲಿ ಅಂಗಡಿಯಲ್ಲಿ ವ್ಯಾಪಾರದಲ್ಲಿ ತೊಡಗಿದ್ದ ತನ್ನ ತಾಯಿಯ ಬಳಿ ಬಂದಿದ್ದ ಬಾಲಕಿ ಆಯೆಶಾ,  ಸ್ನೇಹಿತೆಯ ಮನೆಗೆ ಹೋಗುತ್ತೇನೆ ಎಂದು ಹೇಳಿ, ಮನೆಯ ಕೀಲಿಯನ್ನು ಕೈಗಿಟ್ಟು ಹೋಗಿದ್ದಳು.  

ರಾತ್ರಿ 10 ಗಂಟಗೆ ಮನೆಗೆ ಬಂದ ಜಮೀಲಾ ಬಾನು ಮಗಳು ಆಯೆಶಾ ಮನೆಗೆ ಬಾರದ್ದನ್ನು ಗಮನಿಸಿ ಗಾಬರಿಗೊಂಡಿದ್ದಾರೆ. ಕೂಡಲೇ ಅಕ್ಕಪಕ್ಕದ ತಮ್ಮ ಸಂಬಂಧಿಕರ ಮನೆಯಲ್ಲೆಲ್ಲಾ ಹುಡುಕಾಡಿದ್ದಾರೆ. ಬಾಲಕಿ ಪತ್ತೆಯಾಗದ ಕಾರಣ ಮಾಗಡಿ ಪೊಲೀಸ್‌ ಠಾಣೆಯಲ್ಲಿ ಮಾರ್ಚ್‌ 2 ರಂದು ನಾಪತ್ತೆ ದೂರು ದಾಖಲಿಸಿದ್ದಾರೆ.

ಪತ್ತೆ ಆಗಿದ್ದು ಹೇಗೆ: ಶುಕ್ರವಾರ ಪಟ್ಟಣದ ಹೊಸಹಳ್ಳಿ ರಸ್ತೆಯಲ್ಲಿರುವ ಶುಕುರ್‌ ಸಾಹೇಬರ ಆಸ್ಥಾನದ ಹಿಂಭಾಗದಲ್ಲಿರುವ ಹಳ್ಳದ ಬಳಿ ಕೆಲವರು ಕುರಿ, ಮೇಕೆ ಮೇಯಿಸುತ್ತಿದ್ದರು. ಅವರು ಬಾಲಕಿ ಶವ ಬಿದ್ದಿರುವುದನ್ನು ಕಂಡು ಮಾಗಡಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹ ಆಯೆಶಾಳದ್ದೇ ಎಂದು ಗುರುತಿಸಿದ್ದಾರೆ. ಬಾಲಕಿ ಆಯೆಶಾಳ ಬಾಯಿಯನ್ನು ದುಷ್ಕರ್ಮಿಗಳು ಬಟ್ಟೆಯಿಂದ ಕಟ್ಟಿದ್ದಾರೆ.

Advertisement

ಕೈಯನ್ನು ಹಿಂದಕ್ಕೆ ಸೇರಿಸಿ ಕಟ್ಟಲಾಗಿದೆ. ಸೊಂಟಕ್ಕೆ ಗೋಣಿಚೀಲ ಸುತ್ತಿ ಬರ್ಬರವಾಗಿ ಕೊಲೆಗೈಯಲಾಗಿದೆ. ಸ್ಥಳದಲ್ಲಿ ಸಿಕ್ಕ ವಸ್ತುಗಳು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ವಾಮಾಚಾರಕ್ಕೆ ಬಾಲಕಿಯನ್ನು ಬಲಿ ನೀಡಲಾಯಿತೆ ಎಂಬ ಶಂಕೆ ಮೂಡಿಸಿದೆ. ಬಾಲಕಿಯ ಶವ ಪತ್ತೆಯಾದ ಸುದ್ದಿ ನಗರದಾದ್ಯಂತ ಕಾ‌ಳಿಚ್ಚಿನಂತೆ ಹರಡಿದ ಹಿನ್ನಲೆಯಲ್ಲಿ  ಸ್ಥಳದಲ್ಲಿ ಸಾವಿರಾರು ಜನ ಜಮಾಯಿಸಿದರು.

ಸ್ಥಳಕ್ಕೆ ಐಜಿಪಿ ಸೀಮಂತ್‌ ಕುಮಾರ್‌ ಸಿಂಗ್‌, ರಾಮನಗರ ಪೊಲೀಸ್‌ ವರಿಷ್ಠಾಧಿಕಾರಿ ಬಿ.ರಮೇಶ್‌, ಮಾಗಡಿ ಪಿಎಸ್‌ಐ ಮಂಜುನಾಥ್‌ ಹಾಗೂ ಇತರೆ ಸಿಬ್ಬಂದಿ ಆಗಮಿಸಿದ್ದರು. ಈ ವೇಳೆ ಮಾತನಾಡಿದ ರಾಮನಗರ ಎಸ್‌ಪಿ ಬಿ.ರಮೇಶ್‌, ಶೀಘ್ರದಲ್ಲಿ ಆರೋಪಿಗನ್ನು ಶೀಘ್ರವೇ ಬಂಧಿಸಲಾಗುವುದು ಎಂದು ತಿಳಿಸಿದರು.

ಬಾಲಕಿಯ ಬರ್ಬರ ಹತ್ಯೆ ನಡೆದಿರುವುದರಿಂದ ಸ್ಥಳದಲ್ಲಿ ಸಾವಿರಾರು ಜನ ಜಮಾಯಿಸಿದ್ದ ಕಾರಣ ಸೂಕ್ತ ಬಂದೋಬಸ್ತಿಗಾಗಿ ರಾಮನಗರ ಗ್ರಾಮಾಂತರ ಠಾಣೆ, ಕುದೂರು ಠಾಣೆ, ಕುಂಬಳಗೂಡು, ಚನ್ನಪಟ್ಟಣದಿಂದ ಪಿಎಸ್‌ಐಗಳು ಹಾಗೂ ಪೊಲೀಸ್‌ ಪೇದೆಗಳು ಆಗಮಿಸಿದ್ದರು. ರಾತ್ರಿ ಸುಮಾರು 7 ಗಂಟೆಗೆ ಬಾಲಕಿಯ ಶವವನ್ನು ಆಂಬ್ಯುಲೆನ್ಸ್‌ನಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ಕೊಂಡೊಧಿಯ್ಯಲಾಯಿತು. ಈ ವೇಳೆ ಬಾಲಕಿಯ ಪೋಷಕರ ಹಾಗೂ ಸಂಬಂಧಿಗಳ ರೋಧನ ಮುಗಿಲು ಮುಟ್ಟಿತ್ತು.

Advertisement

Udayavani is now on Telegram. Click here to join our channel and stay updated with the latest news.

Next