ತಿರುವನಂತಪುರ: ಒಂದು ವರ್ಷದ ಹಿಂದೆ ತಿರುವನಂತಪುರದ ಅನಂತ ಪದ್ಮನಾಭ ಸ್ವಾಮಿ ದೇವಾಲಯದಿಂದ ಕಳವಾಗಿತ್ತು ಎಂದು ಹೇಳಲಾಗಿದ್ದ ಕೋಟ್ಯಂತರ ರೂ. ಮೌಲ್ಯದ 12ಕ್ಕೂ ಹೆಚ್ಚು ವಜ್ರದ ಹರಳುಗಳು ಅಚ್ಚರಿ ಎನ್ನುವಂತೆ ದೇವಾಲಯದ ಆವರಣದಲ್ಲಿಯೇ ಪತ್ತೆಯಾಗಿವೆ. ವಿಶೇಷ ತನಿಖಾ ತಂಡ ಕಾರ್ಯಾಚರಣೆ ನಡೆಸುವ ಸಮಯದಲ್ಲಿಯೇ ಪತ್ತೆಯಾಗಿವೆ.
ಭಾರೀ ಬೆಲೆಬಾಳುವ ವಜ್ರ, ಚಿನ್ನಾಭರಣಗಳನ್ನು ಹೊಂದಿರುವ ಅನಂತ ಪದ್ಮನಾಭನಿಗೆ ಸೇರಿದ ಆಭರಣಗಳಲ್ಲಿದ್ದ ಈ ವಜ್ರದ ಹರಳುಗಳು ನಾಪತ್ತೆಯಾಗಿದ್ದವು. ಅಲಂಕಾರದ ವೇಳೆ ಬಳಸ ಲಾಗುತ್ತಿದ್ದ ವಜ್ರದ ಹರಳುಗಳು ವರ್ಷದ ಹಿಂದೆ ಕಾಣದೇ ಇದ್ದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.
ಪ್ರಾಥಮಿಕ ತನಿಖೆ ಪ್ರಕಾರ ಈ ಹರಳುಗಳು ಕಳುವಾಗಿರಲಿಲ್ಲ. ಅವು ಕಣ್ಣಿಗೆ ಕಾಣದ ಸ್ಥಳದಲ್ಲಿ ಬಿದ್ದಿದ್ದವು. ತನಿಖೆ ವೇಳೆ ಇವು ಪತ್ತೆಯಾಗಿವೆ. ದೇಗುಲದಲ್ಲಿದ್ದ ಅಮೂಲ್ಯ 26 ಹರಳುಗಳಲ್ಲಿ ಈ 12 ಹರಳುಗಳು ಕೂಡ ಸೇರಿವೆ ಎಂದು ಅಪರಾಧ ಪತ್ತೆ ದಳದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ವಜ್ರಗಳು ಅನಂತ ಪದ್ಮನಾಭ ದೇಗುಲದ ನೆಲಮಾಳಿಗೆಯಲ್ಲಿನ “ಬಿ’ ಮತ್ತು “ಎಫ್’ ಕೋಣೆ ಗಳಲ್ಲಿ ಪತ್ತೆಯಾಗಿದ್ದವು. ಪೊಲೀಸರಿಗೆ ದೂರು ಕೊಟ್ಟಾಗ ದೇಗುಲ ನಿರ್ವಾಹಕರು 22 ವಜ್ರಗಳು ಕಾಣೆಯಾಗಿವೆ ಎಂದು ಹೇಳಿದ್ದರು. ಆದರೆ ತನಿಖೆ ನಡೆಸುತ್ತಿದ್ದ ಅಧಿಕಾರಿಗಳು ಒಟ್ಟು ಇದ್ದ 26 ವಜ್ರಗಳಲ್ಲಿ 12 ಮಾತ್ರ ಕಾಣೆಯಾಗಿದ್ದವು. ಅವುಗಳನ್ನು ಯಾರೂ ಕದ್ದಿರಲಿಲ್ಲ. ಬದಲಾಗಿ ಎಲ್ಲೋ ಇಟ್ಟು ಮರೆತುಬಿಡಲಾಗಿತ್ತು. ಇದೀಗ ಸಿಕ್ಕಿವೆ ಎಂದು ತನಿಖೆ ನಡೆಸುತ್ತಿದ್ದ ಅಧಿಕಾರಿ ಐಜಿ ಎಸ್. ಶ್ರೀಜಿತ್ ಹೇಳಿದ್ದಾರೆ.
ಜುಲೈಯಲ್ಲಿ ಸುಪ್ರೀಂ ಕೋರ್ಟ್‌ಗೆ ಮಾಹಿತಿ
ದೇಗುಲದಿಂದ ವಜ್ರಗಳು ಕಾಣೆಯಾಗಿದ್ದ ಬಗ್ಗೆ ಕಳೆದ ಜುಲೈಯಲ್ಲಿ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಲಾಗಿತ್ತು. ಪೊಲೀಸರ ಪರ ವಾದ ನಡೆಸುತ್ತಿರುವ ಹಿರಿಯ ವಕೀಲ ಗೋಪಾಲ್ ಸುಬ್ರಹ್ಮಣ್ಯಂ ಅವರು, ವಜ್ರಗಳು ಕಾಣೆಯಾದ ಬಗ್ಗೆ ಮಾಹಿತಿ ನೀಡಿದ್ದಲ್ಲದೆ, ಇದಕ್ಕೆ ದೇಗುಲದ ನಿರ್ಲಕ್ಷ éದ ನಿರ್ವಹಣೆಯೇ ಕಾರಣ ಎಂದು ಹೇಳಿದ್ದರು. ಅಲ್ಲದೆ ಕಳೆದ ವರ್ಷ 189 ಕೋಟಿ ರೂ. ಮೌಲ್ಯದ ಚಿನ್ನವೂ ಕಣ್ಮರೆಯಾಗಿತ್ತು ಎಂದು ಅವರು ಕೋರ್ಟ್‌ಗೆ ಮಾಹಿತಿ ನೀಡಿದ್ದರು.