Advertisement

ಸಕಾಲ ವ್ಯಾಪ್ತಿಗೆ ಬರಲಿದೆ ಸಚಿವಾಲಯ

10:04 AM Dec 18, 2019 | Lakshmi GovindaRaj |

ಬೆಂಗಳೂರು: ಸಚಿವಾಲಯದಿಂದ ಸಾರ್ವಜನಿಕರಿಗೆ ಲಭ್ಯವಾಗುವ ಕೆಲ ಸೇವೆಗಳನ್ನು ಸಕಾಲ ವ್ಯಾಪ್ತಿಯೊಳಗೆ ತರುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಒಪ್ಪಿಗೆ ನೀಡಿದ್ದಾರೆ. ಕಾರ್ಯಕ್ರಮ ಅನುಷ್ಠಾನ ಸಂಬಂಧ ಅತಿಶೀಘ್ರದಲ್ಲಿ ಕಾರ್ಯಾರಂಭ ಮಾಡಲಾಗುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಮತ್ತು ಸಕಾಲ ಸಚಿವ ಎಸ್‌.ಸುರೇಶ್‌ ಕುಮಾರ್‌ ಹೇಳಿದರು.

Advertisement

ಸಕಾಲ ಪ್ರಗತಿ ಕುರಿತ ಅಕ್ಟೋಬರ್‌ ಮತ್ತು ನವೆಂಬರ್‌ ತಿಂಗಳ ವರದಿ ಬಿಡುಗಡೆ ಮಾಡಿ, ಸಚಿವಾಲಯಗಳ ಮಟ್ಟದಲ್ಲಿ ಕಡತ ವಿಲೇವಾರಿ ವಿಳಂಬವಾಗುತ್ತಿರುವ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದೆವು. ಈ ವೇಳೆ ಸಚಿವಾಲಯವನ್ನು ಸಕಾಲ ವ್ಯಾಪ್ತಿಗೆ ತರಲು ಒಪ್ಪಿಗೆ ಸೂಚಿಸಿದ್ದರು. ಅದರಂತೆ ಕಾರ್ಯಾರಂಭ ಮಾಡಿದ್ದೇವೆ ಎಂದರು. ಜನವರಿ ವೇಳೆಗೆ ಸಕಾಲ ಯೋಜನೆಯನ್ನು ಮತ್ತಷ್ಟು ಚುರುಕುಗೊಳಿಸಲು ಕಾರ್ಯಕ್ರಮ ರೂಪಿಸ ಲಾಗುತ್ತದೆ. ಕಾಲಮಿತಿಯೊಳಗೆ ಜನ ಸಾಮಾನ್ಯರಿಗೆ ಸರ್ಕಾರಿ ಸೇವೆ ಒದಗಿಸುವುದು ಹಾಗೂ ಯಾವುದೇ ಸೇವೆ ನಿರಾಕರಣೆಯಾಗದಂತೆ ನೋಡಿಕೊಳ್ಳುವುದು ಇದರ ಉದ್ದೇಶ ಎಂದು ಹೇಳಿದರು.

ಈವರೆಗೆ ಸಕಾಲ ಯೋಜನೆಯಡಿ 20,51,28,579 ಅರ್ಜಿ ಸ್ವೀಕರಿಸಲಾಗಿದೆ. ಅದರಲ್ಲಿ 20,45,31,702 ಅರ್ಜಿ ವಿಲೇವಾರಿಯಾಗಿದೆ. ಅಕ್ಟೋಬರ್‌ನಲ್ಲಿ 23,51,728, ನವೆಂಬರ್‌ನಲ್ಲಿ 21,68,068 ಅರ್ಜಿ ಸ್ವೀಕರಿಸಲಾಗಿದ್ದು, ಕ್ರಮವಾಗಿ 24,02,861 ಹಾಗೂ 22,35,357 ಅರ್ಜಿ ಈ ಎರಡು ತಿಂಗಳಲ್ಲಿ ವಿಲೇವಾರಿಯಾಗಿದೆ. ಅಕ್ಟೋಬರ್‌ನಲ್ಲಿ 14,307 ಹಾಗೂ ನವೆಂಬರ್‌ನಲ್ಲಿ 20,601 ಅರ್ಜಿ ಅವಧಿ ಮೀರಿ ಬಾಕಿಯಾಗಿ ಉಳಿದುಕೊಂಡಿದೆ ಎಂದು ವಿವರ ನೀಡಿದರು.

ಅಕ್ಟೋಬರ್‌ನಲ್ಲಿ ಶೇ.96.91 ಮತ್ತು ನವೆಂಬರ್‌ನಲ್ಲಿ 96.40 ಅರ್ಜಿ ವಿಲೇವಾರಿಯಾಗಿದೆ. ಅಕ್ಟೋಬರ್‌ನಲ್ಲಿ ಚಿಕ್ಕಬಳ್ಳಾಪುರ, ಚಾಮರಾಜನಗರ ಹಾಗೂ ಉಡುಪಿ ಮತ್ತು ನವೆಂಬರ್‌ನಲ್ಲಿ ಯಾದಗಿರಿ, ಚಿಕ್ಕಬಳ್ಳಾಪುರ ಹಾಗೂ ಉಡುಪಿ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದಿದೆ. ಹಾಗೆಯೇ ಅಕ್ಟೋಬರ್‌ನಲ್ಲಿ ಬೆಂಗಳೂರು ನಗರ, ಬೀದರ್‌, ರಾಯಚೂರು ನಗರ, ವಿಜಯಪುರ ಮತ್ತು ಕೊಪ್ಪಳ ಕ್ರಮವಾಗಿ ಕೊನೆಯ ಸ್ಥಾನ ಪಡೆದುಕೊಂಡಿವೆ ಎಂದರು.

ಅಕ್ಟೋಬರ್‌ನಲ್ಲಿ 72,522, ನವೆಂಬರ್‌ನಲ್ಲಿ 78,325 ಅರ್ಜಿ ವಿಳಂಬವಾಗಿ ವಿಲೇವಾರಿ ಮಾಡ ಲಾಗಿದೆ. ಅಕ್ಟೋಬರ್‌ನಲ್ಲಿ ಶೇ.6.16 ಮತ್ತು ನವೆಂಬರ್‌ನಲ್ಲಿ ಶೇ.6.69 ಅರ್ಜಿ ತಿರಸ್ಕೃತಗೊಂಡಿವೆ. ಅಕ್ಟೋಬರ್‌ನಲ್ಲಿ ಬೀದರ್‌ನಲ್ಲಿ ಶೇ.19.23, ಕೊಪ್ಪಳದಲ್ಲಿ 11.25 ಹಾಗೂ ರಾಯಚೂರಿನಲ್ಲಿ 10.67 ಮತ್ತು ನವೆಂಬರ್‌ನಲ್ಲಿ ಬೀದರ್‌ನಲ್ಲಿ ಶೇ.9.2, ರಾಮನಗರದಲ್ಲಿ ಶೇ.8.4 ಹಾಗೂ ಕೊಪ್ಪಳದಲ್ಲಿ ಶೇ.7.11 ಅರ್ಜಿ ತಿರಸ್ಕೃತಗೊಂಡಿವೆ ಎಂದರು.

Advertisement

ಅಕ್ಟೋಬರ್‌ನಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸಗಾರರ ಕಲ್ಯಾಣ ಮಂಡಳಿ, ಕೈಗಾರಿಕಾ ಅಭಿವೃದ್ಧಿ ಮಂಡಳಿ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಹೆಚ್ಚು ಅರ್ಜಿಗಳು ತಿರಸ್ಕೃತಗೊಂಡಿವೆ. ನವೆಂಬರ್‌ನಲ್ಲಿ ಮಾಹಿತಿ ತಂತ್ರಜ್ಞಾನ ಇಲಾಖೆ, ವಿದ್ಯುತ್‌ ಪರಿವೀಕ್ಷಣಾ ಇಲಾಖೆ ಮತ್ತು ಮುದ್ರಣ ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ನಿರ್ದೇಶನಾಯಲದ ಅರ್ಜಿ ಹೆಚ್ಚು ತಿರಸ್ಕೃತಗೊಂಡಿವೆ ಎಂದು ಸಚಿವರು ಹೇಳಿದರು.

ಪಠ್ಯದಲ್ಲಿ ಟಿಪ್ಪು: ವರದಿ ಪರಾಮರ್ಶಿಸಿ ಕ್ರಮ
ಬೆಂಗಳೂರು: ಶಾಲಾ ಮಕ್ಕಳ ಪಠ್ಯ ಪುಸ್ತಕದಲ್ಲಿನ ಟಿಪ್ಪು ಕುರಿತ ಅಂಶವನ್ನು ಕೈಬಿಡಬೇಕೇ, ಬೇಡವೇ ಎಂಬ ಬಗ್ಗೆ ತಜ್ಞರ ಸಮಿತಿ ಸಿದ್ಧಪಡಿಸಿರುವ ವರದಿ ಈವರೆಗೂ ಸರ್ಕಾರಕ್ಕೆ ತಲುಪಿಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ತಜ್ಞರ ವರ ದಿಯು ತಮಗಾಗಲಿ ಅಥವಾ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಯವರಿಗಾಗಲಿ ತಲುಪಿಲ್ಲ. ನಮಗೆ ವರದಿ ಸಲ್ಲಿಕೆ ಯಾದ ನಂತರ ಅದರಲ್ಲಿರುವ ಅಂಶಗಳ ಬಗ್ಗೆ ಪರಾಮರ್ಶೆ ನಡೆಸಿ ತೀರ್ಮಾನ ಮಾಡಲಾಗುತ್ತದೆ ಎಂದು ಹೇಳಿದರು. ತಜ್ಞರ ವರದಿ ಬಗ್ಗೆ ಮಾಧ್ಯಮ ಗಳಲ್ಲಿ ಮಾಹಿತಿ ಬಂದಿರಬಹುದು. ಆದರೆ, ವರದಿಯಂತೂ ಕೈ ಸೇರಿಲ್ಲ. ಹೀಗಾಗಿ ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.

ಟಿಪ್ಪು ವಿಚಾರವನ್ನು ಪಠ್ಯದಿಂದ ಕೈಬಿಡಬೇಕೆಂದು ಶಾಸಕ ಅಪ್ಪಚ್ಚು ರಂಜನ್‌ ಅವರು ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದರು. ಬಳಿಕ ಸಚಿವರು ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಗೆ ಸೂಚನೆ ನೀಡಿ ತಜ್ಞರಿಂದ ಅಭಿಪ್ರಾಯ ಪಡೆಯುವಂತೆ ಸೂಚಿಸಿದ್ದರು. ಸಚಿವರ ಸೂಚನೆಯಂತೆ ಪಠ್ಯ ರಚನಾ ಸಮಿತಿ ಮತ್ತು ಇಲಾಖಾ ಅಧಿಕಾರಿಗಳ ನ್ನೊಳಗೊಂಡ ಸಮಿತಿ ಸಭೆ ನಡೆಸಿ, ಪತ್ರ ಬರೆದ ಶಾಸಕ ಅಭಿಪ್ರಾಯವನ್ನೂ ಪಡೆದು ವರದಿ ಸಿದ್ಧಪಡಿಸಿತ್ತು. ತಜ್ಞರ ಸಮಿತಿಯು ಡಿಎಸ್‌ಇಆರ್‌ಟಿಗೆ ವರದಿ ಸಲ್ಲಿಸಿದೆ ಎಂದು ಹೇಳಲಾಗುತ್ತಿದೆ.

7ನೇ ತರಗತಿ ಪಬ್ಲಿಕ್‌ ಪರೀಕ್ಷೆ: ಶೀಘ್ರ ನಿರ್ಧಾರ
ಬೆಂಗಳೂರು: ಏಳನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್‌ ಪರೀಕ್ಷೆ ನಡೆಸುವ ಸಂಬಂಧ 2 ದಿನದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ಸಚಿವ ಸುರೇಶ್‌ ಕುಮಾರ್‌ ಹೇಳಿದರು. ಏಳನೇ ತರಗತಿಗೆ ಸಾರ್ವತ್ರಿಕ ಪರೀಕ್ಷೆ ನಡೆಸುವುದಕ್ಕೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಜತೆಗೆ ಕೆಲ ಖಾಸಗಿ ಶಾಲೆಗಳು ಆಕ್ಷೇಪಿಸಿದ್ದವು. ಹೀಗಾಗಿ ಇನ್ನೆರಡು ದಿನಗಳಲ್ಲಿ ಸರ್ಕಾರದಿಂದ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದ್ದೇವೆ ಎಂದರು.

10ನೇ ತರಗತಿ ಪಬ್ಲಿಕ್‌ ಪರೀಕ್ಷೆಗೆ ಮುನ್ನ ಮಕ್ಕಳಲ್ಲಿ ವಿಶ್ವಾಸ ತುಂಬಿಸಲು ಮತ್ತು ಪರೀಕ್ಷೆಯ ಬಗ್ಗೆ ಅರಿವು ಮೂಡಿಸಲು 7ನೇ ತರಗತಿಯಲ್ಲಿ ಸಾರ್ವತ್ರಿಕ ಪರೀಕ್ಷೆ ಮಾಡಲಾಗುತ್ತಿದೆ. ಯಾರನ್ನೂ ಅನುತ್ತೀರ್ಣಗೊಳಿಸಲ್ಲ ಎಂಬುದನ್ನು ಆಯೋಗಕ್ಕೆ ಖಾತ್ರಿ ಮಾಡಿದ್ದೇವೆ ಎಂದು ಹೇಳಿದರು. 2009ರ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ 1ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಈ ರೀತಿ ಪರೀಕ್ಷೆ ನಡೆಸಲು ಅವಕಾಶವಿಲ್ಲ.

ಜತೆಗೆ ಇಂಥ ಪ್ರಯೋಗದಿಂದ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಒತ್ತಡ ಹೆಚ್ಚಾಗಲಿದೆ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿತ್ತು. ಜತೆಗೆ ತನ್ನ ಪರಮಾಧಿಕಾರವನ್ನು ಪ್ರಸ್ತಾಪಿಸಿ, ಏಳು ದಿನಗಳೊಳಗೆ ಸ್ಪಷ್ಟನೆ ನೀಡುವಂತೆ ಇಲಾಖೆಗೆ ತಾಕೀತು ಮಾಡಿತ್ತು. ತಿಂಗಳಾದರೂ ಸ್ಪಷ್ಟನೆ ಕೊಟ್ಟಿರಲಿಲ್ಲ. ಈಗ ಸ್ಪಷ್ಟನೆ ನೀಡಿದ್ದೇವೆ ಎಂದು ಸಚಿವರೇ ಹೇಳಿಕೆ ನೀಡಿದ್ದಾರೆ.

ನಾಗರಿಕರ ಮನೆ ಬಾಗಿಲಿಗೆ ಸರ್ಕಾರದ ಸೇವೆಗಳು- ಅಡಿಯಲ್ಲಿ ಪ್ರಸ್ತುತ 28 ಸೇವೆಗಳನ್ನು ಒದಗಿಸಲಾಗುತ್ತಿದೆ. ಈ ಯೋಜನೆಯನ್ನು ಶೀಘ್ರದಲ್ಲಿ ಬೆಂಗಳೂರಿನ ವಿಧಾನಸಭಾ ಕ್ಷೇತ್ರಗಳಾದ ಬೊಮ್ಮನಹಳ್ಳಿ, ರಾಜಾಜಿನಗರ ಮತ್ತು ಮಹದೇವಪುರದಲ್ಲಿ ಜನಸೇವಕ ಯೋಜನೆ ಅನುಷ್ಠಾನ ಮಾಡಲಾಗುತ್ತದೆ.
-ಸುರೇಶ್‌ ಕುಮಾರ್‌, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next