ಔರಾದ: ಬೀದರ-ಔರಾದ ರಸ್ತೆಯಲ್ಲಿ ಬಿದ್ದ ಗುಂಡಿ ಮುಚ್ಚುವುದೇ ಕೇಂದ್ರ ಹಾಗೂ ರಾಜ್ಯದ ಇಬ್ಬರ ಸಚಿವರ ಅಭಿವೃದ್ಧಿ ಕೆಲಸವಾಗಿದೆ ಎಂದು ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮೀನಾಕ್ಷಿ ಸಂಗ್ರಾಮ ವ್ಯಂಗ್ಯವಾಡಿದರು.
ಔರಾದ-ಕಮಲನಗರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಪರ ಸೋಮವಾರ ಪ್ರಚಾರ ನಡೆಸಿ ಅವರು ಮಾತನಾಡಿದರು.
ಔರಾದ ಪಪಂ ಕಚೇರಿಯಿಂದ ಹಿಡಿದು ದೇಶದಲ್ಲಿ ಬಿಜೆಪಿ ಅಧಿಕಾರವಿದೆ. ಅದರಂತೆ ಕೇಂದ್ರ ಹಾಗೂ ರಾಜ್ಯದ ಇಬ್ಬರು ಸಚಿವರು ಕೂಡ ಔರಾದ ತಾಲೂಕಿನವರಾಗಿದ್ದು, ಇಬ್ಬರು ಸಚಿವರು 10 ವರ್ಷಗಳ ಅವಧಿ ಯಲ್ಲಿ 40 ಕಿ.ಮೀ ರಸ್ತೆ ಮಾಡಲು ಸಾಧ್ಯವಾಗಿಲ್ಲ. ಬದಲಿಗೆ ಬೀದರ- ಔರಾದ ರಸ್ತೆಯಲ್ಲಿ ಬಿದ್ದ ಗುಂಡಿ ಮುಚ್ಚುವುದೇ ಇವರ ಸಾಧನೆಯಾಗಿದೆ ಎಂದು ಕುಟುಕಿದರು.
ತಾಲೂಕು ಹಾಗೂ ಬೀದರ ಅಭಿವೃದ್ಧಿಗಾಗಿ ಎಲ್ಲ ಸದಸ್ಯರು ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲರಿಗೆ ಮತ ನೀಡಬೇಕು. ಚುನಾವಣೆ ಪೂರ್ವದಲ್ಲಿ ಯಾವುದೇ ಆಸೆ-ಆಮಿಷಕ್ಕೆ ಬಲಿಯಾಗದೇ ತಮ್ಮ ಅಮೂಲ್ಯ ಮತ ಹಾಳು ಮಾಡಿಕೊಳ್ಳಬಾರದು ಎಂದರು.
ಅಭ್ಯರ್ಥಿ ಭೀಮರಾವ್ ಪಾಟೀಲ್ ಮಾತನಾಡಿ,ನಾನು-ನನ್ನ ಕುಟುಂಬದ ಸದಸ್ಯರು ಎಂದು ಅಧಿಕಾರಕ್ಕಾಗಿ ಆಸೆ ಪಟ್ಟು ರಾಜಕೀಯಕ್ಕೆ ಬಂದವರಲ್ಲ. ಜಿಲ್ಲೆಯ ಅಭಿವೃದ್ಧಿಗೆ ಪೂರಕ ಯೋಜನೆ ತರಲು ಹಾಗೂ ನಿಸ್ವಾರ್ಥದಿಂದ ಜನ ಸೇವೆ ಮಾಡಬೇಕೆನ್ನುವ ಉದ್ದೇಶದಿಂದ ರಾಜಕೀಯಕ್ಕೆ ಬಂದಿದ್ದೇನೆ ಎಂದು ತಿಳಿಸಿ ಮತ ನೀಡುವಂತೆ ಕೋರಿದರು.
ಈ ವೇಳೆ ಕಾಂಗ್ರೆಸ್ ತಾಲೂಕು ಅಧ್ಯಕ್ಷ ರಾಜಕುಮಾರ ಹಲಬರ್ಗೆ, ಆನಂದ ಚವ್ಹಾಣ, ಸೋಮನಾಥ ಪಾಟೀಲ್, ಡಾ| ಎಲ್. ಸೋರಳಿಕರ್, ವಿಶ್ವನಾಥ, ಕಾಶಿನಾಥ ಜಿರಗೆ, ಜಗನಾಥ ಪಸರಗೆ, ಹಣಮಂತ ಕುಶನೂರೆ, ರಾಜಕುಮಾರ ಕೋರೆ, ಭದ್ರಿನಾಥ ಸ್ವಾಮಿ, ಶರಣು ಪಾಟೀಲ್, ಸಂಜುಕುಮಾರ ಪಾಟೀಲ್ ಇತರರಿದ್ದರು.