Advertisement
ಹದಿನೈದಕ್ಕೂ ಹೆಚ್ಚು ಶಾಸಕರು ಹಿರಿಯ ನಾಯಕ ಎಚ್.ಕೆ. ಪಾಟೀಲ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ, ಸಂಪುಟ ವಿಸ್ತರಣೆಗೆ ಮೀನಾ-ಮೇಷ ಎಣಿಸುತ್ತಿರುವ ಬಗ್ಗೆ ಪಕ್ಷದ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಮೊದಲ ಬಾರಿ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ನಿರ್ಲಕ್ಷ್ಯಕ್ಕೊಳಗಾಗಿದ್ದ ಸತೀಶ್ ಜಾರಕಿಹೊಳಿ, ರೋಷನ್‌ಬೇಗ್, ತನ್ವೀರ್ ಸೇs… ಸೇರಿದಂತೆ ಹದಿನೈದಕ್ಕೂ ಹೆಚ್ಚು ಶಾಸಕರು ಎಚ್.ಕೆ. ಪಾಟೀಲ್ ನೇತೃತ್ವದಲ್ಲಿ ಅತೃಪ್ತರು ಪಕ್ಷದ ನಾಯಕರ ವಿರುದ್ಧ ಬಂಡಾಯ ಸಾರಿದ್ದರು. ಆ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಎಚ್.ಕೆ. ಪಾಟೀಲ್ ಅವರನ್ನು ತಮ್ಮ ಬಳಿ ಕರೆಸಿಕೊಂಡು ಪಕ್ಷದಲ್ಲಿ ಉನ್ನತ ಸ್ಥಾನ ನೀಡುವ ಭರವಸೆ ನೀಡಿದ್ದರು. ಅಲ್ಲದೆ ಅವರ ಜೊತೆಗೆ ಗುರುತಿಸಿಕೊಂಡಿದ್ದ ಕನಿಷ್ಠ ನಾಲ್ವರು ಶಾಸಕರಿಗೆ ಸಚಿವ ಸ್ಥಾನ ಉಳಿದವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವ ಭರವಸೆ ನೀಡಿದ್ದರು ಎಂದು ತಿಳಿದು ಬಂದಿದೆ. ಶೀಘ್ರವೇ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳಿ ನಾಲ್ಕು ತಿಂಗಳಿನಿಂದ ಅನಗತ್ಯ ಕಾರಣ ನೀಡಿ ಸಂಪುಟ ವಿಸ್ತರಣೆ ಮುಂದೂಡುತ್ತಿರುವುದರಿಂದ ಸಚಿವಾಕಾಂಕ್ಷಿಗಳು ಬೇಸರಗೊಂಡಿದ್ದಾರೆ ಎನ್ನಲಾಗಿದೆ.
Related Articles
ರಾಜ್ಯದ ಐದು ಕ್ಷೇತ್ರಗಳ ಉಪ ಚುನಾವಣೆ ಮುಕ್ತಾಯವಾಗಿರುವುದರಿಂದ ಡಿಸೆಂಬರ್‌ನಲ್ಲಿ ನಡೆಯುವ ಬೆಳಗಾವಿಯ ಚಳಿಗಾಲದ ಅಧಿವೇಶನ ಆರಂಭಕ್ಕೂ ಮುನ್ನವೇ ಸಂಪುಟ ವಿಸ್ತರಣೆ ಮಾಡಬೇಕು. ಇಲ್ಲದಿದ್ದರೆ, ಅಧಿವೇಶನ ಸಂದರ್ಭದಲ್ಲಿ ಸರ್ಕಾರದ ತೀರ್ಮಾನಗಳ ವಿರುದ್ಧ ತಟಸ್ಥ ನಿಲುವು ತಾಳಲು ಅನೇಕ ಶಾಸಕರು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
Advertisement
ತಮ್ಮ ಆಪ್ತರಿಗೆ ಪಕ್ಷದ ನಾಯಕರು ನೀಡಿದ ಭರವಸೆ ಈಡೇರಿಸಲು ವಿಫಲವಾಗಿರುವುದರಿಂದ ಎಚ್.ಕೆ. ಪಾಟೀಲ್ ಕೂಡ ಪಕ್ಷದ ನಾಯಕರ ಬಗ್ಗೆ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದ್ದು, ಈ ಕುರಿತು ಹೈ ಕಮಾಂಡ್ ನಾಯಕರ ಜೊತೆ ಮಾತುಕತೆಗೂ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.