Advertisement

ಸಚಿವ ಸ್ಥಾನ ಹಂಚಿಕೆಯಲ್ಲಿ ಹಸ್ತಕ್ಷೇಪ ಮಾಡಲ್ಲ

11:57 PM Dec 16, 2019 | Team Udayavani |

ಚಿತ್ರದುರ್ಗ: ಸಚಿವ ಸ್ಥಾನ ಹಂಚಿಕೆ ಮುಖ್ಯಮಂತ್ರಿಗಳ ಪರಮಾಧಿಕಾರ. ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್‌ ಕಟೀಲು ಹೇಳಿದರು. ಇಲ್ಲಿನ ವಿವಿಧ ಮಠಗಳಿಗೆ ಭೇಟಿ ನೀಡಲು ಸೋಮವಾರ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಸಂಪುಟ ರಚನೆ, ನಿರ್ವಹಣೆ ಎಲ್ಲವೂ ಸಿಎಂ ಯಡಿಯೂರಪ್ಪ ಅವರಿಗೆ ಸೇರಿರುವ ಅಧಿಕಾರ. ಅವರು ಎಲ್ಲವನ್ನೂ ಸರಿಪಡಿಸುತ್ತಾರೆ.

Advertisement

ಸಹಜವಾಗಿ ಎಲ್ಲ ಜಿಲ್ಲೆಗಳ ಎಲ್ಲ ಶಾಸಕರಿಗೂ ಸಚಿವನಾಗಬೇಕು ಎಂಬ ಆಸೆ ಇರುತ್ತದೆ. ಎಲ್ಲ ಸಮುದಾಯಗಳಿಗೂ ನ್ಯಾಯ ಒದಗಿಸಿ ಸಂದರ್ಭಕ್ಕೆ ತಕ್ಕಂತೆ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಮಸೂದೆಗೆ ಮತದಾರರು ಹಾಗೂ ಜನಸಾಮಾನ್ಯರಲ್ಲಿ ವಿರೋಧ ಇಲ್ಲ. ಇದರ ಲಾಭ ಪಡೆಯುವ ಉದ್ದೇಶಕ್ಕಾಗಿ ಕಾಂಗ್ರೆಸ್‌ ಈ ರೀತಿ ವಿರೋಧ ಮಾಡುತ್ತಿದೆ. ಇದರಿಂದ ಯಾರಿಗೂ ಅನ್ಯಾಯ ಆಗಿಲ್ಲ.

ಈ ಮಸೂದೆಯಿಂದ ದೇಶದಲ್ಲಿರುವ ಮುಸ್ಲಿಂ ಸೇರಿದಂತೆ ಯಾವುದೇ ಧರ್ಮಿಯರಿಗೂ ತೊಂದರೆಯಾಗುವುದಿಲ್ಲ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ಪಕ್ಷವೇ ಅಲ್ಪಸಂಖ್ಯಾತವಾಗುವ ಆತಂಕದಲ್ಲಿದೆ. ಪೌರತ್ವ ಕಾಯ್ದೆ ವಿಚಾರವಾಗಿ ಎನ್‌ಡಿಎ ಮಿತ್ರ ಪಕ್ಷಗಳಲ್ಲಿ ಸಮಸ್ಯೆ ಇಲ್ಲ. ಈ ವಿಷಯವಾಗಿ ಯಾರ ವಿರೋಧವಿಲ್ಲ. ಕೆಲ ವಿಚಾರಗಳಲ್ಲಿ ವ್ಯತ್ಯಾಸವಾಗಿದೆ. ಅದನ್ನು ಸರಿಪಡಿಸಲಾಗುವುದು ಎಂದರು.

ಮುರುಘಾ ಮಠದ ಡಾ| ಶಿವಮೂರ್ತಿ ಮುರುಘಾ ಶರಣರು, ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಹಾಗೂ ಭೋವಿ ಗುರುಪೀಠ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ ಆಶೀರ್ವಾದ ಪಡೆದ ಕಟೀಲ್‌ ನಂತರ ದಾವಣಗೆರೆಗೆ ತೆರಳಿದರು.

ಕೇಳಿದ್ದು ಸಿಗಲ್ಲ; ಹೇಳಿದ್ದನ್ನು ಪಾಲಿಸಬೇಕಷ್ಟೆ!
ದಾವಣಗೆರೆ: ಬಿಜೆಪಿ ಶಿಸ್ತುಬದ್ಧ ಪಕ್ಷವಾಗಿದ್ದು, ಮೂರು ಅಂಶಗಳ ಆಧಾರದಲ್ಲಿ ಸಂಘಟಿತವಾಗಿದೆ. ಕೇಳಿದ್ದನ್ನು ಪಕ್ಷ ಕೊಡುವುದಿಲ್ಲ. ಬದಲಾಗಿ ಪಕ್ಷ ಹೇಳಿದ್ದನ್ನು ಪಾಲಿಸಬೇಕಿದೆ ಎಂದು ನಳಿನಕುಮಾರ್‌ ಕಟೀಲು ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಸೋಮವಾರ ಜಿಲ್ಲಾ ಬಿಜೆಪಿ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಬಿಜೆಪಿ ಕಾರ್ಯಪದ್ಧತಿ, ವಿಚಾರ-ಸಿದ್ಧಾಂತ ಹಾಗೂ ಹಿರಿಯರ ಆದರ್ಶ ಈ ಮೂರು ಅಂಶಗಳ ಆಧಾರ ಹಾಗೂ ಯಾವುದೇ ವಿಷಯದಲ್ಲೂ ರಾಜಿ ಆಗದೇ ಇರುವುದರಿಂದ ಸದೃಢವಾಗಿ ಬೆಳೆದಿದೆ. ಹಾಗಾಗಿ ಪಕ್ಷ ಹೇಳಿದ್ದನ್ನು ಮಾತ್ರ ಪಾಲಿಸುವುದು ಎಲ್ಲರಿಗೂ ಅನಿವಾರ್ಯ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next