Advertisement

ಕರ್ನಾಟಕದ ಗಣಿಗಾರಿಕೆ ದೇಶಕ್ಕೆ ಮಾದರಿ: ಡಾ|ರಾವ್‌

10:41 AM Mar 06, 2019 | Team Udayavani |

ಸಂಡೂರು: ಗಣಿಗಾರಿಕೆ ನಮ್ಮ ಪುರಾತನರಿಂದ ಬಂದಿರುವ ಉದ್ಯಮ. ಗಣಿಗಾರಿಕೆ ಹಾಗೂ ಮನುಷ್ಯನ ನಡುವೆ ಅವಿನಾಭಾವ ಸಂಬಂಧ ಹೊಂದಿದೆ ಎಂದು ಕೇಂದ್ರ ಗಣಿಮಂತ್ರಾಲಯದ ಹೆಚ್ಚುವರಿ ಕಾರ್ಯದರ್ಶಿ ಡಾ| ಕೆ.ರಾಜೇಶ್ವರ ರಾವ್‌ ಅಭಿಪ್ರಾಯಪಟ್ಟರು.

Advertisement

ಪಟ್ಟಣದ ಸ್ಮಯೋರ್‌ ಗಣಿಕಂಪನಿ ವತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಗಣಿ ಪರಿಸರ ಮತ್ತು ಪರಿಸರ ಸಪ್ತಾಹದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಪ್ತಾಹದ ಮುಖ್ಯ ಉದ್ದೇಶ ಪರಿಸರ ಸಂರಕ್ಷಣೆಯೊಂದಿಗೆ ಉತ್ತಮ ಗಣಿಗಾರಿಕೆ ಮಾಡುವುದಾಗಿದೆ. ಅಲ್ಲದೆ, ಎಂ.ವೈ. ಘೋರ್ಪಡೆಯವರು ಈ ಹಿಂದೆ ಸಾಮಾಜಿಕ ಮೌಲ್ಯಗಳೊಂದಿಗೆ ಗಣಿಗಾರಿಕೆ ನಡೆಸಿದ್ದು, ಇಡೀ ದೇಶಕ್ಕೆ ಮಾದರಿಯಾಗಿದೆ ಎಂದರು.

ಕರ್ನಾಟಕದ ಗಣಿಗಾರಿಕೆ ದೇಶಕ್ಕೆ ಮಾದರಿಯಾಗಿದೆ. ದೇಶದ ಖನಿಜ ಸಂಪತ್ತು ನಾಶವಾಗದಂತೆ ಮುಂದಿನ ಪೀಳಿಗೆಗೆ ಉಳಿಯುವ ಕಾರ್ಯ ಮಾಡಬೇಕು. ಪರಿಸರ ನಾಶ ಮಾಡಿದರೆ ನಮ್ಮ ನಾಶ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಕೆ ನೀಡಿದರು. 

ಕೇಂದ್ರ ಸರ್ಕಾರ ಗಣಿ ನೀತಿಯಲ್ಲಿ ಹಲವಾರು ಬದಲಾವಣೆಗಳನ್ನು ಜಾರಿಗೆ ತರುವ ಮೂಲಕ ಪಾರದರ್ಶಕತೆ ಉಂಟು ಮಾಡಿದೆ. ದೇಶದ ಆರ್ಥಿಕ ವ್ಯವಸ್ಥೆಗೆ ಅತಿ ಹೆಚ್ಚು ಆದಾಯ ತರುವಂತಹ ಉದ್ಯಮವಾಗಿ ಬೆಳೆಯುತ್ತಿರುವುದು ಶುಭ ಸಂಕೇತವಾಗಿದೆ. ಮಾನವ ಸಂಪನ್ಮೂಲ ಬಳಕೆ,
ಸರಿಯಾದ ಲೆಕ್ಕಾಚಾರ, ಉತ್ತಮ ಅಭಿವೃದ್ಧಿಗೆ ನಾಂದಿಯಾಗುತ್ತದೆ ಎಂದು ತಿಳಿಸಿದರು.

ಇ-ಟೆಂಡರ್‌ ವ್ಯವಸ್ಥೆಯಲ್ಲಿ ಸಮಸ್ಯೆ ಇದೆ ಎಂದು ತಿಳಿದು ಬಂದಿದೆ. ಇದು ಜಾರಿಗೆ ಬಂದು ಕೇವಲ ಮೂರು ವರ್ಷಗಳಾಗಿವೆ. ಇದರಲ್ಲಿ ಬಹಳಷ್ಟು ಬದಲಾವಣೆಗಳನ್ನು ತರಲಾಗುತ್ತಿದೆ. ಅಲ್ಲದೆ, ಕೆಲವು ಗಣಿಗಾರಿಕೆ ನಿಂತಿವೆ. ಇದಕ್ಕೆ ತಾಂತ್ರಿಕ ತೊಂದರೆ, ಪರಿಸರ ಮಾಲಿನ್ಯದ ತೊಂದರೆ ಕಾರಣವಾಗಿದೆ. 

Advertisement

ಯಾವುದೇ ಕಾರಣಕ್ಕೂ ಗಣಿಗಾರಿಕೆಯನ್ನು ನಾವು ಕಡೆಗಣಿಸುವಂತಿಲ್ಲ. ಹರಪ್ಪಾ, ಮೆಹಂಜೋದಾರ್‌ ದಿಂದಲೂ ಇದೆ. ಅದರಲ್ಲಿ ಭಾರತ ಜಗತ್ತಿನಲ್ಲಿಯೇ ಅತಿ ಹೆಚ್ಚು ಹಾಗೂ ಉತ್ತಮ ಗಣಿಗಾರಿಕೆಗೆ ಪ್ರಸಿದ್ಧಿಯಾಗಿದೆ. ಮುಂದಿನ ಆರ್ಥಿಕ ವರ್ಷಗಳಲ್ಲಿ ಗಣಿಗಾರಿಕೆ ಪ್ರಮುಖ ಪಾತ್ರ ವಹಿಸುತ್ತದೆ. ಈ ಹಿಂದೆ 11 ಫೈಸ್ಟಾರ್‌ ಗಣಿಗಳು ಇದ್ದವು. 6 ಫೋರ್‌ ಸ್ಟಾರ್‌ ಇದ್ದವು. ಆದರೆ ಇಂದು ಹೆಚ್ಚಿವೆ. ದೇಶದಲ್ಲಿ 58ಕ್ಕೂ ಹೆಚ್ಚು ಕಂಪನಿಗಳು ಉತ್ತಮ ಗುಣಮಟ್ಟದ ಉತ್ಪಾದನೆಗೆ ನಾಂದಿಯಾಡಿವೆ. ಬೇಡಿಕೆಗೆ ತಕ್ಕಂತೆ ಉತ್ಪಾದನೆ ಮಾಡಿ ದೇಶದ ಅಭಿವೃದ್ಧಿಗೆ ನಾಂದಿಯಾಡೋಣ ಎಂದರು. 

ಸ್ಮಯೋರ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ನಾಜೀಮ್‌ ಶೇಖ್‌, ಸ್ಮಯೋರ್‌ ಕಂಪನಿಯ ಛರನ್‌ ಎಸ್‌. ವೈ.ಘೋರ್ಪಡೆ, ಕಂಟ್ರೋಲರ್‌ ಆಫ್‌ ಮೈನ್ಸ್‌ ಜೆ.ಆರ್‌. ಚೌದರಿ, ರಿಜಿನಲ್‌ ಕಂಟ್ರೋಲರ್‌ ಆಫ್‌ ಮೈನ್ಸ್‌ ಜಿ.ಸಿ. ಮೀನಾ, ಎಂ.ಡಿ. ಅಬ್ದುಲ್‌ ಸಲೀಂ, ಅರುಣ್‌ಕುಮಾರ್‌, ವಿ.ಜಯಪ್ರಕಾಶ್‌, ಶ್ರೀಧರ ಹೆಗಡೆ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next