Advertisement

ಕನಿಷ್ಠ ಪರಿಹಾರಕ್ಕೆ ಬೇಕು 12 ಸಾವಿರ ಕೋಟಿ

11:48 AM Mar 02, 2020 | Suhan S |

ಬಾಗಲಕೋಟೆ: ರಾಜ್ಯದ ಬಹುಭಾಗ ಭೌಗೋಳಿಕ ನೀರಾವರಿ ಕ್ಷೇತ್ರ ಹೊಂದಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದಡಿ ಸ್ವಾಧೀನಗೊಳ್ಳುವ ಭೂಮಿಗೆ ಹೊಸ ಭೂಸ್ವಾಧೀನ ಕಾಯ್ದೆಯಡಿ ಕನಿಷ್ಠ ಪರಿಹಾರ ನೀಡಲು ಬರೋಬ್ಬರಿ 12 ಸಾವಿರ ಕೋಟಿ ಅನುದಾನ ಬೇಕು. ಇನ್ನು ರೈತರು ಕೇಳುವ ಯೋಗ್ಯ ಭೂಮಿ ಬೆಲೆಗೆ ಸರ್ಕಾರ ದಯೆ ತೋರುತ್ತದೆಯೇ ಎಂದು ಕೃಷ್ಣೆಯ ರೈತರು ಬೆಟ್ಟದಷ್ಟು ನಿರೀಕ್ಷೆಯಲ್ಲಿ ಕಾತರರಾಗಿದ್ದಾರೆ.

Advertisement

ಹೌದು, ಯುಕೆಪಿ 1 ಮತ್ತು 2ನೇ ಹಂತದಲ್ಲಿ ಈಗಾಗಲೇ 2,61,610 ಎಕರೆ ಭೂಮಿ, 75,755 ಕಟ್ಟಡಗಳು ಸ್ವಾಧೀನಗೊಂಡಿವೆ. ಇದೀಗ ಆರು ದಶಕಗಳಿಂದ ನನೆಗುದಿಗೆ ಬಿದ್ದಿರುವ ಈ ಯೋಜನೆ ಪೂರ್ಣಗೊಳ್ಳಲು 3ನೇ ಹಂತದ ಭೂಸ್ವಾಧೀನ, ಪುನರ್‌ವಸತಿ, ಪುನರ್‌ನಿರ್ಮಾಣ ಹಾಗೂ ನೀರಾವರಿ ಯೋಜನೆ ಕೈಗೊಳ್ಳಬೇಕಿದೆ. ಇದಕ್ಕಾಗಿ ಒಟ್ಟು 1.23 ಲಕ್ಷ ಎಕರೆ ಭೂಮಿ ಮತ್ತೆ ಸ್ವಾಧೀನಪಡಿಸಿಕೊಳ್ಳಲೇಬೇಕಾದ ಅಗತ್ಯವಿದೆ. ಇದಕ್ಕಾಗಿ ಯೋಗ್ಯ ಪರಿಹಾರ ಕೊಡಿ ಎಂಬ ಬೇಡಿಕೆಗೆ ಸರ್ಕಾರ ಸ್ಪಂದಿಸುತ್ತಾ ಎಂಬ ಕಾತುರ ಎಲ್ಲರಲ್ಲಿದೆ.

1.23 ಲಕ್ಷ ಎಕರೆ ಅಗತ್ಯ: ಯುಕೆಪಿ 3ನೇ ಹಂತದಡಿ ಆಲಮಟ್ಟಿ ಜಲಾಶಯವನ್ನು 524.256 ಮೀಟರ್‌ ಗೆ ಎತ್ತರಿಸಿದಾಗ 20 ಗ್ರಾಮ ಮುಳುಗಡೆಗೊಳ್ಳಲಿದ್ದು, ಇದರ ಜತೆಗೆ 94,640 ಎಕರೆ ಭೂಮಿಯೂ ಹಿನ್ನೀರ ವ್ಯಾಪ್ತಿಯಡಿ ಮುಳುಗಡೆಯಾಗಲಿದೆ. 20 ಗ್ರಾಮಗಳ ಜನರಿಗೆ ಪುನರ್‌ವಸತಿ ಕಲ್ಪಿಸಲು 20 ಪುನರ್‌ವಸತಿ ಕೇಂದ್ರ ನಿರ್ಮಾಣಕ್ಕೆ 4,315 ಎಕರೆ, 9 ವಿವಿಧ ನೀರಾವರಿ ಉಪ ಯೋಜನೆಗಳ ಕಾಲುವೆಗಾಗಿ 24,685 ಎಕರೆ ಸಹಿತ ಮುಳುಗಡೆ, ಕಾಲುವೆ ನಿರ್ಮಾಣ, ಪುನರ್‌ವಸತಿ ನಿರ್ಮಾಣಕ್ಕಾಗಿ ಒಟ್ಟು 1,23,640 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಬೇಕಿದೆ. 2013ರಲ್ಲಿ ಜಾರಿಗೊಂಡ ಹೊಸ ಭೂಸ್ವಾಧೀನ ಕಾಯಿದೆಯಡಿ ಈ ವರೆಗೆ 17 ಸಾವಿರ ಎಕರೆ ಭೂಮಿಯನ್ನೂ ಸ್ವಾಧೀನಪಡಿಸಿಕೊಂಡಿಲ್ಲ.

ನೋಂದಣಿ ಬೆಲೆಗೆ ನಾಲ್ಕು ಪಟ್ಟು ಪರಿಹಾರ: ಹೊಸ ಕಾಯ್ದೆಯಡಿ ಆಯಾ ತಾಲೂಕಿನ ಉಪ ನೋಂದಣಿ ಕಚೇರಿಗಳಲ್ಲಿ ಒಂದು ಎಕರೆ ಭೂಮಿಯನ್ನು ಎಷ್ಟು ಬೆಲೆಗೆ ಮಾರಾಟ ಮಾಡಲಾಗಿದೆ ಎಂಬುದು ನೋಂದಣಿ ಯಾಗಿರುತ್ತದೆಯೋ (ವಾಸ್ತವ ಮಾರಾಟ ಬೆಲೆ ಅಲ್ಲ) ಅದಕ್ಕೆ ನಾಲ್ಕು ಪಟ್ಟು ಗ್ರಾಮೀಣ ಪ್ರದೇಶದ ಭೂಮಿಗೆ, ಅದೇ ಮಾದರಿಯಲ್ಲಿ ಎರಡು ಪಟ್ಟು ನಗರ ಪ್ರದೇಶದ ಭೂಮಿಗೆ ಬೆಲೆ ನಿಗದಿ ಮಾಡಿ, ಪರಿಹಾರ ನೀಡಲು ಅವಕಾಶವಿದೆ.

ಯಾವುದೇ ರೈತರು ಅಥವಾ ಭೂಮಿ ಮಾರಾಟ ಮಾಡಿದ ವ್ಯಕ್ತಿಗಳು ವಾಸ್ತವ ಬೆಲೆಗೆ ಮಾರಾಟ ಮಾಡಿದ ಬೆಲೆ ನಮೂದಿಸದೇ, ಆಯಾ ಪ್ರದೇಶದ ಭೂಮಿಯ ಕನಿಷ್ಠ ನೋಂದಣಿ ಬೆಲೆ ಮಾತ್ರ ನೋಂದಿಸಿ, ಖರೀದಿ ಮಾಡುತ್ತಾರೆ. ಹೀಗಾಗಿ ವಾಸ್ತವದಲ್ಲಿ ಮಾರಾಟದ ಬೆಲೆಗೆ ನಾಲ್ಕು ಪಟ್ಟು ಬೆಲೆ ರೈತರಿಗೆ ದೊರೆಯುತ್ತಿಲ್ಲ. ನೋಂದಣಿ ಮಾಡಿಸಿದ ಬೆಲೆಗೆ, ಯಾವ ಪ್ರದೇಶದಲ್ಲೂ ಭೂಮಿ ಸಿಗುವುದೂ ಇಲ್ಲ.

Advertisement

ಕನಿಷ್ಠ ಪರಿಹಾರಕ್ಕೇ ಬೇಕು 12 ಸಾವಿರ ಕೋಟಿ: ಸ್ವಾಧೀನಗೊಳ್ಳುವ ಭೂಮಿಗೆ ಕಾನೂನು ಪ್ರಕಾರ ಪರಿಹಾರ ಕೊಟ್ಟರೂ ಬರೋಬ್ಬರಿ 12 ಸಾವಿರ ಕೋಟಿ ಬೇಕು. ಇನ್ನು ರೈತರು ಕೇಳುವ ವಾಸ್ತವ ಬೆಲೆ, ಖುಷ್ಕಿ ಭೂಮಿಗೆ 30 ಲಕ್ಷ, ನೀರಾವರಿ ಭೂಮಿಗೆ 40 ಲಕ್ಷ ಪರಿಹಾರ ನೀಡಲು 36 ಸಾವಿರ ಕೋಟಿ ಬೇಕಾಗುತ್ತದೆ. ಮಾರುಕಟ್ಟೆ ವಾಸ್ತವದ ಬೆಲೆ ಕೊಡಲೇಬೇಕು ಎಂದು ರೈತರು ಪಟ್ಟು ಹಿಡಿದು, ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ.

ಮೆಟ್ರೋಗೆ ಕೊಟ್ಟ ಅನುದಾನ ಕೊಡಿ: ಉತ್ತರಕರ್ನಾಟಕದ ಪ್ರಮುಖ ನೀರಾವರಿ ಯೋಜನೆಯಾದ ಯುಕೆಪಿಗೆ ಸರ್ಕಾರ, ಅಗತ್ಯ ಅನುದಾನ ನೀಡಿ, ಬೇಗ ಪೂರ್ಣಗೊಳಿಸಬೇಕು. ಕಳೆದ 1962ರಿಂದಲೂ ಈ ಯೋಜನೆ ಕುಂಟುತ್ತ ಸಾಗಿದ್ದು, ಬೆಂಗಳೂರಿನ ಮೆಟ್ರೋ ಯೋಜನೆಗೆ ಒಂದು ಹಂತದಲ್ಲಿ 14,052 ಕೋಟಿ (0ರಿಂದ 43 ಕಿ.ಮೀ) ಹಾಗೂ 2ನೇ ಹಂತದಲ್ಲಿ 32 ಸಾವಿರ ಕೋಟಿ (43 ಕಿ.ಮೀಯಿಂದ 76 ಕಿ.ಮೀ ಮೆಟ್ರೋ ರೈಲು ಮಾರ್ಗ ನಿರ್ಮಾಣ) ಅನುದಾನ ನೀಡಲಾಗಿದೆ. ಅದೇ ಮಾದರಿಯಲ್ಲಿ ಯುಕೆಪಿ ಯೋಜನೆಗೆ ಎರಡು ಹಂತದಲ್ಲಿ 36 ಸಾವಿರ ಕೋಟಿ (ಪರಿಹಾರಕ್ಕೆ) ನೀಡಿ, ರೈತರಿಗೆ ಯೋಗ್ಯ ಪರಿಹಾರ ನೀಡಬೇಕು. ಯೋಗ್ಯ ಪರಿಹಾರ ಕೊಟ್ಟಾಗ, ರೈತರು ಭೂಮಿ ಕೊಡುತ್ತಾರೆ. ಭೂಮಿ ಕೊಟ್ಟರೆ ಯೋಜನೆ ಪೂರ್ಣಗೊಳ್ಳುತ್ತದೆ. ಇದಕ್ಕೆ ಸರ್ಕಾರ ಮನಸ್ಸು ಮಾಡಬೇಕು ಎಂಬುದು ಹೋರಾಟಗಾರರ ಒತ್ತಾಯ.

ನಮ್ಮ ಸರ್ಕಾರದ ಅವಧಿಯಲ್ಲೇ ಯುಕೆಪಿ ಯೋಜನೆ ಪೂರ್ಣಗೊಳಿಸುವುದು ನಮ್ಮ ಆದ್ಯತೆ. ರೈತರು ಕೇಳುವ ವಾಸ್ತವ ಮಾರುಕಟ್ಟೆ ಬೆಲೆಗೆ ನಾಲ್ಕುಪಟ್ಟು ಪರಿಹಾರ ನೀಡುವುದು ಕಷ್ಟ. ಹೊಸ ಭೂಸ್ವಾಧೀನ ಕಾಯ್ದೆ ಪ್ರಕಾರ ಪರಿಹಾರ ನೀಡಲಾಗುತ್ತದೆ. -ಗೋವಿಂದ ಕಾರಜೋಳ, ಉಪ ಮುಖ್ಯಮಂತ್ರಿ

ರೈತರಿಗೆ ಯೋಗ್ಯ ಪರಿಹಾರ ನೀಡದಿದ್ದರೆ ಅವರ ಬದುಕು ಬೀದಿಗೆ ಬರಲಿದೆ. ಹೊಸ ಕಾಯ್ದೆ ಪ್ರಕಾರ ಒಂದು ಎಕರೆ ಭೂಮಿಗೆ ಕೇವಲ 6ರಿಂದ 8 ಲಕ್ಷ ಪರಿಹಾರ ದೊರೆಯುತ್ತಿದೆ. ಈ ಪರಿಹಾರದಲ್ಲಿ ಒಂದು ಎಕರೆ ಭೂಮಿ ಖರೀದಿಸಲೂ ಸಾಧ್ಯವಿಲ್ಲ. ಒಟ್ಟು 1.23 ಲಕ್ಷ ಎಕರೆ ಭೂಮಿಗೆ ಕಾಯ್ದೆ ಪ್ರಕಾರ 12 ಸಾವಿರ ಕೋಟಿ, ಮಾರುಕಟ್ಟೆ ಬೆಲೆಯ ಪ್ರಕಾರ 36 ಸಾವಿರ ಕೋಟಿ ಅಂದಾಜು ಪರಿಹಾರ ಬೇಕಾಗುತ್ತದೆ. ಎರಡು ಹಂತದಲ್ಲಿ ವಾಸ್ತವದ ಪರಿಹಾರ ನೀಡಲು ಸರ್ಕಾರ ಮುಂದಾಗಬೇಕು. ಈ ಬಜೆಟ್‌ನಲ್ಲಿ ಗರಿಷ್ಠ ಅನುದಾನ ನಿಗದಿ ಮಾಡಬೇಕು. -ಪ್ರಕಾಶ ಅಂತರಗೊಂಡ, ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ಮುಖಂಡ

 

-ಎಸ್‌.ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next