Advertisement

ಶಾಶ್ವತ ಪರಿಹಾರಕ್ಕೆ ಗಣಿ ನಿಧಿ ಸದ್ಬಳಕೆಯಾಗಲಿ

05:04 PM Jul 17, 2018 | Team Udayavani |

ಹೊಸಪೇಟೆ: ಅದಿರು ಸಾಗಾಣಿಕೆಗೆ ಲಾರಿಗಳ ಬದಲಾಗಿ ಕನ್ವೇರೆ ಬೆಲ್ಟ್ ಹಾಗೂ ರೈಲು ಮಾರ್ಗ ನಿರ್ಮಾಣ ಪೂರ್ಣಗೊಂಡ ನಂತರವೇ ಗಣಿಬಾಧಿತ ಪ್ರದೇಶಗಳ ಪುನಶ್ಚೇತನ ಆರಂಭವಾಗಲಿದೆ ಎಂದು ಸಿಇಒ ಡಾ| ಕೆ.ವಿ.ರಾಜೇಂದ್ರ ಹೇಳಿದರು.

Advertisement

ನಗರದ ತಾಪಂ ಸಭಾಂಗಣದಲ್ಲಿ ಸೋಮವಾರ ತಾಪಂ ಅಧ್ಯಕ್ಷೆ ಜೋಗದ ನೀಲಮ್ಮ ಅಧ್ಯಕ್ಷತೆಯಲ್ಲಿ ನಡೆದ ಗಣಿಬಾಧಿತ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ಕ್ರಿಯಾಯೋಜನೆಯ ಸಲಹಾ ಸೂಚನಾ ಸಭೆಯಲ್ಲಿ ಅವರು ಮಾತನಾಡಿದರು. ಬಳ್ಳಾರಿ, ಹೊಸಪೇಟೆ, ಸಂಡೂರು ತಾಲೂಕಿನ ಗಣಿಬಾಧಿತ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿ ಮತ್ತು ಪುನಶ್ಚೇತನಕ್ಕಾಗಿ 7000 ಕೋಟಿ. ರೂ ಗಣಿ ನಿಧಿ ಸಂಗ್ರಹವಾಗಿದ್ದು, ಜನಸಾಮಾನ್ಯರ ಕನಸು ನನಸಾಗಿಸಲು ಅಗತ್ಯ ಕ್ರಿಯಾಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸಲಾಗುತ್ತಿದೆ.

ಹೊಸಪೇಟೆ ಸಂಡೂರು ನಡುವೆ ಬೃಹತ್‌ ಸೂಪರ್‌ ಸ್ಪೆಷಲಿಟಿ ಆಸ್ಪತ್ರೆ ಕಟ್ಟಡ ನಿರ್ಮಾಣದ ಜೊತೆಗೆ ಮೆಡಿಕಲ್‌ ಕಾಲೇಜ್‌
ನಿರ್ಮಾಣ ಮಾಡಲು ಕ್ರಿಯಾಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. 

ಮೆಡಿಕಲ್‌ ಕಾಲೇಜ್‌ ನಿರ್ಮಾಣಕ್ಕೆ ಸರ್ಕಾರ ಸ್ಪಂದಿಸಿದೆ. ಗಣಿ ಚಟುವಟಿಕೆಗಳಿಂದಾಗಿ ಪರಿಸರ ನಾಶವಾಗಿದೆ. ಜನರ ಆರೋಗ್ಯ ಹದಗೆಟ್ಟಿದೆ. ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಜನರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕಾಗಿದೆ. ಗಣಿಬಾಧಿತ ಜನರಿಗೆ ಮೂಲಭೂತ ಸೌಕರ್ಯಗಳನ್ನು ನಿಗದಿತ ಅವಧಿಯೊಳಗೆ ಕಲ್ಪಿಸಬೇಕು ಎಂದು ಸುಪ್ರೀಂಕೋರ್ಟ್‌ ಆದೇಶ ನೀಡಿದ ಹಿನ್ನೆಲೆಯಲ್ಲಿ ಈಗಾಗಲೇ ಅಧಿಕಾರಿಗಳಿಂದ ಶೇ.90ರಷ್ಟು ಸಮಗ್ರ ಅಭಿವೃದ್ಧಿಗೆ ಕ್ರಿಯಾಯೋಜನೆ ರೂಪಿಸಲಾಗಿದೆ. ಕ್ರಿಯಾ ಯೋಜನೆಯನ್ನು ಸೆ.10ರಿಂದ ಅ.10ರೊಳಗೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಗಡುವು ನೀಡಿದೆ.

ಜನಪ್ರತಿನಿಧಿಗಳಿಂದ, ಸಂಘಟನೆಗಳಿಂದ ಹಾಗೂ ಸಾರ್ವಜನಿಕರಿಂದ ನೇರವಾಗಿ ಸಲಹೆ ಸೂಚನೆಗಳನ್ನು ಪಡೆದು, ಸೂಕ್ತವೆನಿಸಿದವುಗಳನ್ನು ಕ್ರಿಯಾಯೋಜನೆಯಲ್ಲಿ ಸೇರ್ಪಡೆಮಾಡಿ ಸಲ್ಲಿಲಾಗುವುದು. ಡಿಡಿ ಮೈನ್ಸ್‌ ಆಫೀಸಿಗೆ
ಪತ್ರದ ಮೂಲಕವೂ ಸಲಹೆಗಳನ್ನು ನೀಡಬಹುದಾಗಿದೆ ಎಂದರು. 

Advertisement

2012-13ರಿಂದ ಗಣಿ ನಿಧಿ ಸಂಗ್ರಹಿಸಲಾಗುತ್ತಿದೆ. ಈಗಾಗಲೇ 7000 ಕೊಟಿ ರೂ. ಸಂಗ್ರಹವಾಗಿದ್ದು, ನಿಧಿ ಇನ್ನೂ ಹೆಚ್ಚಾಗುವ ಸಾಧ್ಯತೆ. ಸುನಾಮಿಯಂತೆ ಹಣ ಹರಿದು ಬರುತ್ತಿದೆ. ಅದರ ಸದ್ಬಳಕೆಗಾಗಿ ಮುಂದಿನ 20 ವರ್ಷದಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತ ಬೃಹತ್‌ ಕ್ರಿಯಾ ಯೋಜನೆಗಳನ್ನು ರೂಪಿಸಬೇಕಿದೆ. ನಿಧಿಯ ಗರಿಷ್ಠ ಹಣವನ್ನು ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಬಳಸಬೇಕಾಗಿದೆ. ಕೃಷಿಗೆ ಬೇಕಾದ ನೀರು ಸಂಗ್ರಹ, ಕೆರೆಗಳ ಭರ್ತಿ, ಉದ್ಯೋಗಾಧರಿತ ತರಬೇತಿ ಕೇಂದ್ರಗಳು, ಮಲ್ಟಿಆಸ್ಪತ್ರೆಗಳು, ವೈದ್ಯಕೀಯ ಕಾಲೇಜ್‌ ನಿರ್ಮಾಣ, ಸೋಲಾರ್‌ ವಿದ್ಯುತ್‌ ಉತ್ಪನ್ನ, ಗ್ರಾಮಗಳಲ್ಲಿ ಒಳಚರಂಡಿ
ನಿರ್ಮಾಣ, ಮಾದರಿ ಶಾಲೆಗಳ ನಿರ್ಮಾಣ ಸೇರಿದಂತೆ ಮೂಲಸೌಲಭ್ಯಗಳನ್ನು ರೂಪಿಸಿ ನೀಡಬೇಕೆಂದು ಅಧಿಕಾರಿಗಳು ಸೂಚನೆ ನೀಡಿದರು.

ಜಿಪಂ ಸದಸ್ಯರಾದ ಜಯಕುಮಾರಿ, ಪ್ರವೀಣ್‌ಸಿಂಗ್‌, ಜನಸಂಗ್ರಾಮ ಪರಿಷತ್‌ ಮುಖಂಡ ಶಿವಕುಮಾರ ಮಾಳಗಿ, ವಿಕಾಸ ಸೇವಾ ಸಂಸ್ಥೆಯ ಅನಂತ ಜೋಶಿ ಸೇರಿ ತಾಪಂ, ಗ್ರಾಪಂ ಸದಸ್ಯರು ಮಾತನಾಡಿದರು. ಅನೇಕರು ಕ್ರಿಯಾಯೋಜನೆಗೆ ಪೂರಕ ಅಂಶಗಳನ್ನು ಸೇರಿಸುವಂತೆ ಮನವಿ ಸಲ್ಲಿಸಿದರು. ಅಪರ ಜಿಲ್ಲಾಧಿಕಾರಿ ಸೋಮಶೇಖರ್‌, ತಹಸೀಲ್ದಾರ್‌ ಎಚ್‌.ವಿಶ್ವನಾಥ, ತಾಪಂ ಇಒ ವೆಂಕೋಬಪ್ಪ ಇದ್ದರು. ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಹೊಸಪೇಟೆ ಸಂಡೂರು ಮಾರ್ಗ ಮಧ್ಯೆ ಮೆಡಿಕಲ್‌ ಕಾಲೇಜ್‌ ನಿರ್ಮಾಣ ಮಾಡಲು ಕ್ರಿಯಾಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಸರ್ಕಾರದಿಂದ ಉತ್ತಮ ಸ್ಪಂದನೆ ದೊರೆತಿದೆ. ಕರ್ನಾಟಕ ಮೈನಿಂಗ್‌ ಎನ್ವಿರಾನ್ಮೆಂಟ್‌ ರಿಸ್ಟೋರೇಷನ್‌ ಕಾರ್ಪೋರೇಷನ್‌(ಕೆಎಂಇಆರ್‌ಸಿ)ನಲ್ಲಿ ಸಾಕಷ್ಟು ಹಣ ಸಂಗ್ರಹವಾಗಿದೆ. ಅದರಲ್ಲಿ ಬಳ್ಳಾರಿ ಜಿಲ್ಲೆಗೆ ಸುಮಾರು 7 ಸಾವಿರ ಕೋಟಿ ರೂ. ಲಭ್ಯವಾಗಲಿದೆ. ಕರ್ನಾಟಕ ಗಣಿಬಾಧಿತ ಪ್ರದೇಶ ಅಭಿವೃದ್ಧಿ ನಿಗಮದಿಂದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿ ಪೈಕಿ ಬಳ್ಳಾರಿ ಜಿಲ್ಲೆಗೆ ಶೇ.75 ಗಣಿನಿಧಿಯಿಂದ ಹಣ ಹರಿದು ಬರಲಿದೆ. ಉದ್ಯೋಗಾಧರಿತ ತರಬೇತಿ ಕೇಂದ್ರಗಳನ್ನು ತೆರೆಯಲು ಮತ್ತು ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು.  ಡಾ|ಕೆ.ವಿ.ರಾಜೇಂದ್ರ, ಸಿಇಒ, ಜಿಪಂ, ಬಳ್ಳಾರಿ.

Advertisement

Udayavani is now on Telegram. Click here to join our channel and stay updated with the latest news.

Next