ಯಡ್ರಾಮಿ: ಮಕ್ಕಳಿಗೆ ಪಠ್ಯವಿಷಯಗಳ ಬೋಧನೆ ಜತೆಗೆ ಜೀವನ ಕೌಶಲ್ಯಾಧಾರಿತ ಶಿಕ್ಷಣ ನೀಡುವುದು ಇಂದಿನ ಅಗತ್ಯವಾಗಿದೆ ಎಂದು ವಿರಕ್ತಮಠದ ಪೂಜ್ಯ ಸಿದ್ಧಲಿಂಗ ಮಹಾ ಸ್ವಾಮೀಜಿ ನುಡಿದರು.
ಸುಂಬಡ ಗ್ರಾಮದ ಇಂದಿರಾಗಾಂ ಧಿ ವಸತಿ ಶಾಲೆಯಲ್ಲಿ ರವಿವಾರ ಆಯೋಜಿಸಿದ್ದ ಮಕ್ಕಳ ಹಾಗೂ ಪಂಡಿತ ಜವಾಹರಲಾಲ ನೆಹರು ಜನ್ಮದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಮಕ್ಕಳ ಮನಸ್ಸು ಹೂವಿನಂತೆ ಮೃದು, ನಿಷ್ಕಲ್ಮಷ ಆಗಿರುತ್ತದೆ. ಮೃದು ಮನಸ್ಸುಗಳನ್ನು ಗೆಲ್ಲುವ ಮೂಲಕ ಶಿಕ್ಷಕರಾದವರು ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯಬೇಕು. ಹೀಗಾದಾಗ ಮಾತ್ರ ಮಕ್ಕಳು ಶಿಕ್ಷಕರನ್ನು ಗೌರವದಿಂದ ಕಂಡು, ಮುಂದೆ ತಮ್ಮ ಜೀವನ ತಾವೇ ರೂಪಿಸಿಕೊಳ್ಳಲು ಸಮರ್ಥರಾಗುತ್ತಾರೆ ಎಂದರು. ಮಕ್ಕಳಲ್ಲಿ ನೈತಿಕ, ಮಾನವೀಯ ಮೌಲ್ಯಗಳ ಕುರಿತು ತಿಳಿ ಹೇಳಬೇಕು. ಮಕ್ಕಳು ಮಣ್ಣಿನ ಮುದ್ದೆಯಲ್ಲ. ಅವರಲ್ಲಿ ದೈವತ್ವದ ರೂಪವಿರುತ್ತದೆ. ಅವರ ಮೂಲಕವೂ ಶಿಕ್ಷಕರು ಸಾಕಷ್ಟು ಕಲಿಯಬೇಕಾದ ಸನ್ನಿವೇಶಗಳು ಇರುತ್ತವೆ. ಈ ಸೂಕ್ಷ್ಮತೆಗಳನ್ನು ಶಿಕ್ಷಕರು ತಿಳಿದು, ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಬೇಕು ಎಂದು ಹೇಳಿದರು.
ಪ್ರಾಂಶುಪಾಲ ಪರಮೇಶ್ವರ ಮೇಲಿನಮನಿ ಪ್ರಾಸ್ತಾವಿಕವಾರಿ ಮಾತನಾಡಿದರು. ನಿಲಯ ಪಾಲಕ ಅರವಿಂದ ದೇಸಾಯಿ, ಶಿಕ್ಷಕರಾದ ಸಂತೋಷ ಮೆಡೇದರ, ಬಸವರಾಜ ಮಾಶ್ಯಾಲ, ಸಿದ್ಧಪ್ಪ ಕೋನಹಳ್ಳಿ, ನವಶದ್ ಭಾಷಾ, ಮಲ್ಲಿಕಾರ್ಜುನ ಯಾದಗಿರಿ, ಬಿ.ಎಸ್.ಬಿರಾದಾರ ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳಿದ್ದರು.