Advertisement

ಮನಸು ಡಿಸ್ಟರ್ಬ್ ಆಗಿದೆ, ಬದುಕಲ್ಲ.. 

12:30 AM Feb 22, 2019 | |

ಇತ್ತೀಚಿನ ದಿನಗಳಲ್ಲಿ “ದುನಿಯಾ’ ವಿಜಯ್‌, ಸಿನಿಮಾಗಿಂತ ವಿವಾದಗಳ ಮೂಲಕವೇ ಸುದ್ದಿಯಾಗಿದ್ದು ಹೆಚ್ಚು. ಒಂದಲ್ಲ, ಒಂದು ವಿಚಾರದ ಮೂಲಕ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಿದ್ದ ವಿಜಯ್‌, ಈಗ ಸದ್ದಿಲ್ಲದೇ ತಮ್ಮ ಹೊಸ ಚಿತ್ರ “ಸಲಗ’ಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ವಿಜಯ್‌ ಸಿನಿಮಾ ಕೆಲಸದಲ್ಲಿ ಬಿಝಿಯಾಗಿದ್ದರೂ, ಚಿತ್ರರಂಗದಲ್ಲಿ “ವಿಜಯ್‌ ಪದೇ ಪದೇ ಯಾಕೆ ಹೀಗೆ ಮಾಡಿಕೊಳ್ತಿದ್ದಾರೆ’ ಎಂಬ ಪ್ರಶ್ನೆ ಕಾಡುತ್ತಿದೆ. ಇಂತಹ ಹಲವು ಪ್ರಶ್ನೆಗಳಿಗೆ ವಿಜಯ್‌ ಸ್ಟ್ರೈಟ್‌ ಹಿಟ್‌ನಲ್ಲಿ ನೇರವಾಗಿ ಉತ್ತರಿಸಿದ್ದಾರೆ …

Advertisement

ನಿಮ್ಮ ಲೈಫ‌ಲ್ಲಿ ಏನೇನೋ ಆಗ್ತಾ ಇದೆ. ಏನ್‌ ಕಾರಣ?
ನಾನು ದೇವ್ರಲ್ಲ. ಕಾಮನ್‌ ಮ್ಯಾನ್‌. ಸಮಸ್ಯೆಗಳೂ ಸಹಜವೇ. ಒಂದು ಮಾತು ಹೇಳ್ಳೋಕೆ ಇಷ್ಟಪಡ್ತೀನಿ. ನನ್ನ ತಾಯಿಗೋಸ್ಕರ ನಾನು ಎಷ್ಟೇ ಕಷ್ಟ ಬಂದರೂ ಅನುಭವಿಸುತ್ತೇನೆ. ಏನು ಬೇಕಾದರೂ ಮಾಡ್ತೀನಿ. ಅಮ್ಮ ಕಣ್ಣಿಗೆ ಕಾಣುವ ದೇವರು. ಆಕೆಗಾಗಿ ಏನೇ ಬರಲಿ ಸಹಿಸಿಕೊಳ್ತೀನಿ. ತಾಯಿ ಮತ್ತು ಸತ್ಯ ಇವೆರಡರ ನಡುವೆ ಬದುಕುತ್ತಿದ್ದೇನೆ. ಚೆನ್ನಾಗಿ ಬದುಕಿ ತೋರಿಸ್ತೀನಿ. ನನ್ನ ಲೈಫ‌ಲ್ಲಿ ಇಷ್ಟೆಲ್ಲಾ ಆಗುತ್ತಿದ್ದರೂ, ನಾನೆಂದೂ ಧೈರ್ಯ ಕಳೆದುಕೊಳ್ಳಲಿಲ್ಲ. ನಾಲ್ಕು ಗೋಡೆ ಮಧ್ಯೆ ಏನು ಬೇಕಾದರೂ ನಡೆಯಬಹುದು. ಅದನ್ನು ಹೇಳಬಹುದು, ಹೇಳದೇ ಇರಬಹುದು. ಆದರೆ, ಒಂದಲ್ಲ, ಒಂದು ದಿನ ಸತ್ಯ ಹೊರಬರುತ್ತೆ. ಬದುಕಲ್ಲಿ ಆದಂತಹ ಸಮಸ್ಯೆಗಳಿಗೆ ಕಾರಣವೂ ಗೊತ್ತಾಗುತ್ತೆ. ಮತ್ತೆ ಹೇಳ್ತೀನಿ. ನನಗೆ ಎಲ್ಲವೂ ಅಮ್ಮನೇ. ಆಕೆ ಸಮುದ್ರ ಇದ್ದಂತೆ, ಮಿಕ್ಕವರೆಲ್ಲ ಅಲೆ ಇದ್ದಂಗೆ. ದಡಕ್ಕೆ ಅಪ್ಪಳಿಸಿ, ಸುಮ್ಮನಾಗೋ ರೀತಿ.

ಈ ರಂಪಾಟದಿಂದ ಬದುಕಿಗೆ ಪೆಟ್ಟು ಬೀಳಲ್ಲವೇ?
ಖಂಡಿತ ಪೆಟ್ಟು ಬಿದ್ದಿಲ್ಲ. ಯಾರ ಮನೆಯಲ್ಲಿ ಜಗಳವಿಲ್ಲ ಹೇಳಿ? ದುನಿಯಾ ವಿಜಿ, ಯಾವುದೋ ಒಂದು ದೊಡ್ಡ ಬ್ಯಾಕ್‌ಗ್ರೌಂಡ್‌ನಿಂದ ಬಂದಿದ್ದರೆ ಈ ರಂಪಾಟ, ಜಗಳವನ್ನು ಮುಚ್ಚಿಸೋಕೆ, ಪ್ರಯತ್ನ ನಡೆದಿರೋದು. ವಿಜಿ ಮೊದಲಿಂದಲೂ ಸಲಗನಂತೆ ಬೆಳೆದಿದ್ದಾನೆ. ಆ ಸಲಗ ಹಾಗೆಯೇ ಬದುಕುತ್ತೆ. ಸಲಗ ಕಾಡಲ್ಲಿ ಗುಂಪು ಬಿಟ್ಟು ಒಂಟಿಯಾಗಿ ಹೊರಟರೆ, ಒಂಟಿಯಾಗಿಯೇ ಎಲ್ಲವನ್ನೂ ಎದುರಿಸುತ್ತೆ. ನಾನು ಕೂಡ ಹಾಗೆಯೇ ಬದುಕುತ್ತಿಲ್ಲವೇ? ಈ ರಂಪಾಟ ನಾನಾಗಿ ಮಾಡಿದ್ದಲ್ಲ. ಎಲ್ಲರೂ ಎಲ್ಲವನ್ನೂ ನೋಡುತ್ತಿದ್ದಾರೆ. ಅದು ಪದೇ ಪದೇ ಪೆಟ್ಟು ಬೀಳುತ್ತಲೇ ಇದೆ. ಆದರೂ ಸಲಗನ ರೀತಿ ಬದುಕಿ ತೋರಿಸುತ್ತಿಲ್ಲವೇ? ಈ ರಂಪಾಟ ಕೆಲ ದಿನ ಮನಸ್ಸನ್ನು ಡಿಸ್ಟರ್ಬ್ ಮಾಡಬಹುದು. ಆದರೆ, ಬದುಕನಲ್ಲ.

ಸಾರ್ವಜನಿಕ ವಲಯದಲ್ಲಿದ್ದವರು ಹೀಗೆ ಮಾಡಿದರೆ ತಪ್ಪೆನಿಸಲ್ಲವೇ?
ನಂಗಂತೂ ಇದು ತಪ್ಪು ಅನಿಸಿಲ್ಲ. ಒಬ್ಬ ನಕ್ಷತ್ರಿಕನಿಂದ ತೊಂದರೆ ಅನುಭವಿಸಿ, ಕೊನೆಗೆ ಸತ್ಯ ತಿಳಿಸಿದ ಸತ್ಯಹರಿಶ್ಚಂದ್ರ ಬಗ್ಗೆ ಎಲ್ಲರಿಗೂ ಗೊತ್ತು. ನಾನೇನು ಸ್ಟಾರ್‌ ಅಲ್ಲ, ಒಬ್ಬ ಕಾಮನ್‌ ಮ್ಯಾನ್‌. ನನಗೆ ತಿಳಿದ ದೊಡ್ಡವರು ಒಂದು ಮಾತು ಹೇಳಿದ್ದರು. ತುಂಬಾ ದುಡ್ಡು ಮಾಡಬೇಡ ಮಾಡಿದಷ್ಟು ದೊಡ್ಡ ದುಃಖ ಬರುತ್ತೆ ಅಂತ. ಹಾಗಂತ ಹಾಗೆ ಮಾಡಿದವನು ನಾನಲ್ಲ. ನಾನು ಪಡೆದ ಸಂಭಾವನೆ ಎಷ್ಟು, ಆಸ್ತಿ ಎಷ್ಟು? ನನಗಷ್ಟೇ ಗೊತ್ತು. ಎಂದಿಗೂ ದುಡ್ಡಿನ ಹಿಂದೆ ಹೋದವನಲ್ಲ. ಸ್ಟಾರ್‌ಗಿರಿ ಬಂದರೂ ಅದನ್ನು ಹೊತ್ತು ತಿರುಗಲಿಲ್ಲ, ಸ್ಟಾರ್‌ ಎಂಬ ಭ್ರಮೆಯಲ್ಲಿ ಪೊಲಿಟಿಷಿಯನ್ಸ್‌ ಇಟ್ಟುಕೊಂಡಾಗಲಿ, ಉದ್ಯಮಿಗಳನ್ನು ಇಟ್ಟುಕೊಂಡಾಗಲಿ ಬದುಕಲಿಲ್ಲ. ನನಗೆ ಗೊತ್ತಿರೋದು ಒಂದೇ , ನಿಯತ್ತಾಗಿ ದುಡಿಬೇಕು, ಬದುಕಬೇಕು.

ನಿಮ್ಮ ಕೆರಿಯರ್‌ಗೆ ನೀವೇ ದುಶ್ಮನ್‌ ಎಂಬ ಮಾತಿದೆಯಲ್ಲ?
ಒಂದು ಪ್ರಶ್ನೆ, ನನ್ನ ಕೆರಿಯರ್‌ನಲ್ಲಿ ಏನು ತಪ್ಪಾಗಿದೆ? ನಾನೇನಾದರೂ ಆ್ಯಕ್ಟಿಂಗ್‌ನಲ್ಲಿ ತಪ್ಪು ಮಾಡಿದ್ದೇನಾ? ನಾನೂ ಊಟ ಮಾಡಬೇಕು, ಬದುಕಬೇಕು ಸ್ವಾಮಿ. ನಾಲ್ಕು ಜನ ಕೊಟ್ಟ ಕೂಲಿ ಕೆಲಸ ಮಾಡಿರಿ¤àನಿ. ಆ ಕೂಲಿ ಕೆಲಸದಲ್ಲಿ ಶ್ರದ್ಧೆ ಇಲ್ಲ ಅಂದರೆ, ಅವರು ಆಚೆ ಕಳಿಸಲಿ. ಕೆಲಸದಲ್ಲಿ ಶ್ರದ್ಧೆ ಇರುವುದಕ್ಕೆ ತಾನೆ ಕೆರಿಯರ್‌ ಕಟ್ಟಿಕೊಂಡಿದ್ದು. ನನ್ನ ಬದುಕನ್ನ ನಾನೇ ಹಾಳು ಮಾಡಿಕೊಳ್ತೀನಾ?

Advertisement

ಇಷ್ಟೆಲ್ಲಾ ನೋವಿದ್ದರೂ ಪಾಸಿಟಿವ್‌ ಆಗಿ ಹೇಗೆ ತಗೋತೀರಾ?
ಇದಕ್ಕೆ ಅಣ್ಣಾವ್ರ ಹಾಡು ನೆನಪಾಗುತ್ತೆ. “ಯಾರಿಗಿಲ್ಲ ನೋವು, ಯಾರಿಗಿಲ್ಲ ಸಾವು…

ಕಾಂಟ್ರವರ್ಸಿ ಇದ್ದರೂ ಅಭಿಮಾನಿಗಳು ಕಮ್ಮಿಯಾಗಿಲ್ಲ ಅಂತೀರಾ?
ಇಲ್ಲ ಆಗೋದಿಲ್ಲ. ಅದಕ್ಕೆ ನಾನು ನನ್ನ ಕೈ ಮೇಲೆ ಅವ್ವ-ಅಭಿಮಾನಿ ಅಂತ ಹಚ್ಚೆ ಹಾಕಿಸಿಕೊಂಡಿದ್ದೇನೆ. ನನ್ನ ತಾಯಿ ಹೇಳ್ಳೋರು, “ಅಕಸ್ಮಾತ್‌ ನಾನು ಸತ್ತು ಹೋದರೂ, ನನ್ನ ಮಗನಿಗೆ ಇರುವ ಅಭಿಮಾನಿಗಳು ಕಾಪಾಡ್ತಾರೆ’ ಅಂತ. ನನ್ನ ನೋಡಿಕೊಳ್ಳಲು ಅಮ್ಮ ಇದ್ದಾರೆ, ಅದನ್ನು ಬಿಟ್ಟು, ನನಗೋಸ್ಕರ ಕೀರ್ತಿಗೌಡ ಇದ್ದಾರೆ. ಅವರು ನನ್ನ ಚೆನ್ನಾಗಿ ನೋಡಿಕೊಳ್ತಾರೆ. ಅಭಿಮಾನಿಗಳ ಸಂಖ್ಯೆಯಂತು ಯಾವತ್ತಿಗೂ ಕಮ್ಮಿಯಾಗಿಲ್ಲ.

ಸ್ಟಾರ್‌ನಟನೊಬ್ಬ ಕಾಂಟ್ರವರ್ಸಿಗೆ ಸಿಲುಕಿದಾಗ ಆತನ ಫ್ಯಾನ್ಸ್‌ ಡಿಸ್ಟರ್ಬ್ ಆಗಲ್ವಾ?
ನನ್ನ ಹುಟ್ಟುಹಬ್ಬಕ್ಕೆ ಮನೆ ಬಳಿ ಐದಾರು ಸಾವಿರ ಅಭಿಮಾನಿಗಳು ಬಂದು ಶುಭಾಶಯ ಹೇಳಿದ್ದರು. “ನಿಮ್ಮೊಂದಿಗೆ ನಾವಿದ್ದೇವೆ’ ಎಂದು ಪ್ರೀತಿ ತೋರಿದ್ದರು. ಅಷ್ಟೇ ಅಲ್ಲ, ಬರಲು ಸಾಧ್ಯವಾಗದ ರಾಜ್ಯದ ಅಭಿಮಾನಿಗಳು ಶುಭಾಶಯ ಕೋರಿದ್ದರು. ಇನ್ನೇನು ಬೇಕು ಹೇಳಿ. ಇಷ್ಟಕ್ಕೂ ನಾನು ದೇವರಾಣೆ ಸ್ಟಾರ್‌ ಅಲ್ಲ. ದುನಿಯಾ ವಿಜಿ ಅಷ್ಟೇ. ಎಲ್ಲರಿಗೂ ಸ್ಟಾರ್‌ ಪಟ್ಟ ಇದೆ. ನಾನೇಕೆ “ದುನಿಯಾ’ ಅಂತ ಇಟ್ಟುಕೊಂಡಿದ್ದೇನೆ ಹೇಳಿ. ಸ್ಟಾರ್‌ ಕೊಟ್ಟರೂ ಅದನ್ನು ಪಕ್ಕಕ್ಕೆ ತಳ್ಳಿದವನು. ಸ್ಟಾರ್‌ ಪದ ನನಗೆ ಒಪ್ಪಿಗೆ ಆಗಲ್ಲ. ನಾನು ಬಡತನ ಇದ್ದಾಗ ಸಿರಿತನ ಬೇಕು ಅಂದಿಲ್ಲ. ಕಷ್ಟಪಡ್ತಾ ಇದ್ದೆ ಒಂದು ಜಾಗ ಸಿಕು¤. ಆ ಮಧ್ಯೆ ಒಂದಷ್ಟು ಸಮಸ್ಯೆ ಬಂದವು. ಬಗೆಹರಿಸುತ್ತಿದ್ದೇನೆ. ನಾನು ಹುಟ್ಟಿದ್ದಾಗ ಅಪ್ಪ, ಅಮ್ಮನಿಗೆ ವಿಜಯ್‌ ಅಂತ ಹೆಸರಿಡಿ ಅಂದಿಲ್ಲ. ಎಷ್ಟೇ ಸ್ಟಾರ್‌ ಇದ್ದರೂ ಕೊನೆಗೆ ಮಣ್ಣಿಗೆ ಅಲ್ಲವೇ ಹೋಗೋದು.

ಇನ್ಮುಂದೆ ಈ ರೀತಿ ಸುದ್ದಿಯಾಗೋದಿಲ್ಲ?
ನಾನು ಹೀಗೆ ಇರ್ತೀನಿ. ಯಾವತ್ತಿಗೂ ನನ್ನ ನಂಬಿದವರಿಗೆ ಮೋಸ ಆಗಲ್ಲ. ನನ್ನ ಬದುಕು ಸಿನಿಮಾ. ಯಾರೋ ಹೇಳಿದಂತೆ, ಅಭಿಮಾನಿಗಳನ್ನು ಬೇಸರ ಪಡಿಸಲ್ಲ. ನನ್ನ ಈ ಸುದ್ದಿಗೆ ಕಾಲವೇ ಉತ್ತರ ಕೊಡಲಿದೆ. ಒಂದಂತೂ ನಿಜ. ನಾನು ಅಭಿಮಾನಿಗಳನ್ನು ನಂಬಿದವನು. ಅವರ ಪ್ರೀತಿಯಲ್ಲೇ ಬದುಕಿದವನು. ನಾನು ಸತ್ತರೂ, ಅವರು ನನ್ನ ಜೊತೆ ಇರ್ತಾರೆ. ಯಾಕೆಂದರೆ, ನನ್ನ ಕೈಯಲ್ಲಿ ಅವ್ವ-ಅಭಿಮಾನಿ ಎಂಬ ಹಚ್ಚೆ ಅಮರವಾಗಿರುತ್ತೆ. ನಾನು ಮಣ್ಣಾದರೂ, ಆ ಹೆಸರು ನನ್ನೊಂದಿಗಿರುತ್ತೆ. ಅಭಿಮಾನಿಗಳ ಮನೆಯಲ್ಲಿರುವ ನೋವನ್ನು ಅನುಭವಿಸುವಂತಹ ಮತ್ತೂಬ್ಬ ಅಭಿಮಾನಿ ನಾನು.

ಕುಸ್ತಿ’ ಕೈ ಬಿಟ್ಟಿದ್ದೇಕೆ? 
ವಿನಾಕಾರಣ ಸಮಸ್ಯೆಗಳು ಎದುರಾದವು. ನನ್ನ ಫಿಟ್‌ನೆಸ್‌ ಹಾಳಾಯ್ತು. ನನ್ನ ಬಗ್ಗೆ ಬಹಳಷ್ಟು ಜನರಿಗೆ ಕೋಪವಿದೆ. ಕಾರಣ, ಸತ್ಯ ಮಾತಾಡ್ತಾನೆ ಎಂಬುದು. ಖಂಡಿತವಾದಿ ಲೋಕವಿರೋಧಿ ಅಂತಾರೆ. ಅಂತವನು ನಾನು ಅದೇ ನನ್ನ ಸಮಸ್ಯೆ. ನೇರ ಮಾತಾಡಿ ನಿಷ್ಠುರವಾಗ್ತಿàನಿ. ನಾನು ಬದಲಾಗೋಣ, ಯಾರಿಗೋ ಹೋಗಿ ಬಕೆಟ್‌ ಹಿಡಿಯೋಣ, ಯಾಮಾರಿಸೋಣ ಎಂಬುದು  ನನಗೆ ಬರಲ್ಲ. “ಕುಸ್ತಿ’ಗೆ ಫಿಟ್‌ನೆಸ್‌ ಬೇಕು. ಸ್ವಲ್ಪ ಮುಂದೂಡಿದ್ದೇನೆ.

“ಕುಸ್ತಿ’ ಶುರುವಾಗಿದ್ದು ಮಗನಿಗಾಗಿಯೇ ಅಲ್ಲವೇ?
ಹೌದು, ಮಗನಿಗಾಗಿಯೇ “ಕುಸ್ತಿ’ ಶುರು ಮಾಡಿದೆ. ಹಾಗಂತ, ಅದು ನಿಲ್ಲಲ್ಲ. ಹಂಡ್ರೆಡ್‌ ಪರ್ಸೆಂಟ್‌ “ಕುಸ್ತಿ’ ಆಗುತ್ತೆ. ಅವನಿಗಾಗಿ ಮಾಡೇ ಮಾಡ್ತೀನಿ ಬಿಡಲ್ಲ. “ಕುಸ್ತಿ’ ಮುಂದೆ ಹೋಗಿದೆಯಷ್ಟೆ. ನಾನು ಅಖಾಡದಿಂದ ದೂರ ಹೋಗಲ್ಲ. 

“ಸಲಗ’ ನಿಮ್ಮ ಕೆರಿಯರ್‌ನ ಬದಲಿಸುತ್ತಾ?
ಇಲ್ಲ, ಅದು ನನಗೆ ಗೊತ್ತಿಲ್ಲ. ಒಂದು ಸಿನಿಮಾ ನನ್ನ ಹಣೆಬರಹ ಬದಲಿಸುತ್ತೆ ಅಂತ ಯಾರೂ ಹೇಳಬಾರದು. ಒಂದು ಸಿನಿಮಾ ಬದುಕಿನ ಒಂದು ಒಳ್ಳೆಯ ಪ್ರಯತ್ನ ಎನ್ನಬಹುದು. ದೇವರಾಣೆ ಅದೆಲ್ಲಾ ಸುಳ್ಳು. ನಾಲಿಗೆ ಸಾವಿರ ನುಡಿದು ಬಿಡಬಹುದು. ಮೇಲೊಬ್ಬ ನೋಡ್ತಾ ಇರ್ತಾನೆ. ಅವನೇ ಎಲ್ಲರ ಕೆರಿಯರ್‌ ರೂಪಿಸೋದು.

ನಿಮ್ಮ “ಸಲಗ’ ಯಾವಾಗ?
ಸದ್ಯಕ್ಕೆ ನಿರ್ದೇಶಕರ್ಯಾರು ಎಂಬುದು ಪಕ್ಕಾ ಆಗಿಲ್ಲ. ಶುರುವಾಗೋಕೆ ಇನ್ನೂ ಸಮಯವಿದೆ. ಇಷ್ಟರಲ್ಲೇ ಸುದ್ದಿ ಕೊಡ್ತೀನಿ. “ಸಲಗ’ ಮೂಲಕ ವಿಜಿ ವಿತ್‌ ನ್ಯೂ ವರ್ಷನ್‌ ನೋಡಬಹುದು. 

ಹಾಗಾದರೆ, ವಿಜಿ ರಿಫ್ರೆಶ್‌ ಆಗ್ತಾರೆ?
ನಾನು ಯಾವತ್ತೂ ರಿಫ್ರೆಶ್‌ ಆಗಿಯೇ ಇರುತ್ತೇನೆ. ಯಾವುದಕ್ಕೂ ಯೋಚಿಸಲ್ಲ. ಪ್ರತಿ ಕತ್ತಲಿಗೂ ಬೆಳಕು ಇದ್ದೇ ಇರುತ್ತೆ. ಕೊನೆ ಮಾತು, ನನ್ನ ದ್ವೇಷಿಸಿದವರಿಗೆ, ಹಾಳು ಮಾಡಬೇಕು ಅಂತ ಯೋಚಿಸಿದವರಿಗೆ, ನನ್ನ ಇವತ್ತಿಗೂ ತುಳಿಬೇಕು ಅಂತ ಪ್ಲಾನ್‌ ಮಾಡ್ತಾ ಇರೋರ ಪಾದಕ್ಕೆ ದಿನಾನೂ ನಮಸ್ಕರಿಸುತ್ತಿರುತ್ತೇನೆ. ಅವರಿಗೆ ಒಳ್ಳೆಯದಾಗಲಿ.

ಹೊಸ ಜಾನರ್‌ನತ್ತ ವಿಜಿ ಮನಸ್ಸು ಮಾಡುತ್ತಿಲ್ಲವೇಕೆ?
“ದುನಿಯಾ’ ರೀತಿ ಮನ ಮುಟ್ಟುವಂತಹ ಕಥೆ ಬರಲಿ ಮಾಡ್ತೀನಿ. ಒಂದು “ದುನಿಯಾ’ ಇಷ್ಟು ವರ್ಷ ಊಟ ಹಾಕಿದೆ. ಇನ್ನೊಂದು ಅಂತಹ ಕಥೆ ಬಂದರೆ ಇನ್ನಷ್ಟು ವರ್ಷ ಊಟ ಹಾಕುತ್ತೆ. ಎಲ್ಲರಿಗೂ ಇಷ್ಟ ಆಗುವ ಚಿತ್ರ ಕೊಡುವುದು ಕಲಾವಿದರ ಕೆಲಸ. 

ಮಕ್ಕಳ ಭವಿಷ್ಯ ಕುರಿತು ಏನ್‌ ಹೇಳ್ತೀರಿ?
ಒಂದು ಬಯಸಬಲ್ಲೆ. ದುಡ್ಡು ಆಸ್ತಿ ಕ್ಷಣಿಕ. ತಂದೆಯಾಗಿ ಒಂದು ಯೋಚಿಸಬಲ್ಲೆ. ಎಲ್ಲಾ ಮಕ್ಕಳಿಗೂ ಒಳ್ಳೆಯ ಭವಿಷ್ಯ ಕೊಡಪ್ಪ ಎಂದು ದೇವರನ್ನು ಬೇಡಿಕೊಳ್ತೀನಿ. ಯಾಕೆಂದರೆ, ಅವನು ನಿರೂಪಿಸುವ ಮುಂದಿನ ಭವಿಷ್ಯದಲ್ಲಿ ನಾನು ಬದುಕೇ ಇರಲ್ಲ. ಎಲ್ಲಾ ತಾಯಿ ತಂದೆ ಮಕ್ಕಳಿಗೆ ಒಳ್ಳೆಯದ್ದನ್ನೇ ಹೇಳಿಕೊಡ್ತಾರೆ, ಕೆಟ್ಟದ್ದನ್ನಲ್ಲ. ಅವರು ಭವಿಷ್ಯ ರೂಪಿಸಿಕೊಳ್ಳುವ ಹೊತ್ತಿಗೆ ನಾವ್‌ ಇರಿ¤àವೋ ಇಲ್ಲವೋ ಗೊತ್ತಿಲ್ಲ. ನಮ್ಮ ಕರ್ತವ್ಯ ಒಳ್ಳೆದನ್ನು ಮಾಡಬೇಕು. ಯಾರು ನನ್ನ ಒಳ್ಳೆಯವನು, ಕೆಟ್ಟವನು ಅಂದುಕೊಳ್ತೀರೋ ಬೇಕಾಗಿಲ್ಲ. ನಾನು ಅವರಿಗೆ ಜನ್ಮ ಕೊಟ್ಟವನು. ಅವರೆಲ್ಲರಿಗೂ ಒಳ್ಳೆಯದಾಗಲಿ ಅಷ್ಟೇ.

ವಿಜಿಯನ್ನ ಯಾರಾದ್ರೂ ಟಾರ್ಗೆಟ್‌ ಮಾಡಿದ್ರಾ?
ಹ್ಹಹ್ಹಹ್ಹ…ಟಾರ್ಗೆಟ್‌ ಮಾಡೋಕೆ ನಾನು ಸ್ಟಾರ್‌ ಅಲ್ಲ, ವೇರಿ ಕಾಮನ್‌ ಮ್ಯಾನ್‌.  ನಾನು ರಜನಿಕಾಂತ್‌ ಅವರ ಅಭಿಮಾನಿ. ಅವರನ್ನು ಆಗಾಗ ಭೇಟಿ ಮಾಡಿದಾಗಲೆಲ್ಲ, ಕೆಲ ವಿಷಯ ಚರ್ಚಿಸುತ್ತಿರುತ್ತೇನೆ. ಆಗ ಅವರೊಂದು ಮಾತು ಹೇಳಿದ್ದು ನೆನಪಾಗುತ್ತೆ. “ನಮಗಿರೋದು ಪ್ರತಿಭೆ ಒಂದೇ ಆಸ್ತಿ. ಅದನ್ನು ಬಿಟ್ಟು ಬೇರೆ ಕಲಿತಿಲ್ಲ. ಎಷ್ಟೋ ದಿನಗಳ ಬಳಿಕ ಗೊತ್ತಾಗುತ್ತೆ, ನಮಗೇ ಗೊತ್ತಾಗದ ಹಾಗೆ ನಾವು ಬಳಕೆ ಆಗಿಬಿಟ್ಟಿದ್ದೇವೆ ಅಂತ’. ಅವರ ಮಾತಲ್ಲಿ ಸಾಕಷ್ಟು ಸತ್ಯವಿದೆ. ಒಂದು ಸೈಟ್‌ ಇದೆ ಅಂದ್ರೆ, ಅದಕ್ಕೆ ಬೇಲಿ ಹಾಕದಿದ್ದರೆ, ಬೇಲಿ ಹಾಕೋಕೆ ನೂರು ಜನ ಬರ್ತಾರೆ. ಆದರೆ, ಆ ಬೇಲಿ ಕಟ್ಟಿಕೊಳ್ಳೋಕೆ ಕಲಾವಿದರಿಗೆ ಆಗಲ್ಲ. ಕಲಾವಿದನಿಗೆ ಎಲ್ಲರೂ ಬೇಕು. ಯಾರನ್ನೂ ಬೇಲಿ ಹಾಕಿ ನಿಲ್ಲಿಸಲ್ಲ. ಹೀಗಿದ್ದಾಗ ಟಾರ್ಗೆಟ್‌ ಮಾತೆಲ್ಲಿ.

ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next