Advertisement

‘ಚಟುವಟಿಕೆಯಿಂದ ಮಕಳ ಮನಸ್ಸು  ಕ್ರಿಯಾಶೀಲ’

04:49 PM Jan 21, 2018 | Team Udayavani |

ತೆಂಕಿಲ: ಮಕ್ಕಳ ಮನಸ್ಸು ಕ್ರಿಯಾಶೀಲತೆಯನ್ನು ಪಡೆಯಲು ವಿವಿಧ ರೀತಿಯ ಚಟುವಟಿಕೆಗಳು ಅಗತ್ಯ. ಮಕ್ಕಳು ಪ್ರಶ್ನಿಸಿ ತಿಳಿದುಕೊಳ್ಳುವ ಅನುಭವವನ್ನು ಬೆಳೆಸಿಕೊಳ್ಳಬೇಕು ಎಂದು ವಿವೇಕಾನಂದ ಆಂ.ಮಾ. ಶಾಲೆಯ ಅಧ್ಯಕ್ಷ ವೆಂಕಟೇಶ್ವರ ಅಮೈ ಹೇಳಿದರು.

Advertisement

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯ ವಿಜ್ಞಾನ ಪರಿಷತ್‌ ದ.ಕ. ಜಿಲ್ಲಾ ಸಮಿತಿ ಆಶ್ರಯದಲ್ಲಿ ವಿವೇಕಾನಂದ ಆಂ.ಮಾ. ಶಾಲೆಯ ಸಹಯೋಗದೊಂದಿಗೆ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಜಿಲ್ಲಾ ಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ಜ್ಞಾನ ಸಂಪತ್ತನ್ನು ಪಠ್ಯದಿಂದ ಮಾತ್ರ ಪಡೆಯಲು ಸಾಧ್ಯವಿಲ್ಲ. ವಿದ್ಯಾಸಂಸ್ಥೆಗಳಲ್ಲಿ ನಡೆಯುವ ವಿವಿಧ ರೀತಿಯ
ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ವಿಚಾರಗಳನ್ನು ತಿಳಿದುಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ರಾಜ್ಯ ವಿಜ್ಞಾನ ಪರಿಷತ್‌ ರಾಜ್ಯಾದ್ಯಂತ ಏಕಕಾಲದಲ್ಲಿ ವಿಜ್ಞಾನ ರಸಪ್ರಶ್ನೆ ಆಯೋಜಿಸಿರುವುದು ಶ್ಲಾಘನೀಯ ಎಂದರು.

ವೈಜ್ಞಾನಿಕ ಚಿಂತನೆ ಬೆಳೆಯಲಿ
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ ಡಿ.ಎನ್‌. ಮಾತನಾಡಿ, ಪಠ್ಯಪುಸ್ತಕಗಳನ್ನು ಸೀಮಿತವಾಗಿ ನಿಬಂಧನೆಗಳೊಂದಿಗೆ ತಯಾರು ಮಾಡಬೇಕಾಗುತ್ತದೆ. ಪಠ್ಯದ ಹೊರತಾದ ತಿಳಿವಳಿಕೆಗಾಗಿ ಇಂತಹ ವೇದಿಕೆಗಳು ಅಗತ್ಯ. ಆ ಮೂಲಕ ವೈಜ್ಞಾನಿಕ ಚಿಂತನೆಗಳು ಮಕ್ಕಳಲ್ಲಿ ಬೆಳೆದಾಗ ಪರಿಷತ್ತಿನ ಉದ್ದೇಶವೂ ಸಫಲತೆಯನ್ನು ಕಾಣುತ್ತದೆ ಎಂದರು.

ರಾಜ್ಯ ವಿಜ್ಞಾನ ಪರಿಷತ್‌ ದ.ಕ. ಜಿಲ್ಲಾ ಸಮಿತಿ ಅಧ್ಯಕ್ಷ ಹಾಜಿ ಎಸ್‌. ಅಬೂಬಕ್ಕರ್‌ ಆರ್ಲಪದವು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿ ಕೋಶಾಧಿಕಾರಿ ಅನಂತರಾಮ ಹೇರಳೆ, ಸಾರ್ವಜನಿಕ ಶಿಕ್ಷಣ ಇಲಾಖೆ ವಿಜ್ಞಾನ ಪರಿವೀಕ್ಷಕ ಪುರುಷೋತ್ತಮ ಟಿ. ಉಪಸ್ಥಿತರಿದ್ದರು.

Advertisement

ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ವಿಜ್ಞಾನ ಪರಿಷತ್‌ ದ.ಕ. ಜಿಲ್ಲಾ ಸಮಿತಿ ಕಾರ್ಯದರ್ಶಿ ಕರುಣಾಕರ ಎಚ್‌.ಎಸ್‌., ಮಕ್ಕಳಲ್ಲಿ ಮೂಲ ವಿಜ್ಞಾನಕ್ಕೆ ಹೆಚ್ಚು ಒತ್ತು ನೀಡುವ ಉದ್ದೇಶದೊಂದಿಗೆ ಇಂತಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕ್ವಿಜ್‌ ಸ್ಪರ್ಧೆಯಲ್ಲಿ 50 ತಂಡಗಳಿಗೆ ಆರಂಭದಲ್ಲಿ ಲಿಖೀತ ಪರೀಕ್ಷೆ ನಡೆದು ಅನಂತರ ಮೂರು ತಂಡಗಳನ್ನು ಆಯ್ಕೆ ಮಾಡಿ ವೈವಾ ನಡೆಯಲಿದೆ. ಮೊದಲ ಎರಡು ಸ್ಥಾನಗಳನ್ನು ಪಡೆದ ತಂಡಗಳಿಗೆ ನಗದು ಬಹುಮಾನ ಹಾಗೂ ಪ್ರಥಮ ಸ್ಥಾನ ಪಡೆದ ತಂಡಕ್ಕೆ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ ಎಂದರು.

ಶಿಕ್ಷಕರಾದ ಶಾರದಾ ವಂದಿಸಿ, ಮಮತಾ ಪೈ ಕಾರ್ಯಕ್ರಮ ನಿರ್ವಹಿಸಿದರು. ಸುಮಾರು 50 ಪ್ರೌಢ ಶಾಲೆಗಳ ತಲಾ ಇಬ್ಬರು ವಿದ್ಯಾರ್ಥಿಗಳ ತಂಡ ಸ್ಪರ್ಧೆಯಲ್ಲಿ ಭಾಗವಹಿಸಿತ್ತು. ಕ್ವಿಜ್‌ ಮಾಸ್ಟರ್‌ ಕಿಶನ್‌ ನೇತೃತ್ವದಲ್ಲಿ ಸ್ಪರ್ಧೆ ನಡೆಸಲಾಯಿತು.

ಅಭಿನಂದನೆ
ವಿಜ್ಞಾನ ಪರಿಷತ್‌ ದ.ಕ. ಜಿಲ್ಲಾಧ್ಯಕ್ಷ ಹಾಜಿ ಎಸ್‌. ಅಬೂಬಕ್ಕರ್‌ ಅರ್ಲಪದವು ಅವರ ನಾಡು, ನುಡಿ, ಕಲೆಗೆ ನೀಡಿದ ಪ್ರೋತ್ಸಾಹವನ್ನು ಪರಿಗಣಿಸಿ ಭಾರತೀಯ ಸಂಸ್ಕೃತಿ ಅಕಾಡೆಮಿಯು ರಾಷ್ಟ್ರೀಯ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿರುವ ವಿಚಾರ ತಿಳಿದು ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ ಡಿ.ಎನ್‌. ಅವರು ಕಾರ್ಯಕ್ರಮದಲ್ಲಿ ಅಬೂಬಕ್ಕರ್‌ ಅವರಿಗೆ ಅಭಿನಂದನೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next