ರಾಯಚೂರು: ಸಹಸ್ರಾರು ಕಂಠಗಳಿಂದ ಏಕಕಾಲಕ್ಕೆ ಕನ್ನಡ ಹಾಡುಗಳು ಹೊರಹೊಮ್ಮುವ ಮೂಲಕ ಎಲ್ಲೆಡೆ ಕನ್ನಡ ಕಂಪು ಹರಡುವಂತೆ ಮಾಡಿತು. ಮಕ್ಕಳಿಂದ ಹಿರಿಯರಾದಿಯಾಗಿ ಎಲ್ಲರೂ ಒಂದೇ ಬಾರಿಗೆ ಹಾಡುವ ಮೂಲಕ ಗಮನ ಸೆಳೆದರು.
ಜಿಲ್ಲಾಡಳಿತದ ಆವರಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆವರಣ, ದೇವಸೂಗೂರಿನ ಸೂಗೂರೇಶ್ವರ ದೇವಸ್ಥಾನ, ದೇವದುರ್ಗ ತಾಲೂಕಿನ ಸುಂಕೇಶ್ವರಹಾಳ ಗ್ರಾಮದ ಸ್ವಾಮಿ ವಿವೇಕಾನಂದ ಕಾಲೇಜು, ರಾಯಚೂರಿನ ಎಸ್‌ಎಸ್‌ಆರ್‌ಜಿ ಮಹಿಳಾ ಕಾಲೇಜು, ಹಟ್ಟಿ ಚಿನ್ನದ ಗಣಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಏಕಕಾಲದಲ್ಲಿ ಲಕ್ಷ ಕಂಠಗಳ ಗೀತ ಗಾಯನ ಕಾರ್ಯಕ್ರಮ ನಡೆಯಿತು.
66ನೇ ಕನ್ನಡ ರಾಜ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಲಕ್ಷ ಕಂಠಗಳ ಸಾಮೂಹಿಕ ಗೀತ ಗಾಯನ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಗರ ಶಾಸಕ ಡಾ| ಶಿವರಾಜ ಪಾಟೀಲ್ ಕೂಡ ಹಾಡಿಗೆ ಧ್ವನಿಯಾದರು.
ಇದನ್ನೂ ಓದಿ: ಕೊಂಚ ತಡವಾಗಿದ್ದರೂ ಜಲಪಾತದಲ್ಲಿ ಕೊಚ್ಚಿ ಹೋಗುತ್ತಿದ್ದರು ತಾಯಿ-ಮಗು
ಈ ವೇಳೆ ಪ್ರಭಾರ ಜಿಲ್ಲಾಧಿಕಾರಿ ಶೇಖ್ ತನ್ವೀರ್ ಆಸೀಫ್, ಎಡಿಸಿ ಕೆ.ಆರ್. ದುರುಗೇಶ್, ಸಹಾಯಕ ಆಯುಕ್ತ ಸಂತೋಷ ಕಾಮಗೌಡ, ಕನ್ನಡ ಮತ್ತುಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ್, ತಹಶೀಲ್ದಾರ್ ಡಾ| ಹಂಪಣ್ಣ ಸಜ್ಜನ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಸೇರಿದಂತೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ಇದ್ದರು.