Advertisement

ಮೈದುಂಬಿದ ವರದಾ-ದಂಡಾವತಿ ನದಿ

06:15 PM Jul 12, 2022 | Nagendra Trasi |

ಸೊರಬ: ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಪ್ರಮುಖ ನದಿಗಳಾದ ವರದಾ ಮತ್ತು ದಂಡಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ತಾಲೂಕಿನ ಚಂದ್ರಗುತ್ತಿ, ಗುಡುವಿ, ಜಡೆ, ಉಳವಿ, ಕುಪ್ಪಗಡ್ಡೆ , ಅನವಟ್ಟಿ ಸೇರಿದಂತೆ ಅನೇಕ ಭಾಗಗಳ ಹಳ್ಳ-ಕೊಳ್ಳಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ.

Advertisement

ಬಹುತೇಕ ಎಲ್ಲಾ ಗ್ರಾಮದ ಕೆರೆಗಳು ಕೋಡಿ ಬಿದ್ದಿವೆ. ತಾಲೂಕಿನ ಇಂಡುವಳ್ಳಿ ಗ್ರಾಮದಲ್ಲಿ ಕೆರೆ ಏರಿ ಒಡೆದು, ತೋಟ ಮತ್ತು ಹೊಲ-ಗದ್ದೆಗಳಿಗೆ ನೀರು ನುಗ್ಗಿ ಹಾನಿಯುಂಟಾಗಿದೆ. ಗ್ರಾಮಸ್ಥರೇ ಕೆರೆ ಏರಿಗೆ ಒಡ್ಡನ್ನು ನಿರ್ಮಿಸಿದ್ದಾರೆ. ಜು.11ರವರೆಗೆ 157.9 ಮೀ.ಮೀ ವಾಡಿಕೆ ಮಳೆಯಾಗಿದ್ದು, ಈವರೆಗೆ 303.3 ಮಿ.ಮೀ. ಮಳೆ ದಾಖಲಾಗಿದೆ.

ಸಾಗರ, ಹೊಸನಗರ ಸೇರಿದಂತೆ ವಿವಿಧಡೆ ಮಳೆಯಾಗುತ್ತಿರುವ ಪರಿಣಾಮ ವರದಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಇದೇ ಪ್ರಮಾಣದಲ್ಲಿ ಮಳೆಯಾದರೆ ವರದಾ ನದಿ ಪಾತ್ರದ ಕಡಸೂರು, ತಟ್ಟಿಕೆರೆ, ಕಾರೇಹೊಂಡ, ಅಂದವಳ್ಳಿ, ಒಕ್ಕಲಕೊಪ್ಪ, ಚನ್ನಪಟ್ಟಣ, ದ್ಯಾವಾಸ, ಜೋಳದಗುಡ್ಡೆ, ಪುರ ಗ್ರಾಮಗಳ ಜಮೀನುಗಳಿಗೆ ಪ್ರವಾಹದ ಭೀತಿ ಎದುರಾಗಿದೆ.

ಪುರ ಗ್ರಾಮವು ಮುಳುಗಡೆಯಾಗುವ ಭೀತಿಯಲ್ಲಿದೆ. ಊರ ಗ್ರಾಮಸ್ಥರು ಹಾಗೂ ಕಡಸೂರು ಮತ್ತು ತಟ್ಟಿಕೆರೆ ಸುತ್ತಲಿನ ಗ್ರಾಮಗಳಲ್ಲಿ ನೂರಾರು ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಿದ ಭತ್ತ ನೀರಿನಲ್ಲಿ ಸಂಪೂರ್ಣ ಮುಳುಗಡೆಯಾಗಿದೆ. ಮಳೆ ಹೀಗೆ ಮುಂದುವರಿದರೆ ಸಾವಿರಾರು ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿದ ಬೆಳೆಗಳಿಗೆ ಹಾನಿಯಾಗಲಿದೆ.

ಮಳೆಯಿಂದ ತಾಲೂಕಿನಲ್ಲಿ 12 ಮನೆಗಳಿಗೆ ತೀವ್ರವಾಗಿ, 33 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಒಟ್ಟು 45 ಮನೆ ಹಾಗೂ 2 ಕೊಟ್ಟಿಗೆ ಮನೆಗೆ ಹಾನಿಯಾಗಿದ್ದು ಒಟ್ಟು 47 ಹಾನಿ ಪ್ರಕರಣಗಳು ಕಂದಾಯ ಇಲಾಖೆಯಿಂದ ವರದಿಯಾಗಿವೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

Advertisement

ಪಟ್ಟಣದಿಂದ ಜಂಗಿನಕೊಪ್ಪ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ದಂಡಾವತಿ ನದಿ ಸೇತುವೆಯ ತಡೆಗೋಡೆಗಳು ಕುಸಿದು ಹೋಗಿದ್ದು, ಅತಿಯಾದ ಮಳೆಯಾದರೆ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಜೊತೆಗೆ ತೋಟಗಾರಿಕೆ ಬೆಳೆಯಾದ ಅಡಕೆಗೂ ಸಹ ಕೊಳೆ ಸೇರಿದಂತೆ ಮತ್ತಿತರರ ರೋಗಗಳು ಬಾಧಿ ಸುವ ಆತಂಕ ರೈತರದ್ದಾಗಿದೆ. ತೀವ್ರ ಮಳೆಯಿಂದ ಮೆಕ್ಕೆಜೋಳ ನಾಶವಾಗುವ ಬೀತಿಯಲ್ಲಿ ರೈತರು ಇದ್ದಾರೆ.

ತಾಲೂಕು ಸೇರಿದಂತೆ ನೆರೆಯ ತಾಲೂಕಿನಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ವರದಾ ಮತ್ತು ದಂಡಾವತಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಕೆರೆಗಳು ತುಂಬಿ ಕೋಡಿ ಬಿದ್ದಿವೆ. ಗ್ರಾಮೀಣ ಭಾಗದ ಜನತೆ ಹಾಗೂ ನದಿ ಪಾತ್ರದ ರೈತರು ನದಿಗಳ ದಂಡೆಗಳಿಗೆ ತೆರಳಬಾರದು. ಜಾನುವಾರುಗಳಿಗೆ ಮೈ ತೊಳೆಯಲು ಹೋಗಬಾರದು. ಬಟ್ಟೆ ಒಗೆಯಲು ಹೋಗುಬಾರದು. ಯುವಕರು ಮೀನು ಹಿಡಿಯಲು ತೆರಳದೆ ಎಚ್ಚರ ವಹಿಸಬೇಕು ಎಂದು ಪೊಲೀಸ್‌ ವೃತ್ತ ನಿರೀಕ್ಷಕ
ಎಲ್‌. ರಾಜಶೇಖರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next