Advertisement

ಮೆಟ್ರೋ ರಹದಾರಿ ಮತ್ತಷ್ಟು ಕಗ್ಗಂಟು

11:36 AM Nov 15, 2017 | |

ಬೆಂಗಳೂರು: ಮೆಟ್ರೋ ಎರಡನೇ ಹಂತದ ಯೋಜನೆಯಲ್ಲಿ ಬರುವ ಗೊಟ್ಟಿಗೆರೆ-ನಾಗವಾರ ಮಾರ್ಗದ ಮೂಲನಕ್ಷೆಗೂ ಈಗ ಅಪಸ್ವರ ಕೇಳಿಬಂದಿದ್ದು, ಪರಿಷ್ಕೃತ ನಕ್ಷೆಯನ್ನೇ ಪರಿಗಣಿಸುವಂತೆ ಬಿಎಂಆರ್‌ಸಿ ಮೇಲೆ ಒತ್ತಡ ಹಾಕಲಾಗುತ್ತಿದೆ. ಇದರಿಂದ ಕಂಟೋನ್ಮೆಂಟ್‌ ಮಾರ್ಗ ಮತ್ತಷ್ಟು ಕಗ್ಗಂಟಾಗಿದೆ. 

Advertisement

ಮೂಲನಕ್ಷೆಯು ಕಂಟೋನ್ಮೆಂಟ್‌ ಮೂಲಕ ಹಾದುಹೋಗುತ್ತದೆ. ಹೀಗೆ ಹಾದುಹೋಗುವ ಮಾರ್ಗದ ಮಧ್ಯೆ ಸುರಕ್ಷತೆ ದೃಷ್ಟಿಯಿಂದ ದೊಡ್ಡ ಬಾವಿ ಆಕಾರದ ಗುಂಡಿ (ಶಾಫ್ಟ್) ತೆರೆಯಬೇಕಾಗುತ್ತದೆ. ಈ ಶಾಫ್ಟ್ ಮಾಂಗಲ್ಯ ಅಪಾರ್ಟ್‌ಮೆಂಟ್‌ ಇರುವ ಜಾಗದಲ್ಲೇ ಬರುತ್ತದೆ. ಹಾಗಾಗಿ, ಅಪಾರ್ಟ್‌ಮೆಂಟ್‌ ಮತ್ತು ಸುತ್ತಲಿನ ಮನೆಗಳನ್ನು ತೆರವುಗೊಳಿಸುವುದು ಅನಿವಾರ್ಯ ಆಗಲಿದೆ. ಇದಕ್ಕೆ ಈಗ ಸ್ಥಳೀಯ ನಿವಾಸಿಗಳಿಂದ ವಿರೋಧ ವ್ಯಕ್ತವಾಗಿದೆ.

“ಪರಿಷ್ಕೃತ ನಕ್ಷೆಯಲ್ಲಿ ಯಾವೊಂದು ಭೂಮಿಯನ್ನೂ ಸ್ವಾಧೀನಪಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಸುರಕ್ಷತೆ, ಆರ್ಥಿಕ ದೃಷ್ಟಿಯಿಂದಲೂ ಪರಿಷ್ಕೃತ ನಕ್ಷೆ ಸೂಕ್ತ ಎಂದು ಸ್ವತಃ ನೀವೇ (ಬಿಎಂಆರ್‌ಸಿ) ಹೇಳುತ್ತಿದ್ದೀರಿ. ಪರ್ಯಾಯ ಮಾರ್ಗ ಇರುವಾಗ, ಭೂಸ್ವಾಧೀನ ಯಾಕೆ?’ ಎಂದು ಸುಮಾರು 59 ಫ್ಲ್ಯಾಟ್‌ಗಳಿರುವ ಮಾಂಗಲ್ಯ ಅಪಾರ್ಟ್‌ಮೆಂಟ್‌ ನಿವಾಸಿಗಳು ಬಿಎಂಆರ್‌ಸಿ ಅಧಿಕಾರಿಗಳನ್ನು ಕೇಳುತ್ತಿದ್ದಾರೆ. 

ಈ ಕುರಿತು ಈಗಾಗಲೇ ಮಾಂಗಲ್ಯ ಅಪಾರ್ಟ್‌ಮೆಂಟ್‌ ನಿವಾಸಿಗಳ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ಸಿಂಗ್‌ ಖರೋಲ ಅವರನ್ನು ಭೇಟಿ ಮಾಡಿ, ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲ, ಹಾಗೊಂದು ವೇಳೆ ಮೂಲನಕ್ಷೆಯೇ ಅಂತಿಮವಾದರೆ, ಮುಂದಿನ ಹೋರಾಟದ ಹೆಜ್ಜೆ ಹೇಗಿರಬೇಕು ಎಂಬುದರ ಬಗ್ಗೆ ಚರ್ಚಿಸಲು ಮಂಗಳವಾರ ಸಂಜೆ ಅಪಾರ್ಟ್‌ಮೆಂಟ್‌ ನಿವಾಸಿಗಳು ಸಭೆ ನಡೆಸಿದ್ದಾರೆ.

ಸುತ್ತಲಿನ ಕಟ್ಟಡಗಳಿಗೂ ಧಕ್ಕೆ: “ಮೂಲನಕ್ಷೆ ಪ್ರಕಾರ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಮುಂದಾದರೆ, ಖಂಡಿತವಾಗಿಯೂ ನಾವು ಬಿಎಂಆರ್‌ಸಿ ಹಾಗೂ ಸರ್ಕಾರದ ಮೇಲೆ ಒತ್ತಡ ತರಬೇಕಾಗುತ್ತದೆ. ಹತ್ತಾರು ವರ್ಷಗಳಿಂದ ನಾವೆಲ್ಲಾ ಅಲ್ಲಿ (ಬೆನ್ಸನ್‌ ಟೌನ್‌ನಲ್ಲಿ) ನೆಲೆಸಿದ್ದೇವೆ. ಈಗ ನಿಗಮದ ಮುಂದೆ ಪರ್ಯಾಯ ಆಯ್ಕೆ ಇರುವುದರಿಂದ ಅದನ್ನೇ ಪರಿಗಣಿಸಲು ಮನವಿ ಮಾಡಬೇಕಾಗುತ್ತದೆ’ ಎಂದು ಮಾಂಗಲ್ಯ ಅಪಾರ್ಟ್‌ಮೆಂಟ್‌ ನಿವಾಸಿಗಳ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ವಿನೋದ್‌ ತಿಳಿಸಿದ್ದಾರೆ.

Advertisement

“ಆದರೆ, ಈ ವಿಚಾರ ಇನ್ನೂ ಆರಂಭಿಕ ಹಂತದಲ್ಲಿದೆ. ಹಾಗಾಗಿ, ಸದ್ಯದವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ’ ಎಂದು ಸ್ಪಷ್ಟಪಡಿಸಿದರು.  
ಈ ಮಧ್ಯೆ ಮತ್ತೂಂದೆಡೆ ಪರಿಷ್ಕೃತ ನಕ್ಷೆಗೆ ಈಗಾಗಲೇ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದು, ಬಂಬೂ ಬಜಾರ್‌ ನಿವಾಸಿಗಳು ಸೇರಿದಂತೆ ಹಲವು ಹೋರಾಟಗಾರರು ಕಂಟೋನ್ಮೆಂಟ್‌ ಮೂಲಕವೇ ಹಾದುಹೋಗಬೇಕು ಎಂದು ಪಟ್ಟುಹಿಡಿದಿದ್ದು, ಇದಕ್ಕೆ ಸಂಸದ ಪಿ.ಸಿ. ಮೋಹನ್‌, ರಾಜ್ಯಸಭೆ ಸದಸ್ಯ ಡಾ.ರಾಜೀವ್‌ ಚಂದ್ರಶೇಖರ್‌ ಸೇರಿದಂತೆ ಕೆಲ ಜನಪ್ರತಿನಿಧಿಗಳೂ ಕೈಜೋಡಿಸಿದ್ದಾರೆ.

ಹೀಗೆ ಎರಡೂ ಮಾರ್ಗಗಳಿಗೂ ವಿರೋಧಗಳು ಕೇಳಿಬರುತ್ತಿರುವುದರಿಂದ ಬಿಎಂಆರ್‌ಸಿಗೆ ಇದು ತಲೆನೋವಾಗಿ ಪರಿಣಮಿಸಿದೆ. ಉದ್ದೇಶಿತ ಸಮಗ್ರ ಯೋಜನಾ ವರದಿ ಡಿಪಿಆರ್‌ ಪ್ರಕಾರ ಕಂಟೋನ್ಮೆಂಟ್‌ನಿಂದ ಪಾಟರಿ ಟೌನ್‌ ನಡುವಿನ ಉದ್ದ 1,618 ಮೀಟರ್‌ ಇದೆ. ಆದರೆ, ಮೆಟ್ರೋ ನಿಯಮಗಳ ಪ್ರಕಾರ ಸುರಂಗ ಮಾರ್ಗದ ಉದ್ದ 1,500 ಮೀಟರ್‌ಗಿಂತ ಹೆಚ್ಚಿದ್ದರೆ, ಶಾಫ್ಟ್ ನಿರ್ಮಿಸುವುದು ಕಡ್ಡಾಯ. 

4 ಸಾವಿರ ಚದರ ಮೀಟರ್‌ ಭೂಸ್ವಾಧೀನ?: ಈ ಹಿಂದೆ ಮಂತ್ರಿಸ್ಕ್ವೇರ್‌ನಿಂದ ಮೆಜೆಸ್ಟಿಕ್‌ ನಡುವೆ “ಕಾವೇರಿ’ ಟಿಬಿಎಂ ಕೆಟ್ಟುನಿಂತಿದ್ದಾಗ, ಅದರ ಪಕ್ಕದಲ್ಲೊಂದು ತಾತ್ಕಾಲಿಕವಾದ “ಶಾಫ್ಟ್’ ಕೊರೆದು, ಟಿಬಿಎಂ ಹೊರತೆಗೆಯಲಾಗಿತ್ತು. ಇದೇ ಮಾದರಿಯಲ್ಲಿ ಕಂಟೋನ್ಮೆಂಟ್‌-ಪಾಟರಿ ಟೌನ್‌ ನಡುವೆ ಶಾಶ್ವತವಾದ “ಶಾಫ್ಟ್’ ನಿರ್ಮಿಸಬೇಕಾಗುತ್ತದೆ.

ಈ “ಶಾಫ್ಟ್’ ನಂದಿದುರ್ಗ ರಸ್ತೆ-ಬೆನ್ಸನ್‌ ಟೌನ್‌ ನಡುವೆ ಇರುವ ಮಾಂಗಲ್ಯ ಅಪಾರ್ಟ್‌ಮೆಂಟ್‌ ಇರುವ ಸ್ಥಳದಲ್ಲಿ ಬರಲಿದ್ದು, ಇದಕ್ಕಾಗಿ ಸುಮಾರು ನಾಲ್ಕು ಸಾವಿರ ಚದರ ಮೀಟರ್‌ನಷ್ಟು ಭೂಮಿ ಸ್ವಾಧೀನಪಡಿಸಿಕೊಳ್ಳುವುದು ಅನಿವಾರ್ಯ. ಜತೆಗೆ ಎರಡೂ ನಿಲ್ದಾಣಗಳ ತುದಿಯಲ್ಲಿ ಟನಲ್‌ ವೆಂಟಿಲೇಷನ್‌ ಸಿಸ್ಟ್‌ಂ ಅಳವಡಿಸಬೇಕಾಗುತ್ತದೆ. ಇದನ್ನು ಸಮಗ್ರ ಯೋಜನಾ ವರದಿ (ಡಿಪಿಆರ್‌)ಯಲ್ಲಿ ಪ್ರಸ್ತಾಪಸಿದ್ದು, ಈ ಸಂಬಂಧ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮೀಕ್ಷೆಯನ್ನೂ ಪೂರ್ಣಗೊಳಿಸಿದ್ದಾರೆ. 

ಭಯ ಹುಟ್ಟಿಸುವ ತಂತ್ರ; ಆರೋಪ
ಇದೊಂದು ಭಯ ಹುಟ್ಟಿಸುವ ತಂತ್ರ ಅಷ್ಟೇ. ಅಪಾರ್ಟ್‌ಮೆಂಟ್‌ ಇರುವ ಜಾಗದಲ್ಲೇ ಶಾಫ್ಟ್ ನಿರ್ಮಿಸಬೇಕು ಎಂಬ ಹಠ ಯಾಕೆ? ಅದೇ ಮಾರ್ಗದಲ್ಲಿ ರಕ್ಷಣಾ ಇಲಾಖೆ ಜಾಗ ಇದೆ. ಮಸೀದಿಯೊಂದರ ಭೂಮಿ ಇದೆ. ಅಲ್ಲಿ ಬಿಎಂಆರ್‌ಸಿಯು ಈ ಶಾಫ್ಟ್ ನಿರ್ಮಿಸಬಹುದಲ್ಲಾ?
– ಸಂಜೀವ ದ್ಯಾಮಣ್ಣವರ, ಸದಸ್ಯ, ಪ್ರಜಾ ರಾಗ್‌ ಸಂಸ್ಥೆ

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next