Advertisement
ಶಿಸ್ತುಬದ್ಧ ಉಪವಾಸಾನುಷ್ಠಾನದ ಪವಿತ್ರ ತಿಂಗಳಾದ ರಂಝಾನ್, ಇಸ್ಲಾಮೀ ಇತಿಹಾಸದ ಅನೇಕ ಮಹತ್ವಪೂರ್ಣ ಘಟನೆಗಳ ಅಪೂರ್ವ ಸಂಗಮವೂ ಆಗಿದೆ. ಈ ಪಾವನ ರಂಝಾನ್ ಮಾಸಕ್ಕೆ ವಿದಾಯ ಕೋರುವ ಈದುಲ್ಫಿತರ್, ರಂಝಾನ್ ಸಾರುವ ಉನ್ನತ ಆದರ್ಶಗಳ ಸವಿನೆನಪಿಗಾಗಿ ವಿಶ್ವದಾದ್ಯಂತ ಆಚರಿಸಲ್ಪಡುತ್ತದೆ. ಉಪವಾಸ ವ್ರತವು ಸೃಷ್ಟಿಸುವ ಮಾನಸಿಕ ಶುಭ್ರತೆ ಮತ್ತು ಸಂಯಮವನ್ನು ಕೇವಲ ಅದೊಂದು ಮಾಸಕ್ಕೆ ಮಾತ್ರ ಸೀಮಿತವಾಗಿರಿಸದೆ, ವರ್ಷ ದುದ್ದಕ್ಕೂ ಕಾಯ್ದುಕೊಳ್ಳಬೇಕೆಂಬ ಆದರ್ಶದೊಂದಿಗೆ ಈದುಲ್ಫಿತರ್ ಆಚರಿಸಲ್ಪಡುತ್ತದೆ.
Related Articles
Advertisement
‘ಝಕಾತ್’ ಎಂಬುದು ಮುಸ್ಲಿಮರಿಗೆ ಬದುಕಿನಲ್ಲಿ ತ್ಯಾಗದ ಮಹತ್ವವನ್ನು ಬೋಧಿಸುತ್ತದೆ. ಮಾತ್ರವಲ್ಲದೆ ಅಗತ್ಯಬಿದ್ದಾಗ ತನ್ನ ಹೆಚ್ಚಿನ ಸಂಪತ್ತನ್ನು ದೇವನ ಮಾರ್ಗದಲ್ಲಿ ಖರ್ಚು ಮಾಡಲು ಪ್ರೋತ್ಸಾಹ ನೀಡುತ್ತದೆ. ‘ಝಕಾತ್’ ಇಸ್ಲಾಮಿನಲ್ಲಿ ಬಡವ-ಬಲ್ಲಿದರೆಂಬ ಅಸಮಾನತೆಯನ್ನು ತೊಡೆದುಹಾಕಲು ಯತ್ನಿಸುವುದಲ್ಲದೆ, ಬದುಕಿನುದ್ದಕ್ಕೂ ಪರೋಪಕಾರ ಪ್ರಜ್ಞೆ, ಅನುಕಂಪ, ಸಮಾನತೆ ಮತ್ತು ಸೌಹಾರ್ದತೆಯನ್ನು ಪಾಲಿಸಲು ಪ್ರೇರಣೆ ನೀಡುತ್ತದೆ. ‘ತನ್ನ ನೆರೆಹೊರೆಯವರು ಹಸಿವಿನಿಂದ ಬಳಲುತ್ತಿರುವಾಗ, ಹೊಟ್ಟೆ ತುಂಬಾ ಉಂಡು ತೇಗುವವನು ಮುಸಲ್ಮಾನನಲ್ಲ. ನೀವು ನಿಮ್ಮ ವೈಯಕ್ತಿಕ ಜೀವನಕ್ಕೆ ಏನೆಲ್ಲಾ ಒಳಿತನ್ನು ಅಪೇಕ್ಷಿಸುತ್ತೀರೋ, ಅವೆಲ್ಲವೂ ನಿಮ್ಮ ಸಹೋದರ. ಬಾಂಧವರಿಗೂ ದೊರೆಯುವಂತೆ ಬಯಸಿರಿ. ಅಲ್ಲಿಯ ತನಕ ನೀವಾರೂ ಪರಿಪೂರ್ಣ ಸತ್ಯವಿಶ್ವಾಸಿಗಳಾಗಲಾರಿರಿ’ ಎಂದು ಪ್ರವಾದಿ ಮುಹಮ್ಮದ (ಸ.ಅ.)ರು ಮನುಕುಲಕ್ಕೆ ಕರೆ ನೀಡಿರುವರು.
ಈದುಲ್ ಫಿತರ್ ಶಾಂತಿ, ಸಮಾನತೆ ಮತ್ತು ಸೌಹಾರ್ದತೆಯನ್ನು ಮನುಕುಲಕ್ಕೆ ಬೋಧಿಸಿ, ಬದುಕಿನ ಪಾವಿತ್ರ್ಯವನ್ನು ಹೆಚ್ಚಿಸುತ್ತದೆ. ರಂಝಾನ್ ಮತ್ತು ಈದುಲ್ಫಿತರ್ ಸಾರುವ ಸತ್ಯ, ಶಾಂತಿ, ಸೌಹಾರ್ದತೆಗಳು ಬದುಕಿನಲ್ಲಿ ಭರವಸೆಯನ್ನೂ ಸ್ಫೂರ್ತಿಯನ್ನೂ ಮತ್ತು ನವ ಚೈತನ್ಯವನ್ನು ತುಂಬುವುದಕ್ಕೆ ನಮಗಿಂದು ಅಗತ್ಯವಾಗಿದೆ. ಬದುಕಿನ ಜಂಜಾಟದಲ್ಲಿ ಮರೆಯುತ್ತಿರುವ ನೈತಿಕ ಮೌಲ್ಯವನ್ನು ಮತ್ತೆ ಜಾಗೃತಗೊಳಿಸಿ, ಬದುಕಿಗೆ ಉನ್ನತ ಅರ್ಥವನ್ನು ಕಲ್ಪಿಸುವುದೇ ಹಬ್ಬಗಳ ಗುರಿ. ಈದುಲ್ ಫಿತರ್ ಸಾರುವ ಸಮಾನತೆ ಮತ್ತು ಸಹೋದರತೆಯು ಮನುಷ್ಯನ ದೈನಂದಿನ ಬದುಕನ್ನು ಅರ್ಥಪೂರ್ಣಗೊಳಿಸುತ್ತದೆ. ಮನುಷ್ಯನು ಸಂತೋಷ ಪಡಬೇಕಾದುದು ಕೇವಲ ತನ್ನೊಬ್ಬನ ವೈಯಕ್ತಿಕ ಏಳಿಗೆಯಲ್ಲಿ ಮಾತ್ರವಲ್ಲ. ಬದಲಾಗಿ ಸರ್ವ ಮನುಕುಲದ ಹಿತ ಸಾಧನೆಯಲ್ಲಿ. ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗಾಗಿ ಇಸ್ಲಾಮ್ ನೀಡಿದ ಉತ್ಕೃಷ್ಟ ಮೌಲ್ಯಗಳು ಬದುಕನ್ನು ಪಾವನಗೊಳಿಸುತ್ತವೆ.
ಈದುಲ್ ಫಿತರ್ ಎಲ್ಲಾ ರೀತಿಯ ಮಾನವ ಪ್ರಯತ್ನಗಳ ಹೊರತಾಗಿಯೂ ಮತ್ತೂ ಮತ್ತೂ ಕಾಲಿಕ್ಕುತ್ತಿರುವ ಅಸ ಮಾನತೆ, ಜನಾಂಗ, ಭಾಷೆ, ಪ್ರದೇಶಗಳ ಹೆಸರಿನಲ್ಲಿ ನಡೆಯುವ ಹೋರಾಟ, ಇನ್ನೊಬ್ಬರ ಹಕ್ಕುಗಳ ದಮನ, ದಿನಗಳೆದಂತೆಲ್ಲಾ ಸಾಮಾಜಿಕ ಬದುಕಿನಲ್ಲಿ ಕಾಣುವ ನೈತಿಕ ಮೌಲ್ಯಗಳ ಅಪಮೌಲ್ಯ, ಇವೆಲ್ಲವುಗಳ ನಿವಾರಣೆಗಾಗಿ ಪ್ರವರ್ತಿಸುವ ಜನಾಂಗವಾಗಿ ಕಾರ್ಯಕ್ಷೇತ್ರಕ್ಕಿಳಿಯುವಂತೆ ನಮ್ಮನ್ನು ಒಳಿತಿನ ಕಡೆಗೆ ಆಹ್ವಾನಿಸುವ ಪಾವನ ಹಬ್ಬ.
ಈದುಲ್ಫಿತರ್ ಪ್ರಾರ್ಥನೆಯ ಹಬ್ಬ. ಅನೇಕ ರೀತಿಯ ಸಮಸ್ಯೆಗಳನ್ನೂ ಎಡರು ತೊಡರುಗಳನ್ನೂ ದೇಶವು ಎದುರಿ ಸುತ್ತಿರುವ ಈ ಸನ್ನಿವೇಶದಲ್ಲಿ, ಮನುಕುಲದ ಶಾಂತಿ, ಸುಭಿಕ್ಷೆ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸುವುದು ಈ ಸಂದರ್ಭದಲ್ಲಿ ಅಗತ್ಯವಾಗಿದೆ. ಒಳಿತಿನ ಪಾಲನೆಯತ್ತ, ಸೌಹಾರ್ದತೆಯ ಸಾಧನೆಯತ್ತ ಪ್ರಯತ್ನಿಸುವುದಕ್ಕೆ ಹಬ್ಬಗಳು ಸುಸಂದರ್ಭಗಳು. ಈದುಲ್ ಫಿತರಿನ ಆಚರಣೆಯಿಂದ, ಅದರ ಹಿನ್ನೆಲೆಯಲ್ಲಿ ಅಡಕವಾಗಿರುವ ಆದರ್ಶಗಳನ್ನು ನಮ್ಮ ಬದುಕಿನ ಪರಿಪೂರ್ಣತೆಗೆ ಅಳವಡಿಸಿಕೊಳ್ಳಬೇಕು.
ಈದುಲ್ಫಿತರ್ ಬೋಧಿಸುವ ಶಾಂತಿ, ಸಮಾನತೆ ಮತ್ತು ಸೌಹಾರ್ದತೆಯನ್ನು ಬದುಕಿನಲ್ಲಿ ರೂಢಿಸಿಕೊಂಡು, ಮನು ಕುಲದ ಶಾಂತಿಗಾಗಿ ಸುಭಿಕ್ಷೆಗಾಗಿ, ನೆಮ್ಮದಿಗಾಗಿ ಅಲ್ಲಾಹನಲ್ಲಿ ಐಕ್ಯತೆಯಿಂದ, ಈ ಶುಭದಿನದಂದು ನಾವೆಲ್ಲಾ ಪ್ರಾರ್ಥಿಸೋಣ. ಈದುಲ್ ಫಿತರಿನ ಸಂದೇಶಗಳನ್ನು ನೆನಪಿಸಿಕೊಂಡು, ಮುಸ್ಲಿಮರಲ್ಲಿ ಮಾತ್ರವಲ್ಲ, ಮುಸ್ಲಿಮೇತರರಲ್ಲೂ ಸದಾ ಸೌಹಾರ್ದತೆಯಿಂದ, ಅನ್ಯೋನ್ಯತೆಯಿಂದ ವರ್ತಿಸೋಣ. ಮಾನವೀಯತೆಯಿಂದ, ಸೌಹಾರ್ದತೆಯಿಂದ ಬದುಕನ್ನು ತುಂಬಿ, ಸದಾ ಬದುಕನ್ನು ಸಾರ್ಥಕಗೊಳಿಸೋಣ, ಅರ್ಥ ಪೂರ್ಣವಾಗಿರಿಸೋಣ.
ಈದುಲ್ಫಿತರಿನಂದು ಈದ್ ಸೌಹಾರ್ದಕೂಟಗಳನ್ನು ಏರ್ಪಡಿಸಿ, ಇತರರನ್ನು ಆಹ್ವಾನಿಸುವುದರಿಂದ, ಮತೀಯ ಸಾಮರಸ್ಯವನ್ನು ಕಾಪಾಡಿ, ಸೌಹಾರ್ದತೆಯ ಸಹಬಾಳ್ವೆಯನ್ನು ಪೋಷಿಸಿ ಬೆಳೆಸಲು ಸಾಧ್ಯವಾಗುತ್ತದೆ. ಈದುಲ್ಫಿತರಿನ ಸಂದೇಶವು ನಮ್ಮ ದೇಶದಲ್ಲಿ ಅವ್ಯಾಹತವಾಗಿ ಹರಡಿಕೊಂಡ ಕೋಮುಗಲಭೆಗಳನ್ನು ಹೊಡೆದೋಡಿಸಿ, ಎಲ್ಲರೂ ಶಾಂತಿ, ಸಮಾನತೆ ಮತ್ತು ಸೌಹಾರ್ದತೆಯಿಂದ ಜೀವಿಸಲು ಉಪಯುಕ್ತವಾಗಿವೆ.
ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸಂಪತ್ತನ್ನು ತನ್ನ ಮತ್ತು ತನ್ನವರ ಸುಖ ಭೋಗಗಳಿಗೆ ಮಾತ್ರ ಖರ್ಚು ಮಾಡದೆ, ಆ ಸೊತ್ತಿನಲ್ಲಿ ಅನಾಥರ, ವಿಧವೆಯರ ಮತ್ತು ಅಪೇಕ್ಷಿತರ ಹಕ್ಕು ಇದೆ ಎಂಬುದನ್ನು ಮನಗಾಣಬೇಕು. ತಾನು ಗಳಿಸಿದ ಎಲ್ಲಾ ಸಂಪತ್ತನ್ನೂ, ತನ್ನ ಮತ್ತು ತನ್ನವರ ಹಿತಾಸಕ್ತಿಗಾಗಿ ಮಾತ್ರ ವಿನಿಯೋಗಿಸುವುದನ್ನು ಇಸ್ಲಾಮ್ ನಿಷೇಧಿಸಿದೆ.
– ಕೆ.ಪಿ. ಅಬ್ದುಲ್ ಖಾದರ್ ಕುತ್ತೆತ್ತೂರು