Advertisement

ಅವ್ಯವಸ್ಥೆ ಆಗರ ಬಾಲಕರ ವಸತಿ ನಿಲಯ

02:51 PM Aug 19, 2019 | Team Udayavani |

ಕುಷ್ಟಗಿ: ತಾಲೂಕಿನ ತಹಶೀಲ್ದಾರ್‌ ಕಚೇರಿ ಪಕ್ಕದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಮೆಟ್ರಿಕ್‌ ಪೂರ್ವ ಬಾಲಕ ವಸತಿ ನಿಲಯ ಅವ್ಯವಸ್ಥೆಯ ಆಗರವಾಗಿದೆ.

Advertisement

ಈ ಹಾಸ್ಟೆಲ್ನಲ್ಲಿ 6ನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗೆ 160 ವಿದ್ಯಾರ್ಥಿಗಳಿದ್ದು, ಹಗಲು ವೇಳೆ ಏಕೈಕ್‌ ವಾರ್ಡನ್‌ ಇದ್ದು, ರಾತ್ರಿ ಕಾವಲುಗಾರ ಇಲ್ಲ. ನಿಲಯದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಊಟ ನೀಡುತ್ತಿಲ್ಲ. ನೀರಿನ ಕೊರತೆಯಿಂದ ಶೌಚಾಲಯಗಳು ಗಬ್ಬೆದ್ದು ನಾರುತ್ತಿವೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ನಿರ್ಜನ ಪ್ರದೇಶದಲ್ಲಿ ಬಹಿರ್ದೆಸೆಗೆ ಹೋಗುತ್ತಿರುವುದಾಗಿ ವಿದ್ಯಾರ್ಥಿಗಳು ವಸತಿ ನಿಲಯದ ಅವಸ್ಥೆ ತೆರೆದಿಟ್ಟರು. ಸಮಾಜ ಕಲ್ಯಾಣ ಅಧಿಕಾರಿ ತಾಲೂಕು ಕೇಂದ್ರದಲ್ಲಿದ್ದರೂ ಹಾಸ್ಟೆಲ್ಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ರಾತ್ರಿ 8:00 ಗಂಟೆ ಊಟದ ನಂತರ ವಾರ್ಡನ್‌ ಮನೆಗೆ ತೆರಳುತ್ತಾರೆ. ನಂತರ ವಿದ್ಯಾರ್ಥಿಗಳು ಮಲಗದೇ ಹೊರಗೆ ಅಲೆಯುವುದು, ಮೊಬೈಲ್ ನೋಡುವುದರಲ್ಲಿ ಮಗ್ನರಾಗುತ್ತಾರೆ. ರಾತ್ರಿ ವೇಳೆ ವಸತಿ ನಿಲಯದಲ್ಲಿ ಹೇಳ್ಳೋರು ಕೇಳ್ಳೋರು ಇಲ್ಲದಂತಾಗಿದೆ. ಈಗಿರುವ ವಾರ್ಡನ್‌ಗೆ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ನೀಡುವುದೊಂದೇ ಕೆಲಸ. ವಿದ್ಯಾರ್ಥಿಗಳು ಅಭ್ಯಾಸದ ಬಗ್ಗೆ ಗಮನಹರಿಸಿಲ್ಲ. ಊಟ ಕಡಿಮೆ ನೀಡುತ್ತಿದ್ದು, ಒಂದೇ ಚಪಾತಿ ನೀಡಿದರೂ ತೆಪ್ಪಗೆ ತಿನ್ನಬೇಕಿದ್ದು, ಊಟದ ಮೆನು ಬೋರ್ಡ್‌ಗೆ ಸೀಮಿತವಾಗಿದೆ. ಕೆಲ ವಿದ್ಯಾರ್ಥಿಗಳಿಗೆ ಊಟ ಹೆಚ್ಚು-ಕಡಿಮೆ ಕೊಡಿ ನಡೆಯುತ್ತೇ ಆದರೆ, ವಸತಿ ನಿಲಯದಲ್ಲಿ ಬೋಧಕರನ್ನು ನೇಮಿಸಬೇಕು. ರಾತ್ರಿ ಕಾವಲುಗಾರ ಇಲ್ಲದಿದ್ದಾಗ ಕರೆಂಟ್ ಹೋದರೆ ಅಳುತ್ತಾ ಕೂರಬೇಕಿದೆ. ವಸತಿ ನಿಲಯದ ವಿದ್ಯಾರ್ಥಿಗಳಿಗೆ ಆರೋಗ್ಯದಲ್ಲಿ ವ್ಯತ್ಯಾಸವಾದರೆ ಮನೆಯವರನ್ನು ಕರೆಯಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

ಜಿಪಂ ಸದಸ್ಯ ಕೆ. ಮಹೇಶ, ತಾಪಂ ಸದಸ್ಯೆ ಶೈಲಾ ಕರಪಡಿ ಹಾಸ್ಟೆಲ್ಗೆ ಭೇಟಿ ನೀಡಿ, ಇಲ್ಲಿನ ಸಮಸ್ಯೆಗೆ ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿಯ ಕಾಟಾಚಾರದ ಕೆಲಸವೇ ಕಾರಣ ಎಂದು ಬೇಸರ ವ್ಯಕ್ತಪಡಿಸಿದರು. ಜಿಪಂ ಸದಸ್ಯ ಕೆ. ಮಹೇಶ ಅವರು, ತಾಲೂಕಿನ ಯಾವುದೇ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಂದ ಸಮಸ್ಯೆಗಳ ದೂರು ಬರಬಾರದು ಎಂದು ಎಚ್ಚರಿಸಿದರೂ ಪುನರಾವರ್ತನೆಯಾಗುತ್ತಿವೆ. ವಸತಿ ನಿಲಯದ ನಿರ್ವಹಣೆ ಹೊರಗುತ್ತಿಗೆ ನೀಡಲಾಗಿದ್ದು, ಅವರು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ಕಪ್ಪು ಪಟ್ಟಿಗೆ ಸೇರಿಸಲಾಗುವುದು. ಈ ವಿಷಯವನ್ನು ಜಿಪಂ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಲಾಗುವುದು ಎಂದರು.

ತಾಪಂ ಸದಸ್ಯೆ ಶೈಲಾ ಕರಪಡಿ ಪ್ರತಿಕ್ರಿಯಿಸಿ, ಈ ವಸತಿ ನಿಲಯ ಅವ್ಯವಸ್ಥೆ ಆಗರವಾಗಿದೆ. ವಿದ್ಯಾರ್ಥಿಗಳನ್ನು ಬೆಳಗ್ಗೆ ಬೇಗ ಎಚ್ಚರಿಸಿ ಅಭ್ಯಾಸ ಮಾಡಿಸುವ ಪರಿಪಾಠವಿಲ್ಲ. ವಸತಿ ನಿಲಯದಲ್ಲಿ ವಸ್ತುಗಳು ಕಳುವಾಗುತ್ತಿದ್ದು, ಹೆಸರಿಗೆ ಮಾತ್ರ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ಆರೋಪಿಸಿದರು.

Advertisement

ಜಯನಗರದಲ್ಲಿ ನಿರ್ಮಿಸಿರುವ ಬಾಲಕಿಯರ ಎಸ್‌ಸಿ ವಿದ್ಯಾರ್ಥಿ ನಿಲಯದ ನೂತನ ಕಟ್ಟಡಕ್ಕೆ ಹಾಸ್ಟೇಲ್ ಸ್ಥಳಾಂತರಿಸುವಂತೆ ಒತ್ತಾಯಿಸಿ ವಿದ್ಯಾರ್ಥಿನಿಯರು ಎಸ್‌ಎಫ್‌ಐ ನೇತೃತ್ವದಲ್ಲಿ ಶಾಸಕ ಪರಣ್ಣ ಮುನವಳ್ಳಿ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ಜಯನಗರದ ಖಾಸಗಿ ಕಟ್ಟಡದಲ್ಲಿ ಎಸ್‌ಸಿ ಕಾಲೇಜು ಹಾಸ್ಟೆಲ್ ನಡೆಯುತ್ತಿದ್ದು, ಇದರಲ್ಲಿ 140-200 ವಿದ್ಯಾರ್ಥಿನಿಯರಿದ್ದಾರೆ. ನಾಲ್ಕು ಕೋಣೆ ಇದ್ದು ಒಂದೇ ಶೌಚಾಲಯ ಇರುವ ಕಾರಣ ವಿದ್ಯಾರ್ಥಿನಿಯರಿಗೆ ತೊಂದರೆಯಾಗಿದೆ. ಸ್ವಂತ ಕಟ್ಟಡ ನಿರ್ಮಾಣವಾಗಿ ಬಹಳ ದಿನಗಳು ಕಳೆದರೂ ಹಾಸ್ಟೆಲ್ ಸ್ಥಳಾಂತರ ಮಾಡದೇ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಮಲಗಲು ಮತ್ತು ಕುಳಿತುಕೊಳ್ಳಲು ಜಾಗವಿಲ್ಲ. ಶಾಸಕರು ಉದ್ಘಾಟಿಸುವ ತನಕ ಹಾಸ್ಟೆಲ್ ಸ್ಥಳಾಂತರ ಮಾಡುವುದಿಲ್ಲ ಎಂದು ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿದ್ದಾರೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಶಾಸಕ ಪರಣ್ಣ ಮುನವಳ್ಳಿ ಮನವಿ ಸ್ವೀಕರಿಸಿ ಮಾತನಾಡಿ, ವಿದ್ಯಾರ್ಥಿನಿಯರಿಗೆ ಒಳ್ಳೆಯದನ್ನು ಮಾಡಲು ನೂತನ ಹಾಸ್ಟೆಲ್ ಕಟ್ಟಡ ನಿರ್ಮಿಸಲಾಗಿದೆ. ವಿಳಂಬವಾಗಿದ್ದು ಇದರಿಂದ ವಿದ್ಯಾರ್ಥಿನಿಯರಿಗೆ ತೊಂದರೆಯಾಗಿದೆ. ಶುಕ್ರವಾರದೊಳಗೆ ಸ್ಥಳಾಂತರ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ತಿಳಿಸಿದರು. ಬಾಳಪ್ಪ ಹುಲಿಹೈದರ್‌, ಗ್ಯಾನೇಶ ಕಡಗದ, ಮಂಜುನಾಥ, ರವಿಕುಮಾರ, ಅಮರೇಶ ಕಡಗದ, ಕರಿಯಮ್ಮ, ದ್ಯಾಮಮ್ಮ, ಹನುಮಂತಿ ಸೇರಿ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next