Advertisement
ವೃಂದಾವನ ವೀಕ್ಷಣೆಗೆ ಬಂದ ಭಕ್ತರ ದಂಡುಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳ ವೃಂದಾವನ ವೀಕ್ಷಣೆಗೆ ಸೋಮವಾರ ಬೆಳಗ್ಗೆಯಿಂದಲೇ ಭಕ್ತರು ಆಗಮಿಸಿದರು. ಬೆಂಗಳೂರಿನ ವಿವಿಧ ಪ್ರದೇಶ ಮಾತ್ರವಲ್ಲದೆ, ಮಂಗಳೂರು, ಉಡುಪಿ ಸಹಿತವಾಗಿ ಮೂಲೆ ಮೂಲೆಗಳಿಂದ ಭಕ್ತರು ಹಾಗೂ ಶಿಷ್ಯವೃಂದ ಭೇಟಿ ನೀಡಿ ಶ್ರೀಗಳ ವೃಂದಾವನ ದರ್ಶನ ಪಡೆದರು. ವೃಂದಾವನ ವೀಕ್ಷಣೆಗಾಗಿ ಬಂದಿದ್ದವರಿಗೆ ಮಧ್ಯಾಹ್ನ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಮಧ್ಯಾಹ್ನ 12.30ಕ್ಕೆ ಮಠದ ಯತಿಗಳಾದ ವಿಶ್ವ ಪ್ರಸನ್ನ ಶ್ರೀಗಳು ವೃಂದಾವನಕ್ಕೆ ಹಸ್ತೋದಕ ನೆರವೇರಿಸಿದರು. ಮಠದಲ್ಲಿ ತಯಾರಿಸಿದ್ದ ವಿವಿಧ ಬಗೆಯ ಪ್ರಸಾದಗಳನ್ನು ವೃಂದಾವನದ ಮುಂಭಾಗದಲ್ಲಿಟ್ಟು ಪೂಜೆ ನೆರವೇರಿಸಿದರು. ಸಂಸ್ಕೃತ, ವೇದ ಸಹಿತ ವಿವಿಧ ಕೋರ್ಸ್ ಗಳನ್ನು ವ್ಯಾಸಂಗ ಮಾಡುತ್ತಿರುವ 1ರಿಂದ 12ನೇ ತರಗತಿ ವರೆಗಿನ ವಿದ್ಯಾರ್ಥಿಗಳು ಬೆಳಗ್ಗೆಯಿಂದ ಸಂಜೆಯವರೆಗೂ ಮಂತ್ರ ಪಠಣ ಮಾಡಿದರು. ವೃಂದಾವನ ಈಗ ಹೇಗಿದೆ?
ರವಿವಾರ ರಾತ್ರಿ 9.30ರ ಸುಮಾರಿಗೆ ಮಾಧ್ವ ಸಂಪ್ರದಾಯದಂತೆ ಶ್ರೀಗಳ ಪಾರ್ಥಿವ ಶರೀರ ವೃಂದಾವನ ಪ್ರವೇಶ ಪೂರ್ಣಗೊಂಡಿದೆ. ವೃಂದಾವನ ಮೇಲ್ಭಾಗದಲ್ಲಿ ಚತುರ್ಭುಜಾಕೃತಿಯ ತುಳಸಿ ಕಟ್ಟೆ ಪ್ರತಿಷ್ಠಾಪಿಸಲಾಗಿದೆ. ಅದರ ಸುತ್ತಲೂ ಮರದ ಮಂಟಪ ಕಟ್ಟಲಾಗಿದೆ. ಮರದ ಮಂಟಪದ ಮೇಲೆ ಬಿಸಿಲು ಬೀಳದಂತೆ ತೆಂಗಿನ ಗರಿಯ ಚಪ್ಪರ ಹಾಕಲಾಗಿದೆ. ವೃಂದಾವನದ ಸಮೀಪಕ್ಕೆ ಯಾರೂ ಪ್ರವೇಶಿಸಬಾರದು ಎಂಬ ಉದ್ದೇಶ ದಿಂದ ಬ್ಯಾರಿಕೇಡ್‌ಗಳಿಂದ ಸುತ್ತಲೂ ರಕ್ಷಣೆ ನೀಡಲಾಗಿದೆ. ಬ್ಯಾರಿಕೇಡ್ ಹೊರಗಿನಿಂದಲೇ ಭಕ್ತರು ಪ್ರದಕ್ಷಿಣೆ ಹಾಕಿ ನಮಸ್ಕಾರ ಮಾಡುತ್ತಿದ್ದಾರೆ.