Advertisement

ಸಪ್ತಸಂಗಮದಲ್ಲಿ ಪುಟ್ಟಣ್ಣ ಕಣಗಾಲ್‌ ನೆನಪು

09:38 AM Nov 09, 2019 | mahesh |

“ಅವರು ಮೊದಲು ಕಥೆ ಪಕ್ಕಾ ಮಾಡಿಕೊಳ್ಳೋರು. ಆ ಮೇಲೆ ಚಿತ್ರಕಥೆಗಾಗಿಯೇ ಹಲವು ದಿನ ಕೆಲಸ ಮಾಡೋರು. ನಂತರ ಎಲ್ಲಾ ತಯಾರಿ ಮಾಡಿಕೊಂಡ ಬಳಿಕ ಚಿತ್ರೀಕರಣಕ್ಕೆ ಹೋಗೋರು. ಅವರ ಒಂದೊಂದು ಸಿನಿಮಾ ಕೂಡ ನೋಡುಗರಿಗೆ ನಾಟುತ್ತಿತ್ತು…’

Advertisement

– ಹೀಗೆ ಹೇಳಿದ್ದು, ಕನ್ನಡ ಚಿತ್ರರಂಗದ “ಚಿತ್ರಬ್ರಹ್ಮ’ ಖ್ಯಾತಿಯ ಪುಟ್ಟಣ್ಣ ಕಣಗಾಲ್‌ ಪತ್ನಿ ನಾಗಲಕ್ಷ್ಮೀ. ಅವರು ಹೇಳಿಕೊಂಡಿದ್ದು, ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಅವರ ಕೆಲಸದ ಬಗ್ಗೆ. ಸಂದರ್ಭ; “ಕಥಾಸಂಗಮ’ ಟ್ರೇಲರ್‌ ಬಿಡುಗಡೆ.

“ಕಥಾಸಂಗಮ’ ಅಂದಾಕ್ಷಣ ನೆನಪಾಗೋದೇ ಪುಟ್ಟಣ್ಣ ಕಣಗಾಲ್‌. 1976 ರಲ್ಲಿ ಬಂದ ಈ ಚಿತ್ರ ಆ ದಿನಗಳಲ್ಲೇ ವಿಭಿನ್ನ ಪ್ರಯೋಗದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಮೂರು ಕಥೆ ಇಟ್ಟುಕೊಂಡು ಮಾಡಿದ ಆ ಚಿತ್ರ ಇಂದಿಗೂ ಎವರ್‌ಗ್ರೀನ್‌ ಎನಿಸಿಕೊಂಡಿದೆ. ಈಗ ರಿಷಭ್‌ ಶೆಟ್ಟಿ ಮತ್ತು ತಂಡ ಸೇರಿ “ಕಥಾಸಂಗಮ’ ಹೆಸರಿನ ಮತ್ತೂಂದು ಹೊಸ ಚಿತ್ರ ಮಾಡಿದೆ. ಇಲ್ಲಿ ಏಳು ಕಥೆ ಇಟ್ಟುಕೊಂಡು ಪ್ರಯೋಗ ಮಾಡಿದ್ದಾರೆ. ಆ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಹಾರೈಸಲು ಬಂದಿದ್ದ ನಾಗಲಕ್ಷ್ಮೀ ಪುಟ್ಟಣ್ಣ ಅವರು ಹೊಸಬರ ಚಿತ್ರ ಕುರಿತು ಹೇಳಿದ್ದಿಷ್ಟು.

“ಯಜಮಾನರು ಆಗ ಮೂರು ಕಥೆ ಇಟ್ಟುಕೊಂಡು “ಕಥಾಸಂಗಮ’ ಮಾಡಿದರು. ಆ ಸಂದರ್ಭದಲ್ಲಿ ಅದು ಹೊಸ ಪ್ರಯೋಗ ಎನಿಸಿತ್ತು. ಅವರು ಯಾವುದೇ ಕಥೆ ಮಾಡಿದರೂ, ಅವರಿಗೆ ಇಷ್ಟ ಆಗುವವರೆಗೂ ಬಿಡುತ್ತಿರಲಿಲ್ಲ. ಕಥೆ ಓಕೆ ಎನಿಸಿದ ನಂತರ, ಚಿತ್ರಕಥೆ ಮಾಡೋರು. “ಕಥಾಸಂಗಮ’ ಒಂದು ಪ್ರಯತ್ನವಾಗಿ ಹೊರಹೊಮ್ಮಿತು. ಈಗ ನಾಲ್ಕು ದಶಕಗಳ ನಂತರ ಹೊಸಬರೆಲ್ಲ ಸೇರಿ “ಕಥಾಸಂಗಮ’ ಹೆಸರಿಟ್ಟುಕೊಂಡು, ಏಳು ಕಥೆ ಅಳವಡಿಸಿ ಚಿತ್ರ ಮಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಈ ರೀತಿಯ ಸಿನಿಮಾಗಳು ಬರಬೇಕು. ಜನರಿಗೆ ಇಷ್ಟವಾಗುವಂತಹ ಚಿತ್ರಗಳನ್ನು ಕೊಡಬೇಕು. ಎಲ್ಲರಿಗೂ ಒಳ್ಳೆಯದಾಗಲಿ. ಹೊಸ ಬಗೆಯ ಚಿತ್ರಗಳ ಮೂಲಕ ಇನ್ನಷ್ಟು ಗುರುತಿಸಿಕೊಳ್ಳುವಂತಾಗಲಿ’ ಎಂದರು ನಾಗಲಕ್ಷ್ಮೀ.

ಇದೇ ಸಂದರ್ಭದಲ್ಲಿ ನಾಗಲಕ್ಷ್ಮೀ ಪುಟ್ಟಣ್ಣ ಅವರನ್ನು “ಕಥಾಸಂಗಮ’ ಚಿತ್ರತಂಡ ಪ್ರೀತಿಯಿಂದ ಗೌರವಿಸಿ, ಪುಟ್ಟಣ್ಣ ಕಣಗಾಲ್‌ ಅವರ ಭಾವಚಿತ್ರವನ್ನು ಕಾಣಿಕೆಯಾಗಿ ನೀಡಲಾಯಿತು. ಈ ವೇಳೆ ಪುಟ್ಟಣ್ಣ ಕಣಗಾಲ್‌ ಕುಟುಂಬವೂ ಹಾಜರಿತ್ತು.

Advertisement

ಅಂದಹಾಗೆ, ರಿಷಭ್‌ ಶೆಟ್ಟಿ, ಪ್ರಕಾಶ್‌ ಮತ್ತು ಪ್ರದೀಪ್‌ ಸೇರಿ ನಿರ್ಮಿಸಿರುವ “ಕಥಾಸಂಗಮ’ ಬಿಡುಗಡೆಗೆ ರೆಡಿಯಾಗಿದೆ. ಈ ಚಿತ್ರದಲ್ಲಿ ಏಳು ಕಥೆಗಳಿವೆ. ಆ ಏಳು ಕಥೆಗೂ ಒಬ್ಬೊಬ್ಬ ನಿರ್ದೇಶಕ, ಸಂಗೀತ ನಿರ್ದೇಶಕ ಹಾಗೂ ಛಾಯಾಗ್ರಾಹಕರಿದ್ದಾರೆ. ರಿಷಭ್‌ ಶೆಟ್ಟಿ ಅವರಿಗೆ ಪುಟ್ಟಣ ಕಣಗಾಲ್‌ ಸ್ಫೂರ್ತಿಯಂತೆ. “ಆ ಕಾಲದಲ್ಲೇ ವಿಭಿನ್ನ ಪ್ರಯೋಗ ಮಾಡಿ ಗೆದ್ದ ಕಣಗಾಲರು ಸದಾ ಸ್ಫೂರ್ತಿಯಂತಿದ್ದರು. ನನಗೂ ಅಂಥದ್ದೊಂದು ಯೋಚನೆ ಬಂದಿದ್ದರಿಂದ ಕೆಲ ಪ್ರತಿಭಾವಂತರ ಜೊತೆ ಚರ್ಚಿಸಿ, ಏಳು ಕಥೆ ಇಟ್ಟು ಸಿನಿಮಾ ಮಾಡುವ ಆಸೆ ಬಂತು. ಅದೀಗ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ’ ಎಂದರು ರಿಷಭ್‌ ಶೆಟ್ಟಿ.

“ಕಥಾಸಂಗಮ’ದ ಏಳು ಕಥೆಗಳಿಗೂ ಕಿರಣ್‌ ರಾಜ್‌. ಕೆ, ಶಶಿಕುಮಾರ್‌. ಪಿ, ಚಂದ್ರಜಿತ್‌ ಬೆಳ್ಳಿಯಪ್ಪ, ರಾಹುಲ್‌ ಪಿ.ಕೆ, ಜೈ ಶಂಕರ್‌. ಎ, ಕರಣ್‌ ಅನಂತ್‌, ಜಮದಗ್ನಿ ಮನೋಜ್‌ ಅವರು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಾಜ್‌ ಬಿ ಶೆಟ್ಟಿ, ರಿಷಭ್‌ ಶೆಟ್ಟಿ, ಹರಿಪ್ರಿಯಾ, ಅವಿನಾಶ್‌, ಪ್ರಕಾಶ್‌ ಬೆಳವಾಡಿ, ಕಿಶೋರ್‌, ಪ್ರಮೋದ್‌ ಶೆಟ್ಟಿ, ಯಜ್ಞಾ ಶೆಟ್ಟಿ, ಬಾಲಾಜಿ ಮನೋಹರ್‌ ಇತರರು ಒಂದೊಂದು ಕಥೆಯಲ್ಲಿ ಕಾಣಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next