Advertisement

ಜಯಚಾಮರಾಜ ಒಡೆಯರ್‌ ಸ್ವರ ಸ್ಮರಣೆ

01:17 AM Jul 20, 2019 | Lakshmi GovindaRaj |

ಬೆಂಗಳೂರು: ಸಂಗೀತ ಪ್ರಿಯರು ಮಾತ್ರವಲ್ಲದೇ ಸ್ವತಃ ಸಂಗೀತಗಾರೂ ಆಗಿ ಕ್ಷೇತ್ರಕ್ಕೆ ಸಾಕಷ್ಟು ಸೇವೆ ಸಲ್ಲಿಸಿದ ಮೈಸೂರು ಸಂಸ್ಥಾನದ ಕೊನೆಯ ಅರಸ, ಜಯಚಾಮರಾಜ ಒಡೆಯರ್‌ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಅವರ ಮಕ್ಕಳಾದ ಕಾಮಾಕ್ಷಿ ದೇವಿ ಹಾಗೂ ಇಂದ್ರಾಕ್ಷಿ ದೇವಿ ಅವರು ವರ್ಷವಿಡೀ ವಿವಿಧೆಡೆ ವಿಶೇಷ ಸಂಗೀತ ಕಾರ್ಯಕ್ರಮ ಆಯೋಜಿಸುವ ಮೂಲಕ ತಂದೆಯ ಸ್ಮರಣೆಗೆ ಮುಂದಾಗಿದ್ದಾರೆ.

Advertisement

ಕರ್ನಾಟಕ, ಹಿಂದೂಸ್ತಾನಿ ಹಾಗೂ ಪಾಶ್ಚಾತ್ಯ ಸಂಗೀತ ಪ್ರಕಾರಗಳಲ್ಲಿ ಆಳವಾದ ಜ್ಞಾನ ಪಡೆದಿದ್ದ ಜಯಚಾಮರಾಜ ಒಡೆಯರ್‌, ಕರ್ನಾಟಕ ಸಂಗೀತ ಕಲಿಯುವ ಮೊದಲೇ ಲಂಡನ್‌ನಲ್ಲಿ ಪಾಶ್ಚಾತ್ಯ ಸಂಗೀತ ಕಲಿತಿದ್ದರು. ಅಲ್ಲಿನ ಪ್ರಸಿದ್ಧ ಗಿಲ್ಡ್‌ ಹಾಲ್‌ ಸ್ಕೂಲ್‌ ಆಫ್ ಮ್ಯೂಸಿಕ್‌ ಮತ್ತು ಟ್ರಿನಿಟಿ ಕಾಲೇಜ್‌ ಆಫ್ ಮ್ಯೂಸಿಕ್‌ನ ಪದವಿ ಪಡೆದಿದ್ದರು. ಪ್ರಮುಖವಾಗಿ ಪಿಯಾನೊ ವಾದನ ಪ್ರವೀಣರಾಗಿದ್ದರು. 1948ರಲ್ಲಿ ಪಿಲರ್ಮೋನಿಯಾ ಕನ್ಸರ್ಟ್‌ ಸೊಸೈಟಿಯನ್ನು ಲಂಡನಲ್ಲಿ ಸ್ಥಾಪಿಸಿ ವಿಶ್ವ ಸಂಗೀತಕ್ಕೆ ತಮ್ಮದೇ ಕೊಡುಗೆ ನೀಡದ್ದರು. ಅಂದಿನ ಕಾಲದಲ್ಲೇ ವಿದೇಶಗಳಿಂದ ವಾಲ್ಟರ್‌ ಲಗ್ಗೆ ಅವರಂತಹ ಮಹಾನ್‌ ಸಂಗೀತಗಾರರನ್ನು ಕರೆಸಿ ಕಛೇರಿಗಳನ್ನು ನಡೆಸುತ್ತಿದ್ದರು.

ಒಡೆಯರ್‌ ಸ್ವತಃ 94 ಸಂಗೀತ ಕೃತಿಗಳನ್ನು ರಚಿಸಿದ್ದಾರೆ. ಹೀಗಾಗಿ, ಸಂಗೀತ ನಾಟಕ ಅಕಾಡೆಮಿಯ ಸ್ಥಾಪಕ ಅಧ್ಯಕ್ಷರನ್ನಾಗಿ ಹಾಗೂ ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿ ಕೇಂದ್ರ ಸರ್ಕಾರದಿಂದ ಅವರು ನೇಮಕಗೊಂಡಿದ್ದರು. ಜತಗೆ ಅವರ ಸಂಗೀತ ಪ್ರೇಮ ಹಾಗೂ ಸೇವೆಯ ಸ್ಮರಣೆಗಾಗಿ ಅವರ ಜನ್ಮ ಶತಮಾನೋತ್ಸವದ ವೇಳೆ ಒಂದು ವರ್ಷ ವಿವಿಧೆಡೆ ಸಂಗೀತ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ ಎಂದು ರಾಜ ವಂಶಸ್ಥರು ಮಾಹಿತಿ ನೀಡಿದರು.

ಇಂದು ಅರಮನೆಯಲ್ಲಿ ಕಛೇರಿ: ಜನ್ಮಶತಮಾನೋತ್ಸವ ಸಂಗೀತಗೋಷ್ಠಿಗಳ ಭಾಗವಾಗಿ ಗುರುವಾರ ಮೈಸೂರಿನಲ್ಲಿ ಕರ್ನಾಟಿಕ್‌ ಸಂಗೀತ ಗೋಷ್ಠಿ ನಡೆದಿದ್ದು, ಶನಿವಾರ (ಜು.20) ಬೆಂಗಳೂರಿನ ಅರಮನೆಯಲ್ಲಿ ಪಾಶ್ಚಿಮಾತ್ಯ ಸಂಗೀತ ಕಛೇರಿ ಹಮ್ಮಿಕೊಳ್ಳಲಾಗಿದೆ. ಸಂಜೆ 6 ಗಂಟೆಗೆ ಆರಂಭವಾಗುವ ಕಾರ್ಯಕ್ರಮದಲ್ಲಿ ರಾಜ ವಂಶಸ್ಥೆ ಪ್ರಮೋದಾ ದೇವಿ ಒಡೆಯರ್‌ ಸೇರಿದಂತೆ ರಾಜವಂಶಸ್ಥರೆಲ್ಲರೂ ಉಪಸ್ಥಿತರಿರಲಿದ್ದಾರೆ.

ನಿವೃತ್ತ ವಿದೇಶಿ ಕಾರ್ಯದರ್ಶಿಗಳಾದ ನಿರುಪಮಾ ಮೆನೊನ್‌ ರಾವ್‌ ಕಾರ್ಯಕ್ರಮ ಉದ್ಘಾಟಿಸಲಿದ್ದು, ರಾಷ್ಟ್ರೀಯ ಕಲೆ ಮತ್ತು ಸ್ವರಮೇಳ ಆರ್ಕೆಸ್ಟ್ರಾ ಕೇಂದ್ರದ ಚೇರ್ಮನ್‌ ಖುಷ್ಬೂ ಎನ್‌. ಸ್ಯಾನ್‌ಟುಕ್‌, ಮಾಜಿ ಕ್ರಿಕೆಟಿಗ ಇ.ಎ.ಎಸ್‌.ಪ್ರಸನ್ನ, ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಕಾರ್ಯಕಾರಿ ನಿರ್ದೇಶಕಿ ಡಾ.ದೀಪ್ತಿ ನವರತ್ನ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ಪಿಟೀಲು ವಾದಕ ಮರಾಠ ಬಿಸೆಂಗಲೀವ್‌ ತಂಡವು 70 ನಿಮಿಷಗಳ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದೆ.

Advertisement

ಸಂವಿಧಾನ ಜಾರಿಗೂ ಮೊದಲೇ ಪ್ರಜಾಪ್ರಭುತ್ವ: ಸಂಚಿಧಾನ ಜಾರಿಗೆ ಬರುವ ದಶಕ ಮೊದಲೇ ಆಡಳಿತದಲ್ಲಿ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಪರಿಚಯಿಸಿದ ಕೀರ್ತಿ ಜಯಚಾಮರಾಜ ಒಡೆಯರ್‌ಗೆ ಸಲ್ಲುತ್ತದೆ. ಮೈಸೂರು ಸಂಸ್ಥಾನದ 25ನೇ ಮಹಾರಾಜ ಜಯಚಾಮರಾಜ ಒಡೆಯರ್‌ ಆಡಳಿತದಲ್ಲಿ “ಪ್ರಜಾಪರಿಷತ್‌’ ಜಾರಿಯಲ್ಲಿತ್ತು. 1940ರಲ್ಲಿ ಆಡಳಿತ ವಹಿಸಿಕೊಂಡ ಒಡೆಯರ್‌, ಜನರಿಗೆ ಅಧಿಕಾರ ನೀಡಲು ರಾಜಕೀಯ ಸುಧಾರಣೆಗೆ ನಾಂದಿ ಹಾಡಿದರು. ಪ್ರಜಾಪರಿಷತ್ತಿನ ಸಭೆಗಳಿಗೆ ಜನರೇ ತಮ್ಮ ವ್ಯಾಪ್ತಿಯ ಪ್ರತಿನಿಧಿಯನ್ನು ಚುನಾವಣೆ ಮೂಲಕ ಆಯ್ಕೆ ಮಾಡುವ ವಿಶೇಷ ಕಾಯ್ದೆಯನ್ನು 1941ರಲ್ಲಿ ಜಾರಿಗೊಳಿಸಿ ಬಳಿಕ ಮೈಸೂರು ನಗರದಲ್ಲಿ ಪುರಸಭೆ ಸ್ಥಾಪಿಸಿದರು. ಗ್ರಾಮಗಳ ಅಭಿವೃದ್ಧಿಗಾಗಿ 1942ರಲ್ಲಿ ಮೊದಲ ಬಾರಿಗೆ ಪಂಚವಾರ್ಷಿಕ ಯೋಜನೆ ಅನುಷ್ಠಾನಗೊಳಿಸಿದ್ದರು.

ಆಕಾಶವಾಣಿ ಆರಂಭಕ್ಕೆ ಸಹಕಾರ: ಆಕಾಶವಾಣಿ ಹುಟ್ಟಿಗೆ ಕಾರಣವಾದ ಮೈಸೂರು ವಿಶ್ವವಿದ್ಯಾಲಯದ ಪ್ರೊ.ಗೋಪಾಲಸ್ವಾಮಿಯವರು ಹವ್ಯಾಸಿ ರೇಡಿಯೊ ಕೇಂದ್ರವನ್ನು ನಡೆಸಲು ಹಣಕಾಸು ಸಮಸ್ಯೆ ಎದುರಾದಾಗ ಆರ್ಥಿಕ ಸಹಕಾರ ನೀಡಿದ ಜಯಚಾಮರಾಜ ಒಡೆಯರ್‌, ಮೈಸೂರು ಸಂಸ್ಥಾನದಲ್ಲಿ ರೇಡಿಯೋ ಕೇಂದ್ರ ನಡೆಸಲು ವ್ಯವಸ್ಥೆ ಮಾಡಿದರು. ಮುಂದೆ ಆ ಹವ್ಯಾಸಿ ರೇಡಿಯೋವನ್ನೇ ಆಕಾಶವಾಣಿ ಹೆಸರಿನಲ್ಲಿ ಕೇಂದ್ರ ಸರ್ಕಾರ ರಾಷ್ಟ್ರಾದ್ಯಂತ ವ್ಯಾಪಿಸಿತು.

ಇತರೆ ಕೊಡುಗೆಗಳು
-ತಾಂತ್ರಿಕ ಶಿಕ್ಷಣ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬೆಂಗಳೂರು, ಮೈಸೂರಿನಲ್ಲಿ ಡಿಪ್ಲೊಮಾ, ಎಂಜಿನಿಯರಿಂಗ್‌ ಶಿಕ್ಷಣ ಆರಂಭ
-ಮೈಸೂರು ಸಂಸ್ಥಾನದ ಎಲ್ಲಾ ಜಿಲ್ಲೆ, ತಾಲೂಕು ಕೇಂದ್ರದ ಆಸ್ಪತ್ರೆಗಳಲ್ಲಿ ಮಹಿಳಾ ಡಾಕ್ಟರ್‌ಗಳ ನೇಮಕ
-ಕೂಲಿಕಾರ್ಮಿಕರಿಗೆ ವಿಮೆ ಜಾರಿ
-ಕರ್ನಾಟಕ ಏಕೀಕರಣಕ್ಕೆ ಸಾಮಾನ್ಯ ಜನರ ಜತೆಗೂಡಿ ಹೋರಾಟ

ಸಂಗೀತ ಪ್ರಿಯರಾಗಿದ್ದ ಜಯಚಾಮರಾಜ ಒಡೆಯರ್‌, ತಮ್ಮ ಜೀವಿತಾವಧಿಯಲ್ಲಿ ಸಾಕಷ್ಟು ಸಂಗೀತ ಸೇವೆ ಮಾಡಿದ್ದಾರೆ. ದೇಶ-ವಿದೇಶಗಳಲ್ಲೂ ಅನೇಕ ಸಂಗೀತಗಾರರನ್ನು ಬೆಳೆಸಿದ್ದಾರೆ. ಜನ್ಮ ಶತಮಾನೋತ್ಸವದ ಅಂಗವಾಗಿ ಅವರಿಗೆ ಪ್ರಿಯವಾದ ಕಾರ್ಯಕ್ರಮ ಆಯೋಜಿಸಿ ಸ್ಮರಿಸುತ್ತಿದ್ದೇವೆ. ಹೀಗಾಗಿ, 2019-20ರಲ್ಲಿ ಕರ್ನಾಟಕ ಸಂಗೀತ, ಪೊಲೀಸ್‌ ಬ್ಯಾಂಡ್‌ ಸೇರಿದಂತೆ ವಿವಿಧ ಸ್ಥಳೀಯ ಸಂಗೀತ ಕಲೆಗಳಿಗೂ ಆದ್ಯತೆ ನೀಡಿ ವಿವಿಧಕಡೆ ಸಂಗೀತ ಕಾರ್ಯಕ್ರಮ ನಡೆಸಲು ಚಿಂತನೆ ನಡೆಸಲಾಗಿದೆ.
-ವರ್ಚಸ್ವಿ ಶ್ರೀಕಂಠ ಸಿದ್ದಲಿಂಗ ಅರಸ್‌, ಜಯಚಾಮರಾಜ ಒಡೆಯರ್‌ರ ಮೊಮ್ಮಗ

Advertisement

Udayavani is now on Telegram. Click here to join our channel and stay updated with the latest news.

Next