Advertisement

ಮೈಸೂರು ವಿವಿ ಕೀರ್ತಿ ಎತ್ತರಕ್ಕೆ ಕೊಂಡೊಯ್ದ ದೇಜಗೌ ಸ್ಮರಣೆ

09:36 PM Jul 06, 2019 | Lakshmi GovindaRaj |

ಮೈಸೂರು: ರಾಷ್ಟ್ರಕವಿ ಕುವೆಂಪು ಅವರ ಮೊದಲನೇ ಶಿಷ್ಯರಾಗಿ ದೇಜಗೌ ಅವರು ಮೈಸೂರು ವಿಶ್ವವಿದ್ಯಾನಿಲಯವನ್ನು ಎತ್ತರಕ್ಕೆ ಕೊಂಡೊಯ್ದರು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದರು.

Advertisement

ಶ್ರೀ ಕುವೆಂಪು ವಿದ್ಯಾವರ್ಧಕ ಟ್ರಸ್ಟ್‌, ಶ್ರೀ ಕುವೆಂಪು ವಿದ್ಯಾಪರಿಷತ್ತು ಹಾಗೂ ಅದರ ಅಂಗ ಸಂಸ್ಥೆಗಳ ಆಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ಪ್ರೊ.ದೇಜಗೌ ಜನ್ಮೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಜಗೌ ಅವರು ಎಷ್ಟರ ಮಟ್ಟಿಗೆ ಕುವೆಂಪು ಅವರಿಗೆ ಅರ್ಪಿಸಿಕೊಂಡು ಬಿಟ್ಟಿದ್ದರೆಂದರೆ ಕುವೆಂಪು ಅವರ ಮಾತನಾಡುವಾಗ ಅವರ ಕಣ್ಣಂಚು ಒದ್ದೆಯಾಗುತ್ತಿತ್ತು. ಬಾಲ್ಯದಲ್ಲಿ ದನ-ಕುರಿ ಕಾಯ್ದು ಕಷ್ಟಪಟ್ಟಿದ್ದೇನೆ ಎಂದು ಹೇಳುತ್ತಿದ್ದರು. ಅವರಲ್ಲಿ ಓದಬೇಕು, ಬೆಳೆಯಬೇಕು ಎಂಬ ಛಲವಿತ್ತು. ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಬೇಕು ಎಂಬ ಗುರಿ ಇತ್ತು. ಅದನ್ನವರು ಎಷ್ಟೇ ಕಷ್ಟವಾದರೂ ತಲುಪಿದ್ದಾರೆ ಎಂದು ಸ್ಮರಿಸಿದರು.

ಅವರಲ್ಲಿದ್ದ ಸರಳತೆ, ಸಜ್ಜನಿಕೆ ಎಲ್ಲರಿಗೂ ಮಾದರಿ. ರಾಜಕಾರಣಿಗಳು ಓದಬೇಕು. ನೀನು ಓದು ಹೇಗೆ ಬದಲಾಗುತ್ತಿಯಾ ಎಂದು ನನಗೆ ಯಾವಾಗಲೂ ಹೇಳುತ್ತಿದ್ದರು ಎಂದು ನೆನೆದರು. ರಾಜ್ಯದ ಹಲವಾರು ಮುಖ್ಯಮಂತ್ರಿಗಳು ಅವರನ್ನು ಗೌರವದಿಂದ ಕಾಣುತ್ತಿದ್ದರು. ಸಮಾಜಕ್ಕೆ ಆದರ್ಶ ಹೇಳುತ್ತಾ, ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದರು ಎಂದು ಸ್ಮರಿಸಿದರು.

ಸಂಶೋಧಕ ಹ.ಕ.ರಾಜೇಗೌಡ ಮಾತನಾಡಿ, ನಾನು ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದಾಗ ಅಂತರ ಜಿಲ್ಲಾ ಚರ್ಚಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದಾಗ ಹತ್ತಿರ ಕರೆದು ಹೆಗಲ ಮೇಲೆ ಕೈಹಾಕಿ ಚೆನ್ನಾಗಿ ಓದುವಂತೆ ಪ್ರೋತ್ಸಾಹದ ಮಾತುಗಳನ್ನಾಡಿದ್ದಷ್ಟೇ ಅಲ್ಲ, ಎಸ್‌ಎಸ್‌ಎಲ್‌ಸಿ ಮುಗಿಸಿ ಕಾಲೇಜು ಸೇರಲು ಮೈಸೂರಿಗೆ ಬಂದಾಗ ನನ್ನನ್ನು ಕಾಣುವಂತೆ ಹೇಳಿದ್ದರು ದೇಜಗೌ ಎಂದು ನೆನೆದರು.

Advertisement

ದೇಜಗೌ ಅವರೊಂದಿಗಿನ ಸುದೀರ್ಘ‌ ಒಡನಾಟವನ್ನು ಮೆಲಕು ಹಾಕಿದ ಅವರು, ವಿದ್ವಾಂಸರಾಗಿ, ಸಂಘಟಕರಾಗಿ, ಮಾನವೀಯತೆ, ಮಮಕಾರದಿಂದ ಕೂಡಿದ್ದ ದೇಜಗೌ ಅವರನ್ನು ಅತ್ಯಂತ ಹತ್ತಿರದಿಂದ ಬಲ್ಲವನಾಗಿದ್ದು, ವರ್ಗಾತೀತವಾಗಿ ಎಲ್ಲರನ್ನೂ ಅಗಾಧವಾಗಿ ಪ್ರೀತಿಸುತ್ತಿದ್ದರು ಎಂದು ಹೇಳಿದರು.

ಸಾಹಿತಿ ಡಾ.ಸಿಪಿಕೆ, ಕರ್ನಾಟಕ ಸಂಸ್ಕೃತ ವಿವಿ ಕುಲಪತಿ ಡಾ.ಪದ್ಮಾಶೇಖರ್‌, ಶ್ರೀ ಕುವೆಂಪು ವಿದ್ಯಾಪರಿಷತ್ತಿನ ಛೇರ್ಮನ್‌ ಡಾ.ಡಿ.ಕೆ.ರಾಜೇಂದ್ರ ಉಪಸ್ಥಿತರಿದ್ದರು. ಶ್ರೀಕುವೆಂಪು ವಿದ್ಯಾವರ್ಧಕ ಟ್ರಸ್ಟ್‌ ಅಧ್ಯಕ್ಷ ಡಾ.ಜೆ.ಶಶಿಧರ ಪ್ರಸಾದ್‌ ಅಧ್ಯಕ್ಷತೆವಹಿಸಿದ್ದರು.

ಬಜೆಟ್‌ ಚೆನ್ನಾಗಿದ್ದು, ಜಾರಿಗೆ ತರಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ನಲ್ಲಿ ಹೊಸದೇನು ಕೊಟ್ಟಿಲ್ಲ, ಆದರೆ ಹಳೇಯದೇನನ್ನೂ ಬಿಟ್ಟಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಪ್ರತಿಕ್ರಿಯೆ ನೀಡಿದ್ದಾರೆ.

ನಿರ್ಮಲಾ ಸೀತಾರಾಮನ್‌ ಉಪನ್ಯಾಸಕರಾಗಿದ್ದವರು. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಇವರನ್ನು ಪ್ರಧಾನಿ ನರೇಂದ್ರಮೋದಿ ಮೊದಲ ಅವಧಿಯಲ್ಲಿ ರಕ್ಷಣಾ ಮಂತ್ರಿಯನ್ನಾಗಿ ಮಾಡಿದ್ದರು. ಎರಡನೇ ಅವಧಿಯಲ್ಲಿ ಹಣಕಾಸು ಖಾತೆ ನೀಡಿದ್ದಾರೆ. ಮೋದಿ ಸರ್ಕಾರದ ಎರಡನೇ ಅವಧಿಯ ಮೊದಲ ಬಜೆಟ್‌ನಲ್ಲಿ ತೆರಿಗೆ ಹೊರೆ ಹೊರಿಸಿದ್ದಾರೆ.

ಪೆಟ್ರೋಲ್‌-ಡೀಸೆಲ್‌ ಮೇಲಿನ ತೆರಿಗೆ ಹೆಚ್ಚು ಮಾಡಲಾಗಿದೆ. ಗ್ರಾಮೀಣ ಪ್ರದೇಶದ ಅಭಿವೃದ್ಧಿ ಬಗ್ಗೆ ಬಜೆಟ್‌ನಲ್ಲಿ ಹೆಚ್ಚು ಹೇಳಿದ್ದಾರೆ. ಬಡವರಿಗೆ ಮನೆ, ಕುಡಿಯುವ ನೀರು, ರಸ್ತೆ ಕೊಡುವುದಾಗಿ ಹೇಳಿದ್ದಾರೆ. ಅವರು ಬಜೆಟ್‌ನಲ್ಲಿ ತುಂಬಾ ಚೆನ್ನಾಗಿ ಹೇಳಿದ್ದಾರೆ. ಆದರೆ, ಆ ಯೋಜನೆಗಳಿಗೆ ಬೇಕಾದ ಹಣಕಾಸು ಒದಗಿಸಬೇಕು ಎಂದರು.

ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿದ್ದಾರೆ. ಯಾವ ರೀತಿ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಬಜೆಟ್‌ ಚೆನ್ನಾಗಿದ್ದು, ಜಾರಿಗೆ ತರಲಿ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next