Advertisement

ಸಭೆಯಲ್ಲಿ ಮತ್ತವೇ ಸಮಸ್ಯೆಗಳ ಸರಮಾಲೆ

06:37 AM Jan 23, 2019 | Team Udayavani |

ದಾವಣಗೆರೆ: ಆಶ್ರಯ ಮನೆ…, ಹಾಸ್ಟೆಲ್‌ ಪ್ರವೇಶಾವಕಾಶ…, ವಾಹನ ಸೌಲಭ್ಯ… ಮೂಲಭೂತ ಸೌಕರ್ಯಕ್ಕೆ ಕ್ರಮ… ಇವು ಡಾ| ಬಗಾದಿ ಗೌತಮ್‌ ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಸಲ್ಲಿಕೆಯಾದ ಕೆಲವಾರು ಮನವಿ.

Advertisement

ಆಶ್ರಯ ಯೋಜನೆಯಡಿ ನಿವೇಶನ, ಮನೆ ಮಂಜೂರಾತಿಗೆ ಕೋರಿ ಬಾಷಾನಗರದ ನಫೀಸಾಭಾನು, ಲಾಲ್‌ ಬಹದ್ದೂರ್‌ ಶಾಸ್ತ್ರಿ ಲೇಔಟ್‌ನ ಫ‌ರ್ವೀನ್‌ ಹಾಗೂ ಗುಲ್ಜಾರ್‌ಬಾನು ಇತರರು ಮನವಿ ಸಲ್ಲಿಸಿದರು.

ಮಹಾನಗರಪಾಲಿಕೆಯಲ್ಲಿ ಮನೆಗೆ ಅರ್ಜಿ ಸಲ್ಲಿಸಿಲ್ಲವೇ ಎಂದು ಮನವಿ ಸಲ್ಲಿಸಿದವರನ್ನು ಪ್ರಶ್ನಿಸಿದ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌, ಆಶ್ರಯ ಯೋಜನೆಯಡಿ ಅರ್ಜಿಗಳನ್ನು ಸ್ವೀಕರಿಸಬೇಕು ಎಂದು ನಗರಪಾಲಿಕೆ ಆಯುಕ್ತ ಮಂಜುನಾಥ್‌ ಬಳ್ಳಾರಿ ಅವರಿಗೆ ಸೂಚಿಸಿದರು. ಮಹಾನಗರ ಪಾಲಿಕೆಯಲ್ಲಿ ಅರ್ಜಿ ಪಡೆಯಲಾಗುತ್ತಿದೆ. ಯಾರನ್ನೂ ಹಿಂದಕ್ಕೆ ಕಳಿಸುತ್ತಿಲ್ಲ ಎಂದು ಮಂಜುನಾಥ್‌ ಬಳ್ಳಾರಿ ತಿಳಿಸಿದರು.

ಹರಿಹರ ತಾಲೂಕಿನ 156 ಮ್ಯಾನುವೆಲ್‌ ಸ್ಕ್ಯಾವೆಂಜರ್ಸ್‌ 2016ರ ಮೇ ತಿಂಗಳಲ್ಲಿ ಸರ್ವೇ ಪ್ರಕ್ರಿಯೆಗೆ ಒಳಗೊಂಡು ಸ್ವಯಂ ಘೋಷಿಸಿಕೊಂಡಿರುತ್ತಾರೆ. 3 ವರ್ಷವಾದರೂ ಗುರುತಿನ ಚೀಟಿ ನೀಡಿಲ್ಲ ಮತ್ತು ಪುನವರ್ಸತಿ ಒದಗಿಸಿಲ್ಲ. ಕೆಲಸ, ಇತರೆ ಸೌಕರ್ಯಗಳಿಲ್ಲದೇ ತುಂಬಾ ಅನಾನುಕೂಲವಾಗಿದ್ದು, ಗುರುತಿನಚೀಟಿ ಒದಗಿಸುವ ಮೂಲಕ ಸೌಲಭ್ಯ ಕಲ್ಪಿಸಬೇಕು ಎಂದು ಡಿ.ಎಸ್‌. ಬಾಬಣ್ಣ ನೇತೃತ್ವದಲ್ಲಿ ಸಫಾಯಿ ಕರ್ಮಚಾರಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮನವಿ ಮಾಡಿದರು. ಈ ಕುರಿತು ಸಭೆ ಕರೆದು ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪೋಲಿಯೋದಿಂದ ವಿಕಲಚೇತನರಾಗಿರುವ ದಾವಣಗೆರೆ ತಾಲೂಕಿನ ಕಾಡಜ್ಜಿಯ ಹನುಮಂತಪ್ಪ ಎಂಬುವರು ಸ್ವಯಂಚಾಲಿತ ಯಂತ್ರ ನೀಡುವಂತೆ ಕೋರಿ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ಅರ್ಜಿಯನ್ನು ಜಿಲ್ಲಾ ವಿಕಲಚೇತನ ಅಧಿಕಾರಿ ಜಿ.ಎಸ್‌. ಶಶಿಧರ್‌ಗೆ ನೀಡಿ, ಪರಿಶೀಲಿಸಿ ಸೌಲಭ್ಯ ನೀಡಲು ಸೂಚಿಸಿದರು.

Advertisement

ಸಮಾಜ ಕಲ್ಯಾಣ ಇಲಾಖೆಯಿಂದ 2019ನೇ ಸಾಲಿನ ಜಿಎನ್‌ಎಂ ನರ್ಸಿಂಗ್‌ಗೆ ಆಯ್ಕೆಯಾಗಿದ್ದರೂ ಸಂಜೀವಿನಿ ಇನ್ಸಿಟ್ಯೂಟ್ ಆಫ್‌ ನರ್ಸಿಂಗ್‌ ಸೈನ್ಸ್‌ ಕಾಲೇಜಿನಲ್ಲಿ ಪ್ರವೇಶಾವಕಾಶ ನೀಡುತ್ತಿಲ್ಲ ಎಂದು ಚೌಡಮ್ಮ ಎಂಬ ವಿದ್ಯಾರ್ಥಿನಿ ದೂರಿದರು.

ಪ್ರತಿದಿನ ಹೊನ್ನಾಳಿಯಿಂದ ದಾವಣಗೆರೆಯ ಧ.ರಾ.ಮ ವಿಜ್ಞಾನ ಕಾಲೇಜಿಗೆ ವ್ಯಾಸಂಗಕ್ಕೆಂದು ಬಂದು, ಹೋಗುವುದರಿಂದ ತೊಂದರೆಯಾಗುತ್ತಿದೆ. ದಾವಣಗೆರೆಯಲ್ಲಿ ವಸತಿ ನಿಲಯದಲ್ಲಿ ಪ್ರವೇಶ ನೀಡಬೇಕೆಂದು ಪೂಜಾ ಎಂಬ ವಿದ್ಯಾರ್ಥಿನಿ ಮನವಿ ಸಲ್ಲಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಾಮಾಜಿಕ ಕಲ್ಯಾಣ ಇಲಾಖೆ ಪೈಕಿ ಯಾವುದಾದರೂ ವಸತಿ ನಿಲಯದಲ್ಲಿ ಸೀಟು ಒದಗಿಸುವಂತೆ ಜಿಲ್ಲಾಧಿಕಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ದಾವಣಗೆರೆ ಬಂಬೂಬಜಾರ್‌ ರಸ್ತೆಯ ಕಲ್ಲೇಶ್ವರ ಮಿಲ್‌ ಬಳಿ ರಸ್ತೆ ಕುಸಿಯುತ್ತಿರುವುದರಿಂದ ಭಾರೀ ವಾಹನಗಳ ಸಂಚಾರಕ್ಕೆ ಅಡಚಣೆ ಆಗುತ್ತಿದೆ. ಸ್ಥಳ ಪರಿಶೀಲನೆ ನಡೆಸಿ, ಸಂಬಂಧಿತ ಇಂಜಿಯರ್‌ ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಎಂ.ಜಿ. ಶ್ರೀಕಾಂತ್‌ ಮನವಿ ಮಾಡಿದರು.

ವಿನಾಯಕ ನಗರದ 1ನೇ ಮೇನ್‌ ಮತ್ತು 1ನೇ ಕ್ರಾಸ್‌ನಲ್ಲಿ ರಸ್ತೆ ಇತರೆ ಮೂಲಭೂತ ಸೌಕರ್ಯಕ್ಕೆ ನಾಗರಿಕರು ಮನವಿ ಸಲ್ಲಿಸಿದರು. ಮಹಾನಗರ ಪಾಲಿಕೆಗೆ ಅರ್ಜಿ ಕಳುಹಿಸಿ ಕ್ರಿಯಾ ಯೋಜನೆ ತಯಾರಿಸಲು ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ತಿಳಿಸಿದರು.

ಚನ್ನಗಿರಿ ತಾಲೂಕಿನ ಹರೋನಹಳ್ಳಿಯ ಸರ್ವೇ ನಂಬರ್‌ 4ರಲ್ಲಿ 3 ಎಕರೆ ದರಖಾಸ್ತು ಜಮೀನು ಮಂಜೂರಾಗಿದೆ. ಆದರೆ, ಅದನ್ನು ಬೇರೆಯವರು ಅಕ್ರಮವಾಗಿ ಪಡೆದುಕೊಂಡಿದ್ದಾರೆ. ನ್ಯಾಯ ಒದಗಿಸುವಂತೆ ಕಾಡಪ್ಪ ಮನವಿ ಸಲ್ಲಿಸಿದರು. ಈ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಉಪ ವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಮಹಾನಗರಪಾಲಿಕೆ ಆಯುಕ್ತ ಮಂಜುನಾಥ್‌ ಬಳ್ಳಾರಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಜಿ.ನಜ್ಮಾ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರೇವಣ್ಣ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಂ.ಎಸ್‌. ತ್ರಿಪುಲಾಂಬ, ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಡಾ| ಉಮೇಶ್‌, ಉದ್ಯೋಗಾಧಿಕಾರಿ ಜಿ.ಜೆ. ರುದ್ರಣ್ಣಗೌಡ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next