ವಾಡಿ: ಮಳೆಗಾಲದ ಸಂದರ್ಭವಿದ್ದು, ಎಲ್ಲೆಡೆ ಕೊಳೆ ಆವರಿಸಿಕೊಂಡು ನೈರ್ಮಲ್ಯ ವ್ಯವಸ್ಥೆ ಹದಗೆಡುತ್ತದೆ. ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ವಿವಿಧ ರೋಗಗಳಿಗೆ ಕಾರಣವಾಗುತ್ತದೆ. ಸಾರ್ವಜನಿಕರು ಸೊಳ್ಳೆ ಕಡಿತದಿಂದ ಎಚ್ಚರ ವಹಿಸಬೇಕು ಎಂದು ತಾಲೂಕು ವೈದ್ಯಾಧಿಕಾರಿ ಡಾ| ಸುರೇಶ ಮೇಕಿನ್ ಹೇಳಿದರು. ಪುರಸಭೆ ವತಿಯಿಂದ ಏರ್ಪಡಿಸಲಾಗಿದ್ದ ನೈರ್ಮಲ್ಯ ಜಾಗೃತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮನೆಯ ಸುತ್ತಮುತ್ತಲಿನ ಪರಿಸರ ಅಸ್ವಚ್ಚತೆಯಿಂದ ಕೂಡಿದ್ದರೆ, ಅಂತಹ ಸ್ಥಳಗಳು ಸೊಳ್ಳೆಗಳ ಹುಟ್ಟುವಿಕೆಗೆ ಕಾರಣವಾಗುತ್ತವೆ. ಮಲೇರಿಯಾ, ಡೆಂಘೀ, ಚುಕೂನ್‌ಗುನ್ಯಾದಂತ ಸಾಂಕ್ರಾಮಿಕ ರೋಗಗಳು ಹರಡುವುದರಿಂದ ಕುಟುಂಬ ಸದಸ್ಯರಲ್ಲದೆ ಇಡೀ ಊರಿನಲ್ಲಿಯೇ ರೋಗದ ವಾತಾವರಣ ಸೃಷ್ಟಿಯಾಗುತ್ತದೆ. ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು. ಡೆಂಘೀ ಜ್ವರವು ಈಡಿಸ್ ಇಜಿಪ್ಟೈ ಎನ್ನುವ ಜಾತಿಯ ಸೊಳ್ಳೆಗಳ ಕಡಿತದಿಂದ ಒಬ್ಬರಿಂದ ಒಬ್ಬರಿಗೆ ಹರಡುವ ವೈರಸ್ ಖಾಯಿಲೆಯಾಗಿದೆ. ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ಮಾಂಸ ಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಡೆಂಘೀ ರೋಗದ ಲಕ್ಷಣವಾಗಿದೆ. ನಿರ್ಲಕ್ಷé ವಹಿಸಿದರೆ ಇದು ಜೀವಕ್ಕೆ ಅಪಾಯ ತರುವ ರೋಗವಾಗಿದೆ. ಸೊಳ್ಳೆ ಕಚ್ಚುವಿಕೆಯಿಂದ ವಿವಿದ ಥರಹದ ರೋಗಗಳು ಕಾಣಿಸಿಕೊಳ್ಳುತ್ತವೆ. ಮನೆ ಪರಿಸರದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ, ಜ್ವರ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಎಂದು ಹೇಳಿದರು. ಮುಖ್ಯಾಧಿಕಾರಿ ಶಂಕರ ಡಿ.ಕಾಳೆ ಮಾತನಾಡಿ, ನೈರ್ಮಲ್ಯ ವ್ಯವಸ್ಥೆ ಕಾಪಾಡಲು ಪುರಸಭೆಯಿಂದ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ, ಪ್ರತಿ ವಾರ್ಡ್‌ಗಳಲ್ಲಿ ಫಾಗಿಂಗ್ ಮಾಡಿಸಲಾಗಿದೆ. ನಗರದ ಸ್ವತ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ರಾತ್ರಿ ವೇಳೆ ಮನೆಯೊಳಗೆ ಸೊಳ್ಳೆ ನಿಯಂತ್ರಕ ಬತ್ತಿಗಳನ್ನು ಉರಿಸಬೇಕು ಮತ್ತು ಸೊಳ್ಳೆ ಪರದೆ ಕಡ್ಡಾಯವಾಗಿ ಬಳಕೆ ಮಾಡಬೇಕು ಎಂದು ತಿಳಿಸಿದರು. ಕಂದಾಯ ಅಧಿಕಾರಿ ಎ.ಪಂಕಜಾ, ಸಮುದಾಯ ಘಟನಾಧಿಕಾರಿ ಕಾಶೀನಾಥ ಧನ್ನಿ, ವ್ಯವಸ್ಥಾಪಕ ಮಲ್ಲೇಶಿ, ಹಿರಿಯ ಆರೋಗ್ಯ ನೈರ್ಮಲ್ಯಾಧಿಕಾರಿ ಶರಣಪ್ಪ ಮಡಿವಾಳ, ನೋಡಲ್ ಅಭಿಯಂತರ ಮನೋಜಕುಮಾರ ಹಿರೋಳಿ, ಪುರಸಭೆ ಸದಸ್ಯರಾದ ತಿಮ್ಮಯ್ಯ ಪವಾರ, ರಾಜೇಶ ಅಗರವಾಲ, ಭೀಮಶಾ ಜಿರೋಳ್ಳಿ, ಭೀಮರಾಯ ನಾಯಕೋಡಿ, ಮುಖಂಡರಾದ ಶ್ರವಣಕುಮಾರ ಮೌಸಲಗಿ, ತುಕಾರಾಮ ರಾಠೊಡ, ಗೋವಿಂದ ಪವಾರ, ಕಿರಿಯ ಅಭಿಯಂತರ ಅಶೋಕ ಪುಟ್‌ಪಾಕ್, ಶಾಂತಪ್ಪ ಹೊಸೂರ, ಈಶ್ವರ ಅಂಬೇಕರ, ಕೆ.ವಿರೂಪಾಕ್ಷಿ ಹಾಗೂ ಆಸ್ಪತ್ರೆ ಸಿಬ್ಬಂದಿ ಪಾಲ್ಗೊಂಡಿದ್ದರು. ನಂತರ ವಿವಿಧ ಪ್ರೌಢ ಶಾಲೆಗಳ ಸಾವಿರಾರು ವಿದ್ಯಾರ್ಥಿಗಳಿಂದ ಪಟ್ಟಣದಾದ್ಯಂತ ಜಾಗೃತಿ ಜಾಥಾ ನಡೆಯಿತು.