ಬೆಂಗಳೂರು: ರಾಜಧಾನಿಯನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ನಿರಂತರ ಜಾಗೃತಿ ಅಭಿಯಾನ, ಅಂಗಡಿಗಳ ಮೇಲೆ ದಾಳಿ ನಡೆಸುವ ಮೂಲಕ ಮೆಚ್ಚುಗೆ ಗಳಿಸಿರುವ ಮೇಯರ್ ಗಂಗಾಂಬಿಕೆ, ಸ್ವತಃ ಪ್ಲಾಸ್ಟಿಕ್ ಬಳಸಿ ಜಾಲತಾಣಿಗರ ಟೀಕೆಗೆ ಗುರಿಯಾಗಿದ್ದಾರೆ. ತಾವು ಪ್ಲಾಸ್ಟಿಕ್ ಬಳಸಿದ ವಿಷಯ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿರುವ ವಿಷಯ ತಿಳಿಯುತ್ತಿದ್ದಂತೆ ತಮ್ಮ ತಪ್ಪು ಅರಿತ ಮೇಯರ್, ನಿಯಮದ ಪ್ರಕಾರ 500 ರೂ. ದಂಡ ಪಾವತಿಸಿ ಕಾನೂನನ್ನು ಗೌರವಿಸಿದ್ದಾರೆ.
ಕಳೆದ ಒಂದು ತಿಂಗಳಿಂದ ಪ್ಲಾಸ್ಟಿಕ್ ಬಳಕೆ ವಿರೋಧಿ ಅಭಿಯಾನದಲ್ಲಿ ತೊಡಗಿಕೊಂಡಿರುವ ಮೇಯರ್ ಗಂಗಾಂಬಿಕೆ, ಪ್ಲಾಸ್ಟಿಕ್ ದುಷ್ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಜತೆಗೆ ಹಲವಾರು ಹೋಟೆಲ್, ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿ, ಪ್ಲಾಸ್ಟಿಕ್ ಕವರ್ ವಶಕ್ಕೆ ಪಡೆದು ದಂಡ ವಿಧಿಸಿದ್ದಾರೆ.
ಆದರೆ, ಜು.30ರ ಮಂಗಳವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದ ಮೇಯರ್, ಡ್ರೈ ಫೂಟ್ಸ್ ಬುಟ್ಟಿ ನೀಡಿ ಅಭಿನಂದಿಸಿದ್ದರು. ಆಗ ಮೇಯರ್ ನೀಡಿದ್ದ ಬುಟ್ಟಿಯನ್ನು ಪ್ಲಾಸ್ಟಿಕ್ ಹಾಳೆಯಿಂದ ಸುತ್ತಲಾಗಿತ್ತು. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು, ಪ್ಲಾಸ್ಟಿಕ್ ಬಳಸುವ ಮೂಲಕ ಮೇಯರ್ ಗಂಗಾಂಬಿಕೆ ಅವರೇ ಕಾನೂನು ಉಲ್ಲಂಘಸಿದ್ದಾರೆ ಎಂದು ಟ್ರೋಲ್ ಮಾಡಲಾಗಿದೆ.
ವಿವಿಧ ಉತ್ಪನ್ನಗಳ ಪ್ಯಾಕಿಂಗ್‌ಗೆ ಪ್ಲಾಸ್ಟಿಕ್ ಹೊರತು ಪರ್ಯಾಯ ಸಾಮಗ್ರಿ ಬಳಕೆಯಲ್ಲಿಲ್ಲ. ಹಾಗಾಗಿ ಎಲ್ಲಾ ರೀತಿಯ ದಿನಸಿಗಳನ್ನು ಪ್ಲಾಸ್ಟಿಕ್ ಬಳಸಿಯೇ ಪ್ಯಾಕ್ ಮಾಡಲಾಗುತ್ತಿದೆ. ಇನ್ನು ಬೊಕೆಗಳಿಗೂ ಪ್ಲಾಸ್ಟಿಕ್ ಹಾಳೆ ಸುತ್ತಲಾಗುತ್ತದೆ. ಇದಕ್ಕೆ ಪರ್ಯಾಯವಾಗಿ ಬಯೋ ಡೀಗ್ರೇಡಬಲ್ ಪ್ಯಾಕಿಂಗ್ ವ್ಯವಸ್ಥೆ ಚಾಲ್ತಿಗೆ ಬರುವವರೆಗೆ ಬೇರೆ ಆಯ್ಕೆ ಇಲ್ಲದಂತಾಗಿದೆ. ಹಾಗಾಗಿ ಪ್ಲಾಸ್ಟಿಕ್ ರ್ಯಾಪ್ ಮಾಡಿದ್ದ ಬೊಕೆ ಬಳಸುವುದು ಅನಿವಾರ್ಯವಾಯಿತು ಎಂದು ಸ್ಪಷ್ಟನೆ ನೀಡಿರುವ ಮೇಯರ್, ಪ್ಲಾಸ್ಟಿಕ್ ಬಳಸಿದ ತಪ್ಪಿಗೆ ದಂಡ ಪಾವತಿಸಿರುವುದಾಗಿ ತಿಳಿಸಿದರು.
ಸೆಪ್ಟೆಂಬರ್ ಮೊದಲ ವಾರ ಸಭೆ: ಪ್ಯಾಕಿಂಗ್‌ಗೆ ಪ್ಲಾಸ್ಟಿಕ್ ಬಳಸುವುದನ್ನು ನಿಯಂತ್ರಿಸಲು ಬಿಬಿಎಂಪಿ ಚಿಂತನೆ ನಡೆಸಿದೆ. ಈ ಕುರಿತು ಚರ್ಚಿಸಿ ನಿರ್ಧಾರಕ್ಕೆ ಬರಲು ಸೆಪ್ಟೆಂಬರ್ ಮೊದಲ ವಾರ ಸಭೆ ಕರೆಯಲಾಗಿದೆ. ಬಿಬಿಎಂಪಿ ಯೋಜನಾ ವಿಭಾಗದ ವಿಶೇಷ ಆಯುಕ್ತ ರವಿಕುಮಾರ್ ಸುರಪುರ ಅವರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಪ್ಲಾಸ್ಟಿಕ್ ಬದಲಿಗೆ ಬಯೋ ಡೀಗ್ರೇಡಬಲ್ ಪ್ಯಾಕಿಂಗ್ ವ್ಯವಸ್ಥೆ ಜಾರಿಗೆ ತರುವ ಕುರಿತು ಚರ್ಚೆ ನಡೆಯುವ ಸಾಧ್ಯತೆಯಿದೆ.
ನಾನು ಪ್ಲಾಸ್ಟಿಕ್ ಬಳಸಿದ್ದನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿರುವುದು ಗಮನಕ್ಕೆ ಬಂದಿದೆ. ಹಾಗಾಗಿ ನಗರದ ಮೇಯರ್ ಆಗಿ ಕಾನೂನನ್ನು ಗೌರವಿಸಿ, 500 ರೂ. ದಂಡ ಪಾವತಿಸಿದ್ದೇನೆ.
-ಗಂಗಾಂಬಿಕೆ ಮಲ್ಲಿಕಾರ್ಜುನ್, ಮೇಯರ್