Advertisement

ಟಿ20 ವೇಗದಲ್ಲಿ ಮುಗಿಯಿತು ಪಂದ್ಯ!

10:43 AM Jun 02, 2019 | Sriram |

ಕಾರ್ಡಿಫ್: ಸತತ 2ನೇ ದಿನವೂ ಏಕದಿನ ಕ್ರಿಕೆಟ್ ವಿಶ್ವಕಪ್‌ ಪಂದ್ಯ, ಟಿ20 ಮಾದರಿಯಲ್ಲಿ ಮುಗಿದುಹೋಗಿದೆ. ಶುಕ್ರವಾರ ವೆಸ್ಟ್‌ ಇಂಡೀಸ್‌-ಪಾಕಿಸ್ತಾನ ನಡುವಿನ ಪಂದ್ಯ ಅತಿಬೇಗ ಮುಗಿದರೆ, ಶನಿವಾರ ನ್ಯೂಜಿಲೆಂಡ್‌ ಮತ್ತು ಶ್ರೀಲಂಕಾ ನಡುವಿನ ಪಂದ್ಯ ಹೀಗೆ ಗಡಿಬಿಡಿಯಲ್ಲಿ ಮುಗಿದುಹೋಗಿದೆ. ಶುಕ್ರವಾರ ಪಾಕಿಸ್ತಾನ ಅಲ್ಪಮೊತ್ತಕ್ಕೆ ಕುಸಿದಿದ್ದರಿಂದ ಪಂದ್ಯ ಬೇಗ ಮುಗಿದಿತ್ತು, ಶನಿವಾರ ಆ ಪಾತ್ರವನ್ನು ಶ್ರೀಲಂಕಾ ನಿರ್ವಹಿಸಿತು.

Advertisement

ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ, 29.2 ಓವರ್‌ಗಳಲ್ಲಿ 136 ರನ್‌ಗೆ ಆಲೌಟಾಯಿತು. ಇದನ್ನು ಸಲೀಸಾಗಿ ಬೆನ್ನಟ್ಟಿ ಮುಗಿಸಿದ ನ್ಯೂಜಿಲೆಂಡ್‌, 16.1 ಓವರ್‌ಗಳಲ್ಲಿ ಒಂದೂ ವಿಕೆಟ್ ಕಳೆದುಕೊಳ್ಳದೇ 137 ರನ್‌ ಗಳಿಸಿತು. ಅಲ್ಲಿಗೆ ಕಿವೀಸ್‌ಗೆ 10 ವಿಕೆಟ್ ಜಯ.

ನ್ಯೂಜಿಲೆಂಡ್‌ ಪರ ಆರಂಭಿಕರಾಗಿ ಕ್ರೀಸ್‌ಗಿಳಿದ ಮಾರ್ಟಿನ್‌ ಗಪ್ಟಿಲ್-ಕಾಲಿನ್‌ ಮನ್ರೊ 16.1 ಓವರ್‌ಗಳಲ್ಲಿ ತಂಡ ಗುರಿ ತಲುಪಲು ನೆರವಾದರು. ಗಪ್ಟಿಲ್, 51 ಎಸೆತದಲ್ಲಿ 8 ಬೌಂಡರಿ, 2 ಸಿಕ್ಸರ್‌ ಸೇರಿದಂತೆ 73 ರನ್‌ ಬಾರಿಸಿದರೆ, ಮನ್ರೊ 47 ಎಸೆತದಲ್ಲಿ 6 ಬೌಂಡರಿ, 1 ಸಿಕ್ಸರ್‌ ಸೇರಿ 58 ರನ್‌ ಚಚ್ಚಿದರು. ಲಂಕಾ ಬೌಲರ್‌ಗಳು ಇಬ್ಬರನ್ನೂ ನಿಯಂತ್ರಿಸಲು ಸಂಪೂರ್ಣ ವಿಫ‌ಲರಾದರು. ಮಾಲಿಂಗ ಸೇರಿ ಯಾವ ಬೌಲರ್‌ಗಳೂ ಯಶಸ್ವಿಯಾಗಲಿಲ್ಲ.

ಲಂಕಾ ಪತನ: ಮೊದಲು ಬ್ಯಾಟಿಂಗ್‌ ಮಾಡಿದ ಶ್ರೀಲಂಕಾವನ್ನು ನ್ಯೂಜಿಲೆಂಡ್‌ನ‌ ವೇಗಿಗಳು ಸುಲಭವಾಗಿ ಕಟ್ಟಿ ಹಾಕಿದರು. ದಾಳಿಗಿಳಿದ ಎಲ್ಲ ಬೌಲರ್‌ಗಳೂ ವಿಕೆಟ್ ಕೀಳುವಲ್ಲಿ ಯಶಸ್ವಿಯಾದರು. ಮಧ್ಯಮ ವೇಗಿಗಳಾದ ಮ್ಯಾಟ್ ಹೆನ್ರಿ ಮತ್ತು ಕ್ಯಾಲಂ ಫ‌ರ್ಗ್ಯುಸನ್‌ ಸೇರಿಕೊಂಡು ಸಿಂಹಳೀಯರ ಬ್ಯಾಟಿಂಗ್‌ ಸರದಿಯನ್ನು ಸೀಳಿದರು. ಇಬ್ಬರೂ 3 ವಿಕೆಟ್ ಬೇಟೆಯಾಡಿದರು. ನಾಯಕ ದಿಮುತ್‌ ಕರುಣರತ್ನೆ ಇನಿಂಗ್ಸ್‌ ಆರಂಭಿಸಿ ಅಜೇಯರಾಗಿ ಉಳಿದದ್ದೇ ಲಂಕಾ ಸರದಿಯ ಹೆಗ್ಗಳಿಕೆ. 84 ಎಸೆತ ನಿಭಾಯಿಸಿದ ಅವರು 52 ರನ್‌ ಹೊಡೆದರು (4 ಬೌಂಡರಿ). ಎರಡಂಕೆಯ ಸ್ಕೋರ್‌ ದಾಖಲಿಸಿದ ಉಳಿದಿಬ್ಬರೆಂದರೆ ಕುಸಲ್ ಪೆರೆರ (29) ಮತ್ತು ತಿಸರ ಪೆರೆರ (27).

ಮೊದಲ ಓವರಿನಲ್ಲೇ ಕುಸಿತ: ಈ ಕೂಟದ ದುರ್ಬಲ ತಂಡ ಎಂಬುದನ್ನು ಶ್ರೀಲಂಕಾ ಮೊದಲ ಓವರಿನಿಂದಲೇ ಸಾಬೀತುಪಡಿಸಲಾರಂಭಿಸಿತು. ಮ್ಯಾಟ್ ಹೆನ್ರಿ ಎಸೆದ ದ್ವಿತೀಯ ಎಸೆತದಲ್ಲೇ ಆರಂಭಕಾರ ತಿರಿಮನ್ನೆ ಲೆಗ್‌ ಬಿಫೋರ್‌ ಬಲೆಗೆ ಬಿದ್ದರು.

Advertisement

ಈ ಹಂತದಲ್ಲಿ ಜತೆಗೂಡಿದ ದಿಮುತ್‌ ಕರುಣರತ್ನೆ ಮತ್ತು ಕೀಪರ್‌ ಕುಸಲ್ ಪೆರೆರ ತಂಡವನ್ನು ಆಧರಿಸುವ ಸೂಚನೆ ನೀಡಿದರು. 2ನೇ ವಿಕೆಟಿಗೆ 42 ರನ್‌ ಒಟ್ಟುಗೂಡಿತು. ಆದರೆ ಹೆನ್ರಿ ಮುಂದೆ ಇವರ ಆಟ ಸಾಗಲಿಲ್ಲ. 29 ರನ್‌ ಮಾಡಿದ ಪೆರೆರ ಅವರನ್ನು ಔಟ್ ಮಾಡುವ ಮೂಲಕ ಅವರು ಈ ಜೋಡಿಯನ್ನು ಮುರಿದರು. ಅಷ್ಟೇ, ಲಂಕಾ ವಿಕೆಟ್‌ಗಳು ಒಂದರ ಹಿಂದೊಂದರಂತೆ ಪಟಪಟನೆ ಉದುರತೊಡಗಿದವು. 16ನೇ ಓವರ್‌ ವೇಳೆ 60 ರನ್‌ ಆಗುವಷ್ಟರಲ್ಲಿ 6 ಮಂದಿ ಆಟ ಮುಗಿಸಿ ಹೊರನಡೆದರು. ಲಂಕಾ ಪಾಕಿಸ್ತಾನಕ್ಕಿಂತ ಕಡಿಮೆ ಸ್ಕೋರ್‌ ದಾಖಲಿಸುವ ಸೂಚನೆಯೊಂದು ಲಭಿಸಿತು.

ಇದಕ್ಕೆ ಕರುಣರತ್ನೆ-ತಿಸರ ಪೆರೆರ ಅವಕಾಶ ನೀಡಲಿಲ್ಲ. ಇವರಿಬ್ಬರಿಂದ 7ನೇ ವಿಕೆಟಿಗೆ 52 ರನ್‌ ಹರಿದು ಬಂತು. ಇದೇ ಲಂಕಾ ಇನಿಂಗ್ಸಿನ ಅತೀ ದೊಡ್ಡ ಜತೆಯಾಟ. ಇದು ವಿಶ್ವಕಪ್‌ನಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ವೇಳೆ ಶ್ರೀಲಂಕಾ ದಾಖಲಿಸಿದ 3ನೇ ಕನಿಷ್ಠ ಗಳಿಕೆ. 1975ರ ಮ್ಯಾಂಚೆಸ್ಟರ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ಎದುರು 86 ರನ್ನಿಗೆ ಕುಸಿದದ್ದು ದಾಖಲೆ.

ಸ್ಕೋರ್‌ ಪಟ್ಟಿ
ಶ್ರೀಲಂಕಾ
ಲಹಿರು ತಿರುಮನ್ನೆ ಎಲ್‌ಬಿಡಬ್ಲ್ಯು ಬಿ ಹೆನ್ರಿ 4
ದಿಮುತ್‌ ಕರುಣರತ್ನೆ ಔಟಾಗದೆ 52
ಕುಸಲ್‌ ಪೆರೆರ ಸಿ ಗ್ರ್ಯಾಂಡ್‌ಹೋಮ್‌ ಬಿ ಹೆನ್ರಿ 29
ಕುಸಲ್‌ ಮೆಂಡಿಸ್‌ ಸಿ ಗಪ್ಟಿಲ್‌ ಬಿ ಹೆನ್ರಿ 0
ಧನಂಜಯ ಡಿ ಸಿಲ್ವ ಎಲ್‌ಬಿಡಬ್ಲ್ಯು ಬಿ ಫ‌ರ್ಗ್ಯುಸನ್‌ 4
ಮ್ಯಾಥ್ಯೂಸ್‌ ಸಿ ಲ್ಯಾಥಮ್‌ ಬಿ ಗ್ರ್ಯಾಂಡ್‌ಹೋಮ್‌ 0
ಜೀವನ್‌ ಮೆಂಡಿಸ್‌ ಸಿ ನೀಶಮ್‌ ಬಿ ಫ‌ರ್ಗ್ಯುಸನ್‌ 1
ತಿಸೆರ ಪೆರೆರ ಸಿ ಬೌಲ್ಟ್ ಬಿ ಸ್ಯಾಂಟ್ನರ್‌ 27
ಇಸುರು ಉದಾನ ಸಿ ಹೆನ್ರಿ ಬಿ ನೀಶಮ್‌ 0
ಸುರಂಗ ಲಕ್ಮಲ್‌ ಸಿ ಸ್ಯಾಂಟ್ನರ್‌ ಬಿ ಬೌಲ್ಟ್ 7
ಲಸಿತ ಮಾಲಿಂಗ ಬಿ ಫ‌ರ್ಗ್ಯುಸನ್‌ 1
ಇತರ 11
ಒಟ್ಟು (29.2 ಓವರ್‌ಗಳಲ್ಲಿ ಆಲೌಟ್‌) 136
ವಿಕೆಟ್‌ ಪತನ: 1-4, 2-46, 3-46, 4-53, 5-59, 6-60, 7-112, 8-114, 9-130.
ಬೌಲಿಂಗ್‌
ಮ್ಯಾಟ್‌ ಹೆನ್ರಿ 7-0-29-3
ಟ್ರೆಂಟ್‌ ಬೌಲ್ಟ್ 9-0-44-1
ಲಾಕಿ ಫ‌ರ್ಗ್ಯುಸನ್‌ 6.2-0-22-3
ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ 2-0-14-1
ಜಿಮ್ಮಿ ನೀಶಮ್‌ 3-0-21-1
ಮಿಚೆಲ್‌ ಸ್ಯಾಂಟ್ನರ್‌ 2-0-5-1
ನ್ಯೂಜಿಲ್ಯಾಂಡ್‌
ಮಾರ್ಟಿನ್‌ ಗಪ್ಟಿಲ್‌ ಔಟಾಗದೆ 73
ಕಾಲಿನ್‌ ಮುನ್ರೊ ಔಟಾಗದೆ 58
ಇತರ 6
ಒಟ್ಟು (16.1 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ) 137
ಬೌಲಿಂಗ್‌:
ಲಸಿತ ಮಾಲಿಂಗ 5-0-46-0
ಸುರಂಗ ಲಕ್ಮಲ್‌ 4-0-28-0
ಇಸುರು ಉದಾನ 3-0-24-0
ತಿಸರ ಪೆರೆರ 3-0-25-0
ಜೀವನ್‌ ಮೆಂಡಿಸ್‌ 1.1-0-11-0
ಪಂದ್ಯಶ್ರೇಷ್ಠ: ಮ್ಯಾಟ್‌ ಹೆನ್ರಿ

Advertisement

Udayavani is now on Telegram. Click here to join our channel and stay updated with the latest news.

Next