ಕೆಲ ಚಿತ್ರಗಳು ಶೀರ್ಷಿಕೆ ಹಾಗೂ ಪೋಸ್ಟರ್‌ಗಳಲ್ಲೇ ಸುದ್ದಿ ಮಾಡಿಬಿಡುತ್ತವೆ. ಆ ಮೂಲಕವೇ ಗಮನಸೆಳೆದು ಒಂದೊಮ್ಮೆ ಸಿನಿಮಾ ನೋಡಬೇಕು ಎಂಬಷ್ಟರಮಟ್ಟಿಗೆ ಇಷ್ಟವಾಗುತ್ತವೆ. ಅಂತಹ ಚಿತ್ರಗಳ ಸಾಲಿಗೆ “ಮದುವೆ ಮಾಡ್ರೀ ಸರಿ ಹೋಗ್ತಾನೆ’ ಚಿತ್ರವೂ ಸೇರಿದೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಇತ್ತೀಚೆಗೆ ಟೀಸರ್ ಬಿಡುಗಡೆ ಮಾಡುವ ಮೂಲಕ ಒಂದಷ್ಟು ಕುತೂಹಲ ಮೂಡಿಸಿದೆ.
ನಿರ್ದೇಶಕ ಗೋಪಿ ಕೆರೂರು ಅವರಿಗೆ ಇದು ಎರಡನೇ ಸಿನಿಮಾ. ಈ ಕುರಿತು ಮಾತನಾಡಲು ತಮ್ಮ ಚಿತ್ರತಂಡದ ಜೊತೆ ಆಗಮಿಸಿದ್ದರು. “ಇಡೀ ಚಿತ್ರ ಉತ್ತರ ಕರ್ನಾಟಕ ಭಾಷೆಯಲ್ಲಿದೆ. ಪಕ್ಕಾ ಕಮರ್ಷಿಯಲ್ ಸಿನಿಮಾ ಇದಾಗಿದ್ದು, ಉತ್ತರ ಕರ್ನಾಟಕ ಭಾಗದಲ್ಲೇ ಚಿತ್ರೀಕರಿಸಲಾಗಿದೆ. ಊರಲ್ಲಿ ಸೋಮಾರಿ ಹುಡುಗನೊಬ್ಬನ ಮದುವೆ ಪುರಾಣ ಇಲ್ಲಿದೆ. ಸದಾ ಊರ ಜನರಿಂದ ಬೈಯಿಸಿಕೊಳ್ಳುವ ಹುಡುಗ ಕೊನೆಗೆ ಹೇಗೆ ಅದೇ ಊರ ಜನರಿಗೆ ಇಷ್ಟವಾಗುತ್ತಾನೆ ಎಂಬುದು ಕಥೆ. ಇಲ್ಲಿ 11 ಹಾಡುಗಳಿದ್ದರೂ, ಎಲ್ಲವೂ ಕಥೆಗೆ ಪೂರಕವಾಗಿವೆ. ನಮ್ಮನ್ನು ನಂಬಿ ನಿರ್ಮಾಪಕರು ಚಿತ್ರ ಮಾಡಿದ್ದಾರೆ. ಅವರ ನಂಬಿಕೆ ಉಳಿಸಿಕೊಳ್ಳುವ ನಂಬಿಕೆ ನಮಗಿದೆ’ ಎಂದರು ಗೋಪಿ ಕೆರೂರು.
ನಿರ್ಮಾಪಕ ಶಿವರಾಜ್ ಲಕ್ಷ್ಮಣರಾವ್ ದೇಸಾಯಿ ಅವರಿಗೆ ಇದು ಮೊದಲ ಚಿತ್ರ. ನಿರ್ದೇಶಕರು ನಾಲ್ಕು ವರ್ಷದ ಗೆಳೆಯರು. ಒಮ್ಮೆ ಈ ಚಿತ್ರದ ಕಥೆ ಬಗ್ಗೆ ಮಾತನಾಡಿದಾಗ, ಆಸಕ್ತಿ ಬಂದು, ಕಥೆ ಕೇಳಿದ್ದಾರೆ. ಅದರಲ್ಲೂ ಕಥೆಯ ಜೊತೆಗೆ “ಮದುವೆ ಮಾಡ್ರೀ ಸರಿ ಹೋಗ್ತಾನೆ’ ಶೀರ್ಷಿಕೆ ಕೇಳಿದಾಗಲೇ ಅವರಿಗೆ ಮಜವಾದ ಸಿನಿಮಾ ಆಗುತ್ತೆ ಎಂದೆನಿಸಿ ನಿರ್ಮಾಣ ಮಾಡಿದರಂತೆ. ಇದು ನಮ್ಮ ಉತ್ತರ ಕರ್ನಾಟಕ ಭಾಷೆಯಲ್ಲಿದೆ. ಒಂದೊಳ್ಳೆಯ ಚಿತ್ರ ಮಾಡಿದ ಖುಷಿ ನನ್ನದು’ ಎಂದರು ಶಿವರಾಜ್ ಲಕ್ಷ್ಮಣರಾವ್ ದೇಸಾಯಿ.
ನಾಯಕ ಶಿವ ಚಂದ್ರಕುಮಾರ್ ಅವರಿಗೂ ಇದು ಮೊದಲ ಚಿತ್ರ. ಆಡಿಷನ್ ಮೂಲಕ ಅವರು ಹೀರೋ ಆದ ಬಗ್ಗೆ ಹೇಳಿಕೊಂಡು, “ನನ್ನ ಭವಿಷ್ಯ ರೂಪಿಸುವ ಸಿನಿಮಾ ಇದಾಗುತ್ತೆ ಎಂಬ ನಂಬಿಕೆ ಇದೆ. ಚಿತ್ರದಲ್ಲಿ ನಾನೊಬ್ಬ ಪಡ್ಡೆ ಹುಡುಗ. ಸದಾ ಎಲ್ಲರಿಂದಲೂ ಬೈಯಿಸಿಕೊಳ್ಳುವ ಪಾತ್ರವಾಗಿದ್ದು, ಮದುವೆ ನಂತರ ಸರಿಹೋಗ್ತಾನಾ ಇಲ್ಲವಾ ಅನ್ನೋದೇ ಕಥೆ’ ಎಂದರು ಅವರು.
ಸಂಗೀತ ನಿರ್ದೇಶಕ ಅವಿನಾಶ್ ಬಾಸೂತ್ಕರ್ ಅವರಿಗೆ ಇದು ನಿರ್ದೇಶಕರ ಜೊತೆ ಎರಡನೇ ಚಿತ್ರ. ಹಿಂದೆ “ರಂಕಲ್ ರಾಟೆ’ಗೂ ಸಂಗೀತ ನೀಡಿದ್ದರು. ಇಲ್ಲಿ ಹನ್ನೊಂದು ಹಾಡುಗಳಿವೆ. ಆ ಬಗ್ಗೆ ಈಗಲೇ ಹೇಳಲ್ಲ. ಯಾಕೆಂದರೆ, ಆಡಿಯೋ ಬಿಡುಗಡೆ ವೇಳೆ ಸಂಪೂರ್ಣ ವಿವರ ಕೊಡುತ್ತೇನೆ. ಆದರೆ, ನಿರ್ಮಾಪಕರ ಬಗ್ಗೆ ಹೇಳಲೇಬೇಕು. ನಾನು ಕೇಳಿದ್ದೆಲ್ಲವನ್ನೂ ಒದಗಿಸಿದ್ದಾರೆ. ಇಲ್ಲಿ ಲೈವ್ ವಾದ್ಯ ಬಳಸಿದ್ದೇವೆ. ಒಂದು ಮನರಂಜನೆಯ ಸಿನಿಮಾ ಇದಾಗಿದ್ದು, ಎಲ್ಲಾ ವರ್ಗದವರು ನೋಡುವ ಹಾಸ್ಯಮಯ ಸಿನಿಮಾ ಎಂದರು ಅವಿನಾಶ್ ಬಾಸೂತ್ಕರ್.
ಹಿರಿಯ ರಂಗಕರ್ಮಿ ಕೃಷ್ಣಮೂರ್ತಿ ಕವಾತ್ತರ್ ಇಲ್ಲಿ ನೆಗೆಟಿವ್ ಪಾತ್ರ ಮಾಡಿದ್ದಾರಂತೆ. ನಿರ್ದೇಶಕರು ತುಂಬ ಕಷ್ಟಪಟ್ಟು, ಇಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ಎಲ್ಲರಿಗೂ ರುಚಿಸುವ ಚಿತ್ರ ಇದಾಗಲಿದೆ’ ಎಂದರು ಕೃಷ್ಣಮೂರ್ತಿ ಕವಾತ್ತರ್.
ಲಹರಿ ವೇಲು ಅವರು ಈ ಚಿತ್ರದ ಮೂಲಕ ಈ ವರ್ಷದ ಮೊದಲ ಚಿತ್ರದ ಆಡಿಯೋ ಹಕ್ಕು ಖರೀದಿಸಿದ ಬಗ್ಗೆ ಹೇಳಿಕೊಂಡರು. ಕಲಾವಿದರಾದ ಚಿತ್ಕಲ ಬಿರಾದಾರ, ಸದಾನಂದ ಕಾಳಿ, ಚಕ್ರವರ್ತಿ ದಾವಣಗೆರೆ ಮಾತನಾಡಿದರು. ಚಿತ್ರಕ್ಕೆ ಸುರೇಶ್ ಬಾಬು ಛಾಯಾಗ್ರಹಣವಿದೆ. ವೆಂಕಿ ಸಂಕಲನವಿದೆ.
ವಿಜಯ್ ಭರಮಸಾಗರ