Advertisement

ಹೆದ್ದಾರಿಯಂಚಿನಲ್ಲೇ ಸಂತೆ ಮಾರುಕಟ್ಟೆ

03:11 PM Jun 17, 2019 | Suhan S |

ಭಟ್ಕಳ: ರೈತರು ಹಾಗೂ ಗ್ರಾಹಕ ಕೊಂಡಿಯೇ ವಾರದ ಸಂತೆ ಮಾರುಕಟ್ಟೆ. ರೈತರು ಕೃಷಿ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರುವ ವ್ಯವಸ್ಥೆ ಮಾಡಲಿಕ್ಕಾಗಿಯೇ ವಾರದಲ್ಲೊಮ್ಮೆ ಸಂತೆ ನಡೆಯುತ್ತದೆ.

Advertisement

ನಗರದಲ್ಲಿ ಸಂತೆಯು ರವಿವಾರ ನಡೆಯುತ್ತಿದ್ದು, ರೈತರಿಗಾಗಿ, ಸ್ಥಳೀಯರಿಗಾಗಿ ನಡೆಸುವ ಈ ಸಂತೆ ಮಾರುಕಟ್ಟೆಯಲ್ಲಿ ಹೊರಗಿನವರದ್ದೇ ಕಾರುಬಾರು. ದೂರದ ಊರುಗಳಿಂದ ಶನಿವಾರವೇ ಬಂದು ಟೆಂಟ್ ಹಾಕಿ ಜಾಗವನ್ನೆಲ್ಲಾ ಅತಿಕ್ರಮಿಸಿ ಕುಳಿತುಕೊಳ್ಳುವ ವ್ಯಾಪಾರಿಗಳಿಂದಾಗಿ ಹಳ್ಳಿಗರಿಗೆ ಅವಕಾಶವೇ ಇಲ್ಲವಾಗಿದೆ. ಈ ಕುರಿತು ಜಾಗೃತಿ ಮಾಡಬೇಕಾದ ಪುರಸಭೆ ಕೇವಲ ವ್ಯಾಪಾರಿಗಳ ಫೀಸ್‌ ವಸೂಲಿ ಮಾಡುವುದರಲ್ಲಿಯೇ ಮಗ್ನವಾಗಿದೆ.

ಜಾಗಾ ವಂಚಿತ ರೈತರು: ತಾಲೂಕಿನ ರೈತರು ಬೇರೆಬೇರೆ ಊರುಗಳಿಂದ ಬರುತ್ತಾರೆ. ಜಾಲಿ, ಹೆಬಳೆ, ತೆಂಗಿನಗುಂಡಿ, ಬೆಳ್ನಿ, ಮಾವಿನಕುರ್ವೆ, ಬೆಳ್ಕೆ, ಸರ್ಪನಕಟ್ಟೆ, ಪುರವರ್ಗ, ಮೂಢಭಟ್ಕಳ, ಮುಟ್ಟಳ್ಳಿ, ಮಾರುಕೇರಿ, ಕೋಣಾರ, ಕೋಟಖಂಡ, ಹಾಡುವಳ್ಳಿ, ಹಲ್ಯಾಣಿ, ಬೆಳಕೆ, ಸರ್ಪನಕಟ್ಟೆ, ಇತ್ಯಾದಿ ಪ್ರದೇಶದವರು ವ್ಯಾಪಾರಕ್ಕೆಂದು ಬರುತ್ತಿದ್ದು ಇವರು ಬೆಳಗ್ಗೆ ತಮ್ಮ ತಮ್ಮ ಬೆಳೆಗಳನ್ನು ತರುವುದರೊಳಗಾಗಿ ದೂರ ದೂರದಿಂದ ಬರುವ ವ್ಯಾಪಾರಿಗಳು ಜಾಗಾ ಹಿಡಿದುಕೊಂಡಿರುತ್ತಾರೆ. ಇವರು ತಮ್ಮ ಬೆಳೆಗಳನ್ನು ಮಾರಾಟ ಮಾಡುವುದಕ್ಕಾಗಿ ರಸ್ತೆಯ ಪಕ್ಕದ ಜಾಗಾವನ್ನೇ ಆರಿಸಿಕೊಳ್ಳುವುದು ಅನಿವಾರ್ಯ.

ರಸ್ತೆ ಅತಿಕ್ರಮಿಸಿದ ವ್ಯಾಪಾರೋದ್ಯಮಿಗಳು: ಮೊದ ಮೊದಲು ರೈತರು ಮಾತ್ರ ತಮ್ಮ ಚಿಕ್ಕಪುಟ್ಟ ತರಕಾರಿ ಬುಟ್ಟಿಗಳನ್ನು ರಸ್ತೆಯಂಚಿಗಿಟ್ಟು ಮಾರಾಟ ಆರಂಭಿಸಿದರೆ ಇಂದು ಬೃಹತ್‌ ವ್ಯಾಪಾರಿಗಳೂ ರಸ್ತೆಯಂಚಿನ ವ್ಯಾಪಾರ ಶುರುಮಾಡಿದ್ದಾರೆ. ತಮ್ಮ ತಮ್ಮ ವಾಹನವನ್ನು ಕೂಡಾ ರಸ್ತೆಯಂಚಿಗೇ ನಿಲ್ಲಿಸಿಕೊಂಡು ವ್ಯಾಪಾರ ಮಾಡುವ ಇವರು ಅರ್ಧ ರಸ್ತೆಯನ್ನೇ ಕಬಳಿಸುತ್ತಾರೆ. ಮೇಲಾಗಿ ಹಲವು ವಾಹನಗಳು ಕೋಳಿಗಳನ್ನು ತುಂಬಿಕೊಂಡು ಬಂದು ಸಂತೆ ಮಾರುಕಟ್ಟೆ ರಸ್ತೆಯಲ್ಲಿ ನಿಂತು ಮಾರಾಟ ಆರಂಭಿಸಿದ್ದು ಕೋಳಿ ವ್ಯಾಪಾರ ರಾಷ್ಟ್ರೀಯ ಹೆದ್ದಾರಿ ತನಕವೂ ಚಾಚಿಕೊಳ್ಳುವಂತಾಗಿದೆ. ಇನ್ನೇನು ಹೆದ್ದಾರಿ ಪಕ್ಕದಲ್ಲಿಟ್ಟು ಮಾರಾಟ ಮಾಡುವುದೊಂದೇ ಬಾಕಿ ಉಳಿದಿದ್ದು ಅಧಿಕಾರಿಗಳ ನಿರ್ಲಕ್ಷ ಇದೇ ರೀತಿ ಮುಂದುವರಿದರೆ ಹೆದ್ದಾರಿ ಪಕ್ಕದಲ್ಲಿಯೇ ವ್ಯಾಪಾರಿಗಳು ಕುಳಿತರೂ ಆಶ್ಚರ್ಯವಿಲ್ಲ.

ಸಂತೆ ಮಾರುಕಟ್ಟೆಯನ್ನು ಹೊಕ್ಕುವುದೇ ಕಷ್ಟವಾಗಿದೆ. ರಸ್ತೆಯಲ್ಲಿ ಒಂದು ಕಡೆ ವ್ಯಾಪಾರಸ್ಥರಾದರೆ, ಇನ್ನೊಂದು ಕಡೆ ಗ್ರಾಹಕರು ರಸ್ತೆಯಲ್ಲಿಯೇ ನಿಂತು ವ್ಯಾಪಾರ ಮಾಡುತ್ತಾರೆ. ಇನ್ನು ದ್ವಿಚಕ್ರವಾಹನಗಳ ಭರಾಟೆ, ಆಟೋಗಳು, ಕಾರುಗಳು ಎಲ್ಲವೂ ಹೋಗಬೇಕು. ಪಕ್ಕದಲ್ಲಿ ದೊಡ್ಡ ದೊಡ್ಡ ವಾಹನಗಳಲ್ಲಿ ಕೋಳಿ ಇತ್ಯಾದಿಗಳ ಭಜರ್ರಿ ವ್ಯಪಾರ ಪುರಸಭೆ ಅಧಿಕಾರಿಗಳು, ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ. • ದೀಪಕ್‌ ನಾಯ್ಕ,ಹುರುಳಿಸಾಲ

Advertisement

ಆಸ್ಪತ್ರೆ ರಸ್ತೆ ಬಂದ್‌: ತಾಲೂಕು ಆಸ್ಪತ್ರೆ ರಸ್ತೆಯಲ್ಲಿಯೇ ಸಂತೆ ನಡೆಯುವುದರಿಂದ ರವಿವಾರ ಆಸ್ಪತ್ರೆಗೆ ಹೋಗಬೇಕಾದರೆ ಸಾಗರ ರಸ್ತೆಯಾಗಿ ಸುತ್ತುವರಿದು ಹೋಗಬೇಕು. ಸಂತೆಯೆನ್ನುವ ಕಾರಣಕ್ಕೆ ಓಡಾಡುವುದೇ ಕಷ್ಟಕರ. ಹಲವಾರು ತುರ್ತು ಸಂದರ್ಭದಲ್ಲಿಯೂ ಸಹ ರಸ್ತೆ ಬಂದ್‌ ಇರುವುದರಿಂದ ಸುತ್ತು ಬಳಸಿ ಆಸ್ಪತ್ರೆಗೆ ಬರುವುದೇ ಸಮಸ್ಯೆಯಾಗುವುದು.

ಈ ಹಿಂದೆ ರಸ್ತೆ ತೆರವುಗೊಳಿಸಿದ್ದ ಪೊಲೀಸ್‌ ಅಧಿಕಾರಿ: ಈ ಹಿಂದೆ ಸಂತೆ ಮಾರುಕಟ್ಟೆಯೊಳಗೇ ಇಟ್ಟು ವ್ಯಾಪಾರ ಮಾಡುತ್ತಿರುವಾಗ ಹಲವರು ರಸ್ತೆಯಂಚಿಗೆ ಬಂದು ಕುಳಿತುಕೊಳ್ಳುತ್ತಿದ್ದರು. ಈ ಕುರಿತು ಪೊಲೀಸ್‌ ಅಧಿಕಾರಿಗಳು ರಸ್ತೆಯಂಚಿನಲ್ಲಿ ವ್ಯಾಪಾರ ಮಾಡದಂತೆ ಸೂಕ್ತ ಕ್ರಮ ತೆಗೆದುಕೊಂಡಿದ್ದರು. ಈಗಲೂ ಕೂಡಾ ಬೇಕಾಬಿಟ್ಟಿ ಹೆದ್ದಾರಿ ತನಕ ಬಂದು ವ್ಯಾಪಾರ ಮಾಡುವವರನ್ನು ತಡೆಯದೇ ಇದ್ದಲ್ಲಿ ಮುಂದೊಂದು ದಿನ ಅನಾಹುತ ತಪ್ಪದು ಎನ್ನುವುದು ನಾಗರಿಕರ ಅಭಿಪ್ರಾಯ. ಪುರಸಭೆ, ಪೊಲೀಸ್‌ ಇಲಾಖೆ ಜಂಟಿಯಾಗಿ ಕ್ರಮ ಜರುಗಿಸಬೇಕಾಗಿದೆ.

•ಆರ್ಕೆ, ಭಟ್ಕಳ
Advertisement

Udayavani is now on Telegram. Click here to join our channel and stay updated with the latest news.

Next