Advertisement
ಕಳೆದ ವರ್ಷ ಮಾವಿನ ಇಳುವರಿ ಭಾರೀ ಕುಸಿತ ಕಂಡಿತ್ತು. ವರ್ಷದಿಂದ ವಷìಕ್ಕೆ ವಾತಾರವರಣದಲ್ಲಿಯೂ ಏರುಪೇರಾಗಿ ಮಾವು ಹೂ ಬಿಡುವಾಗಲೇ ಉದುರಿ ಮಣ್ಣೂ ಸೇರುತ್ತಿತ್ತು. ಹಾಗಾಗಿ ಸ್ಥಳೀಯ ಮಾವಿನ ಮಿಡಿ ಹಾಗೂ ಹಣ್ಣುಗಳು ಫಲ ಕೊಡದೇ ಮಾವು ಬೆಳೆಗಾರರ ಮುಖ ಕಳೆಗುಂದಿತ್ತು…ಅಲ್ಲದೇ ಲೋಕಲ್ ಮಾವಿನ ಹಣ್ಣುಗಳ ಸ್ವಾದ ಸವಿಯಬೇಕು ಎನ್ನುವ ಮಾವು ಪ್ರಿಯರಿಗೂ ಮಾವು ಕಳೆದ ಬಾರಿ ಅಷ್ಟೊಂದು ಸಿಹಿ ಕೊಟ್ಟಿರಲಿಲ್ಲ ಅನ್ನುವುದು ನಿಜ.ಆದರೆ ಈ ಬಾರಿ ಹವಾಮಾನದಲ್ಲಿಯೂ ಸ್ಥಿರತೆ ಕಂಡುಬಂದಿರುವುದರಿಂದ ಮಾವಿನ ಇಳುವರಿಯಲ್ಲಿ ಭಾರೀ ಅಲ್ಲದಿದ್ದರೂ ಹೆಚ್ಚುವರಿ ನಿರೀಕ್ಷಿತ ಇಳುವರಿ ಕಂಡಿದೆ. ಈಗಾಗಲೇ ಉಡುಪಿ ಜಿಲ್ಲೆ ಹಾಗೂ ಕಾರ್ಕಳ ತಾಲೂಕಿನ ಬಹುತೇಕ ಭಾಗಗಳಲ್ಲಿ ಮಿಡಿ ಮಾವಿನ ಉತ್ತಮ ಇಳುವರಿ ಕಂಡುಬಂದಿದ್ದು ಈ ಸಲದ ಮಾವಿನ ಸೀಸನ್ ರುಚಿಕರವಾಗಿರಬಹುದು ಎನ್ನುವ ನಿರೀಕ್ಷೆ ಚಿಗುರೊಡೆದಿದೆ.
ಡಿಸೆಂಬರ್ ತಿಂಗಳ ಅಂತ್ಯದಲ್ಲಿಯೇ ಹೂ ಬಿಟ್ಟು ಕೊಯ್ಲಿಗೆ ಅಣಿಯಾಗುವ ಮಾವಿನ ಮರಗಳಲ್ಲಿ ಈ ಸಲವೂ ಹೂವುಗಳು ಬೇಗನೇ ಚಿಗುರಿದ್ದು ಯಾವುದೇ ಹವಾಮಾನ ವೈಪರೀತ್ಯಕ್ಕೆ ತುತ್ತಾಗಿಲ್ಲ. ಕಳೆದ ಬಾರಿ ಮಳೆಗಾಲದಲ್ಲಿ ಮಳೆ ಕಡಿಮೆಯಾಗಿದ್ದರಿಂದ, ಚಳಿಗಾಲದಲ್ಲಿಯೂ ಸರಿಯಾಗಿ ಚಳಿ ಇರದೇ ಇದ್ದುದರಿಂದ ಹಾಗೂ ಬೇಸಗೆಯಲ್ಲಿ ಮೋಡದ ಹಾವಳಿ ಜಾಸ್ತಿಯಾದ್ದರಿಂದ ಮಾವಿನ ಹೂವುಗಳು ಉದುರಿ ಕೃಷಿಕರನ್ನು ಭಾರೀ ನಿರಾಶೆಗೊಳಿಸಿತ್ತು.ಆದರೆ ಈ ಬಾರಿ ಅಂತಹ ನಿರಾಶೆಯ ವಾತಾವರಣವಿಲ್ಲ. ಫೆಬ್ರವರಿ ಕಳೆದು ಮಾರ್ಚ್ ಮುಗಿಯುತ್ತಲೇ ಮಾವಿನ ಹೂವುಗಳು ಈ ಸಲ ಮಾವಿನ ಸುಗ್ಗಿ ತುಂಬಿಕೊಳ್ಳಲಿದೆ ಎನ್ನುವ ಪೂರ್ವ ಸೂಚನೆ ನೀಡಿದ್ದು ಬೆಳೆಗಾರರಲ್ಲಿ ಕೊಂಚ ತೃಪ್ತಿ ಮೂಡಿಸಿದೆ. ಅಕಾಲಕ್ಕೆ ಹುಟ್ಟುವ ಮೋಡಗಳೇ ಮಾವಿನ ಬೆಳವಣಿಗೆಗೆ ಶತ್ರುವಾಗಿದ್ದು ಮೋಡ ಹೆಪ್ಪುಗಟ್ಟದಿರಲಿ ಎಂದು ಬೇಡುವ ಮಾವು ಬೆಳೆಗಾರರು ಗ್ರಾಮೀಣ ಭಾಗಗಳಲ್ಲಿ ಕಾಣಸಿಗುತ್ತಿದ್ದಾರೆ. ಹೆಚ್ಚಿದ ಇಳುವರಿ…ಮಾವು ಬೆಳೆಗಾರರಿಗೆ ಸದ್ಯಕ್ಕಿಲ್ಲ ವರಿ
ಕಳೆದ 2 ವರ್ಷಗಳ ಹಿಂದೆ ಕಾರ್ಕಳ ತಾಲೂಕಿನಾದ್ಯಂತ ಶೇ.70 ರಷ್ಟು ಮಾವಿನ ಇಳುವರಿ ಇತ್ತು. 2016 ರಲ್ಲಿ ಶೇ.20 ರಷ್ಟು ಮಾತ್ರ ಇಳುವರಿ ಇದ್ದು ಬೆಳೆಗಾರರನ್ನು ನಿರಾಶೆ ಮಾಡಿತ್ತು, ಆದರೆ ಈ ಸಲ ಶೇ.50 ರಷ್ಟು ಮಾವು ಇಳುವರಿ ಇದೆ. ತಾಲೂಕಿನಲ್ಲಿ ಸಾಮಾನ್ಯವಾಗಿ ಕಾಲಪ್ಪಾಡಿ,ಬೆನೆಟ್,ಮಾವುಗಳಷ್ಟೇ ಹೆಚ್ಚಾಗಿ ಬೆಳೆಯುತ್ತಿದ್ದು ಈ ಸಲ ಹೆಚ್ಚಿನ ಇಳುವರಿ ಕಂಡಿದೆ. ಪಶ್ಚಿಮ ಘಟ್ಟದ ವ್ಯಾಪ್ತಿಗಳಲ್ಲಿರುವ ಮಾಳ ,ಕೆರ್ವಾಶೆ, ಈದು, ನಲ್ಲೂರು ಮೊದಲಾದ ಕಡೆಗಳಲ್ಲಿಯೂ ಕಾಡು ಮಾವುಗಳು ಹೆಚ್ಚಾಗಿ ಬೆಳೆಯುತ್ತಿವೆ. ಪೇಟೆಯಲ್ಲಿ ಸಿಗುವ ರಾಸಾಯನಿಕಗಳಿಂದ ಹಣ್ಣಾದ ಮಾವಿನಹಣ್ಣುಗಳು ಬೇಡ ಸಹಜವಾಗಿ ಹಣ್ಣಾಗುವ ಮಾವಿನ ಹಣ್ಣುಗಳೇ ಬೇಕು ಎನ್ನುವವರು ಇನ್ನೂ ಸ್ವಲ್ಪ ಸಮಯ ಕಾದು ಹಣ್ಣಿನ ರುಚಿ ಸವಿಯಬೇಕಷ್ಟೇ.
Related Articles
ಈ ಸಲ ಮಾವಿನ ಇಳುವರಿ ಕೊಂಚ ಹೆಚ್ಚಾಗಿದೆ.ಆದರೆ ನಿರೀಕ್ಷಿತ ಫಸಲು ಕಂಡುಬಂದಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ತಾಲೂಕಿನಲ್ಲಿ ಉತ್ತಮ ಇಳುವರಿ ಇದೆ.ಜಿಗಿ ಹುಳಗಳ ಕಾಟ ಹೆಚ್ಚಾಗಿ ಮಾವಿನ ಮರಕ್ಕೆ ತಗುಲಿದರೆ ಇಳುವರಿ ಕಡಿಮೆಯಾಗುವ ಸಾಧ್ಯತೆ ಇರುತ್ತದೆ.ಸದ್ಯಕ್ಕೆ ಮೋಡದ ಕಾಟ ಹೆಚ್ಚಾಗದೇ ಇದ್ದರೆ ಇನ್ನೂ ಹೆಚ್ಚಿ ನ ಇಳುವರಿ ನಿರೀಕ್ಷಿಸಬಹುದು.
– ಶ್ರೀನಿವಾಸ್, ಸಹಾಯಕ ತೋಟಗಾರಿಕಾ ನಿರ್ದೇಶಕರು ಕಾರ್ಕಳ
Advertisement
ಉತ್ತಮ ಇಳುವರಿ ನಿರೀಕ್ಷೆತೋತಾಪುರಿ, ಮನೋರಂಜನ್, ಅಪ್ಪೂಸ್ ಮೊದಲಾದ ಜಾತಿಯ ಮರಗಳಲ್ಲಿ ಹೂಬಿಟ್ಟ ಪ್ರಮಾಣ ನೋಡಿದರೆ ಈ ಸಲ ಉತ್ತಮ ಇಳುವರಿ ಸಿಗುವ ನಿರೀಕ್ಷೆ ಇದೆ. ಕಳೆದ ಸಲ ನಿರೀಕ್ಷಿತ ಪ್ರಮಾಣದಲ್ಲಿ ಮಾವು ಸಿಕ್ಕಿರಲಿಲ್ಲ.ಕೆಲವು ಜಾತಿಯ ಮಾವುಗಳಿಗೆ ಉತ್ತಮ ಬೇಡಿಕೆ ಇದೆ. ಹಾಗಾಗಿ ಮಾವು ಈ ಸಲ ಉತ್ತಮ ಲಾಭ ಕೊಡುವ ನಿರೀಕ್ಷೆ ಇದೆ.
– ಸುಮನಾ ಎಂ. ಹೆಗ್ಡೆ, ಕೃಷಿಕರು, ರೆಂಜಾಳ – ಪ್ರಸಾದ್ ಶೆಣೈ