Advertisement

30ರಿಂದ ಮಾವು ಮೇಳ ಆರಂಭ

12:44 PM May 12, 2019 | Team Udayavani |

ಮಂಡ್ಯ: ನಗರದಲ್ಲಿ ಮೇ 30ರಿಂದ ಜೂ.2ರವರೆಗೆ ಮಾವು ಮೇಳ ಆಯೋಜಿಸಲಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಕೆ.ಎಂ.ರೇಖಾ ಹೇಳಿದರು.

Advertisement

ನಗರದ ಜಿಲ್ಲಾ ತೋಟಗಾರಿಕೆ ಕಚೇರಿಯಲ್ಲಿ ಏರ್ಪಡಿಸಿದ್ದ ಮಾವು ಬೆಳೆಗಾರರ ಸಭೆಯಲ್ಲಿ ಮಾತನಾಡಿ, ತೋಟಗಾರಿಕೆ ಇಲಾಖೆ ಕಳೆದ ವರ್ಷ ಮಾವು ಮೇಳವನ್ನು ಯಶಸ್ವಿಯಾಗಿ ಆಯೋಜನೆ ಮಾಡಿತ್ತು. ಆದರೆ, ಈ ಬಾರಿ ಮಾವು ಮೇಳ ಆಯೋಜನೆ ಜವಾಬ್ದಾರಿಯನ್ನು ಮಾವು ಅಭಿವೃದ್ಧಿ ಮಂಡಳಿ ವಹಿಸಿಕೊಂಡಿದೆ. ರೈತರು ಮಾಡಿರುವ ತೀರ್ಮಾನದಂತೆ ಮೇ 30ರಿಂದ ಜೂ.2ರವರೆಗೆ ಮಾವು ಮೇಳ ಆಯೋಜನೆ ಮಾಡಲಾಗುವುದು. ಅವಧಿ ವಿಸ್ತರಣೆ ಕುರಿತಂತೆ ಮಾವಿನ ಹಣ್ಣಿನ ಪೂರೈಕೆ ನೋಡಿಕೊಂಡು ತೀರ್ಮಾನಿಸಲಾಗುವುದು ಎಂದು ಹೇಳಿದರು.

ನೈಸರ್ಗಿಕವಾಗಿ ಹಣ್ಣು ಮಾಡಿ: ಮಾವು ಕಟಾವು ಮಾಡಿದ ಬಳಿಕ ಅದನ್ನು ನೈಸರ್ಗಿಕವಾಗಿ ಹಣ್ಣು ಮಾಡಬೇಕು. ಒಂದು ವೇಳೆ ಕ್ಯಾಲ್ಸಿಯಂ ಕಾರ್ಬೈಡ್‌ ಬಳಕೆ ಮಾಡಿದ್ದರೆ ಅಂತಹ ಹಣ್ಣುಗಳನ್ನು ಮಾವು ಮೇಳದಿಂದ ನಿಷೇಧಿಸಲಾಗುವುದು. ಕ್ಯಾಲ್ಸಿಯಂ ಕಾರ್ಬೈಡ್‌ ಬಳಸಿ ಹಣ್ಣು ಮಾಡಿದ್ದಾರೆಯೇ ಎಂದು ಪ್ರತಿದಿನ ಪರೀಕ್ಷೆ ಮಾಡಲಾಗುವುದು ಎಂದರು.

ವಿವಿಧ ತಳಿ ಹಣ್ಣು: ಮಾವು ಮಾರಾಟಕ್ಕೆ ಬಾದಾಮಿ, ರಸಪೂರಿ, ಸೇಂಧೂರ, ಮಲ್ಲಿಕಾ, ಮಲಗೋಬಾ, ತೋತಾಪುರಿ, ವಾದಾಜ, ನೀಲಂ, ರುಮಾನಿ, ದಶಹರಿ, ಕಾಲಾಪಾಡ್‌, ಜೀರಿಗೆ, ಕೇಸರಿ, ಮರಿಗೌಡ, ಗಿಣಿಕೊಕ್ಕು, ಆಮ್ಲೇಟ್ ಹಾಗೂ ಮಿಶ್ರಾಮಿನಿ ತಳಿಯ ಹಣ್ಣುಗಳು ಮಾವು ಮೇಳಕ್ಕೆ ಬರಲಿವೆ. ಮಾವು ಮಾರಟಗಾರರು ಪ್ಲಾಸ್ಟಿಕ್‌ ಹಾಗೂ ಪಾಲಿಥಿನ್‌ ಚೀಲಗಳಲ್ಲಿ ಹಣ್ಣು ಮಾರಾಟ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದರು.

ಮಂಡಳಿಯೇ ದರ ನಿಗದಿ: ಮಾವಿನ ಹಣ್ಣಿನ ದರವನ್ನು ಪ್ರತಿದಿನ ಮಾವು ಮಂಡಳಿ ವತಿಯಿಂದ ನಿಗದಿ ಮಾಡಲಾಗುವುದು. ಪ್ರತಿ ದಿನ ನಿಗದಿ ಮಾಡಿದ ಬೆಲೆಗೆ ಎಲ್ಲಾ ಮಳಿಗೆ ಮಾರಾಟಗಾರರು ಹಣ್ಣು ಮಾರಾಟ ಮಾಡಬೇಕು. ವ್ಯತ್ಯಾಸ ಮಾಡಿದಲ್ಲಿ ಮಳಿಗೆಯಿಂದ ಹೊರಹಾಕಲಾಗುವುದು. ಮಾವು ಮೇಳಕ್ಕೆ 25 ರಿಂದ 30 ಮಳಿಗೆ ತೆರೆಯಲಾಗುವುದು. ರೈತರ ಬೇಡಿಕೆಗೆ ಅನುಗುಣವಾಗಿ ಮೇಳದಲ್ಲಿ ಮಳಿಗೆ ವಿಸ್ತರಣೆ ಮಾಡಲಾಗುವುದು ಎಂದು ತಿಳಿಸಿದರು.

Advertisement

ರೈತರು ಸಲ್ಲಿಸಬೇಕಾದ ದಾಖಲೆ: ಸರ್ಕಾರದ ಸಹಾಯಧನದ ಅಡಿಯಲ್ಲಿ ಮಾವಿನ ಹಣ್ಣಿನ ಬಾಕ್ಸ್‌ ಪಡೆಯಲು ರೈತರು ಕೆಲವು ದಾಖಲೆಗಳನ್ನು ಸರ್ಕಾರಕ್ಕೆ ನೀಡಬೇಕು. ಮಾವು ಬೆಳೆ ಹೊಂದಿರುವ ಆರ್ಟಿಸಿ(ಪಹಣಿ ಪತ್ರ), ಆಧಾರ್‌ ಕಾರ್ಡ್‌ ಹಾಗೂ ಭಾವಚಿತ್ರ ನೀಡಬೇಕು. ಆರ್‌ಟಿಸಿಯಲ್ಲಿ ಮಾವು ಬೆಳೆ ಎಂದು ನಮೂದಿಸಿಲ್ಲ ಎಂದಾದರೆ, ರೈತರು ಮಾವು ಬೆಳೆ ಢೀಕರಣ ಪತ್ರ ನೀಡಬೇಕು ಎಂದು ತಿಳಿಸಿದರು.

ಬೆಳೆಗಾರರ ನಿರ್ಣಯ: ರಾಮನಗರ ಜಿಲ್ಲೆಯಲ್ಲಿ ಮಾತ್ರ ಮಾವು ಫ‌ಸಲು ಕಟಾವಿಗೆ ಬಂದಿದೆ. ಆದರೆ, ಮೈಸೂರು ಹಾಗೂ ಮಂಡ್ಯ ಜಿಲ್ಲಾದ್ಯಂತ ಮಾವಿನ ಫ‌ಸಲು ಕಟಾವಿಗೆ ಬಂದಿಲ್ಲ. ಮುಂದಿನ ಒಂದು ವಾರದಲ್ಲಿ ಫ‌ಸಲು ಕಟಾವಿಗೆ ಬರಲಿದ್ದು, ನೈಸರ್ಗಿಕವಾಗಿ ಹಣ್ಣು ಮಾಡಲು ಕನಿಷ್ಟ ಎಂಟರಿಂದ ಹತ್ತು ದಿನ ಬೇಕಿದೆ. ಹೀಗಾಗಿ ಮೇ ತಿಂಗಳ ಕೊನೆ ವಾರದಲ್ಲಿ ಮಾವು ಮೇಳ ಆಯೋಜನೆ ಮಾಡುವಂತೆ ಮಾವು ಬೆಳಗಾರರೇ ಒತ್ತಾಯಿಸಿದರು.

ಸಭೆಯಲ್ಲಿ ಮಳವಳ್ಳಿ, ಕೆ.ಆರ್‌.ಪೇಟೆ, ಮಂಡ್ಯ ತಾಲೂಕು ಹಾಗೂ ರಾಮನಗರ ಜಿಲ್ಲೆಯ ಚನ್ನಪಟ್ಟಣ ಮಾವು ಬೆಳೆಗಾರರು ಭಾಗವಹಿಸಿದ್ದರು.

ಹಲಸು ಮೇಳ ಆಯೋಜನೆ:

ಮಾವು ಮೆಳದ ಜೊತೆಗೆ ಹಲಸು ಮೇಳ ಆಯೋಜನೆ ಮಾಡಲು ತೀರ್ಮಾನಿಸಲಾಗಿದೆ. ಕೆಲ ರೈತರು ಮಳಿಗೆ ಹಾಕುವುದಾಗಿ ಒಪ್ಪಿಗೆ ನೀಡಿದ್ದು, ಪ್ರಾಯೋಗಿಕವಾಗಿ ಈ ಬಾರಿ ಎರಡರಿಂದ ಮೂರು ಮಳಿಗೆಗಳನ್ನು ಹಲಸು ಮೇಳಕ್ಕೆ ನೀಡಲಾಗುವುದು. ಕಳೆದ ಬಾರಿ ನಡೆದ ಮಾವು ಮೇಳದಲ್ಲಿ ಕೆಲ ರೈತರು ಮಾರುಕಟ್ಟೆಯಿಂದ ಕ್ಯಾಲ್ಸಿಯಂ ಕಾರ್ಬೈಡ್‌ ಬಳಸಿ ಹಣ್ಣು ಮಾಡಿದ ಮಾವುಗಳನ್ನು ತಂದು ಕಡಿಮೆ ಬೆಲೆಗೆ ಮಾರಾಟ ಮಾಡಿದರು. ಇದರಿಂದ ಗ್ರಾಹಕರಿಗೆ ಗುಣಮಟ್ಟದ ಹಣ್ಣು ಸಿಗಲಿಲ್ಲ, ಜೊತೆಗೆ ಕೆಲ ಮಾವು ಬೆಳೆಗಾರರು ನಷ್ಟ ಅನುಭವಿಸಿದರು. ಕೆಲವರು ಬೆಂಗಳೂರು ಮಾವು ಮೇಳಕ್ಕೆ ಹಣ್ಣು ಸಾಗಿಸಬೇಕಾದ ಪರಿಸ್ಥಿತಿ ಬಂದಿತು. ಅದೇ ಪರಿಸ್ಥಿತಿ ನಿರ್ಮಾಣವಾದರೆ ನಾವು ಹಣ್ಣು ಮಾರಾಟ ಮಾಡುವುದಿಲ್ಲ ಎಂದು ರೇಖಾ ಹೇಳಿದರು.
Advertisement

Udayavani is now on Telegram. Click here to join our channel and stay updated with the latest news.

Next