Advertisement

ಪೊನ್ನಂಪೇಟೆ: ಶಿಕ್ಷಕಿಯನ್ನು ಗುಂಡಿಕ್ಕಿ ಕೊಂದು ವ್ಯಕ್ತಿ ಆತ್ಮಹತ್ಯೆ

10:37 AM Jun 15, 2019 | keerthan |

ಗೋಣಿಕೊಪ್ಪಲು: ಶಿಕ್ಷಕಿಯನ್ನು ಗುಂಡು ಹಾರಿಸಿ ಕೊಲೆಗೈದು, ಬಳಿಕ ಆರೋಪಿಯೂ ಅದೇ ಕೋವಿಯಿಂದ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪೊನ್ನಂಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯ ಬಾಳೆಲೆ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

Advertisement

ಬಾಳೆಲೆ ನಿವಾಸಿ, ಗೋಣಿಕೊಪ್ಪಲು ಲಯನ್ಸ್‌ ಶಾಲೆಯ ಶಿಕ್ಷಕಿ ಆದೇಂಗಡ ಆಶಾ ಕಾವೇರಮ್ಮ (45) ಕೊಲೆಯಾದವರು. ಮಾಚಿಮಾಡ ಜಗದೀಶ್‌ (55) ಆರೋಪಿ. ಬಾಳೆಲೆ ಪೊಲೀಸ್‌ ಉಪಠಾಣೆ ಮುಂಭಾಗದಲ್ಲೇ ಘಟನೆ ನಡೆದಿದೆ.

ಪ್ರಕರಣದ ವಿವರ
ಆಶಾ ಅವರು ಶುಕ್ರವಾರ ಬೆಳಗ್ಗೆ 8:15ಕ್ಕೆ ಶಾಲೆಯ ಬಸ್ಸಿಗಾಗಿ ಕಾಯುತ್ತಿದ್ದಾಗ ಕಾಫಿ ತೋಟದಿಂದ ದುಷ್ಕರ್ಮಿ ಒಂಟಿ ನಳಿಕೆಯ ಕೋವಿಯಿಂದ ಗುಂಡು ಹಾರಿಸಿದ್ದಾನೆ. ಪರಿಣಾಮ ಶಿಕ್ಷಕಿ ಸ್ಥಳದಲ್ಲೇ ಮೃತಪಟ್ಟರು. ಬಳಿಕ ಆರೋಪಿಯು ಆಶಾ ಮೃತಪಟ್ಟ ಸ್ಥಳದಿಂದ 20 ಅಡಿ ದೂರದ ಕಾಫಿ ತೋಟದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಿಕ್ಷಕಿಯನ್ನು ರಕ್ಷಿಸಲು ಮುಂದಾದ ಸ್ಥಳೀಯ ಕಾಲೇಜಿನ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿ ವೈ.ಕೆ. ದಿನೇಶ್‌ ಹಾಗೂ ತೋಟದ ಕಾರ್ಮಿಕ ಪಿ.ಬಿ. ಪೆಮ್ಮಿ ಮೇಲೂ ಆರೋಪಿ ಗುಂಡು ಹಾರಿಸಿ ಗಾಯಗೊಳಿಸಿದ್ದಾನೆ.

ಬೆಳಗ್ಗಿನಿಂದಲೇ ಕಾದು ಕುಳಿತಿದ್ದ!
ಶಿಕ್ಷಕಿಯನ್ನು ಕೊಲ್ಲಲು ಆರೋಪಿಯು ಆಕೆಯ ಮನೆಯ ಸಮೀಪ ಬೆಳಗ್ಗಿನಿಂದಲೇ ಕಾದು ಕುಳಿತಿದ್ದ. ಆಶಾ ಕಾವೇರಮ್ಮ ಮನೆಯಿಂದ ಹೊರಬಂದ ಕೂಡಲೇ ಗುಂಡು ಹಾರಿಸಿದ್ದರೂ ಅದು ಗುರಿ ತಪ್ಪಿತ್ತು. ಬಳಿಕ ಆಕೆಯನ್ನು ಮನೆಯಿಂದ 100 ಮೀ. ದೂರದ ಮುಖ್ಯ ರಸ್ತೆಯ ಬದಿಯಲ್ಲಿರುವ ಕೊಡವ ಸಮಾಜದ ಸಮೀಪದಲ್ಲಿ ಕೊಲೆ ಮಾಡಿದ್ದಾನೆ.

ಹಿಂದೆ ಸ್ನೇಹಿತರಾಗಿದ್ದರು
ಹಲವು ವರ್ಷಗಳಿಂದ ಆಶಾ ಕಾವೇರಮ್ಮ ಹಾಗೂ ಜಗದೀಶ್‌ ನಡುವೆ ಗಾಢವಾದ ಸ್ನೇಹವಿತ್ತು ಹಾಗೂ ಎರಡು ವರ್ಷಗಳಿಂದ ಸ್ನೇಹದಲ್ಲಿ ಬಿರುಕು ಮೂಡಿತ್ತು. ಇವರ ನಡುವಿನ ಲೇವಾದೇವಿ ವಹಿವಾಟಿನಿಂದಾಗಿ ಸ್ನೇಹ ಮುರಿದು ಬಿದ್ದಿತ್ತು ಎನ್ನಲಾಗುತ್ತಿದೆ. ಬಳಿಕ ಆಕೆಯೊಂದಿಗೆ ಸ್ನೇಹವನ್ನು ಮರುಸ್ಥಾಪಿಸಲು ಜಗದೀಶ್‌ ಬ್ಲ್ಯಾಕ್‌ವೆುಲ್‌ ತಂತ್ರ ಅನುಸರಿಸಿದ್ದ. ಶಿಕ್ಷಕಿಯ ಫೋಟೋವನ್ನು ನೀಲಿ ಚಿತ್ರ ತಾರೆಯ ಫೋಟೋದೊಂದಿಗೆ ಸೇರಿಸಿ ಬ್ಲ್ಯಾಕ್‌ವೆುಲ್‌ ಮಾಡುತ್ತಿದ್ದ. ಈ ಸಂಬಂಧ ಗೋಣಿಕೊಪ್ಪಲು ಠಾಣೆಯಲ್ಲಿ ದೂರು ದಾಖಲಾಗಿ ಜಗದೀಶ್‌ ಜೈಲುವಾಸ ಅನುಭವಿಸಿದ್ದ. ಇದೇ ಕೋಪದಿಂದ ಶಿಕ್ಷಕಿಯ ಮನೆ ಸಮೀಪ ತೆರಳಿ ಹಲವು ಬಾರಿ ಕೊಲೆ ಬೆದರಿಕೆಯೊಡ್ಡಿದ್ದ. ಈ ಬಗ್ಗೆಯೂ ಶಿಕ್ಷಕಿಯು ಎಸ್‌ ಪಿಗೆ ದೂರು ನೀಡಿದ್ದರು.

Advertisement

ಸಿಸಿ ಕೆಮರಾ ಅಳವಡಿಸಿದ್ದ ಶಿಕ್ಷಕಿ
ಈತನ ವರ್ತನೆಯಿಂದ ಬೆದರಿದ್ದ ಶಿಕ್ಷಕಿ ತನ್ನ ಮನೆಯ ಸುತ್ತಲು ಸಿ.ಸಿ.ಕೆಮರಾ ಅಳವಡಿಸಿದ್ದರು. ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಎಸ್‌ ಪಿ ಡಾ| ಸುಮನ್‌ ಪನ್ನೇಕರ್‌ ಅವರು, ಹತ್ಯೆ ಹಿಂದಿನ ನಿಖರ ಕಾರಣ ತನಿಖೆ ಬಳಿಕವಷ್ಟೆ ಸ್ಪಷ್ಟವಾಗಬಹುದು. ಹಳೆ ವೈಷಮ್ಯ ಘಟನೆಗೆ ಕಾರಣವೆಂದು ಶಂಕಿಸಲಾಗಿದೆ ಎಂದರು. ವಿರಾಜಪೇಟೆ ಡಿವೈಎಸ್‌ಪಿ ನಾಗಪ್ಪ, ಗೋಣಿಕೊಪ್ಪಲು ಸಿಐ ಬಿ.ಎಸ್‌. ಶ್ರೀಧರ್‌, ಪೊನ್ನಂಪೇಟೆ ಠಾಣಾಧಿಕಾರಿ ಮಹೇಶ್‌, ಗೋಣಿಕೊಪ್ಪಲು ಠಾಣಾಧಿ ಕಾರಿ ಶ್ರೀಧರ್‌ ಹಾಗೂ ಸಿಬಂದಿ ಎಸ್‌ಪಿ ಜತೆ ಗಿದ್ದರು.

ಉತ್ತಮ ಶಿಕ್ಷಕಿ
ಆಶಾ ಕಾವೇರಮ್ಮ ಅವರು ಇಬ್ಬರು ಪುತ್ರಿಯರೊಂದಿಗೆ ಗ್ರಾಮದಲ್ಲಿ ಉತ್ತಮ ಜೀವನ ನಡೆಸುತ್ತಿದ್ದರು. ಓರ್ವ ಪುತ್ರಿ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದು, ಮತ್ತೂಬ್ಬಳು ಅಂತಿಮ ಪದವಿ ವಿದ್ಯಾರ್ಥಿ. ಆಶಾ ತನ್ನ ಶಾಲೆಯಲ್ಲಿ ಉತ್ತಮ ಶಿಕ್ಷಕಿ ಎಂದು ಹೆಸರು ಗಳಿಸಿದ್ದರು.

ಕ್ರಿಮಿನಲ್‌ ಹಿನ್ನೆಲೆ
ಜಗದೀಶ್‌ ಬಗ್ಗೆ ಸಮಾಜದಲ್ಲಿ ಒಳ್ಳೆಯ ಅಭಿಪ್ರಾಯವಿಲ್ಲ. ಈತ ಹಲವಾರು ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ಬಗ್ಗೆ ಪೊನ್ನಂಪೇಟೆ ಹಾಗೂ ಗೋಣಿ ಕೊಪ್ಪಲು ಠಾಣೆಯಲ್ಲಿ ದೂರು ದಾಖಲಾಗಿದೆ. ಇದೇ ಕಾರಣದಿಂದ ಸಾರ್ವಜನಿಕರಿಂದಲೂ ಪೆಟ್ಟು ತಿಂದಿದ್ದ ಉದಾಹರಣೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next