Advertisement

ಪಾಸಿಟಿವ್-ನೆಗೆಟಿವ್ ಟು ಪಾಸಿಟಿವ್: ಗುಣಮುಖನಾದ ವ್ಯಕ್ತಿಗೆ ಮತ್ತೆ ತಗುಲಿದ ಕೋವಿಡ್ ಸೋಂಕು

08:28 AM May 12, 2020 | Hari Prasad |

ಬೆಳಗಾವಿ: ದೆಹಲಿಯ ನಿಜಾಮುದ್ದಿನ್ ತಬ್ಲೀಘಿ ಜಮಾತ್ ಮರ್ಕಜ್‌ನ ವ್ಯಕ್ತಿಯ ದ್ವಿತೀಯ ಸಂಪರ್ಕದಿಂದ ಕೋವಿಡ್ ಸೋಂಕು ತಗುಲಿದ್ದ ಗೋವಾದ 50 ವರ್ಷದ (ಪಿ-298) ಗುಣಮುಖನಾಗಿ ಚೇತರಿಸಿಕೊಳ್ಳುವಷ್ಟರಲ್ಲಿ ಈಗ ಮತ್ತೆ ಮರು ಸೋಂಕು ದೃಢಪಟ್ಟಿದ್ದು, ಆತಂಕಕ್ಕೆ ಕಾರಣವಾಗಿದೆ.

Advertisement

ರಾಯಬಾಗ ತಾಲೂಕಿನ ಕುಡಚಿಯಲ್ಲಿ ಮೊದಲನೇ ಸಲ ಸೋಂಕು ತಗಲುವ ಮುನ್ನ ಒಂದು ತಿಂಗಳುಗಳ ಕಾಲ ನೆಲೆಸಿದ್ದ ಗೋವಾ ಮೂಲದ ವ್ಯಕ್ತಿಗೆ ದ್ವಿತೀಯ ಸಂಪರ್ಕದಿಂದ ಪಾಸಿಟಿವ್ ಬಂದಿತ್ತು.

ಈಗ ಈ ವ್ಯಕ್ತಿಯಲ್ಲಿ ಮರು ಸೋಂಕು ದೃಢಪಟ್ಟಿದೆ. ಸೋಮವಾರ ಬಿಡುಗಡೆಯಾದ ಆರೋಗ್ಯ ಇಲಾಖೆಯ ಜಿಲ್ಲಾವಾರು ಸಮಗ್ರ ವರದಿಯಲ್ಲಿ ಇದನ್ನು ಉಲ್ಲೇಖಿಸಲಾಗಿದೆ.

ನಿಜಾಮುದ್ದಿನ್ ತಬ್ಲೀಘಿ ಪಿ-149 ಸಂಪರ್ಕದಿಂದ ಪಿ-245ಗೆ ತಗುಲಿದ್ದ ಸೋಂಕು ದ್ವಿತೀಯ ಸಂಪರ್ಕವಾಗಿ ಈ ವ್ಯಕ್ತಿ ಪಿ-298ಗೆ ಪಾಸಿಟಿವ್ ಬಂದಿತ್ತು. ಏಪ್ರೀಲ್ 6ರಂದು ಸೋಂಕು ದೃಢಪಟ್ಟಿದ್ದ ಈ ವ್ಯಕ್ತಿಗೆ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

14 ದಿನಗಳ ಬಳಿಕ ಮತ್ತೆ ಏ. 28ರಂದು ಹಾಗೂ 29ರಂದು ಎರಡು ಗಂಟಲು ದ್ರವಗಳ ಮಾದರಿ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದರಿಂದ ನಾನ್ ಕೋವಿಡ್ ರೋಗಿ ಎಂದು ವಾರ್ಡ್ ನಿಂದ ಸ್ಥಳಾಂತರಿಸಿ ಕ್ವಾರಂಟೈನ್ ಮಾಡಲಾಗಿತ್ತು.

Advertisement

ಕೆಲವು ದಿನಗಳ ನಂತರ ಈ ವ್ಯಕ್ತಿಗೆ ಮತ್ತೆ ಕೆಲವು ಕೋವಿಡ್ ಲಕ್ಷಣಗಳು ಕಂಡು ಬಂದಿದ್ದರಿಂದ ಹಾಗೂ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದರಿಂದ ಗಂಟಲು ದ್ರವ ಮಾದರಿಯನ್ನು ಮತ್ತೆ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿತ್ತು.

ಮೇ 5ರಂದು ಮೂರು ಪ್ರಯೋಗಾಲಯಳಿಗೆ ಪ್ರತ್ಯೇಕವಾಗಿ ಗಂಟಲು ದ್ರವದ ಮಾದರಿ ಕಳುಹಿಸಲಾಗಿತ್ತು. ಮೂರರ ಪೈಕಿ ಎರಡು ನೆಗೆಟಿವ್ ಒಂದು ಪಾಸಿಟಿವ್ ಬಂದಿದೆ. ಆದರೆ ಮೇ 12ರಂದು ಮತ್ತೊಮ್ಮೆ ಗಂಟಲು ದ್ರವ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗುವುದು ಎಂದು ಆಸ್ಪತ್ರೆಯ ನೋಡಲ್ ಅಧಿಕಾರಿ ಡಾ. ದಂಡಗಿ ಉದಯವಾಣಿಗೆ ತಿಳಿಸಿದ್ದಾರೆ.

ಗುಣಮುಖನಾಗಿ ನೆಗೆಟಿವ್ ವರದಿ ಬಂದು ವಾರ್ಡ್ ನಿಂದ ಬಿಡುಗಡೆಯಾಗಿ ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿಗೆ ಈಗ ಮತ್ತೊಮ್ಮೆ ಪಾಸಿಟಿವ್ ಬಂದಿರುವುದು ಇದೀಗ ಅತಂಕಕ್ಕೆ ಕಾರಣವಾಗಿದೆ.

ಸೋಂಕಿತ ವ್ಯಕ್ತಿ ಕ್ವಾರಂಟೈನ್‌ನಲ್ಲಿ ಇದ್ದರೂ ಆಸ್ಪತ್ರೆಯ ಕೆಲವರ ಸಂಪರ್ಕದಲ್ಲಿ ಬಂದಿದ್ದನು. ಸುರಕ್ಷತಾ ಕ್ರಮ ಕೈಗೊಳ್ಳದೇ ಈತನ ಸಂಪರ್ಕಕಕ್ಕೆ ಯಾರಾದರೂ ಬಂದಿದ್ದಾರೆಯೇ ಎಂಬುದನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ಈತ ಮೂಲತಃ ಗೋವಾದವನಾಗಿದ್ದು, ಸೋಂಕಿನಿಂದ ಗುಣಮುಖನಾದ ಕೂಡಲೇ ಈತನನ್ನು ಊರಿಗೆ ಕಳುಹಿಸಿ ಕೊಟ್ಟಿರಲಿಲ್ಲ. ಈವರೆಗೆ ಜಿಲ್ಲೆಯಲ್ಲಿ ಒಟ್ಟು 116 ಜನ ಸೋಂಕಿತರ ಪೈಕಿ 36 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಹಿರೇಬಾಗೇವಾಡಿಯ ವೃದ್ಧೆ ಮೃತಪಟ್ಟಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next