ವಿಜಯಪುರ: ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ ಜರುಗಿದ್ದ ಕರಿ ಹಬ್ಬದಲ್ಲಿ ಹೋರಿ ಇರಿತದಿಂದ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೇ ಶುಕ್ರವಾರ ಮೃತಪಟ್ಟಿದ್ದಾನೆ. ತಮ್ಮ ಕ್ಷೇತ್ರದಲ್ಲಿ ನಡೆದಿರುವ ಈ ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸುವಂತೆ ಗೃಹ ಸಚಿವ ಎಂ.ಬಿ. ಪಾಟೀಲ ಸೂಚನೆ ನೀಡಿದ್ದಾರೆ.
ಕಾಖಂಡಕಿ ಗ್ರಾಮದಲ್ಲಿ ಕಾರಹುಣ್ಣಿಮೆ ನಂತರ ಏಳನೇ ದಿನ ಉತ್ತರ ಕರ್ನಾಟಕದಲ್ಲೇ ಅತ್ಯಂತ ಜನಪ್ರಿಯ ಕರಿ ಹಬ್ಬ ನಡೆಯುತ್ತದೆ. ಈ ಬಾರಿ ಜೂ.23ರಂದು ಸಾಂಪ್ರದಾಯಿಕ ಹೋರಿ ಬೆದರಿಸುವ ಕರಿ ಹಬ್ಬ ಜರುಗಿತ್ತು. ಈ ಸಂದರ್ಭ 10-15 ಜನರು ಎರಡು ಹಗ್ಗ ಕಟ್ಟಿ ಹಿಡಿದ್ದರೂ ಹೋರಿಯೊಂದು ಕಾಖಂಡಕಿ ಗ್ರಾಮದ ಬಲಭೀಮ ಮೈಲಾರಿ ಪೋಳ (40) ಎಂಬ ವ್ಯಕ್ತಿಯನ್ನು ಕೊಂಬಿನಿಂದ ಎತ್ತಿ ನೆಲಕ್ಕೆ ಎಸೆದಿತ್ತು. ತೀವ್ರ ಗಾಯಗೊಂಡಿದ್ದ ಬಲಭೀಮ ಚಿಕಿತ್ಸೆ ಫಲಿಸದೇ ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾನೆ.
ಕಾಖಂಡಕಿ ಕರಿ ಹಬ್ಬ ನೋಡಲು ನೆರೆಯ ಮಹಾರಾಷ್ಟ್ರ, ತೆಲಂಗಾಣದ ರಾಜ್ಯಗಳಿಂದಲೂ ಸಾವಿರಾರು ಜನ ಬರುತ್ತಾರೆ. ಈ ಸಂದರ್ಭದಲ್ಲಿ ರೊಚ್ಚಿಗೆದ್ದು ಓಡುವ ಹೋರಿ, ಎತ್ತುಗಳು ಕರಿ ವೀಕ್ಷಣೆಗೆ ಸೇರಿದ ಪ್ರೇಕ್ಷಕರು ಹಾಗೂ ಸಾರ್ವಜನಿಕರ ಮೇಲೆ ಎರಗಿ ಈ ಹಿಂದೆ ಕೂಡ ಹಲವು ಬಾರಿ ಜನರನ್ನು ಗಾಯಗೊಳಿಸಿದ ಉದಾಹರಣೆಗಳಿವೆ.
ಕಾಖಂಡಕಿ ಗ್ರಾಮದಲ್ಲಿ ನಡೆಯುವ ಕಾರಹುಣ್ಣಿಮೆಯ ಕರಿ ಹಬ್ಬ ಸಾಂಪ್ರದಾಯಿಕ ಹಿನ್ನೆಲೆ ಹೊಂದಿದೆ. ಈ ವರ್ಷ ಸಂಭವಿಸಿರುವ ದುರಂತದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾಗಿ ಮಾಹಿತಿ ಬಂದಿದೆ, ಪೊಲೀಸ್ ದೂರು ದಾಖಲಾಗಿಲ್ಲ. ಆದರೂ ಈ ಕುರಿತು ಬಬಲೇಶ್ವರ ಪೊಲೀಸರಿಗೆ ತನಿಖೆ ನಡೆಸುವಂತೆ ಸೂಚಿಸಿದ್ದೇನೆ.
-ಎಂ.ಬಿ. ಪಾಟೀಲ, ಗೃಹ ಸಚಿವ