Advertisement
ಕಣ್‌ಹಾಯಿಸುವಷ್ಟು ದೂರಕ್ಕೂ ಹಚ್ಚಹಸಿರಿನ ಗಿರಿಕಂದರಗಳ ಸಾಲು,. ಬೆಟ್ಟದ ತುದಿಯನ್ನು ಸ್ಪರ್ಶಿಸಿ ತೇಲುವ ಮೋಡಗಳು, ಹಚ್ಚಹಸುರಿನ ವನರಾಶಿಯ ನಡುವೆ ಮಂಜಿನ ಹನಿಗಳ ಚೆಲ್ಲಾಟ, ಸುತ್ತಲೂ ಹಸಿರನ್ನೇ ಹೊದ್ದು ಮಲಗಿರುವಂತೆ ಕಾಣುವ ಪ್ರದೇಶ, ಎರಡೂ ಬದಿಯಲ್ಲಿ ಬೃಹತ್ ಬೆಟ್ಟ, ನಡುವೆ ಹಾಲಿನ ಹೊಳೆಯೇ ಹರಿಯುತ್ತಿದೆಯೇನೋ ಎಂದು ಭಾಸವಾಗುವ ಹಾಲ್ನೊರೆಯಂತಹ ನೀರಿನ ವೈಭವ, ಜುಳುಜುಳು ನಾದದೊಂದಿಗೆ ಹೃನ್ಮನ ತಣಿಸುವ ಸೌಂದರ್ಯದ ಖನಿ ಮಲ್ಲಳ್ಳಿ ಜಲಪಾತ ಮುಂಗಾರು ಮಳೆಗೆ ಮೈದಳೆದಿದೆ.
Related Articles
Advertisement
ಪ್ರವಾಸೋದ್ಯಮ ಇಲಾಖೆಯಿಂದ ಜಲಪಾತದ ತಳಭಾಗದವರೆಗೂ ಮೆಟ್ಟಿಲುಗಳನ್ನು ನಿರ್ಮಿಸಲಾಗಿದ್ದು, ಜಲಧಾರೆಯನ್ನು ಅತ್ಯಂತ ಸನಿಹದಿಂದ ಕಣ್ತುಂಬಿ ಕೊಳ್ಳಬಹುದಾಗಿದೆ. ಜಲಪಾತದ ಅನತಿ ದೂರದಲ್ಲಿ ಎಚ್ಚರಿಕೆಯ ಫಲಕ ಅಳವಡಿಸಿದ್ದು, ಈ ಎಚ್ಚರಿಕೆಯನ್ನು ಮೀರಿ ನೀರಿಗಿಳಿದರೆ ಅಪಾಯ ಕಟ್ಟಿಟ್ಟ ಬುತ್ತಿ.ಪ್ರವಾಸಿಗರ ರಕ್ಷಣೆ, ಮಾಹಿತಿಗಾಗಿ ಇಲಾಖೆಯಿಂದ ಪ್ರವಾಸಿ ಮಿತ್ರರನ್ನು ಇಲ್ಲಿಗೆ ನಿಯೋಜಿಸಲಾಗಿದ್ದು, ಇವರು ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರ ಮಾಹಿತಿ,ಮೊಬೈಲ್ ನಂಬರ್‌ಗಳನ್ನು ನಮೂದಿಸಿಕೊಳ್ಳುವ ಮೂಲಕ ಜಲಪಾತದ ಬಗ್ಗೆ ಮಾಹಿತಿಯನ್ನೂ ನೀಡುತ್ತಿದ್ದಾರೆ. ಜಲಪಾತದ ಬಳಿಗೆ ಮದ್ಯವನ್ನು ಕೊಂಡೊಯ್ಯದಂತೆ, ನೀರಿಗೆ ಇಳಿಯದಂತೆ, ಅಪಾಯಕಾರಿ ಸ್ಥಳಗಳತ್ತ ತೆರಳದಂತೆ ಎಚ್ಚರಿಕೆಯನ್ನು ನೀಡುತ್ತಾರೆ.
ಮಲ್ಲಳ್ಳಿ ಜಲಪಾತದವರೆಗೂ ಕಾಂಕ್ರೀಟ್ ರಸ್ತೆ ನಿರ್ಮಾಣ ವಾಗಿರುವುದರಿಂದ ಪ್ರವಾಸಿಗರು ನಡೆಯುವ ಪ್ರಯಾಸ ತಪ್ಪಿದಂತಾಗಿದೆ. ಹಾಲ್ನೊರೆಯಂತಹ ನೀರಿನ ವೈಭವ.., ಜುಳುಜುಳು ನಾದದೊಂದಿಗೆ ಹೃನ್ಮನ ತಣಿಸುವ ಸೌಂದರ್ಯದ ಖನಿ ಮಲ್ಲಳ್ಳಿ ಜಲಪಾತ ವೀಕ್ಷಣೆಗೆ ಇದು ಸುಸಂದರ್ಭ.
ಹಾಲ್ನೊರೆಯ ಧಾರೆಮಳೆಗಾಲ ಪ್ರಾರಂಭದಿಂದ ಹಿಡಿದು ಜನವರಿ ತಿಂಗಳವರೆಗೂ ಹಾಲ್ನೊರೆ ಸೂಸುತ್ತಾ, ಧುಮ್ಮಿಕ್ಕುವ ಮಲ್ಲಳ್ಳಿ ಜಲಪಾತ ನಿಜಕ್ಕೂ ಪ್ರವಾಸಿಗರ ಸ್ವರ್ಗವಾಗಿದೆ. ದಿನನಿತ್ಯ ಸಾವಿರಾರು ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆದು ಹೃನ್ಮನ ತಣಿಸುವ ನ್ಯೆಸರ್ಗಿಕ ಜಲಧಾರೆಯ ಮಲ್ಲಳ್ಳಿ ಜಲಪಾತಕ್ಕೆ ಪ್ರವಾಸಿಗರ ದಂಡು ಲಗ್ಗೆಯಿಡುತ್ತಿದ್ದು, ನೈಸರ್ಗಿಕವಾಗಿ ಸಹಜ ಸೌಂದರ್ಯ ಹೊಂದಿರುವ ಜಲಪಾತ ಇದೀಗ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಹಂತಹಂತಗಳಲ್ಲಿ ಧುಮ್ಮಿಕ್ಕುವ ಜಲ
ನಿಸರ್ಗ ರಮಣೀಯತೆಯನ್ನು ತನ್ನೊಡಲಲ್ಲಿರಿಸಿಕೊಂಡಿರುವ ಪುಷ್ಪಗಿರಿ ತಪ್ಪಲಿ ನಲ್ಲಿ ಹುಟ್ಟುವ ಕುಮಾರಧಾರಾ ನದಿ ಮಲ್ಲಳ್ಳಿ ಗ್ರಾಮದ ಕಲ್ಲು ಬಂಡೆಯಿಂದ 390 ಅಡಿ ಎತ್ತರದಿಂದ ಧುಮುಕಿ ಜಲಧಾರೆಯಾಗಿ ಪ್ರವಹಿಸುತ್ತದೆ. ಮೊದಲ ಹಂತದ 200ಅಡಿ ಎತ್ತರದಿಂದ ಕೆಳಕ್ಕೆ ಧುಮುಕಿ ನಂತರ 90ಅಡಿ ಎತ್ತರದಿಂದ ಕೆಳಕ್ಕೆ ಬೀಳುತ್ತದೆ. ಹೀಗೆ ಹಂತ ಹಂತವಾಗಿ ಒಟ್ಟಾಗಿ ಸುಮಾರು 390 ಅಡಿ ಎತ್ತರದಿಂದ ನೀರು ಬೀಳುವ ಸದ್ದು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಮುಂದೆ ಹರಿದು ಕುಕ್ಕೆ ಸುಬ್ರಮಣ್ಯ ದೇವಾಲಯದ ಸ್ನಾನಘಟ್ಟ ತಲುಪುತ್ತದೆ. ಎಲ್ಲಿದೆ ಮಲ್ಲಳ್ಳಿ
ಸೋಮವಾರಪೇಟೆ ತಾಲೂಕಿನ ಬೆಟ್ಟದಳ್ಳಿ ಗ್ರಾ. ಪಂ. ವ್ಯಾಪ್ತಿಯ ಮಲ್ಲಳ್ಳಿ ಎಂಬ ಕುಗ್ರಾಮದಲ್ಲಿ ಮಲ್ಲಳ್ಳಿ ಜಲಪಾತವಿದೆ. ಸೋಮವಾರಪೇಟೆಯಿಂದ ಕೇವಲ 25 ಕಿ.ಮೀ. ಕ್ರಮಿಸಿದರೆ, ಜಲಪಾತ ದರ್ಶನವಾಗುತ್ತದೆ. ಯಡೂರು, ಶಾಂತಳ್ಳಿ, ಕುಮಾರಳ್ಳಿ ಮೂಲಕ 20 ಕಿ.ಮೀ. ಕ್ರಮಿಸಿ, ಹಂಚಿನಳ್ಳಿ ಗ್ರಾಮವನ್ನು ತಲುಪಿ, ಎಡಕ್ಕೆ ತಿರುಗಿ ನಾಲ್ಕು ಕಿ.ಮೀ. ತೆರಳಿದರೆ ಜಲಪಾತದ ದರ್ಶನವಾಗುತ್ತದೆ. – ಎಸ್. ಮಹೇಶ್