Advertisement

ಜನಕ್ಕಿಂತ ಜಾನುವಾರುಗಳಿಗೆ ನೀರು ಪೂರೈಕೆ ಮುಖ್ಯ

01:01 PM Feb 21, 2017 | Team Udayavani |

ದಾವಣಗೆರೆ: ರಾಜ್ಯಾದ್ಯಂತ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಾನುವಾರುಗಳಿಗೆ ಸಮರ್ಪಕ ಪ್ರಮಾಣದಲ್ಲಿ ಮೇವು, ನೀರು ಪೂರೈಕೆಗೆ ಸೂಕ್ತ ಕ್ರಮ ಕೈಗೊಂಡಿದೆ ಎಂದು ಪಶುಸಂಗೋಪನಾ ಮತ್ತು ರೇಷ್ಮೆ ಇಲಾಖೆ ಸಚಿವ ಎ. ಮಂಜು ತಿಳಿಸಿದ್ದಾರೆ. ಸೋಮವಾರ ಜಿಲ್ಲಾ ಪಶು ಆಸ್ಪತ್ರೆ ಆವರಣದಲ್ಲಿ ನೂತನ ರೆಫರಲ್‌ ಪ್ರಯೋಗಾಲಯ ಕಟ್ಟಡ ಶಂಕುಸ್ಥಾಪನೆ ನೆರವೇರಿಸಿ, ಮಾತನಾಡಿದರು.

Advertisement

ಜನರು ಹೇಗೋ ನೀರಿನ ವ್ಯವಸ್ಥೆ ಮಾಡಿಕೊಳ್ಳುವರು. ಜಾನುವಾರುಗಳಿಗೆ ನೀರು ಒದಗಿಸುವುದು ಅತೀ ಮುಖ್ಯ. ರೈತನ ಮಗನಾಗಿರುವ ನಾನು ರಾತ್ರಿಯೆಲ್ಲಾ ಎದ್ದು ದನಕರುಗಳಿಗೆ ಮೇವು, ನೀರು ನೀಡಿದ ಕಷ್ಟ ಗೊತ್ತಿದೆ. ಮೂಕ ಪ್ರಾಣಿಗಳ ಸೇವೆ ಮಾಡುವುದು ಪುಣ್ಯದ ಕೆಲಸ ಎಂಬ ಕಾರಣಕ್ಕಾಗಿಯೇ ಈ ಇಲಾಖೆಯನ್ನೇ ಕೇಳಿ ಪಡೆದಿದ್ದೇನೆ. ಕಾಂಗ್ರೆಸ್‌ ಸರ್ಕಾರ ಜಾನುವಾರುಗಳ ಸಂರಕ್ಷಣೆಗೆ ಅಗತ್ಯ ಕ್ರಮ ತೆಗೆದುಕೊಂಡಿದೆ ಎಂದರು. 

ಕುಡಿಯುವ ನೀರು ಪೂರೈಕೆಗೆ ಪ್ರತಿ ಶಾಸಕರ ಅಧ್ಯಕ್ಷತೆಯಲ್ಲಿನ ಟಾಸ್ಕ್ಫೋರ್ಸ್‌ಗೆ 1.35 ಕೋಟಿ ಅನುದಾನ, ಶಾಶ್ವತ ವ್ಯವಸ್ಥೆಗಾಗಿ ಜಿಲ್ಲಾ ಪಂಚಾಯತ್‌ಗೆ 70-72 ಕೋಟಿ, 14ನೇ ಹಣಕಾಸು ಯೋಜನೆ ಮೂಲಕ 50-55 ಕೋಟಿ ನೀಡಲಾಗಿದೆ. ಪ್ರತಿ ಟ್ಯಾಂಕರ್‌ಗೆ 650 ರೂ. ನೀಡಿ, ನೀರು ಪೂರೈಕೆ ಮಾಡಲಾಗುತ್ತಿದೆ. ಗೋಶಾಲೆ, ಮೇವು ಬ್ಯಾಂಕ್‌ ಪ್ರಾರಂಭಿಸಲಾಗಿದೆ. ಕಡಿಮೆ ದರದಲ್ಲಿ ರೈತರಿಗೆ ಮೇವು ಒದಗಿಸಲಾಗುತ್ತಿದೆ. ಆದರೂ, ವಿರೋಧ ಪಕ್ಷದವರು ಯಾವುದೇ ಕೆಲಸ ಮಾಡುತ್ತಿಲ್ಲ ಎಂಬುದಾಗಿ ಆರೋಪಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ರಾಜ್ಯ ಸರ್ಕಾರ ಈವರೆಗೆ 22 ಸಾವಿರ ಜನರಿಗೆ ಪಶು ಭಾಗ್ಯ ಯೋಜನೆ ಸೌಲಭ್ಯ ಒದಗಿಸಿದೆ. 10 ಸಾವಿರ ವಿಧವೆಯರಿಗೆ 2 ಕುರಿ, 1 ಟಗರು ನೀಡುತ್ತಿದೆ. ಒಟ್ಟಾರೆ 10 ಸಾವಿರ ರೂಪಾಯಿ ಅನುದಾನದಲ್ಲಿ 7,500 ರೂಪಾಯಿ ಸಹಾಯಧನ ನೀಡಲಾಗುತ್ತಿದೆ. ರೈತರು, ಜನಸಾಮಾನ್ಯರ ಆರ್ಥಿಕ ಸದೃಢತೆಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು. ವಾಸ್ತವವಾಗಿ ನೂತನ ರೆಫರಲ್‌ ಪ್ರಯೋಗಾಲಯ ಬಳ್ಳಾರಿಗೆ ಮಂಜೂರಾಗಿತ್ತು. 

ರಾಜ್ಯದ ಹೃದಯ ಭಾಗದಲ್ಲಿ ದಾವಣಗೆರೆಯಲ್ಲಿ ರೆಫರಲ್‌ ಪ್ರಯೋಗಾಲಯ ಪ್ರಾರಂಭಿಸುವುದರಿಂದ ಎಲ್ಲಾ ರೀತಿಯ ಅನುಕೂಲ ಆಗುತ್ತದೆ ಎಂಬುದನ್ನ ಮನಗಂಡು 5 ಕೋಟಿ ವೆಚ್ಚದ ರೆಫರಲ್‌ ಪ್ರಯೋಗಾಲಯ ಪ್ರಾರಂಭಿಸಲಾಗುತ್ತಿದೆ. ಜಾನುವಾರುಗಳಿಗೆ ಕಾಣಿಸಿಕೊಳ್ಳುವ ಯಾವುದೇ ರೀತಿಯ ನಿಗೂಢ ಸಮಸ್ಯೆಯನ್ನು ಈ ಪ್ರಯೋಗಾಲಯದಲ್ಲಿ ಪತ್ತೆ ಹಚ್ಚಿ, ಅದಕ್ಕೆ ಬೇಕಾದ ಶಾಶ್ವತ ಪರಿಹಾರ ಕಂಡುಕೊಳ್ಳಲು ನೂತನ ರೆಫರಲ್‌ ಪ್ರಯೋಗಾಲಯ ನೆರವಾಗಲಿದೆ. 

Advertisement

ಇಲ್ಲಿಯೇ ಬೃಹತ್‌ ಶೈತ್ಯಾಗಾರ ಪ್ರಾರಂಭಿಸಿ, ನಾವೇ ಉತ್ಪಾದಿಸುವ ಎಲ್ಲಾ ಲಸಿಕೆಯನ್ನು ಸಂಗ್ರಹಿಸಿ, ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಇಲ್ಲಿಂದಲೇ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಮಾತನಾಡಿ, 5 ಕೋಟಿ ವೆಚ್ಚದ ನೂತನ ರೆಫರಲ್‌ ಪ್ರಯೋಗಾಲಯ ಆದಷ್ಟು ಬೇಗ ಉದ್ಘಾಟನೆಗೊಂಡು, ಕಾರ್ಯಾರಂಭ ಮಾಡಲಿ. 1.5 ಎಕರೆ ಜಾಗದಲ್ಲಿರುವ ಈ ಆಸ್ಪತ್ರೆಯಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕೈಗೊಳ್ಳಲಾಗುವುದು.

ಇಲ್ಲಿನ ವೈದ್ಯರು, ಸಿಬ್ಬಂದಿಯ ಕಾರ್ಯಚಟುವಟಿಕೆ ಬಗ್ಗೆ ಈವರೆಗೆ ಗಮನ ನೀಡಿಲ್ಲ. ಹಾಗಾಗಿ ಆರಾಮವಾಗಿ ತಮ್ಮ ಪಾಡಿಗೆ ತಾವಿದ್ದರು. ಇನ್ನು ಮುಂದೆ ಎಲ್ಲದರ ಬಗ್ಗೆ ನಿಗಾ ವಹಿಸಲಾಗುವುದು. ವೈದ್ಯರು, ಅಧಿಕಾರಿಗಳು, ಸಿಬ್ಬಂದಿ ಇಲ್ಲಿಗೆ ಬರುವಂತಹ ರೈತರೊಂದಿಗೆ ಸರಿಯಾಗಿ ಸ್ಪಂದಿಸಿ, ಜಾನುವಾರುಗಳಿಗೆ ಉತ್ತಮ ಚಿಕಿತ್ಸಾ ಸೌಲಭ್ಯ ಒದಗಿಸಬೇಕು.

ಇಲ್ಲಿ ಅಗತ್ಯವಾಗಿರುವ ಸ್ಯಾನಿಂಗ್‌ ಮೆಷಿನ್‌ ಒದಗಿಸುವತ್ತ ಸಚಿವ ಮಂಜು ಗಮನ ನೀಡಬೇಕು ಎಂದು ತಿಳಿಸಿದರು. ಈ ಭಾಗದಲ್ಲಿ ಅತ್ಯಾಧುನಿಕ ಮೀನು ಮಾರುಕಟ್ಟೆ ಪ್ರಾರಂಭಿಸಲಾಗುವುದು. ಕೆಎಂಎಫ್‌ ಮಾದರಿಯಲ್ಲಿ ದೇಶಿ ತಳಿ ಹಸುಗಳ ಹಾಲು ಸಂಗ್ರಹಿಸಿ, ಜನರಿಗೆ ಕೊಡುವುದು ಉತ್ತಮ ಹೆಜ್ಜೆ. ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ ಎಂದ ಅವರು, ಈ ಬಾರಿಯ ಬಜೆಟ್‌ನಲ್ಲಿ ಹಾಸನಕ್ಕೆ ಗಾಜಿನಮನೆ ಮಂಜೂರು ಮಾಡಿಕೊಡುವುದಾಗಿ ಸಚಿವ ಎ. ಮಂಜುಗೆ ಭರವಸೆ ನೀಡಿದರು.

ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಉಮಾ ರಮೇಶ್‌, ಮೇಯರ್‌ ರೇಖಾ ನಾಗರಾಜ್‌, ಸದಸ್ಯ ದಿನೇಶ್‌ ಕೆ. ಶೆಟ್ಟಿ, ಎಪಿಎಂಸಿ ಅಧ್ಯಕ್ಷ ಮುದೇಗೌಡ್ರ ಗಿರೀಶ್‌, ಶಿಮುಲ್‌ ಅಧ್ಯಕ್ಷ ಜಗದೀಶಪ್ಪ ಬಣಕಾರ್‌, ಇಲಾಖಾ ಆಯುಕ್ತ ಎಸ್‌. ಶೇಖರ್‌, ನಿರ್ದೇಶಕ ಡಾ| ಎಸ್‌.ಎಂ. ಭೈರೇಗೌಡ, ಉಪ ನಿರ್ದೇಶಕ ಡಾ| ಎಚ್‌. ಎಸ್‌. ಜಯಣ್ಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next