Advertisement

ಸನ್ಮಾರ್ಗ ಬಯಲಾಟದ ಮುಖ್ಯ ಉದ್ದೇಶ

01:37 PM Dec 23, 2017 | Team Udayavani |

ಹರಪನಹಳ್ಳಿ: ಕಲೆಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಸಂಪನ್ಮೂಲ ವ್ಯಕ್ತಿಗಳ ಮೂಲಕ ಎರಡು ಹಂತದಲ್ಲಿ 5 ತಿಂಗಳು ಮತ್ತು 7 ದಿನಗಳ ಉಚಿತ ತರಬೇತಿ ಶಿಬಿರ ಆಯೋಜಿಸಲಾಗುತ್ತಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ರಿಜಿಸ್ಟರ್‌ ಶಿವರುದ್ರಪ್ಪ ತಿಳಿಸಿದರು.

Advertisement

ಪಟ್ಟಣದ ಸಮತಾ ರಂಗ ಮಂದಿರದಲ್ಲಿ ಶುಕ್ರವಾರ ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿದ್ದ ಗಿರಿಜನ ಉಪ ಯೋಜನೆಯ ಏಳು ದಿನಗಳ ಕಾಲ ಮೂಡಲಪಾಯ ಯಕ್ಷಗಾನ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.  ಸರ್ಕಾರ 2007ರಲ್ಲಿ ಜಾನಪದ
ಅಕಾಡೆಮಿಯಿಂದ ಯಕ್ಷಗಾನ ಮತ್ತು ಬಯಲಾಟವನ್ನು ಬೇರ್ಪಡಿಸಿ, ಎರಡು ಪ್ರತ್ಯೇಕ ಅಕಾಡೆಮಿಗಳನ್ನು 2017ರಲ್ಲಿ ಘೋಷಿಸಲಾಯಿತು. ಬಾಗಲಕೋಟೆಯಲ್ಲಿ ಬಯಲಾಟ ಆಕಾಡೆಮಿ, ಬೆಂಗಳೂರಲ್ಲಿ ಯಕ್ಷಗಾನ ಅಕಾಡೆಮಿ ಸ್ಥಾಪನೆಯಾಗಿದ್ದು, ಇವುಗಳಿಗೆ ಇನ್ನೂ ಆಡಳಿತ ಮಂಡಳಿಯ
ಪದಾಧಿ ಕಾರಿಗಳ ನೇಮಕವಾಗಿಲ್ಲ. ಕೇವಲ ರಿಜಿಸ್ಟರ್‌ ಮೂಲಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ತುಮಕೂರು, ಚಿತ್ರದುರ್ಗ, ಮಂಡ್ಯ, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ 15 ಜಿಲ್ಲೆಗಳಲ್ಲಿ ಮೂಡಲಪಾಯ ಕಲೆಗಳು ಮೂಡಿಬರುತ್ತಿವೆ. ಕರಾವಳಿಯಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಯಕ್ಷಗಾನ ವಿಶ್ವವಿಖ್ಯಾತವಾಗಿದೆ. ಎಲ್ಲ ಕಲಾವಿದರು ಸೇರಿ ಮೂಡಲಪಾಯ ಕಲೆಗಳನ್ನು ಸಹ ಪರಿಷ್ಕರಣೆ ಮಾಡಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಬಯಲಾಟ ವಿದ್ವಾಂಸ ಡಾ| ಕೆ.ರುದ್ರಪ್ಪ ಮಾತನಾಡಿ, ಜನರನ್ನು ಸನ್ಮಾರ್ಗದಲ್ಲಿ ಮುನ್ನಡೆಸುವುದೇ ಬಯಲಾಟದ ಮುಖ್ಯ ಉದ್ದೇಶವಾಗಿದೆ. ಹಿರಿಯ ಕಲಾವಿದರಿಗೆ ಕಲೆಗಳ ಬಗ್ಗೆ ಸ್ಪಷ್ಟವಾದ ಮಾಹಿತಿ ಕೊರತೆಯಿಂದ ಬಯಲಾಟ ಕಲೆಗಳು ಅವನತಿ ಅಂಚಿನಲ್ಲಿವೆ. ಇವುಗಳ ಬಗ್ಗೆ ಸ್ಪಷ್ಟವಾದ ಮಾಹಿತಿ ನೀಡಬೇಕಾಗಿದೆ. ರಂಗ ಕಲೆಗಳ ಬಗ್ಗೆ ಕೆಲವರು ಪ್ರಬಂಧ
ಬರೆಯುತ್ತಾರೆಯೇ ಹೊರತು ಇದರ ಬಗ್ಗೆ ಅರಿವು ಮೂಡಿಸುವ ಕೆಲಸವಾಗುತ್ತಿಲ್ಲ. ಹೆಸರಿಗೆ ಮಾತ್ರ ಡಾಕ್ಟರೇಟ್‌ ಪದವಿ ಪಡೆಯುವಂತಾಗಿರುವುದು
ದುರಾದೃಷ್ಟಕರ ಸಂಗತಿ ಎಂದರು. ಯಕ್ಷಗಾನ ಕಲೆ ಕೇವಲ ಆಟವಲ್ಲ, ಅದೊಂದು ಸಂಗೀತಾದ ಪ್ರಕಾರವಾಗಿದೆ. ಅದು ಕೇವಲ ಕರಾವಳಿಗೆ ಮಾತ್ರ ಸೀಮಿತವಲ್ಲ. ಅದನ್ನು ಬಯಲಾಟದ ಆರಂಭದ ಪ್ರಕಾರದ ಕಲೆಗಳಲ್ಲಿ ಕಾಣಬಹುದಾಗಿದೆ. ಬಯಲಾಟ ಕಲಾವಿದರು ಅನಕ್ಷರಸ್ಥರಾಗಿದ್ದು, ಯಾವುದೇ ತರಹದ ಸಂಗೀತಾದ ಜ್ಞಾನವಿಲ್ಲ. ಆದರೂ ಎಲ್ಲಾ ರಾಗಗಳನ್ನೂ ಗುರುತಿಸಬಲ್ಲರು.  ಹಿರಿಯ ಕಲಾವಿದರ ಕಲಾ ಶ್ರೀಮಂತಿಕೆಯನ್ನು ಸಂಗ್ರಹಿಸಿ ಮುಂದಿನ ಪೀಳಿಗೆಗೆ ಕೊಡಬೇಕಾಗಿರುವುದು ಎಲ್ಲರ ಜವಾಬ್ಟಾರಿ ಎಂದು ತಿಳಿಸಿದರು. 

ಅಧ್ಯಕ್ಷತೆ ವಹಿಸಿದ್ದ ಕೆಪಿಸಿಸಿ ಸದಸ್ಯ ಕೋಡಿಹಳ್ಳಿ ಭೀಮಪ್ಪ ಮಾತನಾಡಿ, ಬಯಲಾಟ ನಮ್ಮ ಮೂಲ ಪರಂಪರೆಯ ಸಾಂಸ್ಕೃತಿಕ ಬುನಾದಿ. ಸಾಂಸ್ಕೃತಿಕ ತಳಹದಿ ಮೇಲೆ ನಾಡನ್ನು ಕಟ್ಟಿದ್ದರೆ ಸುಸಂಸ್ಕೃತ ಸಮಾಜ ನಿರ್ಮಾಣವಾಗಲಿದೆ. ಕಲೆಗಳ ಶ್ರೀಮಂತಿಕೆ ದೇಶದ ಸಮೃದ್ಧತೆಯ ಸಂಕೇತವಾಗಿದೆ ಎಂದರು. ಸಂಗೀತ ನಿರ್ದೇಶಕ ಗುಂಡಗತ್ತಿ ಅಂಜಿನಪ್ಪ, ರಂಗ ನಿರ್ದೇಶಕ ಬಿ.ಪರುಶುರಾಮ ಮಾತನಾಡಿದರು. ಪ್ರಗತಿಪರ ಚಿಂತಕ ಇಸ್ಮಾಯಿಲ್‌ ಯಲಿಗಾರ್‌, ಕಲಾಮನೆ ಅಧ್ಯಕ್ಷ ಡಿ.ಭೀಮಪ್ಪ, ಹಿರಿಯ ಕಲಾವಿದ
ಎನ್‌.ಎಸ್‌.ರಾಜಣ್ಣ, ಸಂಘಟಕ ಡಿ.ಪಿ.ಸಂದೇಶ್‌, ಚೇತನ್‌, ಗಿರೀಶನಾಯ್ಕ, ಪುಣಬಗಟ್ಟಿ ನಿಂಗಪ್ಪ, ಅಲ್ಮರಸೀಕೆರೆ ರಾಜಪ್ಪ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next